Saturday, April 25, 2026

ಶ್ರೀಧರ ಬಳಗಾರ ಅವರೊಂದಿಗೆ ಒಂದು ಕತೆ ಮಾತು.

ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ, ನನ್ನ ನೆಚ್ಚಿನ ಬರಹಗಾರರಾದ ಶ್ರೀಧರ ಬಳಗಾರ ಅವರನ್ನು ಅವರ ಮನೆಯಲ್ಲಿ ಭೇಟಿಯಾಗುವ ಅವಕಾಶ ದೊರಕಿತು. ಆ ಸಂದರ್ಭದಲ್ಲೇ ಒಂದು ಅನೌಪಚಾರಿಕ ಸಂದರ್ಶನದ ರೂಪದಲ್ಲಿ ಅವರ ಜೊತೆಯಲ್ಲಿ ಕೆಲ ಸಮಯ ಮಾತನಾಡುವುದು ಸಾಧ್ಯವಾಯಿತು. ಆ ಮಾತುಕತೆಯ ವಿವರಗಳನ್ನು ಸಂದರ್ಶನ ರೂಪದಲ್ಲಿ
ಇಲ್ಲಿ ಬರೆಯುತ್ತಿದ್ದೇನೆ. ಅವಕಾಶಕ್ಕಾಗಿ ಮತ್ತು ಹಾರ್ದಿಕವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡದ್ದಕ್ಕಾಗಿ ಶ್ರೀಧರ ಬಳಗಾರ ಅವರಿಗೆ ಧನ್ಯವಾದಗಳು.

ಸಂದರ್ಶನ:

ನಾನು: ಒಳ್ಳೆಯ ಕಥೆ ಮತ್ತು ಕೆಟ್ಟ ಕಥೆ ಎಂಬ ವಿಂಗಡಣೆ ಸಾಧ್ಯವೆ? ಲೇಖಕನಿಗೆ ಅವನ ಕಥೆಗಳು ಯಾವಾಗಲು ಒಳ್ಳೆಯವೆ, ಓದುಗನಿಗೆ ಕೆಲವು ಇಷ್ಟ ಆಗುತ್ತವೆ ಕೆಲವು ಆಗುವುದಿಲ್ಲ, ಹಾಗಂದ ಮಾತ್ರಕ್ಕೆ ಅದು ಕೆಟ್ಟ ಕಥೆಯ? ಈ ವಿಂಗಡಣೆಗೆ ಏನಾದರೂ ಮಾನ ದಂಡ ಇದೆಯೆ?

ಶ್ರೀಧರ ಬಳಗಾರ: ಹಾಗೆ ವಿಂಗಡಿಸುವುದಕ್ಕೆ ಯಾವುದೇ standard criteria ಅಥವಾ ಮಾನದಂಡಗಳಿಲ್ಲ, ಆದರೆ ಒಳ್ಳೆಯ ಕಥೆ ಅಂತ ನಾನು ನಂಬುವುದು ಹೇಗೆ ಅಂದರೆ, ಅದು ಕೇವಲ ಮಾಹಿತಿಯ ನೆಲೆಯಲ್ಲಿ ನಿಲ್ಲದೆ, ಮನುಷ್ಯನ ಅನುಭವಕ್ಕೆ ಒಂದು ಪ್ರಮಾಣವಾಗಿರಬೇಕು. ಅನುಭವ ಪ್ರಾಮಾಣ್ಯ ಎನ್ನುತ್ತೇವಲ್ಲ ಅದು ಇರಬೇಕು. ಓದುಗನಿಗೆ ಈ ಕಥೆ ತನ್ನದು ಎನ್ನಿಸುವ ರೀತಿಯ ನಿರೂಪಣೆ ಒಳ್ಳೆಯ ಕಥೆಯ ಒಂದು ಲಕ್ಷಣ. ಇನ್ನೊಂದು ಲಕ್ಷಣ ಎಂದರೆ, ತನಗೆ ಗೊತ್ತಿರವ ಘಟನೆ, ಸ್ವಭಾವ ಅಥವಾ ನಿತ್ಯ ನಡೆಯುವ‌ ಚಟುವಟಿಕೆಗಳು, ಅವನ್ನ ನಾನು ನೋಡ್ತಾ ಇರುತ್ತೇನೆ ಆದರೆ ಅದರಲ್ಲಿ ವಿಶೇಷವಾದದ್ದೇನೂ ಕಾಣುವುದಿಲ್ಲ, ಆದರೆ ಕಥೆಯಲ್ಲಿ ಹಾಗಿ ಕಂಡದ್ದನ್ನೇ ಹೊಸ ಅರಿವಿನಲ್ಲಿ ನೋಡುವ ದೃಷ್ಠಿ ಇರುತ್ತದೆ. ಇದರ ಬಗ್ಗೆ ಕುರ್ತಕೋಟಿ ಅವರು ಒಂದು ಮಾತು ಹೇಳಿದ್ದರು "ಗೊತ್ತಿರುವುದನ್ನೇ ಮತ್ತಷ್ಟು ಸ್ಪಷ್ಟವಾಗಿ ಅರಿವಿಗೆ ತರುವಂತಹ ಕೆಲಸ ಮಾಡುವುದು ಒಳ್ಳೆಯ ಕಥೆ, ಈ ಕ್ರಿಯೆಗೆ ಪ್ರತ್ಯಭಿಜ್ಞಾನ ಎಂದು ಹೆಸರು". ಕೇವಲ ಅನುಭವ ಇದ್ದ ಮಾತ್ರಕ್ಕೆ ಕಥೆ ಹುಟ್ಟುವುದಿಲ್ಲ, ತನ್ನ ಅನುಭವವನ್ನ ಓದುಗನ ಅನುಭವದಂತೆ ನಿರೂಪಿಸುವ ಕಲೆ ಇರುವುದು ಬಹಳ ಮುಖ್ಯ. ಅಂತಹ ತಂತ್ರ ಅಥವಾ ಕಲಾತ್ಮಕತೆ ಇದ್ದ ಕಥೆ ಉತ್ತಮ ಎನಿಸುತ್ತದೆ ಎನ್ನುವುದು ನನ್ನ ಅನಿಸಿಕೆ. ಮತ್ತೊಂದು ಲಕ್ಷಣ ಎಂದರೆ, ನಾನು ಕಥೆ ಬರೆಯುವಾಗ ಕೇವಲ ಲಿಪಿಕಾರನಾಗಿ ಇರಬೇಕು, ಅಂದರೆ I should maintain my neutriality. ನನ್ನ‌ ಲಕ್ಷ್ಯ, ಅನುಕಂಪ ಮತ್ತು ಪ್ರೀತಿಯನ್ನು ಎಲ್ಲಾ ಪಾತ್ರಗಳಲ್ಲಿ ಸಮನಾಗಿ ಹಂಚಿದಾಗ ಮಾತ್ರ ನಾನು ಒಂದು literary justice ಕೊಡಲು ಸಾಧ್ಯ. ಅದನ್ನು ಬಿಟ್ಟು ನನ್ನ ಪಾತ್ರವನ್ನು ನಾನೇ ತಾಳ ಬಡಿದು ಕುಣಿಸುವ ಹಾಗಿದ್ದರೆ ಒಳ್ಳೆಯದಲ್ಲ. ಪಾತ್ರಗಳ ನಂಬಿಕೆ ಮತ್ತು ಆಶಯಕ್ಕೆ ತಕ್ಕಂತ ಅವುಗಳೇ ವ್ಯವಹರಿಸುವುದಕ್ಕೆ ಬಿಡಬೇಕು, ಅವಕ್ಕೊಂದು ಸ್ವಯಂಭೂ ತನ ಅಥವಾ ತನ್ನತನವನ್ನು ಕೊಟ್ಟಾಗ ಕಥೆ ಒಳ್ಳೆಯ ಕಥೆಯಾಗುತ್ತದೆ. ಅಂತಹ ಕಥೆಗೆ ಕೊನೆ ಅಥವಾ dead end ಇರುವುದಿಲ್ಲ, ಅದು ಓದಿದ ಮಾತ್ರಕ್ಕೆ ನಿಲ್ಲುವುದಿಲ್ಲ ಅದು ಓದುಗನಲ್ಲಿ ಸದಾ ಜೀವಂತವಾಗಿ ಮುಂದುವರಿಯುತ್ತದೆ ಅಷ್ಟೇ ಅಲ್ಲ, ಒಳ್ಳೆಯ ಕಥೆ ತನ್ನ ಪರಿಪೂರ್ಣತೆಗಾಗಿ ಒಳ್ಳೆಯ ಓದುಗರನ್ನು ಹುಡುಕುತ್ತಿರುತ್ತದೆ.

ನಾನು: ನಾನು ನಿಮ್ಮ ಮೂರು ಕಥಾ ಸಂಕಲನಗಳನ್ನು ಓದಿದ್ದೇನೆ, ಅವುಗಮಲ್ಲಿ ಎರಡು ಕಥೆಯ ನನಗೆ ಸದಾ ನೆನಪಿರುವಂತದ್ದು. 'ಹಾತೆಗಳು' ಮತ್ತು 'ರಂಭಾ ವಿವಾಹ'. ಈ ಎರಡೂ ಕಥೆಗಳಲ್ಲೂ ಒಂದು ಬಗೆಯ ನಾಟಕೀಯ ಅಂತ್ಯ ಇರುವುದೂ ಅದಕ್ಕೆ ಕಾರಣ. ಆದರೆ, ನಿಮ್ಮ ಎಲ್ಲಾ ಕಥೆಗಳನ್ನೂ ಓದುವಾಗ ನಾನು ಬಹಳ ಆನಂದಿಸಿದ್ದೇನೆ, ನಿಮ್ಮ ಮತ್ತು ನನ್ನ ಊರುಗಳೂ ಹತ್ತಿರದವಾದದ್ದರಿಂದ ಅವು ಬಹಳ ಆಪ್ತ, ಮತ್ತು ನನ್ನ ಸುತ್ತ ಮುತ್ತಲೇ ನಡೆಯುತ್ತಿದೆಯೇನೊ ಎನಿಸಿವೆ. ಆದರೆ ಸನ್ನಿವೇಶ ಸಹಿತವಾಗಿ ನೆನಪಿರುವ ಕಥೆಗಳು ಎರಡು ಮಾತ್ರ. ನಿಮ್ಮ ಪ್ರಕಾರ ಕಥೆಯ ಯಶಸ್ಸು ಯಾವುದು? ಓದುಗನ ನೆನಪಿನಲ್ಲಿ ಉಳಿಯುವಂಥದ್ದೋ ಅಥವಾ ಸದಾ ನೆನಪಿನಲ್ಲಿರದಿದ್ದರೂ, ಓದುವಾಗ ಆನಂದವನ್ನು ಕೊಡುವಂಥದ್ದೋ?

ಶ್ರೀಧರ ಬಳಗಾರ: ಕಥೆಯ success ಎನ್ನುವುದಕ್ಕೆ ಅದು competition ಅಥವಾ race ನಲ್ಲಿ ಇರುವುದಲ್ಲ. ಆದರೆ, ಯಾವ ಕಥೆ ಓದುಗನಲ್ಲಿ ಇಂಗಿ ಬಹುಕಾಲದ ವರೆಗೆ ನೆನಪಿಡುವಂತಹ ಅಂಶವನ್ನು ಹೊಂದಿದೆಯೊ, ಅದು ಯಶಸ್ವಿ ಕಥೆ. ಆದರೆ ಕಥೆಯೊಂದು ನೆನಪಿನಲ್ಲುಳಿಯದೇ ಇರುವುದು ಆ ಕಥೆಯ limitation ಎಂದು ಹೇಳಲಾರೆ. ಅದು ಓದುಗನಿಗೆ connect ಆಗದೇ ಇರಬಹುದು. 
ಯಾವ ಕಥೆ ಓದುಗನಿಗೆ ಒಂದು ತೀರ್ಮಾನ ಕೊಡುತ್ತದೆಯೊ ಅದು ಒಳ್ಳೆಯ ಕಥೆ ಅಲ್ಲ, ತೀರ್ಮಾನ ಕೊಡುವುದು ಯಾವುದೇ ಸಾಹಿತ್ಯ ಪ್ರಕಾರದ, ಅದರಲ್ಲೂ ಸಣ್ಣ ಕಥೆಯ ಒಳ್ಳೆಯ ಲಕ್ಷಣ ಅಲ್ಲ. But we are always in search of conclusion. ಕಥೆ ತೀರ್ಮಾನ ಕೊಡುವ ಬದಲು ತಿಳಿವಳಿಕೆ ಕೊಡುತ್ತಾ ಹೋಗಬೇಕು.

ನಾನು: ನೀವು ಕಥೆ ಮತ್ತು ಕಾದಂಬರಿ ಎರಡನ್ನೂ ಬರೆದಿದ್ದೀರಿ. ವಸ್ತುವನ್ನು consistent ಆಗಿ ಇಡುವುದಕ್ಕೆ ಯಾವುದು ಸುಲಭ ಎನಿಸುತ್ತದೆ?

ಶ್ರೀಧರ ಬಳಗಾರ: In terms of time, in terms of energy and in terms of concentration it requires a lot of patience. writing a novel is a laborious task. ನಿರಂತರವಾಗಿ, ಒಂದೇ ಧ್ಯಾನದಲ್ಲಿ ಯಾವುದೇ gap ಇಲ್ಲದೆ, ಎರಡು ಮೂರು ತಿಂಗಳು ತಪಸ್ಸು ಮಾಡಿದ ಹಾಗೆ ಅದು. ಅದಕ್ಕೆ ತುಂಬಾ ತಾಳ್ಮೆ ಬೇಕು. ಅದರ canvas ಬಹಳ ದೊಡ್ಡದು. ಮೂರು ತಾಸಿನ ಯಕ್ಷಗಾನ ಮತ್ತು ಇಡೀ ರಾತ್ರಿಯ ಯಕ್ಷಗಾನದಂತೆ ಕಥೆ-ಕಾದಂಬರಿಗಳು. ಸಣ್ಣ ಕತೆ ಆ ಕ್ಷಣದ ತಹತಹ, ಸುಖ, ದುಃಖದ ನಿರೂಪಣೆ. ಹಾಗೆ ನೋಡಿದರೆ ಎರಡರಲ್ಲಿ ಯಾವುದು ಸುಲಭವೂ ಅಲ್ಲ ಕಷ್ಟವೂ ಅಲ್ಲ.

ನಾನು: ಆದರೆ ಕಾದಂಬರಿಯಲ್ಲಿ ಸ್ವಾತಂತ್ರ್ಯ ಸ್ವಲ್ಪ ಜಾಸ್ತಿ ಎನಿಸುವುದಿಲ್ಲವೆ? ಕಥೆಯನ್ನು ವಿಸ್ತಾರವಾಗಿ ಎಷ್ಟು ಬೇಕೋ ಅಷ್ಟನ್ನೂ ಹೇಳುವ ಅವಕಾಶ ಅದರಲ್ಲಿದೆ, ಆದರೆ ಸಣ್ಣ ಕಥೆಯಲ್ಲಿ ಒಂದು limitation ಇದೆ ಎನಿಸುವುದಿಲ್ಲವೆ?

ಶ್ರೀಧರ ಬಳಗಾರ: ಸಣ್ಣ ಕಥೆಗೆ limitation ಹೇರಿದವರು ಲೇಖಕ ಎನ್ನುವುದಕ್ಕಿಂತ ಪತ್ರಿಕೆಯವರು ಎನ್ನುವುದು ಸೂಕ್ತ. ಮತ್ತೆ, ಸಣ್ಣಕಥೆ ಎನಿಸಿಕೊಂಡದ್ದು ಒಂದಿಷ್ಟು ಪುಟಗಳನ್ನು ದಾಟಿ ಹೋದಾಗ ಅದು ನೀಳ್ಗತೆ ಅಥವಾ ಕಾದಂಬರಿ ಆಗುವ ಸಣ್ಣ ಆತಂಕವೂ ಇದೆ.

ನಾನು: ನಿಮಗೆ ಆ ಆತಂಕ ಇದೆಯೆ? ನೀವು ಅದನ್ನು ಒಪ್ಪುತ್ತೀರ?

ಶ್ರೀಧರ ಬಳಗಾರ: ನಾನು ಕಥೆಯ ಗಾತ್ರದ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಅದು ಬಯಸಿದಷ್ಟು ಸಹಜವಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತೇನೆ. ಹಾಗಾಗಿ ಸಂತೋಷ ಕಥೆ ಮತ್ತು ಕಾದಂಬರಿಗಳೆರಡರಲ್ಲೂ ಇದೆ. ಯಾಕೆಂದರೆ ಅದರ ಬೆಳವಣಿಗೆ pre planned ಆಗಿರುವುದಿಲ್ಲ. But you may have a kind of a frame, ಒಂದು ಚೌಕಟ್ಟು ಅಥವಾ ಒಂದು skeleton. ಆದರೆ ಅದಕ್ಕೆ ರಕ್ತಮಾಂಸಗಳನ್ನು ಕಥೆ ತಾನೇ ತುಂಬಿಕೊಳ್ಳುತ್ತದೆ. ನನಗೆ ಬಹಳ ಆಶ್ಚರ್ಯ ಮತ್ತು ಸಂತೋಷದ ಸಂಗತಿ ಎಂದರೆ ನಾನು ಒಂದು ಚೌಕಟ್ಟಿನಲ್ಲಿ ಬರೆಯಲು ಪ್ರಾರಂಭಿಸಿದಾಗ, ನಾನು ಆಲೋಚನೆ ಮಾಡಿರದ ವಿಷಯಗಳೆಲ್ಲಾ ಅದೃಷ್ಟವಶಾತ್ ನನ್ನ ಪಾಲಿಗೆ ಸಂಭವಿಸುತ್ತವೆ, ನಾನೇ ಚಕಿತ ಆಗುವ ಹಾಗೆ, ನನಗೆ ಖುಷಿ ಕೊಡುವ ಹಾಗೆ ಅಂದರೆ, ಆ ಘಟನೆಗಳು ನನ್ನನ್ನೇ ಕಾಯ್ತಾಇದ್ದವೇನೋ! ಅಥವಾ ಆ ಪಾತ್ರಗಳು ನನಗಾಗೇ ಕಾಯ್ತಾ ಕೂತಿದ್ದವೇನೊ! ಎನಿಸುವಂತಹ ಘಟನೆಗಳು ನಡೆದು, I will be careied away. ಅವೇ ನನ್ನನ್ನು ಎಳೆದುಕೊಂಡು ಹೋಗುತ್ತವೆ. ಮೊದಲೆಲ್ಲ, ಚಿತ್ತಾಲರು ಕಥೆ ನನ್ನಿಂದ ಬರೆಸಿಕೊಳ್ಳುತ್ತಿದೆ ಎನ್ನುವಾಗ ಅದೊಂದು ಸುಂದರ joke ನಂತೆ ಕಾಣುತ್ತಿತ್ತು. ಇದೆಲ್ಲ ಹೇಗೆ ಸಾಧ್ಯ ಎನಿಸುತ್ತಿತ್ತು. But later on I felt it. ಇದಕ್ಕೆಲ್ಲ ಕಾರಣ ಒಂದು, ನಾವು ಬಳಸುವ ಭಾಷೆ. ಭಾಷೆ ಸಾವಿರಾರು ವರ್ಷಗಳ ಅನುಭವವನ್ನೊಳಗೊಂಡ public property, ಅದು ನನ್ನ ವೈಯಕ್ತಿಕ ಅಲ್ಲ. ಅಂತಹ, ಲಕ್ಷಾಂತರ ಜನರು ಸಾವಿರಾರು ವರ್ಷ ಬಳಸಿದ ಭಾಷೆಯನ್ನು ನಾನು ಉಪಯೋಗಿಸುವಾಗ ಅಲ್ಲೊಂದು ಶಬ್ಧ ಸ್ವಪ್ನ ಜಾಗೃತವಾಗುತ್ತದೆ. ಮತ್ತೆ ನಮ್ಮ ಮನಸ್ಸಿನ ಏಕಾಗ್ರತೆಗೆ ಅಪಾರ ಶಕ್ತಿಯಿದೆ, ಯಾಕೆಂದರೆ ನಾವು ಬಾಲ್ಯದಲ್ಲೆಲ್ಲೋ ನೋಡಿದ್ದು, ಎಂದೋ ನಡೆದು ಚೆದುರಿ ಹೋದ ಘಟನೆಗಳು, ಯಾವುದೋ ಚಹರೆಗಳು, they get connected. ಇವೆಲ್ಲ ಭಾಷೆಯಲ್ಲೇ ಪ್ರತ್ಯಕ್ಷವಾಗುವ ನೆನಪುಗಳು. ಮತ್ತೆ ಈ ಎಲ್ಲ ವಿವರಗಳೂ ಉಪಯುಕ್ತವಾಗುವ ರೀತಿಯಲ್ಲಿ ಒಟ್ಟಾಗಿ ಬಂದು ಸೇರುವುದೇ ನಿಜವಾದ mystery and a pleasure.

ನಾನು: ಸಮಾಜವನ್ನು ಬದಲಾವಣೆ ಮಾಡುವುದು ನನ್ನ ಸಾಹಿತ್ಯದ ಉದ್ದೇಶ ಅಲ್ಲ, ಅದರ ಉದ್ದೇಶ ಓದುಗನಿಗೆ ಆನಂದವನ್ನು ಕೊಡುವುದು, ಬದಲಾವಣೆ ಆಯಿತು ಅಂದರೆ ಅದೊಂದು by-product ಅಷ್ಟೆ. ಇದು ಭೈರಪ್ಪ ಹೇಳಿದ ಮಾತು. ಈ ಕುರಿತು ನಿಮ್ಮ ನಂಬಿಕೆ ಏನು?

ಶ್ರೀಧರ ಬಳಗಾರ: ಸಾಹಿತ್ಯದಿಂದ ಸಮಾಜದ ಬದಲಾವಣೆ ಆಗಬೇಕು, ಕಾವ್ಯ ಖಡ್ಗವಾಗಬೇಕು, ಸಾಹಿತ್ಯ ಎಂದರೆ ಸಮಾದದ ಪ್ರತಿಬಿಂಬವಾಗಬೇಕು. ಹೀಗೆ ಅಂದುಕೊಂಡಾಗ ಅದೊಂದು ಪ್ರಣಾಳಿಕೆ ಆಗುತ್ತದೆ. ಮತ್ತು ಆ ಪ್ರಣಾಳಿಕೆಗೆ ಬೇಕಾಗಿ ನಾನು ಒಂದೊಂದೆ ಮಾಹಿತಿಯನ್ನು ಮತ್ತು ಅನುಭವವನ್ನು ಸೇರಿಸಿಕೊಡುತ್ತಾ ಹೋಗಬೇಕಾಗುತ್ತದೆ. ಆದರೆ ನನಗೆ ಆ ಪ್ರಣಾಳಿಕೆಗೆಗಿಂತ ನನ್ನ ಪ್ರಮಾಣಿಕ ಅನುಭವ ಮುಖ್ಯ. ಪ್ರಣಾಳಿಕೆಯಂತ ಬಂದಾಗ deliberately and methodically I have to cook, ಮತ್ತು concious ಆಗಿ ಅದನ್ನೇ ಮಾಡಬೇಕಾಗುತ್ತದೆ. ಆದರೆ ಸೃಜನಶೀಲವಾದ ಪ್ರಕ್ರಿಯೆಯೆನ್ನುವುದು, ಅದು concious ಆದ ಕೆಲಸ ಅಲ್ಲ, ಅದು sub-concious ಆಗಿ ಆಗುವಂಥದ್ದು. ಅಂದರೆ ಅದು ವಿಚಾರ ಮಾಡಿ ಬರಿಯುವಂಥದ್ದಲ್ಲ. ಬರೆಯುತ್ತಾ ಬರೆಯುತ್ತಾ ಅದು ಒದಗಿ ಬರುವಂಥದು ಮತ್ತು ಸಂಭವಿಸುವಂಥದ್ದು. ಹಾಗಾಗಿ ನಾನು ನಿರ್ದಿಷ್ಟವಾದ ಒಂದು ಅಜೆಂಡಾ ಇಟ್ಟುಕೊಂಡು ಅದಕ್ಕೆ ಬೇಕಾದದ್ದನ್ನೇ ಕೊಡುತ್ತಾ ಹೋಗುವುದು ಅದು ಒಳ್ಳೆ ಬರವಣಿಗೆ ಅಲ್ಲ. ಹಾಗಾಗಿ ಭೈರಪ್ಪ ಹೇಳಿದ ಹಾಗೆ ಸಮಾಜದ ಬದಲಾವಣೆಗಾಗಿ ಬರಿಯುವುದು ಉದ್ದೇಶ ಅಲ್ಲ. ಆದರೆ ವೈಯಕ್ತಿಕವಾದಂತ ಬದಲಾವಣೆ ಅಥವಾ ಪರಿವರ್ತನೆ ಖಂಡಿತ ಸಾಧ್ಯ ಇದೆ.

ನಾನು: ಇದರಲ್ಲಿ ಮುಂದುವರಿದು, ಬರವಣಿಗೆಯಲ್ಲಿ ರಾಜಕೀಯ ಸಿದ್ಧಾಂತಗಳು ಇರದೇ ಇದ್ದರೂ, ಲೇಖಕ ಸಾಮಾಜಿಕವಾಗಿ ತನ್ನ ರಾಜಕೀಯ ನಿಲುವುಗಳ ಕುರಿತು ಮುಕ್ತವಾಗಿ ಮಾತನಾಡಿದಾಗ, ಅವರ ಸಾಹಿತ್ಯವನ್ನು ಓದುವವರ ದೃಷ್ಟಿಕೋನದ ಮೇಲೆ ಅದು ಪ್ರಭಾವ ಬೀರುವುದಿಲ್ಲವೆ?

ಶ್ರೀಧರ ಬಳಗಾರ: ಅದು ಓದುಗರ ತಪ್ಪು, ಸಾಹಿತ್ಯವನ್ನ ಒಂದು ಸಾಹಿತ್ಯಕೃತಿಯಾಗಿಯಷ್ಟೇ ನೋಡಬೇಕೆ ವಿನಃ ಲೇಖಕನ ಜಾತಿ, ಸ್ಥಳ, ನಿಲುವು ಮುಂತಾದವುಗಳನ್ನು ಲಕ್ಷಿಸಬಾರದು.

ನಾನು: ಆದರೆ ಇದನ್ನು ಓದುಗರು concious ಆಗಿ ಮಾಡುವುದಲ್ಲ, ಇದು ಲೇಖಕನ ಸಾಮಾಜಿಕ ನಿಲುವಗಳಿಂದ ಉಂಟಾಗುವ subconscious ಪೂರ್ವಾಗ್ರಹ.

ಶ್ರೀಧರ ಬಳಗಾರ: ಪೂರ್ವಾಗ್ರಹಗಳನ್ನ ಒಳ್ಳೆಯ ಕೃತಿ dilute ಮಾಡಿಬಿಡುತ್ತದೆ. 
ಇನ್ನು ಒಂದು ಕೃತಿ ಸಮಾಜದಲ್ಲಿ ಬದಲಾವಣೆ ಉಂಟುಮಾಡುವುದಕ್ಕೆ ದೀರ್ಘವಾದ ಸಮಯ ಬೇಕು. ಉದಾಹರಣೆಗೆ ರಾಮಾಯಣ, ಮಹಾಭಾರತದಂತಹ ಕೃತಿಗಳು. ಬದಲಾವಣೆಯನ್ನು ಕೃತಿಗಳು ಮಾಡಿದೆ ಅಂತಲ್ಲ, ಬೇರೆ ಬೇರೆ ಸಾಮಾಜಿಕ ಸಂದರ್ಭಗಳಲ್ಲಿ ಅವುಗಳನ್ನ ಬಳಸಿಕೊಂಡ ರೀತಿ ಬದಲಾವಣೆಗೆ ಕಾರಣವಾಗಿದೆ. ಯಾಕೆಂದರೆ ರಾಮಾಯಣವನ್ನು ವಾಲ್ಮೀಕಿ ಬರೆಯುವಾಗ ಆ ಕೃತಿ ಬೆಳೆಬಹುದಾದ ರೀತಿ, ವಿಶ್ವದಾದ್ಯಂತ ಅದು ತಳೆಯಬಲ್ಲ ವಿರಾಟ್ ರೂಪ ಮತ್ತದರ ಪರಿಣಾಮದ ಕುರಿತು ಏನೂ ಕಲ್ಪನೆ ಇದ್ದಿರಲಿಕ್ಕಿಲ್ಲ. ಇದೆಲ್ಲ ಕೃತಿ ತನ್ನ ಸ್ವ ಸಾಮರ್ಥ್ಯದಿಂದ ಸಾಧಿಸಿಕೊಂಡಿದ್ದು‌. ಇನ್ನು ಸಮಾಜ ಸುಧಾರಣೆಗೆ ಬೇರೆ ಬೇರೆ ಮಾರ್ಗಗಳಿವೆ, ಸಾಹಿತ್ಯವೇ ಬೇಕೆಂದಿಲ್ಲ. ಆದರೆ ಸಮಾಜ ಸುಧಾರಕನಿಗೆ ಬೇಕಾದ ಒಳ್ಳೆಯ ಮನಸ್ಸು, ತಿಳಿವಳಿಕೆ ಮತ್ತು ದೃಷ್ಟಿಯನ್ನು ಸಾಹಿತ್ಯ ಕೊಡಬಲ್ಲದು.

ನಾನು: ನಿಮ್ಮನ್ನ ಪ್ರೀತಿಯಿಂದ ಓದುವ ಸಾಕಷ್ಟು ಓದುಗರನ್ನು ಗಳಿಸಿದ್ದೀರಿ. ನಿಮ್ಮ ಸಮಕಾಲೀನರು ಮತ್ತು ನಿಮ್ಮದೆ ಪ್ರದೇಶದ ಬರಹಗಾರರುಗಳಾದ ಜಯಂತ ಕಾಯ್ಕಿಣಿಯವರು ಮತ್ತು ಹಿರಿಯರಾದ ಯಶವಂತ ಚಿತ್ತಾಲರಿಗೆ ಹೋಲಿಸಿಕೊಂಡಾಗ ನೀವು ಸಾಕಷ್ಟು ಓದುಗರನ್ನು ತಲುಪಿದ್ದೀರಿ ಎನಿಸುತ್ತದೆಯೆ ಅಥವಾ ತಾನು ಇನ್ನೂ ಹೆಚ್ಚು ಓದುಗರನ್ನು ತಲುಪಬೇಕಿತ್ತು ಎನಿಸುತ್ತದೆಯೆ?

ಶ್ರೀಧರ ಬಳಗಾರ: ಎಷ್ಟು ಜನರನ್ನ ತಲುಪಿದ್ದೇನೆ ಅನ್ನುವುದು ಗೊತ್ತಾಗುವುದಿಲ್ಲ ಆದರೆ ಅಲ್ಲಲ್ಲಿ ಓದುತ್ತಿರುವುದನ್ನು ಗಮನಿಸಿದ್ದೇನೆ. ಪ್ರತಿದಿನ ಓದುಗರಿಂದ atleast ಒಂದು ಕರೆ ಬರುತ್ತದೆ. ಪ್ರಚಾರದ ಬಗ್ಗೆ ಹೇಳುವುದಾದರೆ, ನಾನಿರುವ ಜಾಗವೂ ಒಂದು ಕಾರಣವಾಗಿರಬಹುದು. ಉದಾಹರಣೆಗೆ ಅನಂತಮೂರ್ತಿ ಮತ್ತು ಚಿತ್ತಾಲರು ಸಮಕಾಲೀನರು ಆದರೆ ಅನಂತಮೂರ್ತಿಯವರಿಗೆ ಸಿಕ್ಕ ಪ್ರಚಾರ ಚಿತ್ತಾಲರಿಗೆ ಸಿಗಲಿಲ್ಲ. ಯಾಕೆಂದರೆ ಅವರು ದೂರದ ಮುಂಬೈನಲ್ಲಿ ಸುಮ್ಮನೆ ಕೂತು ಬರೆದರು. ಸಂದರ್ಭ ಮತ್ತು ಪ್ರದೇಶಗಳು ಹೆಚ್ಚಿನ ಜನರಿಗೆ ತೆರೆದುಕೊಳ್ಳುವುದಕ್ಕೆ ಮತ್ತೆ ಪ್ರಚಾರಕ್ಕೆ ಕಾರಣವಾಗುತ್ತವೆ.

ನಾನು: ನಿಮ್ಮ ಓದು ಯಾವ ರೀತಿ? ಹೊಸ ಲೇಖಕರನ್ನು ಓದುತ್ತೀರ? ನಿಮ್ಮ ನೆಚ್ಚಿನ ಬರಹಗಾರರು ಯಾರು?

ಶ್ರೀಧರ ಬಳಗಾರ: ನಾನು ಹೊಸ ಮತ್ತು ಹಳೆಯ ಲೇಖಕರಿಬ್ಬರನ್ನೂ ಓದುತ್ತೇನೆ. ನಾನು ಬರೆಯಲು ಪ್ರಾರಂಭಿಸಿದಾಗ ನವ್ಯದ ಉಚ್ಛ್ರಾಯದ ಕಾಲ. ಅದಕ್ಕೆ ಮೊದಲು ನಾನು ಕಾರಂತರನ್ನು ಬಹಳ ಓದುತ್ತಿದ್ದೆ. ನಂತರ ನವ್ಯದಲ್ಲಿ ಅನಂತಮೂರ್ತಿ. ಅವರ ಕಥೆಗಳಿಂದ ನಮ್ಮ ಸಾಂಪ್ರದಾಯಿಕ ಸಮಾಜದ ಒಳಕೊಳಕುಗಳು, ಜಡತ್ವ, ಅಲ್ಲಿರಬಹುದಾದ ಪ್ರತಿಭಟನೆಗಳ ದರ್ಶನ ಆಯಿತು. ಘಟಶ್ರಾದ್ಧದಂತಹ ಕಥೆಗಳು ನಮ್ಮ ಬ್ರಾಹ್ಮಣ ಸಮಾಜದ ಒಳಕೊಳಕುಗಳನ್ನು ನೋಡುವ ಕಣ್ಣು ಕೊಟ್ಟವು. ತೇಜಸ್ವಿ ನಮ್ಮ ಹೊರಗಡೆ ಇರುವ ವಿಸ್ಮಯ ವಿಶ್ವದ ಪರಿಚಯ ಮಾಡಿಸಿದರು. ಕುಟುಂಬದ ಆಚೆ ಇರುವ ಜಗತ್ತಿನ ಕಥೆ ಹೇಳಿದವರು ತೇಜಸ್ವಿ. ಮನುಷ್ಯ ಸ್ವಭಾವದ ವೈರುಧ್ಯ ಮತ್ತು ವೈಚಿತ್ರ್ಯಗಳನ್ನು ತೋರಿಸಿದ್ದು ಲಂಕೇಶರ ಕಥೆಗಳು. ಇನ್ನು, ಶಬ್ಧ ಎನ್ನುವುದು ಒಂದು ಕಲೆಯಾಗಿ, ಆ ಕಲೆಯೇ ಮನುಷ್ಯನ ಅನುಕಂಪದ ಭಾಗವಾಗಿ ಬರುವುದನ್ನು ತೋರಿಸಿದವರು ಚಿತ್ತಾಲರು. ಕಲೆ ಕೇವಲ ತಾಂತ್ರಿಕ ಸಂಗತಿಯಲ್ಲ ಅಂತ ಚಿತ್ತಾಲರು ಹೇಳಿದ್ದು. ಇದರ ಜೊತೆ ಗಿರೀಶ್ ಕಾರ್ನಾಡ್, ಕಾಸರವಳ್ಳಿ, ಸತ್ಯಜಿತ್ ರೇ ಸಿನಿಮಾಗಳನ್ನ ಧಾರವಾಡದಲ್ಲಿದ್ದಾಗ ನೋಡಿದೆ, ನೀನಾಸಂ ಗೆ ಹೋಗಿ ಚಲನಚಿತ್ರ ಶಿಬಿರದಲ್ಲಿ ಭಾಗವಹಿಸಿದೆ ಈ ಎಲ್ಲ ಚಟುವಟಿಕೆಗಳು ನನ್ನ ಸಾಹಿತ್ಯವನ್ನು ಪ್ರಭಾವಿಸಿದವು. ಧಾರವಾಡದಲ್ಲಿ ಹಲವು ಲೇಖಕ, ವಿಮರ್ಷಕ, ಸಂಗೀತಗಾರರ ಭೇಟಿ ಆಗುತ್ತಿತ್ತು. ಅದು ಒಂದು ರೀತಿಯ vibrating period of my life. ನಾನು English literature ಮತ್ತು ಕನ್ನಡ ಸಾಹಿತ್ಯದ ವಿದ್ಯಾರ್ಥಿ. ಹಾಗಾಗಿ ಕಾಫ್ಕಾ, ಕಮೂ, ಸಾರ್ತ್ರೆ, ಲಾರೆನ್ಸ್, ಮಾರ್ಕ್ವೆಜ್, ಟಾಲ್ಸ್ಟಾಯ್, ದಾಸ್ತೋವ್ಸ್ಕಿ ಇವರನ್ನೆಲ್ಲ ಓದುವುದು ಸಾಧ್ಯವಾಯಿತು. ಇವರನ್ನೆಲ್ಲ ಕನ್ನಡಕ್ಕೆ ತಂದದ್ದು ನವ್ಯರು ಮಾಡಿದ ಉಪಕಾರ. ಆ ಕಾಲದಲ್ಲಿ ಇದ್ದದ್ದು ನನ್ನ ಭಾಗ್ಯ.

ನಾನು: ಹೊಸ ಜನರೇಷನ್ ಬರಹಗಾರರಲ್ಲಿ ಯಾರನ್ನು ಓದುತ್ತೀರಿ?

ಶ್ರೀಧರ ಬಳಗಾರ: ಹೊಸ ಜನರೇಷನ್ ನಲ್ಲಿ ಪದ್ಮನಾಭ ಭಟ್ ಶೇವ್ಕಾರ, ಕರಣಂ ಅವರ ಕಾದಂಬರಿಗಳು, ಶಾಂತಿಕಾ ಅಪ್ಪಣ್ಣ, ಮೌನೇಶ ಬಡಿಗೇರ, ಕರ್ಕಿ ಕೃಷ್ಣಮೂರ್ತಿ ಇವರನ್ನೆಲ್ಲ ಇಷ್ಟಪಟ್ಟು ಓದಿದ್ದೇನೆ. ಇನ್ನೂ ಹಲವು ಹೆಸರುಗಳಿವೆ ಈಗ ನೆನಪಿಗೆ ಬರುತ್ತಿಲ್ಲ.

ನಾನು: ಸಮಕಾಲೀನ ಸಾಹಿತ್ಯದ ಗುಣಮಟ್ಟ ಹಿಂದಿನಂತಿಲ್ಲ ಹಾಗಾಗಿ ಅದನ್ನು ಓದುವ ಆಸಕ್ತಿ ಇಲ್ಲ ಎನ್ನುವುದು ಕೆಲವರ ಅಭಿಪ್ರಾಯ, ನೀವೇನೆನ್ನುತ್ತೀರಿ?

ಶ್ರೀಧರ ಬಳಗಾರ: There are much tempted writers. ಕಥೆ ಮತ್ತು ಕಾದಂಬರಿಗಳು ಬೇಡುವ ಸೃಷ್ಟಿಶೀಲ ಮತ್ತು ಸಹನಶೀಲ ಮನಸ್ಥಿತಿಯನ್ನು ಕೆಲವರು ಕಳೆದುಕೊಂಡಂತೆ ಕಾಣುತ್ತದೆ. ಒಂದು ಸಾಹಿತ್ಯ ಕೃತಿ ಲೇಖಕನಿಂದ ಏಕಾಗ್ರತೆ ಮತ್ತು ಧ್ಯಾನವನ್ನು ನಿರೀಕ್ಷಿಸುತ್ತದೆ. ಅವಸರ ಮಾಡಿಬಿಟ್ಟರೆ ಕಲೆ ಲಯವನ್ನ ಕಳೆದುಕೊಳ್ಳುತ್ತದೆ. ಮೊದಲೆಲ್ಲ ಒಂದು ಕಥೆ, ಕಾದಂಬರಿಯ ಕುರಿತು ಎರಡು ಮೂರು ವರ್ಷಗಳ ಕಾಲ ಚರ್ಚೆ ಆಗುತ್ತಿತ್ತು. ಈಗ ಹಾಗಲ್ಲ. ಅನುಭವಿಸಿ ಬರೆಯುವ ಕಥನದ ಭಾಷೆ ಕಾಣೆಯಾಗುತ್ತಿರುವುದು ಅದಕ್ಕೆ ಕಾರಣ. ಕಥೆಯಲ್ಲಿ ಅಲಂಕಾರಗಳ ಬಳಕೆ, ಸಮಯದ ನಿರ್ವಹಣೆ, ನಿರೂಪಣೆ, ಇವಕ್ಕೆಲ್ಲ ಒಂದು ಧ್ವನಿ ಕೊಡುವ ರೀತಿ ಇದರಲೆಲ್ಲು ಕಥೆಗಾರನ ಹೇರಿಕೆ ಕಾಣದಂತೆ ಸಂಯಮದಿಂದ ಬರೆಯುವ ಕುಸುರಿ ಕೇಳುವ ತಾಳ್ಮೆಇಲ್ಲದಾಗುತ್ತಿದೆ. ಮತ್ತೆ, ಪೂರ್ವ ಸಿದ್ಧತೆ ಇಲ್ಲದಾಗಿದೆ. ಸ್ವಯಂ ಓದು ಇಲ್ಲದೆ ಒಳ್ಳೆಯ ಬರವಣಿಗೆ ಸಾಧ್ಯವಿಲ್ಲ. ಹಂತಹಂತವಾಗಿ ಬೆಳೆಯುವವರು ಕಡಿಮೆಯಾಗಿದ್ದಾರೆ.
ಪ್ರಶಸ್ತಿ, ಕಥಾ ಸ್ಪರ್ಧೆಗಳನ್ನೇ ಉದ್ದೇಶಿಸಿ ಬರೆಯುವವರೂ ಇದ್ದಾರೆ. ಪ್ರಶಸ್ತಿ ಬೇಡ ಎನ್ನುವ ಸನ್ಯಾಸ ಸ್ವೀಕರಿಸಬೇಕೆಂದಿಲ್ಲ ಆದರೆ ಅದಕ್ಕಾಗಿಯೇ ಹಪಹಪಿಸುವುದು, ಪ್ರಶಸ್ತಿಗೆ ಆಯ್ಕೆಯಾಗುವ ರೀತಿಯಲ್ಲೇ ಕಥೆ ಜೋಡಿಸಿ ಬರೆಯುವುದು ಅದು ಸರಿಯಲ್ಲ, ಇವುಗಳಿಂದ ಬರಹಗಳ ಗುಣಮಟ್ಟ ಕಡಿಮೆಯಾಗುತ್ತದೆ. ಹಾಗಾಗಿಯೇ ಇವತ್ತು ಬಹಳಷ್ಟು ಲೇಖಕರು ಒಂದು ಸಂಕಲನಕ್ಕೆ ಸುಸ್ತಾಗುತ್ತಾರೆ. ಮುಂದೆ ಬರೆಯುವ ದಾರಿ ಕಾಣದೆ, ಬರೆದರೆ repetation ಆಗುವ ಸ್ಥಿತಿ ತಲುಪುತ್ತಾರೆ.

ನಾನು: ನಿಮ್ಮ ಮುಂದಿನ ಪುಸ್ತಕ ಯಾವುದು? ಕಥೆಗಳನ್ನು ಬರೆಯುತ್ತಿದ್ದೀರ?

ಶ್ರೀಧರ ಬಳಗಾರ: ನನ್ನ ಹೊಸ ಕಾದಂಬರಿ 'ಬಲಿ ಪಾದ' ಬಿಡುಗಡೆಗೆ ಸಿದ್ಧವಾಗಿದೆ. 'ಮಾರ ಮಿಂದನು' ಕಥಾ ಸಂಕಲನ ಬಂದು ಒಂದು ವರ್ಷ ಆಯಿತು. ಅದರ ನಂತರ ವಿಶೇಷಾಂಕಗಳಿಗೆ ಮೂರ್ನಾಲ್ಕು ಕಥೆ ಬರೆದಿದ್ದೇನೆ.

Sunday, November 24, 2024

ಈ ಕ್ಷಣದ ಕವಿತೆ ೭

ನನ್ನ ಪ್ರಾಮಾಣಿಕ ಅಭಿಪ್ರಾಯವೇನೆಂದರೆ
ಕವಿತೆ ಬರೆಯುವುದೊಂದುದೊಡ್ಡವಿಷಯವೇಅಲ್ಲ.
ಹೀಗೆ,
ಏನೇನೋಬೇಕಾದರೂ ಪದಗಳಮಧ್ಯದಲ್ಲೊಂದಿಷ್ಟು ಜಾಗವನ್ನೂಬಿಡದೇ ಅರ್ಥಹೀನಶಬ್ದಗಳನ್ನೂ ಒಟ್ಟಿಗೆ ಪೋಣಿಸಿಟ್ಟುಬಿಟ್ಟರೂ ಸಾಕಾದೀತು!

ಆದರೆ,
ಇದನ್ನು ಕವಿತೆಎಂದುಕರೆದು ನಾಲ್ಕುಜನರುಓದುವಹಾಗೆ ಹೊರಹಾಕುವುದು ಭಯಂಕರದವಿಷಯವೇಹೌದು

ಬೇಕಾದರೆನೋಡಿ, 
ಇತ್ತೀಚೆಗೆನನ್ನಂತಹ ಕಂಡಕಂಡವರೂ
ತಮಗೆತೋಚಿದಹಾಗಿಬರೆದು
ಇದೂಒಂದುಕವಿತೆಯೆಂದು ನಂಬಿಸುತ್ತಾರೆ!
ನಂಬುತ್ತಾರೆ!!

Saturday, June 8, 2024

ಅರ್ಭುತನ ಬೆನ್ನತ್ತಿ.

ಕೆಲವು ವರ್ಷಗಳ ಹಿಂದೆ.........

    ನಾನು ಕನ್ನಡದ ಸುದ್ದಿ ಪತ್ರಿಕೆ ಒಂದಕ್ಕೆ ಕೆಲಸ ಮಾಡುತ್ತಿದ್ದ ಕಾಲ. ಒಂದು ಭಾನುವಾರ ಮಧ್ಯಾಹ್ನ ಊಟ ಮಾಡಿ ಮಲಗಿ ಕಣ್ಮುಚ್ಚಿದ್ದಷ್ಟೆ, ಟೆಲಿಫೋನು ರಿಂಗಾಗಿತ್ತು. ಎತ್ತಿ ಮಾತಾಡಿದರೆ ಆ ಕಡೆಯಿಂದ ಗೆಳೆಯ ಗೊಪಿ. ಸ್ವಲ್ಪ ಅರ್ಜೆಂಟಿನಲ್ಲಿದ್ದ. ಒಂದು ಅಪರೂಪದ ಸುದ್ದಿ ಇದೆಯೆಂದೂ, ಇನ್ನೂ ಬೇರೆ ಯಾವುದೇ ಮಾಧ್ಯಮದವರಿಗೂ ಈ ವಿಚಾರ ತಿಳಿದಿಲ್ಲವೆಂದೂ ಮತ್ತು ನಾನು ಆದಷ್ಟು ಬೇಗ ಅವನು ಹೇಳುವ ಜಾಗಕ್ಕೆ ಹೋದಲ್ಲಿ ಒಂದು ಒಳ್ಳೆಯ ಸ್ಟೋರಿ ಕವರ್‌ ಮಾಡಬಹುದೆಂದು ಹೇಳಿದ. ಅದರ ನಂತರ ಅವನು ಕೊಟ್ಟ ವಿವರಗಳು ಅತ್ಯಂತ ಕುತೂಹಲಕಾರಿಯಾಗಿದ್ದವು. ಮೈಸೂರಿನ ಒಂದು ಹಳ್ಳಿಯ ಕಾಳಿಂಗ ಗೌಡ ಎಂಬವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಅವರ ಮನೆಯ ಪುಣ್ಯಕೋಟಿ ಎಂಬ ಹಸು ದೊಡ್ಡಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಅರ್ಭುತ ಎನ್ನುವ ಹುಲಿಯೊಂದು ಅದನ್ನು ಅಡ್ಡಗಟ್ಟಿ ತಿನ್ನುವುದಾಗಿ ಹೇಳಿತಂತೆ, ಆಗ ಪುಣ್ಯಕೋಟಿಯು ತನಗೆ ಮನೆಯಲ್ಲಿ ಚಿಕ್ಕ ಕರುವಿದೆ, ಅದಕ್ಕೆ ಹಾಲು ಕುಡಿಸಿ ಮತ್ತೆ ನಿನ್ನಲಿಯೇ ಬರುತ್ತೇನೆ, ಆಗ ನೀನು ನನ್ನನ್ನು ತಿನ್ನಬಹುದು, ಈಗ ಹೋಗಲು ಅವಕಾಶ ಕೊಡು ಎಂದು ಬೇಡಿಕೊಂಡಿತಂತೆ, ಈ ಮಾತನ್ನು ನಂಬಿದ ಹುಲಿ ಪುಣ್ಯಕೋಟಿಯನ್ನು ಬಿಟ್ಟು ಕಳುಹಿಸಿತಂತೆ. ಇಷ್ಟಕ್ಕೆ ಮುಗಿದಿದ್ದರೆ ಕಥೆಯನ್ನು ಜಾಣ ಹಸು ಎಂದೋ, ಮೂರ್ಖ ಹುಲಿ ಎಂದೋ ಕರೆದುಬಿಡಬಹುದಿತ್ತು ಆದರೆ, ಕಥೆಗೆ ಟ್ವಿಸ್ಟು ಬರುವುದೇ ಇಲ್ಲಿ. ಕರುವಿಗೆ ಹಾಲು ಕುಡಿಸಿದ ಪುಣ್ಯಕೋಟಿ, ತಾನು ಹೀಗೆ ಹುಲಿಗೆ ಮಾತು ಕೊಟ್ಟು ಬಂದಿರುವುದರಿಂದ ಹೋಗುತ್ತಿದ್ದೇನೆ ಮತ್ತು ನನ್ನ ಕರುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಅದರ ಸ್ನೇಹಿತೆಯರಾದ ಗಂಗೆ, ಗೌರಿ ಮುಂತಾದವರ ಬಳಿ ಕೇಳಿಕೊಂಡು ವಾಪಸ್‌ ಹುಲಿಯ ಬಳಿ ಹೊರಟು ಹೋಗಿದೆ. ಆಮೇಲೆ ಏನಾಗಿದೆ ಗೊತ್ತಿಲ್ಲ, ಪುಣ್ಯಕೋಟಿ ಮಧ್ಯರಾತ್ರಿಯ ಹೊತ್ತಿಗೆ ದೊಡ್ಡಿಗೆ ಹಿಂದಿರುಗಿದೆ. ಹಾಗೆ ಬರುವಾಗ ಅದು ವಿಪರೀತ ಭಯಕ್ಕೆ ಮತ್ತು ಮಾನಸಿಕ ಅಸಮತೋಲನಕ್ಕೆ ಒಳಗಾಗಿದೆ, ಏನಾಯಿತು ಎಂದು ಸ್ನೇಹಿತೆಯರು ಮತ್ತೆ ಮತ್ತೆ ಒತ್ತಾಯಿಸಿ ಕೇಳಿದಾಗ ಅರ್ಭುತ ಹಾರಿ ನೆಗೆದು ಪ್ರಾಣ ಬಿಟ್ಟ ವಿಚಾರವನ್ನು ಹೇಳಿದೆ. ಯಾಕೆ ಎಂದು ಕೇಳಿದರೆ ಉತ್ತರವಿಲ್ಲ. ಮರುದಿನ ಬೆಳಿಗ್ಗೆ ವಿಚಾರ ಕಾಳಿಂಗನಿಗೆ ತಿಳಿದಿದೆ, ಅವನು ನಮ್ಮ ಗೋಪಿಯ ಸಂಭಂದಿ, ಇವನಿಗೆ ಫೋನು ಮಾಡಿ ವಿಚಾರ ತಿಳಿಸಿ ಮುಂದೆ ಏನು ಮಾಡಬಹುದು ಎಂದು ಕೇಳಿದಾಗ ಕೂಡಲೇ ಪೋಲಿಸರಿಗೆ ವಿಚಾರ ತಿಳಿಸಬೇಕೆಂದೂ ಮತ್ತು ಯಾವುದೇ ಮಾಧ್ಯಮಕ್ಕೂ ವಿಷಯ ತಿಳಿಯದಂತೆ ನೋಡಿಕೊಳ್ಳಬೇಕೆಂದೂ, ಒಂದು ವೇಳೆ ಗೊತ್ತಾದರೆ, ಪುಣ್ಯಕೋಟಿಯ ಜೀವನ ಬಹಳ ಕಷ್ಟವಾಗಿ ಹೋಗುತ್ತದೆಯೆಂದು ಹೇಳಿದ್ದನಾದರೂ ಅದರ ಉದ್ದೇಶ ನನಗೆ ಉಪಕಾರ ಮಾಡುವುದಾಗಿತ್ತು.
      ನಾನು ಮತ್ತು ನನ್ನ ಒಬ್ಬ ಸಹೋದ್ಯೋಗಿ ಮಿತ್ರ ಕಾಳಿಂಗನ ಮನೆ ತಲುಪುವ ಹೊತ್ತಿಗೆ ಸುಮಾರು ರಾತ್ರಿ ಎಂಟು ಗಂಟೆ. ಕಾಳಿಂಗನನ್ನು, ಪುಣ್ಯಕೋಟಿಯನ್ನು ಮಾತನಾಡಿಸಿ ವಿಚಾರ ತಿಳಿದುಕೊಂಡು ಬರುವ ಉದ್ದೇಶದಿಂದಷ್ಟೇ ನಾವಲ್ಲಿಗೆ ಹೋದದ್ದಾದರೂ ನಮ್ಮ ಆ ಪ್ರಯಾಣ ಎಂತಹ ದೊಡ್ಡ ಸಾಹಸವಾದೀತು ಎನ್ನುವ ಕಲ್ಪನೆಯೂ ನನಗೆ ಇರಲಿಲ್ಲ.
      ಗೋಪಿಯ ಹೆಸರು ಹೇಳಿದಮೇಲೆ ಕಾಳಿಂಗ ನಮ್ಮನ್ನು ಮನೆಯೊಳಗೆ ಕರೆದುಕೊಂಡು ಅವನಿಗೆ ಗೊತ್ತಿರುವಷ್ಟು ವಿಚಾರಗಳನ್ನು ಹೇಳಿದ, ಅದರಲ್ಲಿ ನಮಗೆ ತಿಳಿದಿರುವುದಕ್ಕಿಂತ ಹೆಚ್ಚೇನೂ ಇರಲಿಲ್ಲ. ನಾನು ಅರ್ಭುತ ಆತ್ಮಹತ್ಯೆ ಮಾಡಿಕೊಂಡ ಜಾಗಕ್ಕೆ ನಮ್ಮನ್ನು ಕರೆದೊಯ್ಯುವಂತೆ ಕೇಳಿದಾಗ ಅದು ಕಾಡಿನ ಒಳಭಾಗದಲ್ಲಿದೆಯೆಂದೂ, ಪೋಲಿಸರೇ ಅಲ್ಲಿಗೆ ನಾಳೆ ಹೋಗುತ್ತಾರೆಂದೂ, ನಾವೂ ನಾಳೆಯೇ ಹೋಗೋಣ ಎಂದು ಹೇಳಿದಾಗ ನಾವು ಒಪ್ಪಲೇ ಬೇಕಾಯಿತು. ಆ ದಿನ ರಾತ್ರಿ ಕಾಳಿಂಗನ ಮನೆಯಲ್ಲೇ ನಾವು ಊಟಮಾಡಿ ಮಲಗಿದೆವು.
************
        ನಾವು ಮರುದಿನ ಬೆಳಿಗ್ಗೆ ಸ್ಥಳಕ್ಕೆ ಹೋಗುವಷ್ಟರಲ್ಲೇ ಬಿಸಿಲು ಏರಿತ್ತು. ಕಾಳಿಂಗನ ಮನೆಯಿಂದ ಬೇಗನೆ ಹೊರಟೆವಾದರೂ ಕಾಡಿನ ಹಾದಿಯಲ್ಲಿ ಬೆಟ್ಟಗಳನ್ನು ಏರಿಳಿಯುತ್ತಾ ನಡೆಯುವಷ್ಟರಲ್ಲಿ ಹೊತ್ತು ಏರಿತ್ತು. ಅಷ್ಟರಲ್ಲಾಗಲೇ ಕೆಲವು ಪೋಲಿಸರು, ಗ್ರಾಮಸ್ಥರು ಅಲ್ಲಿದ್ದರು. ಅರ್ಭುತನ ಕಡೆಯಿಂದ ಅಕ್ರೂರ ಎನ್ನುವ ಆತನ ಒಬ್ಬ ಸ್ನೇಹಿತನನ್ನು ಹೊರತುಪಡಿಸಿ ಮತ್ಯಾರೂ ಇರಲಿಲ್ಲ. ಅಲ್ಲಿದ್ದ ಒಬ್ಬ ಪೋಲಿಸ್‌ ಅಧಿಕಾರಿಯ ಬಳಿ ಮಾತಾಡಿದಾಗ ಅರ್ಭುತನ ಕುಟುಂಬಸ್ಥರಿಗೆ ಇನ್ನೂ ವಿಚಾರ ತಿಳಿಸಿಲ್ಲ ಎಂದು ಹೇಳಿದ. ಅಕ್ರೂರ ವಿಷಯವನ್ನು ತಿಳಿಸುವುದಕ್ಕೆ ಅರ್ಭುತನ ಮನೆಗೆ ಹೊರಟಿದ್ದಾನೆ ಎಂದು ತಿಳಿಯಿತು. ಅವನ ಜೊತೆ ಹೋದರೆ ಅವನ ಮನೆಯವರನ್ನು ಮಾತಾಡಿಸಿ, ದಾರಿಯಲ್ಲಿ ಅವನ ಜೊತೆಯಲ್ಲಿ ಮಾತಾಡಿ ಅರ್ಭುತನ ಕುರಿತಾಗಿ ಇನ್ನೂ ಹೆಚ್ಚು ವಿಷಯಗಳನ್ನು ತಿಳಿದುಕೊಂಡು ಒಂದು ಆಸಕ್ತಿಕರವಾದ ಲೇಖನ ಬರೆಯಬಹುದು ಎಂದು ಬಲವಾಗಿ ಅನಿಸಿತು. ನನ್ನ ಸಹೋದ್ಯೋಗಿಯ ಬಳಿ ಅಲ್ಲಿನ ಆಗುಹೋಗುಗಳನ್ನು ಸರಿಯಾಗಿ ಗಮನಿಸಿಕೋಳ್ಳುವಂತೆ ಹೇಳಿ ನಾನು ಅಕ್ರೂರನೊಡನೆ ಅರ್ಭುತನ ಮನೆಯತ್ತ ಹೊರಟೆ.
       ಅಕ್ರೂರನಿಗೆ ಅರ್ಭುತನ ಸಾವಿನಿಂದ ವಿಪರೀತ ಆಘಾತವಾದದ್ದು ಸ್ಪಷ್ಟವಿತ್ತು. ಅವನ ಮಾತಿನಲ್ಲೇ ಅದು ತಿಳಿಯುತ್ತಿತ್ತು. ಸ್ವಭಾವತಃ ಸ್ವಲ್ಪ ಹೆಚ್ಚೇ ಮಾತುಗಾರನಾಗಿದ್ದ ಅಕ್ರೂರ ನನ್ನೊಂದಿಗೆ ಒಂದೇ ಸಮನೆ ಮಾತಾಡತೊಡಗಿದ. ಆತ ಮತ್ತು ಅರ್ಭುತ ಬಾಲ್ಯ ಸ್ನೇಹಿತರಾಗಿದ್ದರು. ಒಟ್ಟಿಗೆ ಬೇಟೆಯಾಡಲು ಕಲಿತವರು.
       ಅರ್ಭುತನ ಮದುವೆಯ ಹಿಂದೆ ಒಂದು ಕತೆಯಿತ್ತು. ಅರ್ಭುತ ಅವನ ಹೆಂಡತಿ ಕಾಳಿಯನ್ನು ಮೊದಲು ಭೇಟಿಯಾದದ್ದೇ ಆಕೆಯ ನಿಶ್ಚಿತಾರ್ಥದಲ್ಲಾಗಿತ್ತು, ಎಂದರೆ ಕಾಳಿ ಬೇರೆಯೊಬ್ಬನಿಗೆ ನಿಶ್ಚಯವಾದ ಹೆಣ್ಣು, ಆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲೇ ಅವರಿಬ್ಬರು ಪರಸ್ಪರ ನೋಡಿಕೊಂಡಿದ್ದರು, ಕಾಳಿಗೂ ಅರ್ಭುತ ಇಷ್ಟವಾಗಿದ್ದ. ಹಾಗಾಗಿ ನಿಶ್ಚಯವಾದ ಮದುವೆ ಮುರಿದು ಬಿದ್ದಿತ್ತು. ಮನೆಯವರ, ಊರಿನವರ ವಿರುದ್ಧವಾಗಿ ಅವರಿಬ್ಬರೂ ಮದುವೆಯಾಗಿದ್ದರು. ಇದಾದಮೇಲೆ ಊರಿನವರ ಮತ್ತು ಅರ್ಭುತನ ಕುಟುಂಬಕ್ಕೂ ಸಂಪರ್ಕ ಬಹಳ ಕಡಿಮೆಯಾಗಿತ್ತು. ಅರ್ಭುತ ಹೀಗೆ ಬೇರೆಯವನಿಗೆ ನಿಶ್ಚಯವಾಗಿದ್ದ ಹೆಣ್ಣನ್ನು ಮದುವೆಯಾದದ್ದು ಅಕ್ರೂರನಿಗೂ ಸರಿ ಎನಿಸಿರಲಿಲ್ಲ ಹಾಗಾಗಿ ಅವನೂ ಅರ್ಭುತನೊಂದಿಗಿನ ಸ್ನೇಹವನ್ನು ಸ್ವಲ್ಪ ಕಡಿಮೆ ಮಾಡಿದ್ದ.
      ನನಗೆ ಇಂತಹ ಅರ್ಭುತನ ಬದುಕು ಹೇಗೆ ಸಾಗುತ್ತಿದ್ದಿರಬೇಕೆಂದು ಅಶ್ಚರ್ಯವಾಯಿತು. ಅದನ್ನೇ ಅಕ್ರೂರನ ಬಳಿ ಕೇಳಿದಾಗ ಅವನು ವಿಷಾದದ ನಗೆ ನಕ್ಕ. ಅವನು ಮುಂದೆ ಹೇಳಿದ ವಿಷಯ ಕೇಳಿ ನನಗೆ ಸತ್ತ ಅರ್ಭುತನ ಬಗ್ಗೆ ಕರುಣೆ ಮೂಡಿತು. ಹಾಗೆ ಮದುವೆಯಾದ ನಂತರ ಅರ್ಭುತ ಮತ್ತವನ ಹೆಂಡತಿ ತಮ್ಮ ತಮ್ಮ ಕುಟುಂಬಗಳಿಂದ ಸಂಪೂರ್ಣ ಹೊರಬಿದ್ದರಂತೆ, ಅದರಿಂದ ಕಾಳಿಗೆ ಅಂತಹ ದುಃಖವೇನೂ ಅಗದಿದ್ದರೂ, ತುಂಬು ಕುಟುಂಬದ ಪ್ರೀತಿಯಲ್ಲಿ ಬೆಳೆದ ಅರ್ಭುತನಿಗೆ ಇದರಿಂದ ಬಹಳ ವೇದನೆಯುಂಟಾಯಿತಂತೆ. ಇದರ ಜೊತೆಗೆ ಕಾಳಿ ಮಹತ್ವಾಕಾಂಕ್ಷೆಯ ಹೆಣ್ಣಾಗಿದ್ದಳು. ಅವಳಿಗೆ ಪ್ರತಿದಿನ ಎಳೆ ಜಿಂಕೆಯದ್ದೋ ಇಲ್ಲಾ ಬಲಿತ ಹಸುವಿನದ್ದೋ ಊಟವಾಗಬೇಕಿತ್ತು. ಆದರೆ ಪ್ರತೀದಿನ ಅವನ್ನು ಒದಗಿಸಲು ಅರ್ಭುತನಿಗೆ ಆಗದೇ ಹೋಯಿತು, ಇದರ ಜೊತೆಗೆ ಶಾಪವೋ ಎಂಬಂತೆ ಅವರಿಗೆ ವರ್ಷಗಳು ಕಳೆದರೂ ಮಕ್ಕಳು ಹುಟ್ಟಲಿಲ್ಲ. ಇದರಿಂದಲೂ ಅರ್ಭುತ ಬಹಳ ನೊಂದುಹೋಗಿದ್ದ. ಕಾಳಿಯೂ ಅವನನ್ನು ಅಲಕ್ಷಿಸತೊಡಗಿದ್ದಳು. ಪ್ರತಿದಿನ ಮನೆಯಲ್ಲಿ ಒಂದಲ್ಲಾ ಒಂದು ಜಗಳ. ಇದರಿಂದ ಬೇಸತ್ತ ಅರ್ಭುತ ಮನೆಗೆ ಬರುವುದನ್ನೇ ನಿಲ್ಲಿಸಿ ಬೇರೆ ಗುಹೆಯಲ್ಲೇ ವಾಸಿಸತೊಡಗಿದ್ದ. ಆ ಗುಹೆಯ ಬಳಿಯಲ್ಲೇ ಆತ ಆತ್ಮಹತ್ಯೆ ಮಾಡಿಕೊಂಡದ್ದು.
                                                                    ******************

    ಹೀಗೆ ಮಾತಾಡುತ್ತ ಅಕ್ರೂರ ಚಿಂತಿಸಬಹುದಾದ ವಿಷಯವೊಂದನ್ನು ಹೇಳಿದ. ಇದರ ಕುರಿತಾಗಿ ಓದುಗರೇ ಚಿಂತಿಸಿ ಒಂದು ಸೂಕ್ತ ಪರಿಹಾರ ಕೊಡಬಲ್ಲರೆಂದು ನನಗೆ ಅನಿಸಿತು. ಎಷ್ಟೇ ಬೇಸರದಲ್ಲಿದ್ದರೂ, ಅರ್ಭುತ ಮಾನಸಿಕವಾಗಿ ಬಹಳ ಸಧೃಢನಾಗಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವಂತಃ ಹೇಡಿ ಆಗಿರಲಿಲ್ಲ. ಅವನ ಜೊತೆಯಲ್ಲೇ ಬೆಳೆದು ದೊಡ್ಡವನಾದ ಅಕ್ರೂರನಿಗಂತು ಇದು ಆತ್ಮಹತ್ಯೆ ಎನ್ನುವುದರಲ್ಲಿ ಸ್ವಲ್ಪವೂ ವಿಶ್ವಾಸವಿರಲಿಲ್ಲ. ಅದನ್ನು ಹೇಳುತ್ತಲೇ ಈ ಚಿಂತನೀಯ ವಿಷಯವನ್ನವನು ನನ್ನ ಬಳಿ ಹೇಳಿದ್ದು. ಅವನಿಗೆ ಇದೊಂದು ಕೊಲೆ ಎಂದು ಬಲವಾದ ಸಂಶಯ. ಯಾವ ಜೀವಿಯಾದರೂ ತನ್ನ ಜೀವವನ್ನು ಅಪ್ರತಿಭವಾಗಿ ಪರರಿಗೆ ಒಪ್ಪಿಸಲು ಮುಂದಾಗುವುದಿಲ್ಲ, ತನ್ನದೆನ್ನುವ ಒಂದು ಚೆಂದದ ಸಂಸಾರವನ್ನು ಹೊಂದಿರುವ ಪುಣ್ಯಕೋಟಿ ಅದಕ್ಕೆ ಒಪ್ಪಿರುವುದಕ್ಕೆ ಹೇಗೆ ಸಾಧ್ಯ, ಅಂದರೆ ಅಕ್ರೂರನ ಪ್ರಕಾರ, ಅತಿಯಾದ ಆದರ್ಶಕ್ಕೆ ಒಳಗಾದ ಪುಣ್ಯಕೋಟಿ ಅರ್ಭುತನಿಗೆ ಆಹಾರವಾಗಲೆಂದು ಅವನ ಗುಹೆಯಬಳಿ ಬಂದಿದೆ, ಅರ್ಭುತನೂ ಹಲವು ದಿನಗಳ ನಂತರ ಹಸುವಿನ ಮಾಂಸವನ್ನು ತೆಗೆದುಕೊಂಡು ಕಾಳಿಯ ಬಳಿಯಲ್ಲಿ ಹೋಗುವ ಕನಸು ಕಂಡಿದ್ದನಿರಬೇಕು ಆದರೆ ಅರ್ಭುತನ ಗುಹೆಯ ಬಳಿಗೆ ತಲುಪುವಷ್ಟರಲ್ಲಿ ಪುಣ್ಯಕೋಟಿಯ ಆದರ್ಶ ಸವೆದುಹೋಗಿ ಬದುಕುವ ಆಸೆ ಬಲಿತು ನಿಂತಿದೆ. ಆ ಸಮಯಕ್ಕೇ ಅರ್ಭುತನೂ ಪುಣ್ಯಕೋಟಿಯನ್ನು ಕೊಲ್ಲಲು ಮುಂದಾಗಿದ್ದಾನೆ. ಪುಣ್ಯಕೋಟಿಯೂ ಅವನನ್ನು ತಡೆಯುವ ಪ್ರಯತ್ನ ಮಾಡಿದೆ. ಈ ಜಟಾಪಟಿಯಲ್ಲಿ ಅರ್ಭುತನನ್ನು ಹೆಚ್ಚು ಕಡಿಮೆ ಅವನಷ್ಟೇ ಬಲಿಷ್ಟಳಾದ ಪುಣ್ಯಕೋಟಿ ಪ್ರಪಾತಕ್ಕೆ ತಳ್ಳಿದ್ದಾಳೆ.
   ಅಕ್ರೂರ ಹೀಗೆ ಹೇಳುವಾಗ ನಾನು ಪುಣ್ಯಕೋಟಿಯ ದೇಹವನ್ನು ನೆನೆದೆ. ಆದರೆ ನಾನಿನ್ನೂ ಅರ್ಭುತನನ್ನು ನೋಡಿರಲಿಲ್ಲ, ಆದರೆ ಅರ್ಭುತನೂ ಅಕ್ರೂರನಷ್ಟೇ ಬಲಿಷ್ಟನಾಗಿದ್ದ ಪಕ್ಷದಲ್ಲಿ ಅಕ್ರೂರ ಹೇಳಿದಂತೆ ನಡೆದಿರುವುದೂ ಸಾಧ್ಯವಿದೆ ಎನಿಸಿತು. ಪುಣ್ಯಕೋಟಿ ಮಾನಸಿಕವಾಗಿ ಅಷ್ಟು ಕುಗ್ಗಿ ಹೋದದ್ದಕ್ಕೂ, ತಾನು ಕೊಲೆಗಾರ್ತಿಯಾಗಿಹೋದೆನೆನ್ನುವ ಪಾಪಪ್ರಜ್ಞೆಯೇ ಕಾರಣವಾಗಿರಬಹುದೆಂದು ಊಹಿಸಿದೆ.
                                                                   ********************

  ಸುಮಾರು ಎರಡು ತಾಸಿನ ಪ್ರಯಾಣದ ನಂತರ ನಾವು ಅರ್ಭುತನ ಮನೆ ತಲುಪಿದೆವು. ಮನೆಯಲ್ಲಿ ಕಾಳಿ ಒಬ್ಬಳೇ ಇದ್ದಳು. ಬಂದ ನನ್ನನ್ನು ಮತ್ತು ಅಕ್ರೂರನನ್ನು ಒಮ್ಮೆಗೆ ಕಂಡು ಸ್ವಲ್ಪ ಹೆಚ್ಚೇ ಮುಜುಗರಪಟ್ಟಳು. ಅಕ್ರೂರ ಯಾವುದೇ ಹಿಂಜರಿಕೆಯಿಲ್ಲದೆ ಅರ್ಭುತನ ಸಾವಿನ ಸುದ್ದಿ ಹೇಳಿದ, ಒಂದು ಕ್ಷಣ ದುಃಖದಲ್ಲಿ ಎಂಬಂತೆ ತಲೆ ಬಗ್ಗಿಸಿದಳು. ನಾಲ್ಕು ಹನಿ ಕಣ್ಣೀರೇನು ಅವಳ ಕಣ್ಣಿನಿಂದ ಉದುರಿದಂತೆ ನನಗೆ ಕಾಣಲಿಲ್ಲ. ಮರುಕ್ಷಣವೇ ಸಾವರಿಸಿಕೊಂಡು ನಮ್ಮ ಜೊತೆ ಹೊರಟು ನಿಂತಳು. ಸ್ತ್ರೀ ಸಹಜವಾದ ಅಲ್ಲ ಪತ್ನಿ ಸಹಜವಾದ ಯಾವ ಪ್ರಶ್ನೆಗಳನ್ನೂ ಆಕೆ ಕೇಳಲಿಲ್ಲ. ಅಕ್ರೂರನಲ್ಲಿ ಹೆಚ್ಚು ಮಾತನಾಡುವುದು ಆಕೆಗೆ ಇಷ್ಟವಿಲ್ಲ ಎಂಬುದು ಸ್ಪಷ್ಟವಿತ್ತು. ನಾವಿಬ್ಬರೂ ಕಾಳಿಯನ್ನು ಕರೆದುಕೊಂಡು, ಒಂದೂ ಮಾತಿಲ್ಲದೇ ಮತ್ತೆ ಎರಡು ತಾಸು ನಡೆದು ಅರ್ಭುತ ಸತ್ತ ಜಾಗಕ್ಕೆ ಹಿಂದಿರುಗಿದೆವು.
                                                                   **********************

  ನಾವು ಬರುವಷ್ಟರಲ್ಲಿ ಹೊತ್ತು ಇಳಿಯಹತ್ತಿತ್ತು. ಪೋಲಿಸರು ಅರ್ಭುತನ ಹೆಣವನ್ನು ಪ್ರಪಾತದಿದಂದ ಎತ್ತಿ ಬಯಲಿನಲ್ಲಿ ಮಲಗಿಸಿದ್ದರು. ನನ್ನ ಸಹೋದ್ಯೋಗಿ ಅವನ ಫೋಟೋಗಳನ್ನು ಅದಾಗಲೇ ತೆಗೆದುಕೊಂಡು ಹೊರಡಲು ಕಾದು ನಿಂತಿದ್ದ. ನಾನೂ ಹೋಗಿ ಅರ್ಭುತನ ಹೆಣ ನೋಡಿದೆ. ಅವನ ಮೈಮೇಲೆಲ್ಲಾ ಗಾಯವಾಗಿ ರಕ್ತ ಹರಿದು ಹೆಪ್ಪುಗಟ್ಟಿತ್ತು. ತಲೆ ವೇಗವಾಗಿ ಹೋಗಿ ಕಲ್ಲುಬಂಡೆಗೆ ಹೊಡೆದ ಪರಿಣಾಮ ಜೀವ ಹೋಗಿತ್ತು, ಸತ್ತ ಅರ್ಭುತನ ಕಣ್ಣಲ್ಲಿ ಅಪಾರವಾದ ವೇದನೆ ಮತ್ತು ಅಶ್ಚರ್ಯಗಳಿದ್ದವು.
  ಹೆಣವನ್ನು ನೋಡಿದ ಕಾಳಿ ಅಷ್ಟೇನು ದುಃಖಿಸಲಿಲ್ಲ. ಅಕ್ರೂರ ಹೆಣವನ್ನು ಕಂಡು ಕಣ್ಣೀರು ಹಾಕಿಯಾನು ಎನ್ನುವ ನನ್ನ ನಿರೀಕ್ಷೆ ಸುಳ್ಳಾದದ್ದು ಕಂಡು ನನಗೇ ಅಚ್ಚರಿಯಾಯಿತು. ಪೋಲಿಸರು ಪೋಸ್ಟ್‌ ಮಾರ್ಟಮ್ಮಿಗೆ ಹೆಣ ತೆಗೆದುಕೊಂಡು ಹೋಗುತ್ತೇವೆಂದಾಗಲೂ ಕಾಳಿ ಮಾತಾಡಲಿಲ್ಲ. ಪೋಲಿಸರು ಹೆಣವನ್ನು ತೆಗೆದುಕೊಂಡು, ಕಾಳಿಯನ್ನೂ ಕರೆದುಕೊಂಡು ಠಾಣೆಗೆ ಹೋದರು. ಊರಿನವರೆಲ್ಲಾ ಅಷ್ಟೊತ್ತಿಗಾಗಲೇ ಹೋಗಿಯಾಗಿತ್ತು. ಕವಿಯುತ್ತಿದ್ದ ಕತ್ತಲೆಯಲ್ಲಿ ನಾನು, ನನ್ನ ಸಹೋದ್ಯೋಗಿ ಮತ್ತು ಅಕ್ರೂರ ಮಾತ್ರ ನಿಂತಿದ್ದೆವು.
    ನಾನು ಅಕ್ರೂರನಿಗೆ ಧನ್ಯವಾದ ಹೇಳಿ, ಸಹೋದ್ಯೋಗಿಯೊಂದಿಗೆ ಮನೆಯತ್ತ ಹೊರಟೆ. ಕತ್ತಲಲ್ಲಿ ಅಕ್ರೂರನ ಮುಖದಲ್ಲಿ ಯಾವ ಭಾವನೆಯಿತ್ತೋ ತಿಳಿಯುವಂತಿರಲಿಲ್ಲ. ಬೆನ್ನು ಮಾಡಿ ಹೊರಟಿದ್ದ ನನ್ನನ್ನು ಅಕ್ರೂರ ಕರೆದು ನಿಲ್ಲಿಸಿದ. ಸಹೋದ್ಯೋಗಿಯ ಬಳಿ ಕಾಳಿಂಗನ ಮನೆಗೆ ಹೋಗಿ ಹೊರಡುವ ತಯಾರಿ ಮಾಡಿಕೊಳ್ಳುವಂತೆ ಹೇಳಿ ನಾನು ತಿರುಗಿ ಅಕ್ರೂರನ ಬಳಿ ಬಂದೆ. 
   ಅರ್ಭುತನನ್ನು ಪುಣ್ಯಕೋಟಿಯೇ ಕೊಂದಿರಬಹುದೆಂಬ ಅವನ ಶಂಕೆಯನ್ನು ಪೋಲಿಸರೂ ಗಂಭೀರವಾಗಿ ಪರಿಗಣಿಸುವಂತೆ ನಾನು ನನ್ನ ಪ್ರಭಾವವನ್ನು ಬಳಸಿ ಮಾಡಬೇಕೆಂದು ಕೇಳಿಕೊಂಡ. ನನ್ನ ಬಳಿ ಅಂತಹ ವಿಶೇಷ ಪ್ರಭಾವವೇನೂ ಇರದಿದ್ದರೂ ನಾನು ಆಗಲಿ ಎಂದೆ. ಬಹಳ ಹೊತ್ತಿನಿಂದ ಕೊರೆಯುತ್ತಿದ್ದ ಸಂಶಯವನ್ನು ಅಕ್ರೂರನಲ್ಲಿ ಕೇಳದೇ ಇರುವುದು ನನಗೆ ಸಾಧ್ಯವಾಗಲಿಲ್ಲ. ಆರ್ಭುತನ ಹೆಣ ನೋಡಿ ಒಂದು ಹನಿ ಕಣ್ಣೀರನ್ನು ಹಾಕಲಿಲ್ಲವಲ್ಲ ಯಾಕೆ? ನಿಮ್ಮ ನಡುವೆ ಇದ್ದದ್ದು ಯಾವ ಬಗೆಯ ಸ್ನೇಹ ಎಂದು ಕೇಳಿದೆ.
   ಕಾಳಿ, ಸತ್ತ ಅರ್ಭುತನ ಹೆಂಡತಿಯೇ ಕಣ್ಣೀರು ಹಾಕಲಿಲ್ಲ, ಇನ್ನು ನಾನು ಯಾಕೆ ಹಾಕಿಯೇನು? ಎಂದು ಕೇಳಿದನಾದರೂ ಅವನಿಗೆ ಇನ್ನು ಸುಮ್ಮನಿರುವುದು ಸಾಧ್ಯವಿಲ್ಲ ಎನಿಸಿರಬೇಕು. ಮುಂದುವರಿದು ಮಾತಾಡಿದ, 
 "ಅದನ್ನು ಹೇಳದೇ ಹೋಗುವುದು ನನಗೆ ಸಾಧ್ಯವಿಲ್ಲ ಎನಿಸುತ್ತದೆ, ನಿಜ ಹೇಳಬೇಕೆಂದರೆ ಇದನ್ನು ಹೇಳಲೆಂದೇ ಹೊರಟಿದ್ದ ನಿಮ್ಮನ್ನು ಮತ್ತೆ ಕರೆದೆ" ಇಷ್ಟು ಹೇಳಿ ಅವನೊಂದುಕ್ಷಣ ಸುಮ್ಮನಾದ. ಏನೋ ಬಹಳ ಗಂಭೀರವಾದ ವಿಷಯವನ್ನು ಹೇಳಲೆಂದು ಅವನು ಸಿದ್ಧನಾಗುತ್ತಿರುವುದು ಸ್ಪಷ್ಟವಿತ್ತು, ಸಿದ್ಧನಾಗಿ ಮೌನವನ್ನು ಮುರಿದು ಆಡಿದ, 
                                           "ಅರ್ಭುತ ಕಾಳಿಯನ್ನು ಮೊದಲಸಾರಿ ನೋಡಿದ್ದು ನನ್ನದೇ ನಿಶ್ಚಿತಾರ್ಥದಲ್ಲಾಗಿತ್ತು."

Sunday, January 7, 2024

ಉತ್ತರಕಾಂಡ - ಕೆಲವು ಟಿಪ್ಪಣಿಗಳು


ನಾಲ್ಕುವರೆ ವರ್ಷಗಳ ನಂತರದ ಮರು ಓದಿನ ಹೊತ್ತಿನಲ್ಲಿ ಉತ್ತರಕಾಂಡದ ಕುರಿತಾದ ಕೆಲವು ಟಿಪ್ಪಣಿಗಳಿವು.  ರಾಮನು ಮಹಾವಿಷ್ಣುವಿನ ಅವತಾರ ಸೀತೆ ಮಹಾಲಕ್ಷ್ಮಿಯ ಅವತಾರ ಎನ್ನುವ ಭಕ್ತಿಭಾವವನ್ನು ಕೆಲಹೊತ್ತು ಕಳಚಿಡದ ಹೊರತು ಈ ಟಿಪ್ಪಣಿಗಳಿಗೆ ಅರ್ಥ ಬರುವುದಿಲ್ಲ.


1. ಕೃತಜ್ಞತೆ ಯಲ್ಲಿ ಭೈರಪ್ಪ ಹೇಳುವಂತೆ ಉತ್ತರಕಾಂಡ ವಾಲ್ಮೀಕಿ ರಾಮಾಯಣವನ್ನಾಧರಿಸಿದ ಲೇಖಕನ ನೇರ ಸೃಜನಶೀಲ ಪ್ರತಿಕ್ರಿಯೆಯೇ ಹೊರತು ವಾಲ್ಮೀಕಿ ರಾಮಾಯಣದ re-telling ಅಲ್ಲ ಮತ್ತು ಈ ವ್ಯತ್ಯಾಸ ಸೂಕ್ಮ್ಮವಾದದ್ದು‌. ಈ ಪ್ರತಿಕ್ರಿಯೆ ಎನ್ನುವ ಶಬ್ಧ ನೇರ 'ಪರ್ವ' ಕಾದಂಬರಿಯನ್ನುದ್ದೇಶಿಸಿದ್ದು. ವಾಲ್ಮೀಕಿ ರಾಮಾಯಣಕ್ಕೆ parallel ಆದ ಕೃತಿಯೊಂದನ್ನೂ ನಿರ್ಮಿಸ ಬಹುದಾದ ಸೃಜನಶೀಲ ಸ್ವಾತಂತ್ರ್ಯಕ್ಕೆ ಭೈರಪ್ಪ ಕೃತಜ್ಞತೆ ಯಲ್ಲೇ ಅಡಿಗಲ್ಲು ಹಾಕಿಕೊಂಡಿದ್ದಾರೆ.


2. ಸುಕೇಶಿ ರಾಮನ ಕುರಿತು ಸೀತೆಯಲ್ಲಿ ಸದಾ ಒಳ್ಳೆಯ ಮಾತುಗಳನ್ನೇ ಆಡುತ್ತಾಳೆ. 'ಭಾವಯ್ಯ ಚಿನ್ನದಂಥ ಮನುಷ್ಯ, ಒಂದೆರಡು ವರ್ಷ ಸುಮ್ಮನಿರು. ಅವರೇ ಇಲ್ಲಿಗೆ ಬಂದು ನಿನ್ನನ್ನು ಕರಕೊಂಡು ಹೋಗ್ತಾರೆ ನೋಡು' ಎನ್ನುತ್ತಾಳೆ. 'ಅವರ ಸ್ವಭಾವ ನಿನಗೆ ಗೊತ್ತಿಲ್ಲ' ಎನ್ನುವ ಸೀತೆಯ ಪ್ರತ್ಯುತ್ತರದ ಹಿಂದಿರುವ, ಆತ ಚಿನ್ನದಂಥ ಮನುಷ್ಯ ಆಗಿರುವುದಕ್ಕೇ ತನಗೆ ಈ ಸ್ಥಿತಿ ಬಂದಿರುವುದು ಮತ್ತು ಅದೇ ಕಾರಣಕ್ಕಾಗಿಯೇ ಆತ ತನ್ನನ್ನು ಬಂದು ಕರಕೊಂಡು ಹೋಗುವುದಿಲ್ಲ ಎನ್ನುವ ಪ್ರಾಮಾಣಿಕ ಭಾವ ಸುಕೇಶಿಗೆ ತಿಳಿಯುವುದಿಲ್ಲ.


3. ರಾಮನು ಸೀತೆಯನ್ನು ತ್ಯಜಿಸುವ ಹೊತ್ತಿಗೆ ಉದ್ಭವಿಸುವ ಪರಿಸ್ಥಿತಿ ಬಹಳ ಗೋಜಲಿನದ್ದು. ಮನುಷ್ಯ ಸಹಜವಾಗಿ ನೋಡಿದರೆ ಅಲ್ಲಿ ಯಾರಲ್ಲೂ ತಪ್ಪನ್ನು ಹುಡುಕುವಂತಿಲ್ಲ. ರಾಮಾಯಣದ ಬರವಣಿಗೆಗೆ ಸ್ಪೂರ್ತಿಯಾದ ನಿಷಾದನು ಹಕ್ಕಿಯನ್ನು ಕೊಂದು ಗಂಡು ಮತ್ತು ಹೆಣ್ಣು ಹಕ್ಕಿಗಳನ್ನು ಬೇರ್ಪಡಿಸುವಂತೆ. ಇಲ್ಲಿ ವಿಧಿಯೇ ನಿಷಾದ ರೂಪದಲ್ಲಿ ಬಂದಿದೆ, ಹಾಗಾದರೆ ಇದು ನಿಷಾದನ ತಪ್ಪೇ ಎಂದರೆ ಅಲ್ಲ. ಹಾಗೂ ಬೇರ್ಪಡಿಸುವುದೇ ಅವನ ಕರ್ಮ. 

ರಾವಣನಂತಹ ರಾಕ್ಷಸನ ಅಧೀನದಲ್ಲಿದ್ದ ಸ್ತ್ರೀಯೊಬ್ಬಳು ದೈಹಿಕವಾಗಿ "ಪಾವಿತ್ರ್ಯ" ವನ್ನು ಉಳಿಸಿಕೊಂಡಿರಲು ಸಾಧ್ಯವೇ ಎಂಬ ಭಾವ ಜನಸಾಮಾನ್ಯರಲ್ಲಿ ಮೂಡುವುದು ಅಸಹಜವಲ್ಲ ಆದರೆ ಇದಕ್ಕೆ ರಾಮನ ಉತ್ತರ ಏನಿರಬೇಕಿತ್ತು? ಸೀತೆಯನ್ನು ಪರಿತ್ಯಜಿಸಿದರೆ ಏನರ್ಥ? ಜನರ ಮಾತನ್ನು ಪುರಸ್ಕರಿಸುವುದು ಬೇರೆ ಒಪ್ಪುವುದು ಬೇರೆ. ಇದನ್ನು ರಾಮ ಏಕೆ ಮರೆತ? ಸೀತೆಯನ್ನು ಮನಸಾ ಒಪ್ಪಿ ಗೌರವಿಸುತ್ತಿದ್ದ ಇನ್ನುಳಿದ ಪ್ರಜೆಗಳ ಭಾವನೆಗೆ ಬೆಲೆ ಇಲ್ಲವೆ?


4. "ನಿನಗೆ ರಾಮನ ಮೇಲೆ ಇದ್ದಷ್ಟು ಪ್ರೀತಿ ನನಗೆ ಲಕ್ಷ್ಮಣನ ಮೇಲೆ ಇರಲಿಲ್ಲವೇನೋ" ಎನ್ನುತ್ತಾಳೆ ಊರ್ಮಿಳೆ. ಆದರೆ, ಅವರಿಬ್ಬರ ಗಂಡಂದಿರ ಮೂಲ ಗುಣಗಳಲ್ಲೇ ಹೋಲಿಕೆ ಮಾಡಲಾರದಂತಹ ವ್ಯತ್ಯಾಸಗಳಿವೆ. ಇದೇ ವಾಕ್ಯವನ್ನೇ ಆಧಾರವಾಗಿಟ್ಟುಕೊಂಡಾಗ ಇನ್ನೊಂದು ಪ್ರಶ್ನೆ ಹುಟ್ಪುತ್ತದೆ. ಲಕ್ಷ್ಮಣನಿಗೆ ಊರ್ಮಿಳೆಯಲ್ಲಿರುವಷ್ಟು ಪ್ರೀತಿ ರಾಮನಿಗೆ ಸೀತೆಯಮೇಲಿರಲಿಲ್ಲವೇನೋ!


5. ಲಕ್ಷ್ಮಣನಿಗೆ ರಾಮನ ನಿರ್ಧಾರದ ಮೇಲೆ ಕೋಪವಿದೆ. ಆದರೆ, ಅದನ್ನು ವಿರೋಧಿಸುವ ಮತ್ತು ಆ ವಿರೋಧವನ್ನು ವ್ಯಕ್ತಪಡಿಸುವ ಸಾಮರ್ಥ್ಯ ಇಲ್ಲ. ರಾಮನ ಕುರಿತಾಗಿ ಅವನಲ್ಲಿರುವ ವಿಪರೀತ ಭಕ್ತಿ, ಗೌರವಗಳೂ ಅದಕ್ಕೊಂದು ಕಾರಣ ಇರಬಹುದು. ಲಕ್ಷ್ಮಣ ಅಯೋಧ್ಯೆಯನ್ನು ತೊರೆದದ್ದು ರಾಮನ ಮೇಲಿನ ಬೇಸರಕ್ಕಿಂತಲೂ, ರಾಮನನ್ನು, ಅವನ ನಿರ್ಧಾರವನ್ನು ಎದುರಿಸಲಾದ ತನ್ನ ಅಸಹಾಯಕತೆಯ ಮೇಲಿನ ಸಿಟ್ಟಿನಿಂದ ಮತ್ತು ಅಂತಹ ಅಸಹಾಯಕತೆಯನ್ನು ಸೃಷ್ಟಿಸುತ್ತಿರುವ ಬಂಧನಗಳ ಮೇಲಿನ ಸಿಟ್ಟಿನಿಂದ.


6. "ಪೆದ್ದಿ ನಿನಗೆ ಯಾವಾಗ ಅರ್ಥ ಆಗುತ್ತೆ? ಭಾರ ಹೊತ್ತು, ನೋವು ಉಂಡು, ಎದೆಯ ಶಕ್ತಿಯನ್ನು ಉಣ್ಣಿಸಿ ಸಾಕೋದೇ ಹೆಣ್ಣಿನ ಕರ್ತವ್ಯ, ಅಧಿಕಾರ ಅಪ್ಪನದು ಅಂತ ಶಾಸ್ತ್ರ ಹೇಳುತ್ತೆ, ಅವುಗಳ ಅಪ್ಪ ಬಿಟ್ಟಾನೆಯೇ?" - ಊರ್ಮಿಳೆ.


7. ಗೌತಮರು ಅಹಲ್ಯೆಯನ್ನು ತಾವು ಯಾರ ಎದುರಿನಲ್ಲಿ ತಜಿಸಿದ್ದರೋ ಅವರೆದುರಲ್ಲಿಯೇ ಸ್ವೀಕರಿಸಬೇಕೆಂದು ರಾಮ ಹೇಳುತ್ತಾನೆ. ಅಹಲ್ಯೆಯ ಪಾವಿತ್ರ್ಯವನ್ನು ಅಂಗೀಕರಿಸುವ ಸ್ಥಾನದಲ್ಲಿ ನಿಂತು ಗೌತಮರ ಲೋಕಕ್ಕೆ ಆಕೆಯನ್ನು ಸ್ವೀಕರಿಸುವುದಾಗಿ ಹೇಳಿದರೆ ಅವಳ ತಪ್ಪಿನ ಹೊರತಾಗಿಯೂ ಶುದ್ಧಿ ದೊರಕುತ್ತದೆ. ಎಂದರೆ, ಪಾತಿವ್ರತ್ಯದಂತಹ ವಿಚಾರದ ಕುರಿತು ಪ್ರಪಂಚ ಏನೇ ಮಾತಾಡಿದರೂ ಅದು ದಂಪತಿಗಳ ನಡುವಣ ವಿಚಾರ. ಪತಿಯಾದವನೇ ಪತ್ನಿಯನ್ನು ಒಪ್ಪಿದ ಮೇಲೆ ಪ್ರಪಂಚವೂ ಒಪ್ಪಬೇಕು.


ಇವು ಓದುತ್ತಾ ಅದರೊಟ್ಟಿಗೆ ನಾನು ಮಾಡಿಕೊಂಡ ಟಿಪ್ಪಣಿಗಳು. ಇದರ ನಂತರ ಓದುತ್ತಾ ಒಟ್ಟಿಗೇ ಹೀಗೆ ಬರೆಯುವುದು ಓದಿನ ಪೂರ್ಣಾನುಭವವನ್ನು ಕೊಡುವುದಿಲ್ಲ ಎಂದು ಹೀಗೆ ಟಿಪ್ಪಣಿ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ.

 

ಕಾದಂಬರಿಯನ್ನು ಪೂರ್ತಿ ಓದಿ ಮುಗಿಸುವ ಹೊತ್ತಿಗೆ ಲಕ್ಷ್ಮಣ ಮನಸ್ಸನ್ನು ಆವರಿಸಿಕೊಳ್ಳುತ್ತಾನೆ. ನಾನು ಓದಿದ ಕನ್ನಡ ಕಾದಂಬರಿಗಳಲ್ಲಿ ನನ್ನ ಮೆಚ್ಚಿನ ಪಾತ್ರ ಉತ್ತರಕಾಂಡದ ಲಕ್ಷ್ಮಣ. ನಿಜವಾಗಿಯೂ ಲಕ್ಷ್ಮಣ ಎಂಬುವವನಿದ್ದರೆ ಅವನು ಇಂತವನೇ ಆಗಿದ್ದನಿರಬೇಕು. 


ರಾಮನನ್ನು ಹುಡುಕ ಹೊರಟಾಗ ಸೀತಿಯಿಂದ ಅವನೆದುರಿಸಿದ ಭರ್ತ್ಸನೆಯ ನುಡಿಗಳು, ಸೀತೆಯನ್ನು ಬಿಟ್ಟು ಬಂದುದಕಾಗಿ ಆತ ರಾಮನಿಂದ ತಲೆ ಬಗ್ಗಿಸಿಕೊಂಡು ಕೇಳಿದ ಮಾತುಗಳು, ಅಗ್ನಿ ಪ್ರವೇಶಕ್ಕೆ ಹೊರಟ ಸೀತೆಯ ರಟ್ಟೆ ಹಿಡಿದು ರಾಮನ ಕುರಿತು ಅವನಾಡುವ ಮಾತುಗಳು, ಸೀತೆಯನ್ನು ವಾಲ್ಮೀಕ್ಯಾಶ್ರಮಕ್ಕೆ ಬಿಟ್ಟು ಬಂದಮೇಲೆ ಅವನು ತೆಗೆದುಕೊಂಡ ನಿರ್ಧಾರಗಳು ಒಂದೊಂದೂ ಕೇವಲ ಕಲ್ಪನೆಯಲ್ಲಿ ಮಾತ್ರ ಸಾಧ್ಯ ಎನ್ನಿಸುವಂತವು. 



Sunday, September 10, 2023

ಈ ಕ್ಷಣದ ಕವಿತೆ ೧

ಅದು,
ನಡು ರಾತ್ರಿಯಲ್ಲಿ ಯಾವುದೋ
ಹಳೆಯ ಹಾಡಿನ ಎರಡನೇ ಸಾಲು 
ನೆನಪಾದಂತೆನೀವು 
ತಾಸುಗಟ್ಟಲೆ ತಲೆಯಲ್ಲೇ 
ಹುಡುಕುತ್ತೀರಿ, ಊಹ್ಞೂಂ

ಯಾವುದೋ ಗಡಿಬಿಡಿಯ 
ಗಲಿಬಿಲಿಯಲ್ಲಿ
ಮೊದಲು ಸಾಲು ಧುತ್ತನೆ
ಸಾಕ್ಷಾತ್ಕಾರವಾಗುತ್ತದೆ
ಎರಡು, ಮೂರನೇ ಸಾಲು
ಅಸ್ಪಷ್ಟ ಎನಿಸಿದರೂ
ನಿಮಗೆ ಜ್ಞಾನೋದಯದ ಸಂತಸ

ಒಂದರಘಳಿಗೆಯಷ್ಟೇ
ಸಂತೆಯಲ್ಲಿ ಮಗನನ್ನು ಕಳೆದುಕೊಂಡಂತೆ
ಅದರ ರಾಗಕ್ಕಾಗಿ ತಡಕಾಡುತ್ತೀರಿ
ಗಂಟಲಲ್ಲಿರುವ ಕೆಲವು ಅಸ್ಪಷ್ಟ, ಪರಿಚಿತ
ಟ್ಯೂನುಗಳ ಜೊತೆ, 
ಹೊಸಹಾಡನ್ನು ಮಲಗಿಸಿ 
ತಾಳೆಮಾಡುತ್ತೀರಿ
ಊಹ್ಞೂಂ.

ಕೊನೆಯುಸಿರಿನ ಘಳಿಗೆಯಲ್ಲೂ
ನಿಮಗದರ ರಾಗ ಹೊಳೆದೀತು
ಆದರೆ,
ಅದನ್ನು ಹಾಡಿದವರಾರು?

ಈ ಕ್ಷಣದ ಕವಿತೆ ೨

ಅವಳ ಕಣ್ಣುಗಳಲ್ಲಿ
ವೈಶಾಖ ಸೋರಗುತ್ತದೆ
ಬಾಯಾರಿದ ಒಣ ಭೂಮಿಯಂತೆ
ನಾನು ಆಕಾಶ ನೋಡುತ್ತೇನೆ
ಅವಳ ಕಣ್ರೆಪ್ಪೆ ಅಡ್ಡಬರುತ್ತದೆ

ಕ್ರೂರ ಮೇ ಬಿಸಿಲು ಫಳಫಳಿಸುತ್ತದೆ
ಅವಳ ಕಣ್ಣುಗಳಲ್ಲದು ಪ್ರತಿಫಲಿಸುತ್ತದೆ
ಅವಳು ಸೂರ್ಯನನ್ನು ನೆಟ್ಟ ಕಂಗಳಲ್ಲಿ
ನೋಡಿ ಅಣಕಿಸುತ್ತಾಳೆ

ನಾನು ಅವಳನ್ನು ನೋಡುತ್ತಾ
ಬೆವರೊರೆಸಿಕೊಳ್ಳುತ್ತೇನೆ
ಅವಳು ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ,
ಮತ್ತೆ ವೈಶಾಖದ ಸುಡುಬಿಸಿಲು
ನನ್ನಮೇಲೆ ದಾಳಿಯಿಡುತ್ತದೆ

ನಾನು ಮರಳಿನ ಮೇಲೇನೋ 
ಬರೆಯಬೇಕೆಂದುಕೊಳ್ಳುತ್ತೇನೆ,
ಅವಳು ಕೋಪಿಸಿಕೊಳ್ಳುತ್ತಾಳೆ
ಅರೆಕ್ಷಣ,
ಇಬ್ಬರಿಗೂ ಜ್ಞಾನೋದಯವಾಗುತ್ತದೆ
ಅವಳು ಬರೆಯಲು ಹೇಳುತ್ತಾಳೆ
ನಾನು ಬರೆಯುವುದಿಲ್ಲ.

ಈ ಕ್ಷಣದ ಕವಿತೆ ೩

ವೈಶಾಖದ ಮಳೆ
ಮಳೆಗಾಲದ ನೆನಪುಗಳ ಎಚ್ಚರ ಅದು
ಇದು ದೊಡ್ಡ ಹನಿಯೋ ಸಣ್ಣ ಹನಿಯೋ ತಿಳಿಯದಂಥ ದ್ವಂದ್ವ
ಕಳೆದ ಮಳೆಗಾಲಗಳ ಅಸ್ಪಷ್ಟ ಪ್ರತಿನಿಧಿ

ವೈಶಾಖದ ಮಳೆ
ಹಸಿಮೆಣಸು ತಿಂದಾಗ ಸಿಕ್ಕ ಸಿಹಿನೀರು
ಅದು ಆರ್ದ್ರ
ಅದೊಂದು ಸಚಿತ್ರ ವಿಸ್ಮಯ

ವೈಶಾಖದ ಮಳೆ
ಒಂದು ಬಿಡುಗಡೆಯ ಆಸೆ
ಅದು ತೀರಲು ಶುರುವಾದ ಆದರೆ ತೀರದ ದಾಹ

ವೈಶಾಖದ ಮಳೆ 
ಸುಡುವ ನಡು ಮಧ್ಯಾಹ್ನಗಳಿಂದ ನಮ್ಮನ್ನೊಂದುಕ್ಷಣ ಕಾಯುವ
ಆದರೆ ಮತ್ತದೇ
ಬೇಗೆಯ ಪ್ರಪಂಚಕ್ಕೆ ದೂಡಿ ಓಡಿಹೋಗುವ ನಿರ್ದಯ ಕ್ರೂರಿ