Sunday, September 10, 2023

ಈ ಕ್ಷಣದ ಕವಿತೆ ೧

ಅದು,
ನಡು ರಾತ್ರಿಯಲ್ಲಿ ಯಾವುದೋ
ಹಳೆಯ ಹಾಡಿನ ಎರಡನೇ ಸಾಲು 
ನೆನಪಾದಂತೆನೀವು 
ತಾಸುಗಟ್ಟಲೆ ತಲೆಯಲ್ಲೇ 
ಹುಡುಕುತ್ತೀರಿ, ಊಹ್ಞೂಂ

ಯಾವುದೋ ಗಡಿಬಿಡಿಯ 
ಗಲಿಬಿಲಿಯಲ್ಲಿ
ಮೊದಲು ಸಾಲು ಧುತ್ತನೆ
ಸಾಕ್ಷಾತ್ಕಾರವಾಗುತ್ತದೆ
ಎರಡು, ಮೂರನೇ ಸಾಲು
ಅಸ್ಪಷ್ಟ ಎನಿಸಿದರೂ
ನಿಮಗೆ ಜ್ಞಾನೋದಯದ ಸಂತಸ

ಒಂದರಘಳಿಗೆಯಷ್ಟೇ
ಸಂತೆಯಲ್ಲಿ ಮಗನನ್ನು ಕಳೆದುಕೊಂಡಂತೆ
ಅದರ ರಾಗಕ್ಕಾಗಿ ತಡಕಾಡುತ್ತೀರಿ
ಗಂಟಲಲ್ಲಿರುವ ಕೆಲವು ಅಸ್ಪಷ್ಟ, ಪರಿಚಿತ
ಟ್ಯೂನುಗಳ ಜೊತೆ, 
ಹೊಸಹಾಡನ್ನು ಮಲಗಿಸಿ 
ತಾಳೆಮಾಡುತ್ತೀರಿ
ಊಹ್ಞೂಂ.

ಕೊನೆಯುಸಿರಿನ ಘಳಿಗೆಯಲ್ಲೂ
ನಿಮಗದರ ರಾಗ ಹೊಳೆದೀತು
ಆದರೆ,
ಅದನ್ನು ಹಾಡಿದವರಾರು?

ಈ ಕ್ಷಣದ ಕವಿತೆ ೨

ಅವಳ ಕಣ್ಣುಗಳಲ್ಲಿ
ವೈಶಾಖ ಸೋರಗುತ್ತದೆ
ಬಾಯಾರಿದ ಒಣ ಭೂಮಿಯಂತೆ
ನಾನು ಆಕಾಶ ನೋಡುತ್ತೇನೆ
ಅವಳ ಕಣ್ರೆಪ್ಪೆ ಅಡ್ಡಬರುತ್ತದೆ

ಕ್ರೂರ ಮೇ ಬಿಸಿಲು ಫಳಫಳಿಸುತ್ತದೆ
ಅವಳ ಕಣ್ಣುಗಳಲ್ಲದು ಪ್ರತಿಫಲಿಸುತ್ತದೆ
ಅವಳು ಸೂರ್ಯನನ್ನು ನೆಟ್ಟ ಕಂಗಳಲ್ಲಿ
ನೋಡಿ ಅಣಕಿಸುತ್ತಾಳೆ

ನಾನು ಅವಳನ್ನು ನೋಡುತ್ತಾ
ಬೆವರೊರೆಸಿಕೊಳ್ಳುತ್ತೇನೆ
ಅವಳು ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ,
ಮತ್ತೆ ವೈಶಾಖದ ಸುಡುಬಿಸಿಲು
ನನ್ನಮೇಲೆ ದಾಳಿಯಿಡುತ್ತದೆ

ನಾನು ಮರಳಿನ ಮೇಲೇನೋ 
ಬರೆಯಬೇಕೆಂದುಕೊಳ್ಳುತ್ತೇನೆ,
ಅವಳು ಕೋಪಿಸಿಕೊಳ್ಳುತ್ತಾಳೆ
ಅರೆಕ್ಷಣ,
ಇಬ್ಬರಿಗೂ ಜ್ಞಾನೋದಯವಾಗುತ್ತದೆ
ಅವಳು ಬರೆಯಲು ಹೇಳುತ್ತಾಳೆ
ನಾನು ಬರೆಯುವುದಿಲ್ಲ.

ಈ ಕ್ಷಣದ ಕವಿತೆ ೩

ವೈಶಾಖದ ಮಳೆ
ಮಳೆಗಾಲದ ನೆನಪುಗಳ ಎಚ್ಚರ ಅದು
ಇದು ದೊಡ್ಡ ಹನಿಯೋ ಸಣ್ಣ ಹನಿಯೋ ತಿಳಿಯದಂಥ ದ್ವಂದ್ವ
ಕಳೆದ ಮಳೆಗಾಲಗಳ ಅಸ್ಪಷ್ಟ ಪ್ರತಿನಿಧಿ

ವೈಶಾಖದ ಮಳೆ
ಹಸಿಮೆಣಸು ತಿಂದಾಗ ಸಿಕ್ಕ ಸಿಹಿನೀರು
ಅದು ಆರ್ದ್ರ
ಅದೊಂದು ಸಚಿತ್ರ ವಿಸ್ಮಯ

ವೈಶಾಖದ ಮಳೆ
ಒಂದು ಬಿಡುಗಡೆಯ ಆಸೆ
ಅದು ತೀರಲು ಶುರುವಾದ ಆದರೆ ತೀರದ ದಾಹ

ವೈಶಾಖದ ಮಳೆ 
ಸುಡುವ ನಡು ಮಧ್ಯಾಹ್ನಗಳಿಂದ ನಮ್ಮನ್ನೊಂದುಕ್ಷಣ ಕಾಯುವ
ಆದರೆ ಮತ್ತದೇ
ಬೇಗೆಯ ಪ್ರಪಂಚಕ್ಕೆ ದೂಡಿ ಓಡಿಹೋಗುವ ನಿರ್ದಯ ಕ್ರೂರಿ

ಈ ಕ್ಷಣದ ಕವಿತೆ ೬

ನನ್ನ ಬಳಿ ಒಂದು 
ಕವಿತೆಯಿದೆ.
ಬಹಳ ಇಷ್ಟದಲ್ಲಿ
ಸಾಕಿ ಬೆಳೆಸಿದ ಕವಿತೆಯದು.

ಸೆಖೆಗಾಲದಲ್ಲಿ
ಅಚಾನಕ್ಕು ಮಳೆಯಾದಾಗ,
ಮರಳಮೇಲೆ ಕುಳಿತು
ತಾಸುಗಟ್ಟಲೆ
ಅಲೆಗಳು ಒಂದಾದಮೇಲೊಂದು
ಬಂದುಹೋಗುವುದನ್ನು ಕಾಣುವಾಗ,
ಕಣ್ಮುಚ್ಚಿ ಮುಲ್ತಾನಿಯಲ್ಲೋ, ಶುದ್ಧ ಕಲ್ಯಾಣದಲ್ಲೋ ಕಳೆದುಹೋದಾಗ,
ಮಳೆಗಾಲ ಕಳೆದ 
ಶುಭ್ರಮುಗಿಲಿನ ನಗು ಕಂಡಾಗ,
ಆಕೆ ನಿರಾಯಾಸವಾಗಿ
ಕೂದಲನ್ನು ಮೇಲಕ್ಕೆತ್ತಿ ಗಂಟಿಕ್ಕಿ
ನಕ್ಕಾಗ,
ಹೀಗೆ ಆಗಾಗ 
ಅದು ಇಂಚಿಂಚು ಬೆಳೆದು
ಚಂದವಾಗಿದೆ.

ನನ್ನಬಳಿ ಒಂದು ಚಂದದ
ಕವಿತೆಯಿದೆ
ಹಳೆಗಾಲದ ಕಥೆಗಳ ಹಾಗೆ
ಏಳು ಸುತ್ತಿನ ಕೋಟೆಯೊಳಗಿನ
ಪಂಜರದಲ್ಲಿ ಮಾಂತ್ರಿಕನ
ಜೀವದ ಗುಟ್ಪು ಇರುವಹಾಗೇ
ಈ ಕವಿತೆಯೊಳಗೇ 
ನನ್ನ ರಹಸ್ಯವಿದೆ

ನನ್ನ ಬಳಿ ಒಂದು 
ಕವಿತೆಯಿದೆ
ಆದರೆ
ನಾನದನ್ನು ಯಾರಿಗೂ
ಕೊಡಲಾರೆನಷ್ಟೇ.

ಈ ಕ್ಷಣದ ಕವಿತೆ ೪

ಅವಳು
ಬೆವರೇಳಿಸುವ ಮುಲ್ತಾನಿ
ಮೈಮರೆಸುವ ಕಲ್ಯಾಣಿ
ಆವರಿಸಿಕೊಳ್ಳುವ ಶುದ್ಧ ಕಲ್ಯಾಣ
ಪ್ರವಹಿಸುವ ಜೋಗ
ನಿದ್ರೆ ಕಸಿಯುವ ಮಾಲಕೌಂಸ
ಬಡಿದೆಬ್ಬಿಸುವ ತೋಡಿ
ಭಾವದಲ್ಲಿ ಮುಳುಗಿಸುವ ಭೈರವಿ
ಅವಳು

Thursday, July 6, 2023

ಈ ಕ್ಷಣದ ಕವಿತೆ ೫




ಕೆಲವೊಮ್ಮೆ ಕವಿತೆಗಳು
ಕೈಮೀರಿ ಬೆಳೆಯುತ್ತವೆ
ಶಬ್ಧಗಳು ಕೈಗೆ ಸಿಗದಂತೆ
ತಪ್ಪಿಸಿಕೊಂಡು ಒಮ್ಮೆಲೇ
ಧುತ್ತನೆ ಪ್ರತ್ಯಕ್ಷವಾಗಿ ಅಣಕಿಸುತ್ತವೆ.

ಒಮ್ಮೊಮ್ಮೆ, ಅವು
ವಿಪರೀತ ಅನರ್ಥಗಳನ್ನು ಕೊಟ್ಟು ಕಾಡುತ್ತವೆ
ಇನ್ನು ಕೆಲವೊಮ್ಮೆ, ಅರ್ಥವನ್ನೇ ಅಡಗಿಸಿಟ್ಟು
ಉಸಿರುಕಟ್ಟಿಸುತ್ತವೆ

ಒಂದೊಂದೇ ಅಕ್ಷರಗಳು
ಸಾಲುಹಚ್ಚಿ
ಬೆರಳುಗಳಮೇಲೆ ನಿಂತು
ಕಾಯತೊಡಗುತ್ತವೆ
ಜೀವಾವದಿ ಶಿಕ್ಷೆಯಿಂದ ಇನ್ನೇನು ಹೊರಬೀಳುತ್ತಿರುವ ಖೈದಿಯಂತೆ ಚಡಪಡಿಸುತ್ತವೆ
ಯಾರಬಗ್ಗೆಯೋ ಏನೊ!

ನನ್ನ ಕವಿತೆ ನಿಮ್ಮ ಕಣ್ಣಿಗೆ ಕಾಣುವುದಿಲ್ಲ,
ಅವನ್ನು ನನ್ನ ಕಣ್ಣಿನಿಂದ ಓದಿದ ದಿನ ನಿಮಗೆ ದೃಷ್ಟಿ ಬರುತ್ತದೆ.

Sunday, June 26, 2022

ಪ್ರಿಯೆ ವಸುಂಧರೆ

 

ಆ ದಿನವೂ ಇಂಥದ್ದೇ ಮಳೆ. ಹೀಗೇ, ಭೂಮಿ ಆಕಾಶ ಒಂದಾಗಿ ಮಳೆ ಬಿದ್ದಿತ್ತು. ಈ ತೊರೆಯೂ ಹೀಗೇ ಹರಿಯುತ್ತಿತ್ತು.
       ಅವಳಿಗೂ ಮಳೆ ಎಂದರೆ ಎಂಥದ್ದೋ ಹುಚ್ಚು. ಹೊರಗೆ ಸಣ್ಣ ಮಳೆ ಬೀಳಲು ಶುರುವಾಗಿ ಅದು ತಾರಕಕ್ಕೇರಿದಂತೆಲ್ಲಾ ಆಕೆ ಸಣ್ಣ ಮಗುವಾಗಿಬಿಡುವವಳು. ಹತ್ತನೇ ಮಹಡಿಯ ಆಫೀಸಿನ ಗಾಜಿನ ಕಿಟಕಿಗಳ ಬಳಿ ಹೋಗಿ ಮಳೆ ಸುರಿಯುವುದನ್ನು ಕಾಣುತ್ತಾ ಆಕೆ ಕಳೆದು ಹೋಗುತ್ತಿದ್ದಳು ಒಮ್ಮೊಮ್ಮೆ ತುಂತುರು ಅಲ್ಲಿ ನೀರ ಹಾಡು... ಅಂತ ಗುನುಗುನಿಸುತ್ತಿದ್ದಳು. ಆ ಸಂತೋಷದಲ್ಲೇ ಕಾಲ ಅನಂತವಾಗಿ ಅವಳನ್ನು ತೋಯಿಸುತ್ತಿತ್ತು. ಅವಳು ವಸುಂಧರೆ.
       ನಾನು ಆಕೆ ಒಂದೇ ದಿನ ಒಂದೇ ಕೆಲಸಕ್ಕೆ ಸೇರಿದ್ದೆವು. ಮೊದಲ ದಿನವೇ ನನಗೆ ಅವಳು ಹಿಡಿಸಿದ್ದಳು‌. ಆ ಮೆಚ್ಚುಗೆ ಬರುಬರುತ್ತಾ ಪ್ರೀತಿಯಾಗಿ ಬದಲಾಗಿತ್ತು. ಅವಳು ಸುರಿಯುವ ಮಳೆಯನ್ನು ನೋಡುತ್ತಿದ್ದರೆ ನಾನು ಅವಳ ಕಣ್ಣಿನಲ್ಲಿ ಮಳೆಯ ಬಿಂಬವನ್ನು ನೋಡುತ್ತಿದೆ.
       ಏಳು ವರ್ಷ ನಮ್ಮ ನಡುವೆ ಮಾತು ಕೆಲಸದ ಹೊರತಾಗಿ ಬೆಳೆದಿರಲಿಲ್ಲ‌. ಏಳನೇಯ ವರ್ಷ ಆಕೆ ಕೆಲಸ ಬದಲಾಯಿಸುವ ತೀರ್ಮಾನಕ್ಕೆ ಬಂದಳು. ಆಕೆ ಬಿಟ್ಟು ಹೋಗುವ ಕೊನೆಯ ದಿನ ನಾನಾಕೆಯ ಬಳಿ ಮೊದಲು ಮಾತಾಡಿದ್ದೆ. ಐ ಲವ್ ಯೂ, ಡುಯು ಲವ್ ಮೀ?
       ಉತ್ತರ ಹೇಳದೇ ಹೊರಟು ಹೋದ ವಸುಂಧರಾ ನೆನಪು ಮಾತ್ರ ಆಗಿ ಹೋಗುವವಳಿದ್ದಳು. ಒಂದು ತಿಂಗಳ ನಂತರ ಅವಳಿಂದ ಒಂದು ಮೆಸೇಜ್ ಬಂತು. ವಿಲ್ ಯು ಮ್ಯಾರಿ ಮೀ?
       ಮದುವೆ ಆಯಿತು.

ನಮ್ಮ ಕೆಲಸದ ಸ್ಥಳಗಳು ಒಂದು ದಕ್ಷಿಣದ ತುದಿಗೆ ಮತ್ತೊಂದು ಉತ್ತರದ ತುದಿಗೆ. ನಾನು ಬೆಳಿಗ್ಗೆ ಬೇಗ ಹೊರಟುಬಿಡುತ್ತಿದ್ದೆ. ಆಕೆ ರಾತ್ರಿ ಬರುವುದು ತಡವಾಗುತ್ತಿತ್ತು. ಶನಿವಾರ ಬಂತೆಂದರೆ ಮಾತ್ರ ನಮಗೆ ಸಮಯ ಸಾಲುತ್ತಿರಲಿಲ್ಲ. ಮಾತು ಮಾತು ಮಾತು.
      ಹೀಗೆ ಐದು ವರ್ಷ ಕಳೆಯಿತು. ಒಂದು ದಿನ ವಸುಂಧರಾ ಬಹಳ ಗಂಭೀರ ಪ್ರಶ್ನೆ ಕೇಳಿದಳು. ಎಷ್ಟು ವರ್ಷ ಹೀಗೆ ವೀಕೆಂಡ್ ಪತಿ ಪತ್ನಿಯರಾಗಿ ಇರೋದು? ನನ್ನನ್ನೂ ಈ ಪ್ರಶ್ನೆ ಕಾಡಿತ್ತು. ಆದರೆ ವೃತ್ತಿ ಜೀವನದಲ್ಲಿ ಯಾವುದೇ ಬದಲಾವಣೆಯ ನಿರ್ಧಾರ ಸುಲಭ ಇರಲಿಲ್ಲ. ಈ ಪ್ರಶ್ನೆ ತಲೆಯಲ್ಲಿ ಕೊರೆಯುತ್ತಲೇ ಮತ್ತೊಂದು ವರುಷ ಕಳೆಯಿತು.
      ಯಾವುದೇ ನಿರ್ಧಾರವನ್ನು ಸಾಕಷ್ಟು ಸಮಯ ತೆಗೆದುಕೊಂಡು ಮಾಡುವ ವಸುಂಧರಾ ಆ ದಿನ ನಿರ್ಣಯದ ಸ್ವರದಲ್ಲಿ ಹೇಳಿದಳು. ಹದಿಮೂರು ವರ್ಷಗಳ ದುಡಿಮೆ ಕೈಯಲ್ಲಿದೆ. ಈ ಬದುಕು ಸಾಕು. ಹೊಸದೊಂದು ಬದುಕು ಪ್ರಾರಂಭ ಮಾಡೋಣ ಎಂದಳು. ಅವಳ ಅಪ್ಪನ ಊರಿನಲ್ಲಿ ಒಂದು ಜಮೀನು ಕೊಂಡು ಕೃಷಿ ಮಾಡೋಣ ಎಂದಳು. ಒಮ್ಮೆಗೇ ಇದು ಹುಚ್ಚಾಟ ಅಂತ ಕಂಡಿತು. ಆದರೆ ವಸುಂಧರಾ ಒಂದು ವರ್ಷ ಯೋಚಿಸಿ ತೆಗೆದುಕೊಂಡ ನಿರ್ಧಾರ ಅದು. ಕಡೆಗೂ ನಾನು ಒಪ್ಪಬೇಕಾಯಿತು. 
      ಒಂದು ಭಾನುವಾರ ಅವಳ ಅಪ್ಪನ ಹಳ್ಳಿಗೆ ಹೋಗಿ ಒಂದು ಚೆಂದದ ತೋಟ ನೋಡಿದೆವು. ಎರಡೆಕರೆ ತೋಟ. ಪಕ್ಕದಲ್ಲೊಂದು ಸುಮಾರು ದೊಡ್ಡದೇ ಆದ ತೊರೆ ಇತ್ತು. ವಸುಂಧರೆಗೆ ತೋಟ ಹಿಡಿಸಿತ್ತು‌. ನನಗೂ ಮೆಚ್ಚುಗೆ ಆಗಿತ್ತು. ಅದನ್ನೇ ಕೊಳ್ಳುವ ತೀರ್ಮಾನ ಮಾಡಿದೆವು.
      ವೃತ್ತಿ ಜೀವನವನ್ನು ಸಂಪೂರ್ಣ ವಾಗಿ ಮುಕ್ತಾಯ ಮಾಡಿ ನಾವು ಕೊಂಡ ಜಮೀನಿಗೆ ಹಿಂತಿರುಗಲು ಎರಡು ತಿಂಗಳು ಹಿಡಿದಿತ್ತು.

   ಆ ದಿನ ಗೃಹಪ್ರವೇಶ. ಅವಳ ಮನೆಯವರು ನನ್ನ ನೆಂಟರು ಎಲ್ಲರೂ ಬಂದು ಹೋದರು. ಸಂಜೆ ನಾನು ಮತ್ತು ಅವಳು ಇಬ್ಬರೇ. ಬದುಕಿನ ಸುಂದರ ಕನಸುಗಳನ್ನು ಹಂಚಿಕೊಳ್ಳುತ್ತಾ ತೋಟದ ಬದಿಯ ತೊರೆಯ ಬಳಿ ಹೋದೆವು. ಅವಳೀಗ ಕೃಷಿಯಲ್ಲಿ ಬಹಳ ಆಸಕ್ತಿ ತಾಳಿಬಿಟ್ಟಿದ್ದಳು. 
   ಆ ದಿನವೂ ಇಂಥದ್ದೇ ಮಳೆ. ಹೀಗೇ, ಭೂಮಿ ಆಕಾಶ ಒಂದಾಗಿ ಮಳೆ ಬಿದ್ದಿತ್ತು. ಈ ತೊರೆಯೂ ಹೀಗೇ ತುಂಬಿ ಹರಿಯುತ್ತಿತ್ತು.
    ತೊರೆ ಪಕ್ಕ ನಿಲ್ತೀನಿ ಫೋಟೋ ತೆಗಿಯೋ ಅಂತ ಪೀಡಿಸಿದಳು. ನಾನು ಒಂದೆರಡು ಫೋಟೋ ತೆಗೆದೆ. ಅವಳಿಗದು ಹಿಡಿಸಲಿಲ್ಲ. ನಿಂಗೆ ಫೋಟೊಗ್ರಫಿಯ ಗಂಧಗಾಳಿ ಇಲ್ಲ ಅಂತ ಬೈಯ್ದಳು. ನನಗೂ ಸ್ವಲ್ಪ ಅಭಿಮಾನ ಕೆಣಕಿ ಈಗ ನಿಲ್ಲು, ಹೇಗೆ ತೆಗೀತೀನಿ ನೋಡು ಅಂದೆ. ನಿಲ್ಲಿಸಿ ಒಂದು ಫೋಟೋ ತೆಗೆದು ಹೇಗೆ ಬಂದಿದೆ ಅಂತ ಮೊಬೈಲು ಸ್ಕ್ರೀನು ನೋಡಿದೆ ಹಿಂದಿನ ತೊರೆಯ ಸಮೇತ ಫೋಟೋ ಚೆಂದಕ್ಕೆ ಬಂದಿತ್ತು. ಇದು ನೋಡೇ.... ಅಂತ ಅವತ್ತು ತಿರುಗಿದರೆ ಅವಳಿಲ್ಲ. ವಸುಂಧರಾ ಎಂದು ಕೂಗುತ್ತಾ ಹತ್ತಿರ ಓಡಿದೆ, ಅವಳ ಪ್ರೀತಿಯ ತೊರೆ ಅವಳನ್ನು ಅಪ್ಪಿಕೊಂಡು ಕರೆದೊಯ್ಯುತ್ತಿತ್ತು.
     ಮತ್ತೊಂದು ವಸುಂಧರೆಯ ಮಡಿಲಿಗೆ ನನ್ನನ್ನು ಹಾಕಿ ದೂರವಾಗಿಹೋದಳು ಪ್ರಿಯೆ ವಸುಂಧರೆ.