ಇಲ್ಲಿ ಬರೆಯುತ್ತಿದ್ದೇನೆ. ಅವಕಾಶಕ್ಕಾಗಿ ಮತ್ತು ಹಾರ್ದಿಕವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡದ್ದಕ್ಕಾಗಿ ಶ್ರೀಧರ ಬಳಗಾರ ಅವರಿಗೆ ಧನ್ಯವಾದಗಳು.
ಸಂದರ್ಶನ:
ನಾನು: ಒಳ್ಳೆಯ ಕಥೆ ಮತ್ತು ಕೆಟ್ಟ ಕಥೆ ಎಂಬ ವಿಂಗಡಣೆ ಸಾಧ್ಯವೆ? ಲೇಖಕನಿಗೆ ಅವನ ಕಥೆಗಳು ಯಾವಾಗಲು ಒಳ್ಳೆಯವೆ, ಓದುಗನಿಗೆ ಕೆಲವು ಇಷ್ಟ ಆಗುತ್ತವೆ ಕೆಲವು ಆಗುವುದಿಲ್ಲ, ಹಾಗಂದ ಮಾತ್ರಕ್ಕೆ ಅದು ಕೆಟ್ಟ ಕಥೆಯ? ಈ ವಿಂಗಡಣೆಗೆ ಏನಾದರೂ ಮಾನ ದಂಡ ಇದೆಯೆ?
ಶ್ರೀಧರ ಬಳಗಾರ: ಹಾಗೆ ವಿಂಗಡಿಸುವುದಕ್ಕೆ ಯಾವುದೇ standard criteria ಅಥವಾ ಮಾನದಂಡಗಳಿಲ್ಲ, ಆದರೆ ಒಳ್ಳೆಯ ಕಥೆ ಅಂತ ನಾನು ನಂಬುವುದು ಹೇಗೆ ಅಂದರೆ, ಅದು ಕೇವಲ ಮಾಹಿತಿಯ ನೆಲೆಯಲ್ಲಿ ನಿಲ್ಲದೆ, ಮನುಷ್ಯನ ಅನುಭವಕ್ಕೆ ಒಂದು ಪ್ರಮಾಣವಾಗಿರಬೇಕು. ಅನುಭವ ಪ್ರಾಮಾಣ್ಯ ಎನ್ನುತ್ತೇವಲ್ಲ ಅದು ಇರಬೇಕು. ಓದುಗನಿಗೆ ಈ ಕಥೆ ತನ್ನದು ಎನ್ನಿಸುವ ರೀತಿಯ ನಿರೂಪಣೆ ಒಳ್ಳೆಯ ಕಥೆಯ ಒಂದು ಲಕ್ಷಣ. ಇನ್ನೊಂದು ಲಕ್ಷಣ ಎಂದರೆ, ತನಗೆ ಗೊತ್ತಿರವ ಘಟನೆ, ಸ್ವಭಾವ ಅಥವಾ ನಿತ್ಯ ನಡೆಯುವ ಚಟುವಟಿಕೆಗಳು, ಅವನ್ನ ನಾನು ನೋಡ್ತಾ ಇರುತ್ತೇನೆ ಆದರೆ ಅದರಲ್ಲಿ ವಿಶೇಷವಾದದ್ದೇನೂ ಕಾಣುವುದಿಲ್ಲ, ಆದರೆ ಕಥೆಯಲ್ಲಿ ಹಾಗಿ ಕಂಡದ್ದನ್ನೇ ಹೊಸ ಅರಿವಿನಲ್ಲಿ ನೋಡುವ ದೃಷ್ಠಿ ಇರುತ್ತದೆ. ಇದರ ಬಗ್ಗೆ ಕುರ್ತಕೋಟಿ ಅವರು ಒಂದು ಮಾತು ಹೇಳಿದ್ದರು "ಗೊತ್ತಿರುವುದನ್ನೇ ಮತ್ತಷ್ಟು ಸ್ಪಷ್ಟವಾಗಿ ಅರಿವಿಗೆ ತರುವಂತಹ ಕೆಲಸ ಮಾಡುವುದು ಒಳ್ಳೆಯ ಕಥೆ, ಈ ಕ್ರಿಯೆಗೆ ಪ್ರತ್ಯಭಿಜ್ಞಾನ ಎಂದು ಹೆಸರು". ಕೇವಲ ಅನುಭವ ಇದ್ದ ಮಾತ್ರಕ್ಕೆ ಕಥೆ ಹುಟ್ಟುವುದಿಲ್ಲ, ತನ್ನ ಅನುಭವವನ್ನ ಓದುಗನ ಅನುಭವದಂತೆ ನಿರೂಪಿಸುವ ಕಲೆ ಇರುವುದು ಬಹಳ ಮುಖ್ಯ. ಅಂತಹ ತಂತ್ರ ಅಥವಾ ಕಲಾತ್ಮಕತೆ ಇದ್ದ ಕಥೆ ಉತ್ತಮ ಎನಿಸುತ್ತದೆ ಎನ್ನುವುದು ನನ್ನ ಅನಿಸಿಕೆ. ಮತ್ತೊಂದು ಲಕ್ಷಣ ಎಂದರೆ, ನಾನು ಕಥೆ ಬರೆಯುವಾಗ ಕೇವಲ ಲಿಪಿಕಾರನಾಗಿ ಇರಬೇಕು, ಅಂದರೆ I should maintain my neutriality. ನನ್ನ ಲಕ್ಷ್ಯ, ಅನುಕಂಪ ಮತ್ತು ಪ್ರೀತಿಯನ್ನು ಎಲ್ಲಾ ಪಾತ್ರಗಳಲ್ಲಿ ಸಮನಾಗಿ ಹಂಚಿದಾಗ ಮಾತ್ರ ನಾನು ಒಂದು literary justice ಕೊಡಲು ಸಾಧ್ಯ. ಅದನ್ನು ಬಿಟ್ಟು ನನ್ನ ಪಾತ್ರವನ್ನು ನಾನೇ ತಾಳ ಬಡಿದು ಕುಣಿಸುವ ಹಾಗಿದ್ದರೆ ಒಳ್ಳೆಯದಲ್ಲ. ಪಾತ್ರಗಳ ನಂಬಿಕೆ ಮತ್ತು ಆಶಯಕ್ಕೆ ತಕ್ಕಂತ ಅವುಗಳೇ ವ್ಯವಹರಿಸುವುದಕ್ಕೆ ಬಿಡಬೇಕು, ಅವಕ್ಕೊಂದು ಸ್ವಯಂಭೂ ತನ ಅಥವಾ ತನ್ನತನವನ್ನು ಕೊಟ್ಟಾಗ ಕಥೆ ಒಳ್ಳೆಯ ಕಥೆಯಾಗುತ್ತದೆ. ಅಂತಹ ಕಥೆಗೆ ಕೊನೆ ಅಥವಾ dead end ಇರುವುದಿಲ್ಲ, ಅದು ಓದಿದ ಮಾತ್ರಕ್ಕೆ ನಿಲ್ಲುವುದಿಲ್ಲ ಅದು ಓದುಗನಲ್ಲಿ ಸದಾ ಜೀವಂತವಾಗಿ ಮುಂದುವರಿಯುತ್ತದೆ ಅಷ್ಟೇ ಅಲ್ಲ, ಒಳ್ಳೆಯ ಕಥೆ ತನ್ನ ಪರಿಪೂರ್ಣತೆಗಾಗಿ ಒಳ್ಳೆಯ ಓದುಗರನ್ನು ಹುಡುಕುತ್ತಿರುತ್ತದೆ.
ನಾನು: ನಾನು ನಿಮ್ಮ ಮೂರು ಕಥಾ ಸಂಕಲನಗಳನ್ನು ಓದಿದ್ದೇನೆ, ಅವುಗಮಲ್ಲಿ ಎರಡು ಕಥೆಯ ನನಗೆ ಸದಾ ನೆನಪಿರುವಂತದ್ದು. 'ಹಾತೆಗಳು' ಮತ್ತು 'ರಂಭಾ ವಿವಾಹ'. ಈ ಎರಡೂ ಕಥೆಗಳಲ್ಲೂ ಒಂದು ಬಗೆಯ ನಾಟಕೀಯ ಅಂತ್ಯ ಇರುವುದೂ ಅದಕ್ಕೆ ಕಾರಣ. ಆದರೆ, ನಿಮ್ಮ ಎಲ್ಲಾ ಕಥೆಗಳನ್ನೂ ಓದುವಾಗ ನಾನು ಬಹಳ ಆನಂದಿಸಿದ್ದೇನೆ, ನಿಮ್ಮ ಮತ್ತು ನನ್ನ ಊರುಗಳೂ ಹತ್ತಿರದವಾದದ್ದರಿಂದ ಅವು ಬಹಳ ಆಪ್ತ, ಮತ್ತು ನನ್ನ ಸುತ್ತ ಮುತ್ತಲೇ ನಡೆಯುತ್ತಿದೆಯೇನೊ ಎನಿಸಿವೆ. ಆದರೆ ಸನ್ನಿವೇಶ ಸಹಿತವಾಗಿ ನೆನಪಿರುವ ಕಥೆಗಳು ಎರಡು ಮಾತ್ರ. ನಿಮ್ಮ ಪ್ರಕಾರ ಕಥೆಯ ಯಶಸ್ಸು ಯಾವುದು? ಓದುಗನ ನೆನಪಿನಲ್ಲಿ ಉಳಿಯುವಂಥದ್ದೋ ಅಥವಾ ಸದಾ ನೆನಪಿನಲ್ಲಿರದಿದ್ದರೂ, ಓದುವಾಗ ಆನಂದವನ್ನು ಕೊಡುವಂಥದ್ದೋ?
ಶ್ರೀಧರ ಬಳಗಾರ: ಕಥೆಯ success ಎನ್ನುವುದಕ್ಕೆ ಅದು competition ಅಥವಾ race ನಲ್ಲಿ ಇರುವುದಲ್ಲ. ಆದರೆ, ಯಾವ ಕಥೆ ಓದುಗನಲ್ಲಿ ಇಂಗಿ ಬಹುಕಾಲದ ವರೆಗೆ ನೆನಪಿಡುವಂತಹ ಅಂಶವನ್ನು ಹೊಂದಿದೆಯೊ, ಅದು ಯಶಸ್ವಿ ಕಥೆ. ಆದರೆ ಕಥೆಯೊಂದು ನೆನಪಿನಲ್ಲುಳಿಯದೇ ಇರುವುದು ಆ ಕಥೆಯ limitation ಎಂದು ಹೇಳಲಾರೆ. ಅದು ಓದುಗನಿಗೆ connect ಆಗದೇ ಇರಬಹುದು.
ಯಾವ ಕಥೆ ಓದುಗನಿಗೆ ಒಂದು ತೀರ್ಮಾನ ಕೊಡುತ್ತದೆಯೊ ಅದು ಒಳ್ಳೆಯ ಕಥೆ ಅಲ್ಲ, ತೀರ್ಮಾನ ಕೊಡುವುದು ಯಾವುದೇ ಸಾಹಿತ್ಯ ಪ್ರಕಾರದ, ಅದರಲ್ಲೂ ಸಣ್ಣ ಕಥೆಯ ಒಳ್ಳೆಯ ಲಕ್ಷಣ ಅಲ್ಲ. But we are always in search of conclusion. ಕಥೆ ತೀರ್ಮಾನ ಕೊಡುವ ಬದಲು ತಿಳಿವಳಿಕೆ ಕೊಡುತ್ತಾ ಹೋಗಬೇಕು.
ನಾನು: ನೀವು ಕಥೆ ಮತ್ತು ಕಾದಂಬರಿ ಎರಡನ್ನೂ ಬರೆದಿದ್ದೀರಿ. ವಸ್ತುವನ್ನು consistent ಆಗಿ ಇಡುವುದಕ್ಕೆ ಯಾವುದು ಸುಲಭ ಎನಿಸುತ್ತದೆ?
ಶ್ರೀಧರ ಬಳಗಾರ: In terms of time, in terms of energy and in terms of concentration it requires, writing a novel is a laborious task. ನಿರಂತರವಾಗಿ, ಒಂದೇ ಧ್ಯಾನದಲ್ಲಿ ಯಾವುದೇ gap ಇಲ್ಲದೆ, ಎರಡು ಮೂರು ತಿಂಗಳು ತಪಸ್ಸು ಮಾಡಿದ ಹಾಗೆ ಅದು. ಅದಕ್ಕೆ ತುಂಬಾ ತಾಳ್ಮೆ ಬೇಕು. ಅದರ canvas ಬಹಳ ದೊಡ್ಡದು. ಮೂರು ತಾಸಿನ ಯಕ್ಷಗಾನ ಮತ್ತು ಇಡೀ ರಾತ್ರಿಯ ಯಕ್ಷಗಾನದಂತೆ ಕಥೆ-ಕಾದಂಬರಿಗಳು. ಸಣ್ಣ ಕತೆ ಆ ಕ್ಷಣದ ತಹತಹ, ಸುಖ, ದುಃಖದ ನಿರೂಪಣೆ. ಹಾಗೆ ನೋಡಿದರೆ ಎರಡರಲ್ಲಿ ಯಾವುದು ಸುಲಭವೂ ಅಲ್ಲ ಕಷ್ಟವೂ ಅಲ್ಲ.
ನಾನು: ಆದರೆ ಕಾದಂಬರಿಯಲ್ಲಿ ಸ್ವಾತಂತ್ರ್ಯ ಸ್ವಲ್ಪ ಜಾಸ್ತಿ ಎನಿಸುವುದಿಲ್ಲವೆ? ಕಥೆಯನ್ನು ವಿಸ್ತಾರವಾಗಿ ಎಷ್ಟು ಬೇಕೋ ಅಷ್ಟನ್ನೂ ಹೇಳುವ ಅವಕಾಶ ಅದರಲ್ಲಿದೆ, ಆದರೆ ಸಣ್ಣ ಕಥೆಯಲ್ಲಿ ಒಂದು limitation ಇದೆ ಎನಿಸುವುದಿಲ್ಲವೆ?
ಶ್ರೀಧರ ಬಳಗಾರ: ಸಣ್ಣ ಕಥೆಗೆ limitation ಹೇರಿದವರು ಲೇಖಕ ಎನ್ನುವುದಕ್ಕಿಂತ ಪತ್ರಿಕೆಯವರು ಎನ್ನುವುದು ಸೂಕ್ತ. ಮತ್ತೆ, ಸಣ್ಣಕಥೆ ಎನಿಸಿಕೊಂಡದ್ದು ಒಂದಿಷ್ಟು ಪುಟಗಳನ್ನು ದಾಟಿ ಹೋದಾಗ ಅದು ನೀಳ್ಗತೆ ಅಥವಾ ಕಾದಂಬರಿ ಆಗುವ ಸಣ್ಣ ಆತಂಕವೂ ಇದೆ.
ನಾನು: ನಿಮಗೆ ಆ ಆತಂಕ ಇದೆಯೆ? ನೀವು ಅದನ್ನು ಒಪ್ಪುತ್ತೀರ?
ಶ್ರೀಧರ ಬಳಗಾರ: ನಾನು ಕಥೆಯ ಗಾತ್ರದ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಅದು ಬಯಸಿದಷ್ಟು ಸಹಜವಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತೇನೆ. ಹಾಗಾಗಿ ಸಂತೋಷ ಕಥೆ ಮತ್ತು ಕಾದಂಬರಿಗಳೆರಡರಲ್ಲೂ ಇದೆ. ಯಾಕೆಂದರೆ ಅದರ ಬೆಳವಣಿಗೆ pre planned ಆಗಿರುವುದಿಲ್ಲ. But you may have a kind of a frame, ಒಂದು ಚೌಕಟ್ಟು ಅಥವಾ ಒಂದು skeleton. ಆದರೆ ಅದಕ್ಕೆ ರಕ್ತಮಾಂಸಗಳನ್ನು ಕಥೆ ತಾನೇ ತುಂಬಿಕೊಳ್ಳುತ್ತದೆ. ನನಗೆ ಬಹಳ ಆಶ್ಚರ್ಯ ಮತ್ತು ಸಂತೋಷದ ಸಂಗತಿ ಎಂದರೆ ನಾನು ಒಂದು ಚೌಕಟ್ಟಿನಲ್ಲಿ ಬರೆಯಲು ಪ್ರಾರಂಭಿಸಿದಾಗ, ನಾನು ಆಲೋಚನೆ ಮಾಡಿರದ ವಿಷಯಗಳೆಲ್ಲಾ ಅದೃಷ್ಟವಶಾತ್ ನನ್ನ ಪಾಲಿಗೆ ಸಂಭವಿಸುತ್ತವೆ, ನಾನೇ ಚಕಿತ ಆಗುವ ಹಾಗೆ, ನನಗೆ ಖುಷಿ ಕೊಡುವ ಹಾಗೆ ಅಂದರೆ, ಆ ಘಟನೆಗಳು ನನ್ನನ್ನೇ ಕಾಯ್ತಾಇದ್ದವೇನೋ! ಅಥವಾ ಆ ಪಾತ್ರಗಳು ನನಗಾಗೇ ಕಾಯ್ತಾ ಕೂತಿದ್ದವೇನೊ! ಎನಿಸುವಂತಹ ಘಟನೆಗಳು ನಡೆದು, I will be careied away. ಅವೇ ನನ್ನನ್ನು ಎಳೆದುಕೊಂಡು ಹೋಗುತ್ತವೆ. ಮೊದಲೆಲ್ಲ, ಚಿತ್ತಾಲರು ಕಥೆ ನನ್ನಿಂದ ಬರೆಸಿಕೊಳ್ಳುತ್ತಿದೆ ಎನ್ನುವಾಗ ಅದೊಂದು ಸುಂದರ joke ನಂತೆ ಕಾಣುತ್ತಿತ್ತು. ಇದೆಲ್ಲ ಹೇಗೆ ಸಾಧ್ಯ ಎನಿಸುತ್ತಿತ್ತು. But later on I felt it. ಇದಕ್ಕೆಲ್ಲ ಕಾರಣ ಒಂದು, ನಾವು ಬಳಸುವ ಭಾಷೆ. ಭಾಷೆ ಸಾವಿರಾರು ವರ್ಷಗಳ ಅನುಭವವನ್ನೊಳಗೊಂಡ public property, ಅದು ನನ್ನ ವೈಯಕ್ತಿಕ ಅಲ್ಲ. ಅಂತಹ, ಲಕ್ಷಾಂತರ ಜನರು ಸಾವಿರಾರು ವರ್ಷ ಬಳಸಿದ ಭಾಷೆಯನ್ನು ನಾನು ಉಪಯೋಗಿಸುವಾಗ ಅಲ್ಲೊಂದು ಶಬ್ಧ ಸ್ವಪ್ನ ಜಾಗೃತವಾಗುತ್ತದೆ. ಮತ್ತೆ ನಮ್ಮ ಮನಸ್ಸಿನ ಏಕಾಗ್ರತೆಗೆ ಅಪಾರ ಶಕ್ತಿಯಿದೆ, ಯಾಕೆಂದರೆ ನಾವು ಬಾಲ್ಯದಲ್ಲೆಲ್ಲೋ ನೋಡಿದ್ದು, ಎಂದೋ ನಡೆದು ಚೆದುರಿ ಹೋದ ಘಟನೆಗಳು, ಯಾವುದೋ ಚಹರೆಗಳು, they get connected. ಇವೆಲ್ಲ ಭಾಷೆಯಲ್ಲೇ ಪ್ರತ್ಯಕ್ಷವಾಗುವ ನೆನಪುಗಳು. ಮತ್ತೆ ಈ ಎಲ್ಲ ವಿವರಗಳೂ ಉಪಯುಕ್ತವಾಗುವ ರೀತಿಯಲ್ಲಿ ಒಟ್ಟಾಗಿ ಬಂದು ಸೇರುವುದೇ ನಿಜವಾದ mystery and a pleasure.
ನಾನು: ಸಮಾಜವನ್ನು ಬದಲಾವಣೆ ಮಾಡುವುದು ನನ್ನ ಸಾಹಿತ್ಯದ ಉದ್ದೇಶ ಅಲ್ಲ, ಅದರ ಉದ್ದೇಶ ಓದುಗನಿಗೆ ಆನಂದವನ್ನು ಕೊಡುವುದು, ಬದಲಾವಣೆ ಆಯಿತು ಅಂದರೆ ಅದೊಂದು by-product ಅಷ್ಟೆ. ಇದು ಭೈರಪ್ಪ ಹೇಳಿದ ಮಾತು. ಈ ಕುರಿತು ನಿಮ್ಮ ನಂಬಿಕೆ ಏನು?
ಶ್ರೀಧರ ಬಳಗಾರ: ಸಾಹಿತ್ಯದಿಂದ ಸಮಾಜದ ಬದಲಾವಣೆ ಆಗಬೇಕು, ಕಾವ್ಯ ಖಡ್ಗವಾಗಬೇಕು, ಸಾಹಿತ್ಯ ಎಂದರೆ ಸಮಾದದ ಪ್ರತಿಬಿಂಬವಾಗಬೇಕು. ಹೀಗೆ ಅಂದುಕೊಂಡಾಗ ಅದೊಂದು ಪ್ರಣಾಳಿಕೆ ಆಗುತ್ತದೆ. ಮತ್ತು ಆ ಪ್ರಣಾಳಿಕೆಗೆ ಬೇಕಾಗಿ ನಾನು ಒಂದೊಂದೆ ಮಾಹಿತಿಯನ್ನು ಮತ್ತು ಅನುಭವವನ್ನು ಸೇರಿಸಿಕೊಡುತ್ತಾ ಹೋಗಬೇಕಾಗುತ್ತದೆ. ಆದರೆ ನನಗೆ ಆ ಪ್ರಣಾಳಿಕೆಗೆಗಿಂತ ನನ್ನ ಪ್ರಮಾಣಿಕ ಅನುಭವ ಮುಖ್ಯ. ಪ್ರಣಾಳಿಕೆಯಂತ ಬಂದಾಗ deliberately and methodically I have to cook, ಮತ್ತು concious ಆಗಿ ಅದನ್ನೇ ಮಾಡಬೇಕಾಗುತ್ತದೆ. ಆದರೆ ಸೃಜನಶೀಲವಾದ ಪ್ರಕ್ರಿಯೆಯೆನ್ನುವುದು, ಅದು concious ಆದ ಕೆಲಸ ಅಲ್ಲ, ಅದು sub-concious ಆಗಿ ಆಗುವಂಥದ್ದು. ಅಂದರೆ ಅದು ವಿಚಾರ ಮಾಡಿ ಬರಿಯುವಂಥದ್ದಲ್ಲ. ಬರೆಯುತ್ತಾ ಬರೆಯುತ್ತಾ ಅದು ಒದಗಿ ಬರುವಂಥದು ಮತ್ತು ಸಂಭವಿಸುವಂಥದ್ದು. ಹಾಗಾಗಿ ನಾನು ನಿರ್ದಿಷ್ಟವಾದ ಒಂದು ಅಜೆಂಡಾ ಇಟ್ಟುಕೊಂಡು ಅದಕ್ಕೆ ಬೇಕಾದದ್ದನ್ನೇ ಕೊಡುತ್ತಾ ಹೋಗುವುದು ಅದು ಒಳ್ಳೆ ಬರವಣಿಗೆ ಅಲ್ಲ. ಹಾಗಾಗಿ ಭೈರಪ್ಪ ಹೇಳಿದ ಹಾಗೆ ಸಮಾಜದ ಬದಲಾವಣೆಗಾಗಿ ಬರಿಯುವುದು ಉದ್ದೇಶ ಅಲ್ಲ. ಆದರೆ ವೈಯಕ್ತಿಕವಾದಂತ ಬದಲಾವಣೆ ಅಥವಾ ಪರಿವರ್ತನೆ ಖಂಡಿತ ಸಾಧ್ಯ ಇದೆ.
ನಾನು: ಇದರಲ್ಲಿ ಮುಂದುವರಿದು, ಬರವಣಿಗೆಯಲ್ಲಿ ರಾಜಕೀಯ ಸಿದ್ಧಾಂತಗಳು ಇರದೇ ಇದ್ದರೂ, ಲೇಖಕ ಸಾಮಾಜಿಕವಾಗಿ ತನ್ನ ರಾಜಕೀಯ ನಿಲುವುಗಳ ಕುರಿತು ಮುಕ್ತವಾಗಿ ಮಾತನಾಡಿದಾಗ, ಅವರ ಸಾಹಿತ್ಯವನ್ನು ಓದುವವರ ದೃಷ್ಟಿಕೋನದ ಮೇಲೆ ಅದು ಪ್ರಭಾವ ಬೀರುವುದಿಲ್ಲವೆ?
ಶ್ರೀಧರ ಬಳಗಾರ: ಅದು ಓದುಗರ ತಪ್ಪು, ಸಾಹಿತ್ಯವನ್ನ ಒಂದು ಸಾಹಿತ್ಯಕೃತಿಯಾಗಿಯಷ್ಟೇ ನೋಡಬೇಕೆ ವಿನಃ ಲೇಖಕನ ಜಾತಿ, ಸ್ಥಳ, ನಿಲುವು ಮುಂತಾದವುಗಳನ್ನು ಲಕ್ಷಿಸಬಾರದು.
ನಾನು: ಆದರೆ ಇದನ್ನು ಓದುಗರು concious ಆಗಿ ಮಾಡುವುದಲ್ಲ, ಇದು ಲೇಖಕನ ಸಾಮಾಜಿಕ ನಿಲುವಗಳಿಂದ ಉಂಟಾಗುವ subconscious ಪೂರ್ವಾಗ್ರಹ.
ಶ್ರೀಧರ ಬಳಗಾರ: ಪೂರ್ವಾಗ್ರಹಗಳನ್ನ ಒಳ್ಳೆಯ ಕೃತಿ dilute ಮಾಡಿಬಿಡುತ್ತದೆ.
ಇನ್ನು ಒಂದು ಕೃತಿ ಸಮಾಜದಲ್ಲಿ ಬದಲಾವಣೆ ಉಂಟುಮಾಡುವುದಕ್ಕೆ ದೀರ್ಘವಾದ ಸಮಯ ಬೇಕು. ಉದಾಹರಣೆಗೆ ರಾಮಾಯಣ, ಮಹಾಭಾರತದಂತಹ ಕೃತಿಗಳು. ಬದಲಾವಣೆಯನ್ನು ಕೃತಿಗಳು ಮಾಡಿದೆ ಅಂತಲ್ಲ, ಬೇರೆ ಬೇರೆ ಸಾಮಾಜಿಕ ಸಂದರ್ಭಗಳಲ್ಲಿ ಅವುಗಳನ್ನ ಬಳಸಿಕೊಂಡ ರೀತಿ ಬದಲಾವಣೆಗೆ ಕಾರಣವಾಗಿದೆ. ಯಾಕೆಂದರೆ ರಾಮಾಯಣವನ್ನು ವಾಲ್ಮೀಕಿ ಬರೆಯುವಾಗ ಆ ಕೃತಿ ಬೆಳೆಬಹುದಾದ ರೀತಿ, ವಿಶ್ವದಾದ್ಯಂತ ಅದು ತಳೆಯಬಲ್ಲ ವಿರಾಟ್ ರೂಪ ಮತ್ತದರ ಪರಿಣಾಮದ ಕುರಿತು ಏನೂ ಕಲ್ಪನೆ ಇದ್ದಿರಲಿಕ್ಕಿಲ್ಲ. ಇದೆಲ್ಲ ಕೃತಿ ತನ್ನ ಸ್ವ ಸಾಮರ್ಥ್ಯದಿಂದ ಸಾಧಿಸಿಕೊಂಡಿದ್ದು. ಇನ್ನು ಸಮಾಜ ಸುಧಾರಣೆಗೆ ಬೇರೆ ಬೇರೆ ಮಾರ್ಗಗಳಿವೆ, ಸಾಹಿತ್ಯವೇ ಬೇಕೆಂದಿಲ್ಲ. ಆದರೆ ಸಮಾಜ ಸುಧಾರಕನಿಗೆ ಬೇಕಾದ ಒಳ್ಳೆಯ ಮನಸ್ಸು, ತಿಳಿವಳಿಕೆ ಮತ್ತು ದೃಷ್ಟಿಯನ್ನು ಸಾಹಿತ್ಯ ಕೊಡಬಲ್ಲದು.
ನಾನು: ನಿಮ್ಮನ್ನ ಪ್ರೀತಿಯಿಂದ ಓದುವ ಸಾಕಷ್ಟು ಓದುಗರನ್ನು ಗಳಿಸಿದ್ದೀರಿ. ನಿಮ್ಮ ಸಮಕಾಲೀನರು ಮತ್ತು ನಿಮ್ಮದೆ ಪ್ರದೇಶದ ಬರಹಗಾರರುಗಳಾದ ಜಯಂತ ಕಾಯ್ಕಿಣಿಯವರು ಮತ್ತು ಹಿರಿಯರಾದ ಯಶವಂತ ಚಿತ್ತಾಲರಿಗೆ ಹೋಲಿಸಿಕೊಂಡಾಗ ನೀವು ಸಾಕಷ್ಟು ಓದುಗರನ್ನು ತಲುಪಿದ್ದೀರಿ ಎನಿಸುತ್ತದೆಯೆ ಅಥವಾ ತಾನು ಇನ್ನೂ ಹೆಚ್ಚು ಓದುಗರನ್ನು ತಲುಪಬೇಕಿತ್ತು ಎನಿಸುತ್ತದೆಯೆ?
ಶ್ರೀಧರ ಬಳಗಾರ: ಎಷ್ಟು ಜನರನ್ನ ತಲುಪಿದ್ದೇನೆ ಅನ್ನುವುದು ಗೊತ್ತಾಗುವುದಿಲ್ಲ ಆದರೆ ಅಲ್ಲಲ್ಲಿ ಓದುತ್ತಿರುವುದನ್ನು ಗಮನಿಸಿದ್ದೇನೆ. ಪ್ರತಿದಿನ ಓದುಗರಿಂದ atleast ಒಂದು ಕರೆ ಬರುತ್ತದೆ. ಪ್ರಚಾರದ ಬಗ್ಗೆ ಹೇಳುವುದಾದರೆ, ನಾನಿರುವ ಜಾಗವೂ ಒಂದು ಕಾರಣವಾಗಿರಬಹುದು. ಉದಾಹರಣೆಗೆ ಅನಂತಮೂರ್ತಿ ಮತ್ತು ಚಿತ್ತಾಲರು ಸಮಕಾಲೀನರು ಆದರೆ ಅನಂತಮೂರ್ತಿಯವರಿಗೆ ಸಿಕ್ಕ ಪ್ರಚಾರ ಚಿತ್ತಾಲರಿಗೆ ಸಿಗಲಿಲ್ಲ. ಯಾಕೆಂದರೆ ಅವರು ದೂರದ ಮುಂಬೈನಲ್ಲಿ ಸುಮ್ಮನೆ ಕೂತು ಬರೆದರು. ಸಂದರ್ಭ ಮತ್ತು ಪ್ರದೇಶಗಳು ಹೆಚ್ಚಿನ ಜನರಿಗೆ ತೆರೆದುಕೊಳ್ಳುವುದಕ್ಕೆ ಮತ್ತೆ ಪ್ರಚಾರಕ್ಕೆ ಕಾರಣವಾಗುತ್ತವೆ.
ನಾನು: ನಿಮ್ಮ ಓದು ಯಾವ ರೀತಿ? ಹೊಸ ಲೇಖಕರನ್ನು ಓದುತ್ತೀರ? ನಿಮ್ಮ ನೆಚ್ಚಿನ ಬರಹಗಾರರು ಯಾರು?
ಶ್ರೀಧರ ಬಳಗಾರ: ನಾನು ಹೊಸ ಮತ್ತು ಹಳೆಯ ಲೇಖಕರಿಬ್ಬರನ್ನೂ ಓದುತ್ತೇನೆ. ನಾನು ಬರೆಯಲು ಪ್ರಾರಂಭಿಸಿದಾಗ ನವ್ಯದ ಉಚ್ಛ್ರಾಯದ ಕಾಲ. ಅದಕ್ಕೆ ಮೊದಲು ನಾನು ಕಾರಂತರನ್ನು ಬಹಳ ಓದುತ್ತಿದ್ದೆ. ನಂತರ ನವ್ಯದಲ್ಲಿ ಅನಂತಮೂರ್ತಿ. ಅವರ ಕಥೆಗಳಿಂದ ನಮ್ಮ ಸಾಂಪ್ರದಾಯಿಕ ಸಮಾಜದ ಒಳಕೊಳಕುಗಳು, ಜಡತ್ವ, ಅಲ್ಲಿರಬಹುದಾದ ಪ್ರತಿಭಟನೆಗಳ ದರ್ಶನ ಆಯಿತು. ಘಟಶ್ರಾದ್ಧದಂತಹ ಕಥೆಗಳು ನಮ್ಮ ಬ್ರಾಹ್ಮಣ ಸಮಾಜದ ಒಳಕೊಳಕುಗಳನ್ನು ನೋಡುವ ಕಣ್ಣು ಕೊಟ್ಟವು. ತೇಜಸ್ವಿ ನಮ್ಮ ಹೊರಗಡೆ ಇರುವ ವಿಸ್ಮಯ ವಿಶ್ವದ ಪರಿಚಯ ಮಾಡಿಸಿದರು. ಕುಟುಂಬದ ಆಚೆ ಇರುವ ಜಗತ್ತಿನ ಕಥೆ ಹೇಳಿದವರು ತೇಜಸ್ವಿ. ಮನುಷ್ಯ ಸ್ವಭಾವದ ವೈರುಧ್ಯ ಮತ್ತು ವೈಚಿತ್ರ್ಯಗಳನ್ನು ತೋರಿಸಿದ್ದು ಲಂಕೇಶರ ಕಥೆಗಳು. ಇನ್ನು, ಶಬ್ಧ ಎನ್ನುವುದು ಒಂದು ಕಲೆಯಾಗಿ, ಆ ಕಲೆಯೇ ಮನುಷ್ಯನ ಅನುಕಂಪದ ಭಾಗವಾಗಿ ಬರುವುದನ್ನು ತೋರಿಸಿದವರು ಚಿತ್ತಾಲರು. ಕಲೆ ಕೇವಲ ತಾಂತ್ರಿಕ ಸಂಗತಿಯಲ್ಲ ಅಂತ ಚಿತ್ತಾಲರು ಹೇಳಿದ್ದು. ಇದರ ಜೊತೆ ಗಿರೀಶ್ ಕಾರ್ನಾಡ್, ಕಾಸರವಳ್ಳಿ, ಸತ್ಯಜಿತ್ ರೇ ಸಿನಿಮಾಗಳನ್ನ ಧಾರವಾಡದಲ್ಲಿದ್ದಾಗ ನೋಡಿದೆ, ನೀನಾಸಂ ಗೆ ಹೋಗಿ ಚಲನಚಿತ್ರ ಶಿಬಿರದಲ್ಲಿ ಭಾಗವಹಿಸಿದೆ ಈ ಎಲ್ಲ ಚಟುವಟಿಕೆಗಳು ನನ್ನ ಸಾಹಿತ್ಯವನ್ನು ಪ್ರಭಾವಿಸಿದವು. ಧಾರವಾಡದಲ್ಲಿ ಹಲವು ಲೇಖಕ, ವಿಮರ್ಷಕ, ಸಂಗೀತಗಾರರ ಭೇಟಿ ಆಗುತ್ತಿತ್ತು. ಅದು ಒಂದು ರೀತಿಯ vibrating period of my life. ನಾನು English literature ಮತ್ತು ಕನ್ನಡ ಸಾಹಿತ್ಯದ ವಿದ್ಯಾರ್ಥಿ. ಹಾಗಾಗಿ ಕಾಫ್ಕಾ, ಕಮೂ, ಸಾರ್ತ್ರೆ, ಲಾರೆನ್ಸ್, ಮಾರ್ಕ್ವೆಜ್, ಟಾಲ್ಸ್ಟಾಯ್, ದಾಸ್ತೋವ್ಸ್ಕಿ ಇವರನ್ನೆಲ್ಲ ಓದುವುದು ಸಾಧ್ಯವಾಯಿತು. ಇವರನ್ನೆಲ್ಲ ಕನ್ನಡಕ್ಕೆ ತಂದದ್ದು ನವ್ಯರು ಮಾಡಿದ ಉಪಕಾರ. ಆ ಕಾಲದಲ್ಲಿ ಇದ್ದದ್ದು ನನ್ನ ಭಾಗ್ಯ.
ನಾನು: ಹೊಸ ಜನರೇಷನ್ ಬರಹಗಾರರಲ್ಲಿ ಯಾರನ್ನು ಓದುತ್ತೀರಿ?
ಶ್ರೀಧರ ಬಳಗಾರ: ಹೊಸ ಜನರೇಷನ್ ನಲ್ಲಿ ಪದ್ಮನಾಭ ಭಟ್ ಶೇವ್ಕಾರ, ಕರಣಂ ಅವರ ಕಾದಂಬರಿಗಳು, ಶಾಂತಿಕಾ ಅಪ್ಪಣ್ಣ, ಮೌನೇಶ ಬಡಿಗೇರ, ಕರ್ಕಿ ಕೃಷ್ಣಮೂರ್ತಿ ಇವರನ್ನೆಲ್ಲ ಇಷ್ಟಪಟ್ಟು ಓದಿದ್ದೇನೆ. ಇನ್ನೂ ಹಲವು ಹೆಸರುಗಳಿವೆ ಈಗ ನೆನಪಿಗೆ ಬರುತ್ತಿಲ್ಲ.
ನಾನು: ಸಮಕಾಲೀನ ಸಾಹಿತ್ಯದ ಗುಣಮಟ್ಟ ಹಿಂದಿನಂತಿಲ್ಲ ಹಾಗಾಗಿ ಅದನ್ನು ಓದುವ ಆಸಕ್ತಿ ಇಲ್ಲ ಎನ್ನುವುದು ಕೆಲವರ ಅಭಿಪ್ರಾಯ, ನೀವೇನೆನ್ನುತ್ತೀರಿ?
ಶ್ರೀಧರ ಬಳಗಾರ: There are much tempted writers. ಕಥೆ ಮತ್ತು ಕಾದಂಬರಿಗಳು ಬೇಡುವ ಸೃಷ್ಟಿಶೀಲ ಮತ್ತು ಸಹನಶೀಲ ಮನಸ್ಥಿತಿಯನ್ನು ಕೆಲವರು ಕಳೆದುಕೊಂಡಂತೆ ಕಾಣುತ್ತದೆ. ಒಂದು ಸಾಹಿತ್ಯ ಕೃತಿ ಲೇಖಕನಿಂದ ಏಕಾಗ್ರತೆ ಮತ್ತು ಧ್ಯಾನವನ್ನು ನಿರೀಕ್ಷಿಸುತ್ತದೆ. ಅವಸರ ಮಾಡಿಬಿಟ್ಟರೆ ಕಲೆ ಲಯವನ್ನ ಕಳೆದುಕೊಳ್ಳುತ್ತದೆ. ಮೊದಲೆಲ್ಲ ಒಂದು ಕಥೆ, ಕಾದಂಬರಿಯ ಕುರಿತು ಎರಡು ಮೂರು ವರ್ಷಗಳ ಕಾಲ ಚರ್ಚೆ ಆಗುತ್ತಿತ್ತು. ಈಗ ಹಾಗಲ್ಲ. ಅನುಭವಿಸಿ ಬರೆಯುವ ಕಥನದ ಭಾಷೆ ಕಾಣೆಯಾಗುತ್ತಿರುವುದು ಅದಕ್ಕೆ ಕಾರಣ. ಕಥೆಯಲ್ಲಿ ಅಲಂಕಾರಗಳ ಬಳಕೆ, ಸಮಯದ ನಿರ್ವಹಣೆ, ನಿರೂಪಣೆ, ಇವಕ್ಕೆಲ್ಲ ಒಂದು ಧ್ವನಿ ಕೊಡುವ ರೀತಿ ಇದರಲೆಲ್ಲು ಕಥೆಗಾರನ ಹೇರಿಕೆ ಕಾಣದಂತೆ ಸಂಯಮದಿಂದ ಬರೆಯುವ ಕುಸುರಿ ಕೇಳುವ ತಾಳ್ಮೆಇಲ್ಲದಾಗುತ್ತಿದೆ. ಮತ್ತೆ, ಪೂರ್ವ ಸಿದ್ಧತೆ ಇಲ್ಲದಾಗಿದೆ. ಸ್ವಯಂ ಓದು ಇಲ್ಲದೆ ಒಳ್ಳೆಯ ಬರವಣಿಗೆ ಸಾಧ್ಯವಿಲ್ಲ. ಹಂತಹಂತವಾಗಿ ಬೆಳೆಯುವವರು ಕಡಿಮೆಯಾಗಿದ್ದಾರೆ.
ಪ್ರಶಸ್ತಿ, ಕಥಾ ಸ್ಪರ್ಧೆಗಳನ್ನೇ ಉದ್ದೇಶಿಸಿ ಬರೆಯುವವರೂ ಇದ್ದಾರೆ. ಪ್ರಶಸ್ತಿ ಬೇಡ ಎನ್ನುವ ಸನ್ಯಾಸ ಸ್ವೀಕರಿಸಬೇಕೆಂದಿಲ್ಲ ಆದರೆ ಅದಕ್ಕಾಗಿಯೇ ಹಪಹಪಿಸುವುದು, ಪ್ರಶಸ್ತಿಗೆ ಆಯ್ಕೆಯಾಗುವ ರೀತಿಯಲ್ಲೇ ಕಥೆ ಜೋಡಿಸಿ ಬರೆಯುವುದು ಅದು ಸರಿಯಲ್ಲ, ಇವುಗಳಿಂದ ಬರಹಗಳ ಗುಣಮಟ್ಟ ಕಡಿಮೆಯಾಗುತ್ತದೆ. ಹಾಗಾಗಿಯೇ ಇವತ್ತು ಬಹಳಷ್ಟು ಲೇಖಕರು ಒಂದು ಸಂಕಲನಕ್ಕೆ ಸುಸ್ತಾಗುತ್ತಾರೆ. ಮುಂದೆ ಬರೆಯುವ ದಾರಿ ಕಾಣದೆ, ಬರೆದರೆ repetation ಆಗುವ ಸ್ಥಿತಿ ತಲುಪುತ್ತಾರೆ.
ನಾನು: ನಿಮ್ಮ ಮುಂದಿನ ಪುಸ್ತಕ ಯಾವುದು? ಕಥೆಗಳನ್ನು ಬರೆಯುತ್ತಿದ್ದೀರ?