ಆ ದಿನವೂ ಇಂಥದ್ದೇ ಮಳೆ. ಹೀಗೇ, ಭೂಮಿ ಆಕಾಶ ಒಂದಾಗಿ ಮಳೆ ಬಿದ್ದಿತ್ತು. ಈ ತೊರೆಯೂ ಹೀಗೇ ಹರಿಯುತ್ತಿತ್ತು.
ಅವಳಿಗೂ ಮಳೆ ಎಂದರೆ ಎಂಥದ್ದೋ ಹುಚ್ಚು. ಹೊರಗೆ ಸಣ್ಣ ಮಳೆ ಬೀಳಲು ಶುರುವಾಗಿ ಅದು ತಾರಕಕ್ಕೇರಿದಂತೆಲ್ಲಾ ಆಕೆ ಸಣ್ಣ ಮಗುವಾಗಿಬಿಡುವವಳು. ಹತ್ತನೇ ಮಹಡಿಯ ಆಫೀಸಿನ ಗಾಜಿನ ಕಿಟಕಿಗಳ ಬಳಿ ಹೋಗಿ ಮಳೆ ಸುರಿಯುವುದನ್ನು ಕಾಣುತ್ತಾ ಆಕೆ ಕಳೆದು ಹೋಗುತ್ತಿದ್ದಳು ಒಮ್ಮೊಮ್ಮೆ ತುಂತುರು ಅಲ್ಲಿ ನೀರ ಹಾಡು... ಅಂತ ಗುನುಗುನಿಸುತ್ತಿದ್ದಳು. ಆ ಸಂತೋಷದಲ್ಲೇ ಕಾಲ ಅನಂತವಾಗಿ ಅವಳನ್ನು ತೋಯಿಸುತ್ತಿತ್ತು. ಅವಳು ವಸುಂಧರೆ.
ನಾನು ಆಕೆ ಒಂದೇ ದಿನ ಒಂದೇ ಕೆಲಸಕ್ಕೆ ಸೇರಿದ್ದೆವು. ಮೊದಲ ದಿನವೇ ನನಗೆ ಅವಳು ಹಿಡಿಸಿದ್ದಳು. ಆ ಮೆಚ್ಚುಗೆ ಬರುಬರುತ್ತಾ ಪ್ರೀತಿಯಾಗಿ ಬದಲಾಗಿತ್ತು. ಅವಳು ಸುರಿಯುವ ಮಳೆಯನ್ನು ನೋಡುತ್ತಿದ್ದರೆ ನಾನು ಅವಳ ಕಣ್ಣಿನಲ್ಲಿ ಮಳೆಯ ಬಿಂಬವನ್ನು ನೋಡುತ್ತಿದೆ.
ಏಳು ವರ್ಷ ನಮ್ಮ ನಡುವೆ ಮಾತು ಕೆಲಸದ ಹೊರತಾಗಿ ಬೆಳೆದಿರಲಿಲ್ಲ. ಏಳನೇಯ ವರ್ಷ ಆಕೆ ಕೆಲಸ ಬದಲಾಯಿಸುವ ತೀರ್ಮಾನಕ್ಕೆ ಬಂದಳು. ಆಕೆ ಬಿಟ್ಟು ಹೋಗುವ ಕೊನೆಯ ದಿನ ನಾನಾಕೆಯ ಬಳಿ ಮೊದಲು ಮಾತಾಡಿದ್ದೆ. ಐ ಲವ್ ಯೂ, ಡುಯು ಲವ್ ಮೀ?
ಉತ್ತರ ಹೇಳದೇ ಹೊರಟು ಹೋದ ವಸುಂಧರಾ ನೆನಪು ಮಾತ್ರ ಆಗಿ ಹೋಗುವವಳಿದ್ದಳು. ಒಂದು ತಿಂಗಳ ನಂತರ ಅವಳಿಂದ ಒಂದು ಮೆಸೇಜ್ ಬಂತು. ವಿಲ್ ಯು ಮ್ಯಾರಿ ಮೀ?
ಮದುವೆ ಆಯಿತು.
ನಮ್ಮ ಕೆಲಸದ ಸ್ಥಳಗಳು ಒಂದು ದಕ್ಷಿಣದ ತುದಿಗೆ ಮತ್ತೊಂದು ಉತ್ತರದ ತುದಿಗೆ. ನಾನು ಬೆಳಿಗ್ಗೆ ಬೇಗ ಹೊರಟುಬಿಡುತ್ತಿದ್ದೆ. ಆಕೆ ರಾತ್ರಿ ಬರುವುದು ತಡವಾಗುತ್ತಿತ್ತು. ಶನಿವಾರ ಬಂತೆಂದರೆ ಮಾತ್ರ ನಮಗೆ ಸಮಯ ಸಾಲುತ್ತಿರಲಿಲ್ಲ. ಮಾತು ಮಾತು ಮಾತು.
ಹೀಗೆ ಐದು ವರ್ಷ ಕಳೆಯಿತು. ಒಂದು ದಿನ ವಸುಂಧರಾ ಬಹಳ ಗಂಭೀರ ಪ್ರಶ್ನೆ ಕೇಳಿದಳು. ಎಷ್ಟು ವರ್ಷ ಹೀಗೆ ವೀಕೆಂಡ್ ಪತಿ ಪತ್ನಿಯರಾಗಿ ಇರೋದು? ನನ್ನನ್ನೂ ಈ ಪ್ರಶ್ನೆ ಕಾಡಿತ್ತು. ಆದರೆ ವೃತ್ತಿ ಜೀವನದಲ್ಲಿ ಯಾವುದೇ ಬದಲಾವಣೆಯ ನಿರ್ಧಾರ ಸುಲಭ ಇರಲಿಲ್ಲ. ಈ ಪ್ರಶ್ನೆ ತಲೆಯಲ್ಲಿ ಕೊರೆಯುತ್ತಲೇ ಮತ್ತೊಂದು ವರುಷ ಕಳೆಯಿತು.
ಯಾವುದೇ ನಿರ್ಧಾರವನ್ನು ಸಾಕಷ್ಟು ಸಮಯ ತೆಗೆದುಕೊಂಡು ಮಾಡುವ ವಸುಂಧರಾ ಆ ದಿನ ನಿರ್ಣಯದ ಸ್ವರದಲ್ಲಿ ಹೇಳಿದಳು. ಹದಿಮೂರು ವರ್ಷಗಳ ದುಡಿಮೆ ಕೈಯಲ್ಲಿದೆ. ಈ ಬದುಕು ಸಾಕು. ಹೊಸದೊಂದು ಬದುಕು ಪ್ರಾರಂಭ ಮಾಡೋಣ ಎಂದಳು. ಅವಳ ಅಪ್ಪನ ಊರಿನಲ್ಲಿ ಒಂದು ಜಮೀನು ಕೊಂಡು ಕೃಷಿ ಮಾಡೋಣ ಎಂದಳು. ಒಮ್ಮೆಗೇ ಇದು ಹುಚ್ಚಾಟ ಅಂತ ಕಂಡಿತು. ಆದರೆ ವಸುಂಧರಾ ಒಂದು ವರ್ಷ ಯೋಚಿಸಿ ತೆಗೆದುಕೊಂಡ ನಿರ್ಧಾರ ಅದು. ಕಡೆಗೂ ನಾನು ಒಪ್ಪಬೇಕಾಯಿತು.
ಒಂದು ಭಾನುವಾರ ಅವಳ ಅಪ್ಪನ ಹಳ್ಳಿಗೆ ಹೋಗಿ ಒಂದು ಚೆಂದದ ತೋಟ ನೋಡಿದೆವು. ಎರಡೆಕರೆ ತೋಟ. ಪಕ್ಕದಲ್ಲೊಂದು ಸುಮಾರು ದೊಡ್ಡದೇ ಆದ ತೊರೆ ಇತ್ತು. ವಸುಂಧರೆಗೆ ತೋಟ ಹಿಡಿಸಿತ್ತು. ನನಗೂ ಮೆಚ್ಚುಗೆ ಆಗಿತ್ತು. ಅದನ್ನೇ ಕೊಳ್ಳುವ ತೀರ್ಮಾನ ಮಾಡಿದೆವು.
ವೃತ್ತಿ ಜೀವನವನ್ನು ಸಂಪೂರ್ಣ ವಾಗಿ ಮುಕ್ತಾಯ ಮಾಡಿ ನಾವು ಕೊಂಡ ಜಮೀನಿಗೆ ಹಿಂತಿರುಗಲು ಎರಡು ತಿಂಗಳು ಹಿಡಿದಿತ್ತು.
ಆ ದಿನ ಗೃಹಪ್ರವೇಶ. ಅವಳ ಮನೆಯವರು ನನ್ನ ನೆಂಟರು ಎಲ್ಲರೂ ಬಂದು ಹೋದರು. ಸಂಜೆ ನಾನು ಮತ್ತು ಅವಳು ಇಬ್ಬರೇ. ಬದುಕಿನ ಸುಂದರ ಕನಸುಗಳನ್ನು ಹಂಚಿಕೊಳ್ಳುತ್ತಾ ತೋಟದ ಬದಿಯ ತೊರೆಯ ಬಳಿ ಹೋದೆವು. ಅವಳೀಗ ಕೃಷಿಯಲ್ಲಿ ಬಹಳ ಆಸಕ್ತಿ ತಾಳಿಬಿಟ್ಟಿದ್ದಳು.
ಆ ದಿನವೂ ಇಂಥದ್ದೇ ಮಳೆ. ಹೀಗೇ, ಭೂಮಿ ಆಕಾಶ ಒಂದಾಗಿ ಮಳೆ ಬಿದ್ದಿತ್ತು. ಈ ತೊರೆಯೂ ಹೀಗೇ ತುಂಬಿ ಹರಿಯುತ್ತಿತ್ತು.
ತೊರೆ ಪಕ್ಕ ನಿಲ್ತೀನಿ ಫೋಟೋ ತೆಗಿಯೋ ಅಂತ ಪೀಡಿಸಿದಳು. ನಾನು ಒಂದೆರಡು ಫೋಟೋ ತೆಗೆದೆ. ಅವಳಿಗದು ಹಿಡಿಸಲಿಲ್ಲ. ನಿಂಗೆ ಫೋಟೊಗ್ರಫಿಯ ಗಂಧಗಾಳಿ ಇಲ್ಲ ಅಂತ ಬೈಯ್ದಳು. ನನಗೂ ಸ್ವಲ್ಪ ಅಭಿಮಾನ ಕೆಣಕಿ ಈಗ ನಿಲ್ಲು, ಹೇಗೆ ತೆಗೀತೀನಿ ನೋಡು ಅಂದೆ. ನಿಲ್ಲಿಸಿ ಒಂದು ಫೋಟೋ ತೆಗೆದು ಹೇಗೆ ಬಂದಿದೆ ಅಂತ ಮೊಬೈಲು ಸ್ಕ್ರೀನು ನೋಡಿದೆ ಹಿಂದಿನ ತೊರೆಯ ಸಮೇತ ಫೋಟೋ ಚೆಂದಕ್ಕೆ ಬಂದಿತ್ತು. ಇದು ನೋಡೇ.... ಅಂತ ಅವತ್ತು ತಿರುಗಿದರೆ ಅವಳಿಲ್ಲ. ವಸುಂಧರಾ ಎಂದು ಕೂಗುತ್ತಾ ಹತ್ತಿರ ಓಡಿದೆ, ಅವಳ ಪ್ರೀತಿಯ ತೊರೆ ಅವಳನ್ನು ಅಪ್ಪಿಕೊಂಡು ಕರೆದೊಯ್ಯುತ್ತಿತ್ತು.
ಮತ್ತೊಂದು ವಸುಂಧರೆಯ ಮಡಿಲಿಗೆ ನನ್ನನ್ನು ಹಾಕಿ ದೂರವಾಗಿಹೋದಳು ಪ್ರಿಯೆ ವಸುಂಧರೆ.
No comments:
Post a Comment