Sunday, September 10, 2023

ಈ ಕ್ಷಣದ ಕವಿತೆ ೬

ನನ್ನ ಬಳಿ ಒಂದು 
ಕವಿತೆಯಿದೆ.
ಬಹಳ ಇಷ್ಟದಲ್ಲಿ
ಸಾಕಿ ಬೆಳೆಸಿದ ಕವಿತೆಯದು.

ಸೆಖೆಗಾಲದಲ್ಲಿ
ಅಚಾನಕ್ಕು ಮಳೆಯಾದಾಗ,
ಮರಳಮೇಲೆ ಕುಳಿತು
ತಾಸುಗಟ್ಟಲೆ
ಅಲೆಗಳು ಒಂದಾದಮೇಲೊಂದು
ಬಂದುಹೋಗುವುದನ್ನು ಕಾಣುವಾಗ,
ಕಣ್ಮುಚ್ಚಿ ಮುಲ್ತಾನಿಯಲ್ಲೋ, ಶುದ್ಧ ಕಲ್ಯಾಣದಲ್ಲೋ ಕಳೆದುಹೋದಾಗ,
ಮಳೆಗಾಲ ಕಳೆದ 
ಶುಭ್ರಮುಗಿಲಿನ ನಗು ಕಂಡಾಗ,
ಆಕೆ ನಿರಾಯಾಸವಾಗಿ
ಕೂದಲನ್ನು ಮೇಲಕ್ಕೆತ್ತಿ ಗಂಟಿಕ್ಕಿ
ನಕ್ಕಾಗ,
ಹೀಗೆ ಆಗಾಗ 
ಅದು ಇಂಚಿಂಚು ಬೆಳೆದು
ಚಂದವಾಗಿದೆ.

ನನ್ನಬಳಿ ಒಂದು ಚಂದದ
ಕವಿತೆಯಿದೆ
ಹಳೆಗಾಲದ ಕಥೆಗಳ ಹಾಗೆ
ಏಳು ಸುತ್ತಿನ ಕೋಟೆಯೊಳಗಿನ
ಪಂಜರದಲ್ಲಿ ಮಾಂತ್ರಿಕನ
ಜೀವದ ಗುಟ್ಪು ಇರುವಹಾಗೇ
ಈ ಕವಿತೆಯೊಳಗೇ 
ನನ್ನ ರಹಸ್ಯವಿದೆ

ನನ್ನ ಬಳಿ ಒಂದು 
ಕವಿತೆಯಿದೆ
ಆದರೆ
ನಾನದನ್ನು ಯಾರಿಗೂ
ಕೊಡಲಾರೆನಷ್ಟೇ.

ಈ ಕ್ಷಣದ ಕವಿತೆ ೪

ಅವಳು
ಬೆವರೇಳಿಸುವ ಮುಲ್ತಾನಿ
ಮೈಮರೆಸುವ ಕಲ್ಯಾಣಿ
ಆವರಿಸಿಕೊಳ್ಳುವ ಶುದ್ಧ ಕಲ್ಯಾಣ
ಪ್ರವಹಿಸುವ ಜೋಗ
ನಿದ್ರೆ ಕಸಿಯುವ ಮಾಲಕೌಂಸ
ಬಡಿದೆಬ್ಬಿಸುವ ತೋಡಿ
ಭಾವದಲ್ಲಿ ಮುಳುಗಿಸುವ ಭೈರವಿ
ಅವಳು

Thursday, July 6, 2023

ಈ ಕ್ಷಣದ ಕವಿತೆ ೫




ಕೆಲವೊಮ್ಮೆ ಕವಿತೆಗಳು
ಕೈಮೀರಿ ಬೆಳೆಯುತ್ತವೆ
ಶಬ್ಧಗಳು ಕೈಗೆ ಸಿಗದಂತೆ
ತಪ್ಪಿಸಿಕೊಂಡು ಒಮ್ಮೆಲೇ
ಧುತ್ತನೆ ಪ್ರತ್ಯಕ್ಷವಾಗಿ ಅಣಕಿಸುತ್ತವೆ.

ಒಮ್ಮೊಮ್ಮೆ, ಅವು
ವಿಪರೀತ ಅನರ್ಥಗಳನ್ನು ಕೊಟ್ಟು ಕಾಡುತ್ತವೆ
ಇನ್ನು ಕೆಲವೊಮ್ಮೆ, ಅರ್ಥವನ್ನೇ ಅಡಗಿಸಿಟ್ಟು
ಉಸಿರುಕಟ್ಟಿಸುತ್ತವೆ

ಒಂದೊಂದೇ ಅಕ್ಷರಗಳು
ಸಾಲುಹಚ್ಚಿ
ಬೆರಳುಗಳಮೇಲೆ ನಿಂತು
ಕಾಯತೊಡಗುತ್ತವೆ
ಜೀವಾವದಿ ಶಿಕ್ಷೆಯಿಂದ ಇನ್ನೇನು ಹೊರಬೀಳುತ್ತಿರುವ ಖೈದಿಯಂತೆ ಚಡಪಡಿಸುತ್ತವೆ
ಯಾರಬಗ್ಗೆಯೋ ಏನೊ!

ನನ್ನ ಕವಿತೆ ನಿಮ್ಮ ಕಣ್ಣಿಗೆ ಕಾಣುವುದಿಲ್ಲ,
ಅವನ್ನು ನನ್ನ ಕಣ್ಣಿನಿಂದ ಓದಿದ ದಿನ ನಿಮಗೆ ದೃಷ್ಟಿ ಬರುತ್ತದೆ.

Sunday, June 26, 2022

ಪ್ರಿಯೆ ವಸುಂಧರೆ

 

ಆ ದಿನವೂ ಇಂಥದ್ದೇ ಮಳೆ. ಹೀಗೇ, ಭೂಮಿ ಆಕಾಶ ಒಂದಾಗಿ ಮಳೆ ಬಿದ್ದಿತ್ತು. ಈ ತೊರೆಯೂ ಹೀಗೇ ಹರಿಯುತ್ತಿತ್ತು.
       ಅವಳಿಗೂ ಮಳೆ ಎಂದರೆ ಎಂಥದ್ದೋ ಹುಚ್ಚು. ಹೊರಗೆ ಸಣ್ಣ ಮಳೆ ಬೀಳಲು ಶುರುವಾಗಿ ಅದು ತಾರಕಕ್ಕೇರಿದಂತೆಲ್ಲಾ ಆಕೆ ಸಣ್ಣ ಮಗುವಾಗಿಬಿಡುವವಳು. ಹತ್ತನೇ ಮಹಡಿಯ ಆಫೀಸಿನ ಗಾಜಿನ ಕಿಟಕಿಗಳ ಬಳಿ ಹೋಗಿ ಮಳೆ ಸುರಿಯುವುದನ್ನು ಕಾಣುತ್ತಾ ಆಕೆ ಕಳೆದು ಹೋಗುತ್ತಿದ್ದಳು ಒಮ್ಮೊಮ್ಮೆ ತುಂತುರು ಅಲ್ಲಿ ನೀರ ಹಾಡು... ಅಂತ ಗುನುಗುನಿಸುತ್ತಿದ್ದಳು. ಆ ಸಂತೋಷದಲ್ಲೇ ಕಾಲ ಅನಂತವಾಗಿ ಅವಳನ್ನು ತೋಯಿಸುತ್ತಿತ್ತು. ಅವಳು ವಸುಂಧರೆ.
       ನಾನು ಆಕೆ ಒಂದೇ ದಿನ ಒಂದೇ ಕೆಲಸಕ್ಕೆ ಸೇರಿದ್ದೆವು. ಮೊದಲ ದಿನವೇ ನನಗೆ ಅವಳು ಹಿಡಿಸಿದ್ದಳು‌. ಆ ಮೆಚ್ಚುಗೆ ಬರುಬರುತ್ತಾ ಪ್ರೀತಿಯಾಗಿ ಬದಲಾಗಿತ್ತು. ಅವಳು ಸುರಿಯುವ ಮಳೆಯನ್ನು ನೋಡುತ್ತಿದ್ದರೆ ನಾನು ಅವಳ ಕಣ್ಣಿನಲ್ಲಿ ಮಳೆಯ ಬಿಂಬವನ್ನು ನೋಡುತ್ತಿದೆ.
       ಏಳು ವರ್ಷ ನಮ್ಮ ನಡುವೆ ಮಾತು ಕೆಲಸದ ಹೊರತಾಗಿ ಬೆಳೆದಿರಲಿಲ್ಲ‌. ಏಳನೇಯ ವರ್ಷ ಆಕೆ ಕೆಲಸ ಬದಲಾಯಿಸುವ ತೀರ್ಮಾನಕ್ಕೆ ಬಂದಳು. ಆಕೆ ಬಿಟ್ಟು ಹೋಗುವ ಕೊನೆಯ ದಿನ ನಾನಾಕೆಯ ಬಳಿ ಮೊದಲು ಮಾತಾಡಿದ್ದೆ. ಐ ಲವ್ ಯೂ, ಡುಯು ಲವ್ ಮೀ?
       ಉತ್ತರ ಹೇಳದೇ ಹೊರಟು ಹೋದ ವಸುಂಧರಾ ನೆನಪು ಮಾತ್ರ ಆಗಿ ಹೋಗುವವಳಿದ್ದಳು. ಒಂದು ತಿಂಗಳ ನಂತರ ಅವಳಿಂದ ಒಂದು ಮೆಸೇಜ್ ಬಂತು. ವಿಲ್ ಯು ಮ್ಯಾರಿ ಮೀ?
       ಮದುವೆ ಆಯಿತು.

ನಮ್ಮ ಕೆಲಸದ ಸ್ಥಳಗಳು ಒಂದು ದಕ್ಷಿಣದ ತುದಿಗೆ ಮತ್ತೊಂದು ಉತ್ತರದ ತುದಿಗೆ. ನಾನು ಬೆಳಿಗ್ಗೆ ಬೇಗ ಹೊರಟುಬಿಡುತ್ತಿದ್ದೆ. ಆಕೆ ರಾತ್ರಿ ಬರುವುದು ತಡವಾಗುತ್ತಿತ್ತು. ಶನಿವಾರ ಬಂತೆಂದರೆ ಮಾತ್ರ ನಮಗೆ ಸಮಯ ಸಾಲುತ್ತಿರಲಿಲ್ಲ. ಮಾತು ಮಾತು ಮಾತು.
      ಹೀಗೆ ಐದು ವರ್ಷ ಕಳೆಯಿತು. ಒಂದು ದಿನ ವಸುಂಧರಾ ಬಹಳ ಗಂಭೀರ ಪ್ರಶ್ನೆ ಕೇಳಿದಳು. ಎಷ್ಟು ವರ್ಷ ಹೀಗೆ ವೀಕೆಂಡ್ ಪತಿ ಪತ್ನಿಯರಾಗಿ ಇರೋದು? ನನ್ನನ್ನೂ ಈ ಪ್ರಶ್ನೆ ಕಾಡಿತ್ತು. ಆದರೆ ವೃತ್ತಿ ಜೀವನದಲ್ಲಿ ಯಾವುದೇ ಬದಲಾವಣೆಯ ನಿರ್ಧಾರ ಸುಲಭ ಇರಲಿಲ್ಲ. ಈ ಪ್ರಶ್ನೆ ತಲೆಯಲ್ಲಿ ಕೊರೆಯುತ್ತಲೇ ಮತ್ತೊಂದು ವರುಷ ಕಳೆಯಿತು.
      ಯಾವುದೇ ನಿರ್ಧಾರವನ್ನು ಸಾಕಷ್ಟು ಸಮಯ ತೆಗೆದುಕೊಂಡು ಮಾಡುವ ವಸುಂಧರಾ ಆ ದಿನ ನಿರ್ಣಯದ ಸ್ವರದಲ್ಲಿ ಹೇಳಿದಳು. ಹದಿಮೂರು ವರ್ಷಗಳ ದುಡಿಮೆ ಕೈಯಲ್ಲಿದೆ. ಈ ಬದುಕು ಸಾಕು. ಹೊಸದೊಂದು ಬದುಕು ಪ್ರಾರಂಭ ಮಾಡೋಣ ಎಂದಳು. ಅವಳ ಅಪ್ಪನ ಊರಿನಲ್ಲಿ ಒಂದು ಜಮೀನು ಕೊಂಡು ಕೃಷಿ ಮಾಡೋಣ ಎಂದಳು. ಒಮ್ಮೆಗೇ ಇದು ಹುಚ್ಚಾಟ ಅಂತ ಕಂಡಿತು. ಆದರೆ ವಸುಂಧರಾ ಒಂದು ವರ್ಷ ಯೋಚಿಸಿ ತೆಗೆದುಕೊಂಡ ನಿರ್ಧಾರ ಅದು. ಕಡೆಗೂ ನಾನು ಒಪ್ಪಬೇಕಾಯಿತು. 
      ಒಂದು ಭಾನುವಾರ ಅವಳ ಅಪ್ಪನ ಹಳ್ಳಿಗೆ ಹೋಗಿ ಒಂದು ಚೆಂದದ ತೋಟ ನೋಡಿದೆವು. ಎರಡೆಕರೆ ತೋಟ. ಪಕ್ಕದಲ್ಲೊಂದು ಸುಮಾರು ದೊಡ್ಡದೇ ಆದ ತೊರೆ ಇತ್ತು. ವಸುಂಧರೆಗೆ ತೋಟ ಹಿಡಿಸಿತ್ತು‌. ನನಗೂ ಮೆಚ್ಚುಗೆ ಆಗಿತ್ತು. ಅದನ್ನೇ ಕೊಳ್ಳುವ ತೀರ್ಮಾನ ಮಾಡಿದೆವು.
      ವೃತ್ತಿ ಜೀವನವನ್ನು ಸಂಪೂರ್ಣ ವಾಗಿ ಮುಕ್ತಾಯ ಮಾಡಿ ನಾವು ಕೊಂಡ ಜಮೀನಿಗೆ ಹಿಂತಿರುಗಲು ಎರಡು ತಿಂಗಳು ಹಿಡಿದಿತ್ತು.

   ಆ ದಿನ ಗೃಹಪ್ರವೇಶ. ಅವಳ ಮನೆಯವರು ನನ್ನ ನೆಂಟರು ಎಲ್ಲರೂ ಬಂದು ಹೋದರು. ಸಂಜೆ ನಾನು ಮತ್ತು ಅವಳು ಇಬ್ಬರೇ. ಬದುಕಿನ ಸುಂದರ ಕನಸುಗಳನ್ನು ಹಂಚಿಕೊಳ್ಳುತ್ತಾ ತೋಟದ ಬದಿಯ ತೊರೆಯ ಬಳಿ ಹೋದೆವು. ಅವಳೀಗ ಕೃಷಿಯಲ್ಲಿ ಬಹಳ ಆಸಕ್ತಿ ತಾಳಿಬಿಟ್ಟಿದ್ದಳು. 
   ಆ ದಿನವೂ ಇಂಥದ್ದೇ ಮಳೆ. ಹೀಗೇ, ಭೂಮಿ ಆಕಾಶ ಒಂದಾಗಿ ಮಳೆ ಬಿದ್ದಿತ್ತು. ಈ ತೊರೆಯೂ ಹೀಗೇ ತುಂಬಿ ಹರಿಯುತ್ತಿತ್ತು.
    ತೊರೆ ಪಕ್ಕ ನಿಲ್ತೀನಿ ಫೋಟೋ ತೆಗಿಯೋ ಅಂತ ಪೀಡಿಸಿದಳು. ನಾನು ಒಂದೆರಡು ಫೋಟೋ ತೆಗೆದೆ. ಅವಳಿಗದು ಹಿಡಿಸಲಿಲ್ಲ. ನಿಂಗೆ ಫೋಟೊಗ್ರಫಿಯ ಗಂಧಗಾಳಿ ಇಲ್ಲ ಅಂತ ಬೈಯ್ದಳು. ನನಗೂ ಸ್ವಲ್ಪ ಅಭಿಮಾನ ಕೆಣಕಿ ಈಗ ನಿಲ್ಲು, ಹೇಗೆ ತೆಗೀತೀನಿ ನೋಡು ಅಂದೆ. ನಿಲ್ಲಿಸಿ ಒಂದು ಫೋಟೋ ತೆಗೆದು ಹೇಗೆ ಬಂದಿದೆ ಅಂತ ಮೊಬೈಲು ಸ್ಕ್ರೀನು ನೋಡಿದೆ ಹಿಂದಿನ ತೊರೆಯ ಸಮೇತ ಫೋಟೋ ಚೆಂದಕ್ಕೆ ಬಂದಿತ್ತು. ಇದು ನೋಡೇ.... ಅಂತ ಅವತ್ತು ತಿರುಗಿದರೆ ಅವಳಿಲ್ಲ. ವಸುಂಧರಾ ಎಂದು ಕೂಗುತ್ತಾ ಹತ್ತಿರ ಓಡಿದೆ, ಅವಳ ಪ್ರೀತಿಯ ತೊರೆ ಅವಳನ್ನು ಅಪ್ಪಿಕೊಂಡು ಕರೆದೊಯ್ಯುತ್ತಿತ್ತು.
     ಮತ್ತೊಂದು ವಸುಂಧರೆಯ ಮಡಿಲಿಗೆ ನನ್ನನ್ನು ಹಾಕಿ ದೂರವಾಗಿಹೋದಳು ಪ್ರಿಯೆ ವಸುಂಧರೆ.
    

Friday, February 11, 2022

ತಲೆ ಬುಡ ಇಲ್ಲದ ಕೆಲವು ಕಥೆಗಳು

  ಒಂದು ಕತೆ ಪುಸ್ತಕ ಬರೆದು ಅದನ್ನ ಪ್ರಕಟನೆ ಮಾಡಬೇಕು ಅನ್ನುವ ಹುಚ್ಚು ನನ್ನದು, ಬೇಕಾಗುವಷ್ಟು ಕತೆಗಳೂ ಇದ್ದವು. ಅವನ್ನು ಬರೆಯಲು ಮಾತ್ರ ಸಾಧ್ಯ ಆಗುತ್ತಿರಲಿಲ್ಲ. ಬರೆಯಬೇಕು ಅಂತ ಎಷ್ಟು ಅದುಕೊಂಡರೂ ಬೇರೆ ಯಾವುದೋ ಕೆಲಸ ಬಂದುಬಿಡುತ್ತಿತ್ತು. ಹೀಗೆ ಬರೆಯುವುದನ್ನು ಪ್ರಾರಂಭಮಾಡಿ, ಅರ್ಧದಲ್ಲೆ ಬಿಟ್ಟು ಅದನ್ನು ಮರೆತೇಹೊದದ್ದು ಎಷ್ಟುಬಾರಿಯೋ! ಕಡೆಗೂ ಒಂದು ನಿರ್ಧಾರಕ್ಕೆ ಬಂದೆ. ಪೇಟೆಯಿಂದ ದೂರದಲ್ಲಿ ನನ್ನ ಸಂಬಂಧಿಕರೊಬ್ಬರ ಮನೆಯೊಂದಿತ್ತು. ಆಗಾಗ ಅವರ ಮನೆಗೆ ಹೋಗು ಬರುತ್ತಿದ್ದೆ, ಒಂದು ಸಾರಿ ಹೋದಾಗ ಇಲ್ಲಿ ಒಂದು ನಾಲ್ಕು ದಿನ ಉಳಿದರೆ ನನ್ನದೂ ಒಂದು ಪುಸ್ತಕ ಬರುತ್ತದೆ ಎಂದೆನಿಸಿತು. ಅಲ್ಲಿನ ಪರಿಸ್ಥಿತಿ ಹಾಗಿತ್ತು. ಮುಖ್ಯವಾಗಿ ಯಾವುದೇ ಮೊಬೈಲಿನ ನೆಟ್ವರ್ಕು ಇರಲಿಲ್ಲ, ವಾತಾವರಣವೂ ಹಾಗಿತ್ತು. ಹಾಗಾಗಿ ಅಲ್ಲಿ ಹೋಗಿ ಉಳಿಯಲು ನಿಶ್ಚಯಿಸಿ ಒಂದು ಮುಹೂರ್ತವನ್ನೂ ಇಟ್ಟೆ.
       ಆರಿಸಿಕೊಂಡ ದಿನದಂದು ಅಲ್ಲಿಗೆ ಹೋದೆ. ಸುಂದರವಾದ ಜಾಗ ಅದು. ತೋಟದ ಮಧ್ಯದಲ್ಲಿ ಮನೆಯಿತ್ತು. ಮನೆಯಿಂದ ಸ್ವಲ್ಪ ಕೆಳಗೆ ಒಂದು ಹೊಳೆ. ಎಲ್ಲಾ ಕಾಲದಲ್ಲೂ ನೀರು ಹರಿಯುವ ಹೊಳೆ ಅದು. ಇನ್ನು ಮೇಲೆ ಹತ್ತಿದರೆ ವಿಶಾಲವಾದ ಕಾಡಿತ್ತು. ಮನೆಯ ಯಜಮಾನ ಸದಾಕಾಲ ತೋಟದಲ್ಲಿ ಕೆಲಸಮಾಡುವ ಕೃಷಿಕ. ಅವನ ಹೆಂಡತಿ ರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದಳು.
       ಕಥೆ ಬರೆಯುವ ಹುಮ್ಮಸ್ಸಿನಲ್ಲಿ ಅಲ್ಲಿ ಹೋಗಿದ್ದೆ ನಿಜ ಆದರೆ ಬರೆಯಲು ಮಾತ್ರ ಸಾಧ್ಯವಾಗಲಿಲ್ಲ. ಈಗ ಬರೆಯಬೇಕು, ಆಗ ಬರೆಯಬೇಕು ಎಂದುಕೊಂಡು ಪುಸ್ತಕ ಪೆನ್ನು ತೆಗೆದು ಮಡಸಿಡುವುದೇ ಆಗುತ್ತಿತ್ತು. ಬರೆಯಬೇಕು ಎಂದುಕೊಳ್ಳುವ ಹೊತ್ತಿಗೆ ಏನಾದರೂ ಹೊಸತೊಂದು ಕಾಣುತ್ತಿತ್ತು.
       ಹೋದ ಎರಡು ಮೂರು ದಿನದಲ್ಲಿ ಅಲ್ಲಿನ ಅಕ್ಕಪಕ್ಕದ ನಾಲ್ಕಾರು ಜನ ಸ್ನೇಹಿತರಾದರು. ಹೊಸಹೊಸ ವಿಚಾರಗಳನ್ನು ಹುಡುಕುವ ನನ್ನ ಆಸಕ್ತಿಯನ್ನ ತಿಳಿದ ಅವರು ದಿನ ಬೆಳಗಾದರೆ ಬಂದು ನನ್ನನ್ನು ಎಲ್ಲಾದರೂ ಕರೆದೊಯ್ಯುತ್ತಿದ್ದರು. ಮೀನು ಹಿಡಿಯುವುದು, ಬೇಟೆ ಆಡುವುದು, ಕೊಂದ ಪ್ರಾಣಿಯನ್ನ ಅಲ್ಲೇ ಎಲ್ಲಾದರೂ ಬೆಂಕಿ ಹಚ್ಚಿ ಬೇಯಿಸಿಕೊಂಡು ಉಪ್ಪುಕಾರ ಹಾಕಿ ತಿನ್ನುವುದು. ಹೀಗೆ ಹಲವು ಸಾಹಸಗಳನ್ನ ಅವರು ಮಾಡುತ್ತಿದ್ದರು. ಅವರ್ಯಾರೂ ಖಾಯಂ ಕೆಲಸ ಇದ್ದವರಲ್ಲ. ಎಲ್ಲಾದರೂ ಒಮ್ಮೊಮ್ಮೆ ಒಬ್ಬೊಬ್ಬರು ಕೆಲಸಕ್ಕೆ ಹೋಗುತ್ತಿದ್ದರು. ಅವರ ಜೊತೆ ತಿರುಗುತ್ತಾ ನನಗೆ ಬಂದ ಉದ್ದೇಶವೇ ಮರೆತುಹೋಗಿತ್ತು. 
       ಒಂದೆರಡು ವಾರಗಳೇ ಆಗಿರಬೇಕು. ಒಂದು ರಾತ್ರಿ ಎಲ್ಲಿಗೋ ಹೋಗಿ ಬಂದು ಮಲಗಿದೆ. ನಾನು ಕಥೆ ಬರೆಯಲು ಬಂದವನು ಅಂತಷ್ಟೇ ಗೊತ್ತಿದ್ದ ಮನೆಯ ಯಜಮಾನಿ ಒಂದು ಪುಸ್ತಕ ಕೊಟ್ಟಳು. ನಾನು ಬಂದ ಕೆಲಸವನ್ನ ನೆನಪಿಸಲಿಕ್ಕೆ ಕೊಟ್ಟಳೋ ಏನೋ ನಾನು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಆ ಪುಸ್ತಕಮಾತ್ರ ನನಗೆ ಹೊಸದೊಂದು ಅನುಭವವನ್ನೇ ಕೊಡಬಹುದೆಂದು ನಾ ಭಾವಿಸಿರಲಿಲ್ಲ.
       ಸೆಖೆಗಾಲ ಮುಗಿದು ಮಳೆಗಾಲ ಪ್ರವೇಶ ಮಾಡುತ್ತಿದ್ದ ಕಾಲ ಅದು. ಸುಮಾರು ದಿನದ ನಂತರ ಪುಸ್ತಕವನ್ನ ನೋಡಿದ ನನಗೆ ಅದನ್ನ ಕೂಡಲೇ ಓದಬೇಕು ಎನಿಸಿತು.
         ಎದ್ದು ಹೊರಗೆ ಅಂಗಳಕ್ಕೆ ಬಂದೆ‌. ಸದಾ ಉರಿಯುವ ಹ್ಯಾಲೋಜನ್ ಬಲ್ಬೊಂದು ಅಲ್ಲಿತ್ತು. ಅದರ ಕೆಳಗೆ ಕುಳಿತು ಪುಸ್ತಕವನ್ನ ತೆರೆದೆ. ಸಣ್ಣಗೆ ಗಾಳಿ ಬೀಸುತ್ತಿತ್ತು. ಆದರೂ ಸ್ವಲ್ಪ ಸೆಖೆಯಿತ್ತು. ಅಂಗಿ ಬಿಚ್ಚಿ ಓದಲು ಶುರು ಮಾಡಿದೆ. ಬಹಳ ಹಳೇ ಕಾಲದ ಪುಸ್ತಕ ಅದು.
         ಅಷ್ಟು ಹೊತ್ತಿಗೆ ಮನೆಯ ಯಜಮಾನ ಬಂದ. ತೋಟದಿಂದ ಅವ ಬಂದಿದ್ದ. ತೋಟಕ್ಕೆ ಹಂದಿಯ ಕಾಟ ಜೋರಾಗಿತ್ತು. ಅದಕ್ಕಾಗಿ ದಿನ ರಾತ್ರಿ ಮಲಗುವ ಹೊತ್ತಿಗೆ ಒಂದು ಗರ್ನಾಲು ಹೊಡೆಯುತ್ತಿದ್ದ. ಅಷ್ಟೇ ಅಲ್ಲದೆ ಸುಮಾರು ಮಧ್ಯ ರಾತ್ರಿಯ ಹೊತ್ತಿಗೆ ಮತ್ತೊಂದು ಗರ್ನಾಲು ಸ್ಪೋಟ ಆಗುವ ಉಪಾಯವೊಂದನ್ನ ಅವ ಮಾಡಿದ್ದ. ಆ ಉಪಾಯ ಇದಾಗಿತ್ತು, ಸೊಳ್ಳೆ ಬಾರದಿರಲಿ ಅಂತ ಹಚ್ಚುವ ಬತ್ತಿಯೊಂದನ್ನ ತೆಗೆದುಕೊಳ್ಳುತ್ತಿದ್ದ. ಅದನ್ನ ಅಲ್ಲೇ ಒಂದು ಮರಕ್ಕೆ ಕಟ್ಟುತ್ತಿದ್ದ. ಮಧ್ಯರಾತ್ರಿಯ ಹೊತ್ತಿಗೆ ಅದು ಸುಟ್ಟಿಕೊಂಡು ಬರಬಹುದಾದ ಜಾಗಕ್ಕೆ ಗರ್ನಾಲಿನ ಬತ್ತಿಯ ತುದಿಯನ್ನ ತಾಗಿಸಿ ಕಟ್ಟುತ್ತಿದ್ದ. ಸುಟ್ಟಿಕೊಂಡು ಬರುತ್ತಿದ್ದ ಆ ಬತ್ತಿ ಮಧ್ಯ ರಾತ್ರಿಯ ಹೊತ್ತಿಗೆ ಗರ್ನಾಲನ್ನ ಸ್ಪೋಟಿಸುತ್ತಿತ್ತು. ಅಷ್ಟು ಹೊತ್ತಿಗೆ ಆಗುವ ಆ ಸ್ಪೋಟದ ಶಬ್ಧಕ್ಕೆ ಬಂದ ಹಂದಿ ಹೆದರಿ ಪರಾರಿಯಾಗಲೇಬೇಕು ಎಂಬುದು ಅವನ ಉಪಾಯ.
         ಬಂದವನು ನನ್ನ ಬಳಿ ಇಲ್ಯಾಕೆ ಕೂತಿದ್ದೇನೆ ಅಂತ ಕೇಳಿದ. ನಾನು ಸಿಕ್ಕ ಪುಸ್ತಕವನ್ನ ತೋರಿಸಿ ಇದನ್ನ ಓದಿಕೊಂಡು ಮಲಗುತ್ತೇನೆ ಎಂದೆ. ಅವನೂ ಆ ಪುಸ್ತಕವನ್ನ ಓದಿರಲಿಲ್ಲ. ಓದುವ ಅಭ್ಯಾಸವೂ ಅವನಿಗಿರಲಿಲ್ಲ. ಆ ಪುಸ್ತಕ ಅವನ ಮನೆಗೆ ಎಲ್ಲಿಂದ ಬಂತು ಅಂತಲೂ ಅವನಿಗೆ ಗೊತ್ತಿರಲಿಲ್ಲ. ಅವನು ಒಳಗೆ ಹೋದ. ನಾನು ಪುಸ್ತಕ ತೆರೆದು ಓದತೊಡಗಿದೆ.
         ಪುಸ್ತಕದ ಹೆಸರಿದ್ದ ಪುಟ ಇರಲಿಲ್ಲ, ಯಾವುದೋ ಹುಳ ತಿಂದಿತ್ತು. ಪೀಠಿಕೆಯ ಪುಟ ಇತ್ತು. ಅದೂ ಪ್ರಾರಂಭದ ಪುಟ ಇರಲಿಲ್ಲ. ಕೊನೆಯ ಕೆಲವು ಸಾಲುಗಳು ಓದುವ‌ಹಾಗಿದ್ದವು. ಮುನ್ನುಡಿ ಬರೆದ ಲೇಖಕ ಕೊನೆಯಲ್ಲಿ, ಪುಸ್ತಕದಲ್ಲಿದ್ದ ಕಥೆಗಳು ಇದ್ದಹಾಗೇ ಅವನ ಜೀವನದಲ್ಲೂ ನಡೆದಿವೆ ಎಂದು ಬರೆದಿದ್ದ. ಓದಿದಷ್ಟು ಕತೆ ನಡೆದೇ ನಡೆಯುತ್ತದೆ, ಯಾವುದೇ ಕತೆಯನ್ನ ಅರ್ಧ ಓದಿ ಬಿಡಬೇಡಿ ಅಂತ ಎಚ್ಚರಿಸಿದ್ದ. ನನಗೂ ಆಸಕ್ತಿ ಕೆರಳಿ ಮೊದಲ ಕಥೆ ತೆರೆದೆ.
         ನಾಗರಹಾವು ಅಂತ ಮೊದಲ ಕಥೆಯ ಹೆಸರು. ಕಥೆ ಹೀಗಿತ್ತು - ಒಬ್ಬ ವ್ಯಕ್ತಿ ದಾರಿಯಲ್ಲಿ ನಡೆಯುತ್ತಿದ್ದಾಗ ಅವನಿಗೆ ನಾಗರ ಹಾವೊಂದು ಸಿಗುತ್ತದೆ. ಅದು ಅವನನ್ನ ಕಚ್ಚುವುದಿಲ್ಲ ಆದರೆ ಅವನನ್ನೇ ಹಿಂಬಾಲಿಸುತ್ತದೆ. ಭಯಪಟ್ಟ ವ್ಯಕ್ತಿ ಓಡಲು ಶುರುಮಾಡುತ್ತಾನೆ. ಓಡಿ ಓಡಿ ಸಾಕಾಗಿ ಒಂದು ಮರದ ಕೆಳಗೆ ನಿಲ್ಲುತ್ತಾನೆ. ಹಿಂತಿರುಗಿ ನೋಡಿದರೆ ಹಾವು ಅಲ್ಲೇ ಇರುತ್ತದೆ. ಅದು ಇನ್ನೇನು ಅವನನ್ನ ಕಚ್ಚಲು ಹೆಡೆಯೆತ್ತುತ್ತದೆ, ಅವನು ಅದಕ್ಕೆ ಭಕ್ತಿಯಿಂದ ಕೈಮುಗಿಯುತ್ತಾನೆ, ಆಗ ಆ ಹಾವು ಅವನನ್ನ ಬಿಟ್ಟು ಅಲ್ಲಿಂದ ಹೋಗಿಬಿಡುತ್ತದೆ. ಇದು ಕಥೆಯ ಸಾರಾಂಶವಾಗಿತ್ತು. 
         ಅಷ್ಟು ಹೊತ್ತಿಗೆ ತೋಟದಲ್ಲಿ ಏನೋ ಸದ್ದಾಯಿತು. ಹಂದಿಯಿರಬೇಕು, ನನಗೂ ಭಯವಾಯಿತು. ಪುಸ್ತಕ ಮಡಚಿಟ್ಟು ಒಳಗೆ ಮಲಗಿದೆ.
         ಮರುದಿನ ಬೆಳಿಗ್ಗೆ ನನ್ನ ಸ್ನೇಹಿತರು ಯಾರೂ ಬರಲಿಲ್ಲ. ಒಬ್ಬನಿಗೇ ಬೇಸರವಾಯಿತು. ಎದ್ದು ಎಲ್ಲಾದರೂ ತಿರುಗಲು ಹೊರಟೆ. ಅಲ್ಲೇ ಹತ್ತಿರದಲ್ಲೆಲ್ಲೋ ಒಂದು ಹಳೆಯ ದೇವಸ್ಥಾನ ಇದೆ ಎಂದು ಕೇಳಿದ್ದೆ, ಅಲ್ಲೇ ಹೋಗೋಣ ಎಂದು ಹೊರಟೆ. 
         ನಡೆದು ಹೋಗುತ್ತಿದ್ದೆ. ಹಿಂದುಗಡೆ ಏನೋ ಸದ್ದಾಯಿತು. ಅನುಮಾನದಲ್ಲಿ ತಿರುಗಿ ನೋಡಿದರೆ ನಾಗರಹಾವು! ಎದೆ ಧಸಕ್ಕೆಂದಿತು. ನಡಿಗೆಯ ವೇಗ ಹೆಚ್ಚುಮಾಡಿದೆ. ಹಾವು ಹಿಂದೇ ಇತ್ತು. ಭಯ ಹೆಚ್ಚಾಗತೊಡಗಿತು. ಓಟಕ್ಕಿತ್ತೆ, ಓಡಿ ಓಡಿ ಸಾಕಾಗಿ ಒಂದು ಮರದ ಬಳಿ ನಿಂತು ಸುಧಾರಿಸಿಕೊಂಡೆ. ನಿಟ್ಟುಸಿರು ಬಿಟ್ಟು ಹಿಂದಿರುಗಿ ನೋಡುತ್ತೇನೆ ಹಾವು ಅಲ್ಲೇ ಇದೆ! ಪ್ರಾಣವೇ ಹೋದ ಹಾಗಾಯಿತು. ಹಾವು ಹತ್ತಿರ ಬಂತು, ಇನ್ನೇನು ಕಚ್ಚಲು ಹೆಡೆಯೆತ್ತಿತು. ಕಥೆ ನೆನಪಾಯಿತು, ಹಾವಿಗೆ ಕೈ ಮುಗಿದೆ. ಕಚ್ಚಲು ಬಂದ ಹಾವು ಹಿಂದೆ ಸರಿದು ಅಲ್ಲಿಂದ ಹರಿದುಹೋಯಿತು. 
       ಮನೆಗೆ ಬಂದವನಿಗೆ ಅದೇ ಗುಂಗು. ಓದಿದ ಕಥೆ ಹೂಬೇಹೂಬು ನಡೆದಿತ್ತು. ಅದನ್ನ ಓದುವ ಆಸಕ್ತಿ ಒತ್ತರಿಸುತ್ತಿತ್ತು. ಆದರೆ ರಾತ್ರಿ ಮಲಗಬೇಕಾದರೆ ಓದಬೇಕು ಎಂದು ಉತ್ಸಾಹವನ್ನು ತಡೆದುಕೊಂಡೆ.
       ರಾತ್ರಿ ಊಟವಾಯಿತು. ಪುಸ್ತಕ ತೆಗೆದುಕೊಂಡೆ. ಎರಡನೇ ಕಥೆ ಓದಲು ಶುರುಮಾಡಿದೆ. ಆ ಕಥೆಯ ಸಾರಾಂಶ ಹೀಗಿತ್ತು - ವ್ಯಕ್ತಿಯೊಬ್ಬನಿಗೆ ಕಾಡಿನಲ್ಲಿ ಏನನ್ನೋ ಕಂಡಂತಾಗುತ್ತದೆ. ಅದೇನೆಂದು ನೋಡುವ ಕುತೂಹಲದಲ್ಲಿ ಆತ ಅಲ್ಲಿಗೆ ಹೋಗುತ್ತಾನೆ. ಆ ಜಾಗಕ್ಕೆ ಹೋಗುವಷ್ಟರಲ್ಲಿ ಆ ಆಕೃತಿ ಮತ್ತೂ ಸ್ವಲ್ಪ ದೂರ ಹೋಗಿರುತ್ತದೆ. ಆತ ಅದನ್ನು ಬೆನ್ನಟ್ಟುತ್ತಾನೆ. ಎಷ್ಟು ಪ್ರಯತ್ನಮಾಡಿದರೂ ಅದು ಅವನ ಕೈಗೆ ಸಿಗುವುದಿಲ್ಲ. ಹಾಗೆ ಬೆನ್ನಟ್ಟಿ ಹೋಗಿ ಹೋಗಿ ಆತ ಕಾಡಿನ ಮಧ್ಯ ಹೋಗಿಬಿಡುತ್ತಾನೆ. ಹೋದವನಿಗೆ ಬಂದ ದಾರಿಯೇ ಮರೆತುಹೋಗುತ್ತದೆ. ಹಿಂದಿರುಗಿ ಹೋಗುವ ದಾರಿ ಕಾಣದೇ ಕಂಗಾಲಾದ ಅವನು ದಾರಿ ಹುಡುಕುತ್ತಾ ಅಲ್ಲೇ ಅಲೆಯುತ್ತಾನೆ. ಕೆಲ ಹೊತ್ತಿನ ನಂತರ ದೂರದಲ್ಲಿ ಎತ್ತರಕ್ಕೆ ಒಂದು ದೊಡ್ಡ ಮರ ಕಾಣುತ್ತದೆ, ಆ ಮರವನ್ನು ಕಂಡು ಪರಿಚಯವಿದ್ದ ಆತ ಅದನ್ನೇ ಗುರುತಾಗಿಟ್ಟುಕೊಂಡು ನಡೆದು ಹೋಗಿ ಮನೆ ತಲುಪುತ್ತಾನೆ. 
       ರೋಮಾಂಚನಕಾರಿಯಾಗಿತ್ತು‌ ಈ ಕಥೆ. ಮರುದಿನ ಬೆಳಿಗ್ಗೆ ಎದ್ದವನು ಮೇಲಿನ ಕಾಡಿನಲ್ಲಿ ಏನಾದರೂ ಕಾಣುವುದೋ ಅಂತ ಕಾಯತೊಡಗಿದೆ. ಮಧ್ಯಾಹ್ನದ ಹೊತ್ತಿಗೆ ಏನೋ ಕಂಡಂತಾಯಿತು. ಮನೆ ಎದೆ ಧಸಕ್ಕೆಂದಿತು. ಓಡಿದೆ. ಅದರ ಹಿಂದೇ ಓಡತೊಡಗಿದೆ. ಮೊದಲೇ ಓದಿದಹಾಗೇ ಆಯಿತು. ಕಾಡಿನ ಒಳಗೆ ಕಳೆದು ಹೋದೆ. ದಾರಿ ಸಿಗುತ್ತದೆ ಅಂತ ಗೊತ್ತಿದ್ದರೂ ಹುಡುಕತೊಡಗಿದೆ. ಆದರೆ ನಾನಂದುಕೊಂಡಹಾಗೆ ಆಗಲಿಲ್ಲ. ಕತ್ತಲಾದರೂ ಸರಿಯಾದ ದಾರಿ ತಿಳಿಯಲಿಲ್ಲ. ಕಥೆ ನಂಬಿ ಬಂದ ನನ್ನ ಮೂರ್ಖತನಕ್ಕೆ ತನ್ನನ್ನ ಹಳಿದುಕೊಂಡೆ. ಆದದ್ದಾಗಲಿ ಎಂದು ಬಂದ ದಾರಿಯ ಅಂದಾಜಿನಲ್ಲೇ ನಡೆಯತೊಡಗಿದೆ. ಕಡೆಗೂ ಹಾದಿ ಸಿಕ್ಕಿತು. ಬಂದು ನೋಡಿದೆ, ದೊಡ್ಡ ಮರ ಅಲ್ಲೇ ಇತ್ತು. ನಾನು ಗಮನಿಸಿರಲಿಲ್ಲ.
       ಮನೆಗೆ ತಲುಪುವಷ್ಟರಲ್ಲೇ ಕತ್ತಲಾಗಿತ್ತು. ನಡೆದು ಬಾರೀ ಸುಸ್ತಾಗಿತ್ತು ಕೂಡಾ. ಊಟವನ್ನೂ ಮಾಡದೇ ಮಲಗಿದೆ. ರಾತ್ರಿ ಎರಡು ಗರ್ನಾಲಿನ ಅಸ್ಪಷ್ಟ ಸದ್ದಿಗೆ ಎಚ್ಚರವಾಯಿತು ಆದರೂ ನಿದ್ರೆ ಜೋರಾಗಿ ಬಂತು. 
       ಮರುದಿನ ಸಂಜೆಯವರೆಗೂ ನಾನು ಏಳಲಿಲ್ಲ. ಅಷ್ಟು ಸಾಕಾಗಿತ್ತು. ನಿದ್ರೆಯೂ ಜೋರಾಗೇ ಬರುತ್ತಿತ್ತು. ಸಂಜೆಗೆ ಸರಿಯಾಗಿ ಎಚ್ಚರವಾಯಿತು. ಎದ್ದು ಒಂದು ಚಹಾ ಕುಡಿದೆ. ದೀರ್ಘವಾದ ನಿದ್ರೆಯಿಂದ ದೇಹ ಹಗುರವಾಗಿತ್ತು.
       ಮಳೆಗಾಲದ ಆಗಮನದ ಸೂಚನೆ ಇತ್ತು. ಮೋಡ ಕವಿದಿತ್ತು. ಆ ರಾತ್ರಿ ಭರ್ಜರಿ ಮಳೆ ಸುರಿಯಬಹುದೆಂದು ನಾನು ಅಂದಾಜಿಸಿದೆ. ಕೆಲ ಹೊತ್ತಿನಲ್ಲಿ ಜಡಿಮಳೆ ಶುರುವಾಯಿತು. ಬೇರೆ ಶಬ್ಧವೂ ಕೇಳದಂತೆ ಮಳೆ ಬೀಳುತ್ತಿತ್ತು. ಜೋರಾಗಿ ಗಾಳಿ ಬೀಸಿ ಕರೆಂಟೂ ಹೋಯಿತು. ಮನೆಯವರೆಲ್ಲ ಊಟ ಮಾಡಿ ಮಲಗಿದರು. ನಾನು ಊಟ ಮಾಡಿ ಮನೆಯೊಳಗೇ ಸಣ್ಣ ಸೀಮೇ ಎಣ್ಣೆ ದೀಪ ಹಚ್ಚಿಕೊಂಡು ಕಥೆ ಪುಸ್ತಕ ತೆರೆದೆ. 
       ಮೂರನೇಯ ಕಥೆ, ಪ್ರಾಯಶಃ ಅದೇ ಕೊನೇಯ ಕಥೆಯಾಗಿತ್ತು. ಓದಲು ಶುರುಮಾಡಿದೆ. ಆ ಕಥೆ ಹೀಗಿತ್ತು - ಅದೊಂದು ಹಳ್ಳಿಯ ಮನೆ, ಮನೆಯ ಪಕ್ಕವೇ ದೊಡ್ಡ ಹೊಳೆಯೊಂದಿರುತ್ತದೆ. ಒಂದು ದಿನ ಜೋರಾಗಿ ಮಳೆ ಸುರಿಯಲು ಶುರುಮಾಡುತ್ತದೆ. ಎಷ್ಟೆಂದರೆ ಆ ಮಳೆ ನಿಲ್ಲುವುದೇ ಇಲ್ಲ. ಹೀಗೆ ಸುರಿದ ಮಳೆಗೆ ಹೊಳೆ ತುಂಬಿ ಹರಿದು ನೀರು ಏರಿ ಪ್ರವಾಹ ಬರುತ್ತದೆ, ಏರಿಬಂದ ಪ್ರವಾಹ ಮನೆಯನ್ನು, ಮನೆಯವರನ್ನು ಮುಳುಗಿಸಿಬಿಡುತ್ತದೆ. 
        ಒಂದು ಪುಟ ಮುಗಿದಿತ್ತು. ಮುಂದಿನ ಪುಟ ತಿರುಗಿಸಿದೆ. ಹೃದಯಾಘಾತ ಆಗುವುದೊಂದು ಬಾಕಿ. ಮುಂದೆ ಪುಟವೇ ಇರಲಿಲ್ಲ. ಅಲ್ಲಿ ಬೇರೇನೋ ಇತ್ತು. ಕಥೆಯ ಮುಂದಿನ ಬಾಗ ಹರಿದು ನಾಶವಾಗಿತ್ತು. ಅಂದರೆ, ಅಲ್ಲಿಂದ ತಪ್ಪಿಸಿಕೊಳ್ಳುವ ದಾರಿ ಹೇಗೆಂದು ಇರಲಿಲ್ಲ. ಅಷ್ಟೇ ಹೊತ್ತಿಗೆ ಹೊರಗೇನು ಶಬ್ಧ ಕೇಳಿದಂತಾಗಿ ಮನೆಯ ಬಾಗಿಲು ತೆರೆದೆ ಪ್ರವಾಹದ ನೀರು ದುಸ್ಸೆಂದು ಒಳನುಗ್ಗಿತು.....

Thursday, January 21, 2021

ಲಾಟರಿ


ಯಾವ ತಲೆಕೆಟ್ಟವ ಹೇಳಿದ್ದಾನೋ ಈ ಜನಗಳಿಗೆ, ಲಾಟರಿ ಟಿಕೀಟು ಕೊಂಡುಕೊಂಡರೆ ದಿವಾಳಿಯಾಗಿಹೋಗ್ತೀರಿ ಅಂತ! ಸಿಕ್ಕಬೇಕು ಅವನು ನನಗೆ.
     ಬೆಳಿಗ್ಗೆಯಿಂದ ಬಿಸಿಲಲ್ಲಿ ನಿಂತಿದ್ದೇನೆ. ನಾಲ್ಕು ಅಂದರೆ ನಾಲ್ಕೇ ಟಿಕೀಟು ಮಾರಾಟವಾಗಾದೆ. ಹಾಗಾದರೆ ಒಂದು ಇಪ್ಪತ್ತೈದು ರೂಪಾಯಿ ಖರ್ಚುಮಾಡಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಧೈರ್ಯ ಇಲ್ಲವ ಜನರಿಗೆ? ಇದಕ್ಕೇ ಹಿಂದೇಟುಹಾಕುವವರು ಇನ್ನು ಏನು ಸಾಧನೆ ಮಾಡಿಯಾರು!
     ನನ್ನಷ್ಟೇ ವಯಸ್ಸಿನವ ಆದರೆ ಅಣ್ಣ ಒಂದು ಟಿಕೀಟು ತೆಕೊ, ಸ್ವಲ್ಪ ದೊಡ್ಡವ ಆದರೆ ಯಜಮಾನ್ರೆ ಒಂದು ಟಿಕೀಟು ತೆಕೊಳ್ಳಿ, ಸಣ್ಣವ ಆದರೆ ತಮ್ಮ ಒಂದು ಟಿಕೀಟು ತೆಕೊ, ಒಮ್ಮೊಮ್ಮೆ ಟಿಕೀಟು ಮಾರ್ತಿದ್ದೇನೋ? ಭಿಕ್ಷೆ ಬೇಡ್ತಿದ್ದೇನೋ? ನನಗೇ ಅನುಮಾನ. ಬಿಟ್ಟು ಹೋಗಿಬಿಡುವ ಅಂದರೆ ಬೇರೆ ದಂದೆ ಗೊತ್ತಿರಬೇಕಲ್ಲ!
      ಒಂದು ತಿಂಗಳಾಗ್ತಾ ಬಂತು. ಈ ಲಾಟರಿಗಳ ಆಯಸ್ಸು ಮುಗಿಯುತ್ತೆ ಇನ್ನೇನು. ಹಾಕಿದ ಬಂಡವಾಳವೂ ಈ ಸಾರಿ ಬಂದಿರುವುದು ಅನುಮಾನ. ಲಾಟರಿ ಕೊಳ್ಳುವುದನ್ನ ನಿಲ್ಲಿಸಿರುವ ಜನ ಬುದ್ಧಿವಂತರಾಗಿದ್ದಾರಾ? ಜಾಗೃತರಾಗಿದ್ದಾರಾ? ದಡ್ಡರಾಗಿದ್ದಾರಾ? ಹೇಡಿಗಳಾಗಿದ್ದಾರಾ? ಬಡವರಾಗಿದ್ದಾರಾ? ಇಲ್ಲಾ ಹಣವೇ ಬೇಡ ಅನ್ನುವಷ್ಟು ಶ್ರೀಮಂತರಾಗಿದ್ದಾರಾ? ದೇವರೇ ಬಲ್ಲ.
      ಕೊನೇಯ ಬಸ್ಸೂ ಬಂದಾಯಿತು. ಇವರಲ್ಲಿ ಯಾರಾದರೂ ಒಂದು ಟಿಕೀಟು ಕೊಂಡರೆ ಮುಂದಿನ ವ್ಯಾಪಾರಕ್ಕಾಗುವಷ್ಟಾದರೂ ಉಂಡಮೇಲೆ ಮಿಕ್ಕೀತು. ಇಲ್ಲ ಅಂದರೆ ಮತ್ತೆ ಸಾಲಕೊಡುವವರನ್ನ ಹುಡುಕದೇ ಗತಿಯಿಲ್ಲ.
      " ಸ್ವಾಮಿ, ಸಾರ್, ಅಣ್ಣಾ, ಯಜಮಾನ್ರೇ, ಹೋಯ್ ಒಂದು ಲಾಟರಿ ತೆಕೊಳ್ರೀ, ಹನ್ನೆರಡು... ಬರೊಬ್ಬರೆ ಹನ್ನೆರಡು ಕೋಟಿ ಹೊಡೆದರೆ ಒಂದೇ ದಿನಕ್ಕೆ ಕೋಟ್ಯಾಧೀಶರಾಗ್ತೀರೀ....."
    ಊಹೂಂ, ಯಾರೂ ಕೊಳ್ಳಲಿಲ್ಲ! "ನೀನೇ ಇಟ್ಕೋ ನಿಂಗೇ ಹೊಡಿಯುತ್ತೆ" ಅಂತ ಯಾವನೋ ಹಾಸ್ಯಮಾಡಿಯೂ ಹೋದ. ನನಗೂ ನಗು ಬಂತು. ಅವನ ಹಾಸ್ಯಕ್ಕಲ್ಲ ಅವ ಹೇಳಿದ್ದು ಎಂದಾದರೂ ನಿಜವಾದೀತಾ ಎನ್ನುವ ಕಲ್ಪನೆಯಲ್ಲಿ.
     ಈಗ ಪೂರ್ತಿ ಕತ್ತಲು ಆವರಿಸಿದೆ, ಏನೂ ಕಾಣುವುದಿಲ್ಲ. ಇನ್ನು ಇಲ್ಲಿ ಕೂತೂ ಉಪಯೋಗ ಇಲ್ಲ. ಜನ ಓಡಾಡುವ ಹೊತ್ತಿಗೇ ವ್ಯಾಪಾರ ಗಿಟ್ಟಲಿಲ್ಲ, ಇನ್ನು ಈಗ ಗಿಟ್ಟೀತ? ಬಿಸಿಲಲ್ಲಿ ನಿಂತು ಹೊಟ್ಟೆಯೂ ಚುರುಗುಟ್ಟುತ್ತಿದೆ. ಇವತ್ತಿಗೆ ಈ ಲಾಟರಿ ವ್ಯಾಪಾರ ಸಾಕು. ಸ್ವಲ್ಪ ಕಷ್ಟ ಆದರೂ ಸರಿ, ಕೂಲಿಯನ್ನಾದರೂ ಮಾಡಿ ಬದುಕುತ್ತೇನೆ.

      ದಿನಾ ಹೀಗೇ, ನಾಳಿನ ಹಸಿವು ನೆನಪಾಗಿ ಇಂದಿನ ಹಸಿವು ಅರ್ಧದಲ್ಲೇ ಶಮನ ಆಗಿಹೋಗಿರುತ್ತದೆ. ದೀಪವಾರಿಸಿ ಮಲಗುವುದೇ ಇನ್ನು,  ಇದೊಂದು ಟಿಕೀಟಾದರೂ ಮಾರಾಟವಾಗಬಾರದಿತ್ತ, ನನ್ನನ್ನೇ ನೋಡಿ ನಗುತ್ತಿದೆ ಇದು!  7890 ಯಲ್ಲಿ ಮುಗಿಯುತ್ತದೆ. ನಾಳೆಯಿಂದ ಇದಕ್ಕೆ ಯಾವ ಬೆಲೆಯೂ ಇಲ್ಲ. ನನಗೆ ಇಂದಾದರೂ ಇದೆಯಾ? ಮಲಗಿ ಎಷ್ಟೋ ಹೊತ್ತಿನ ಮೇಲೆ ನಿದ್ರೆ ಬರುತ್ತದೆ.

    ಅಂಗಡಿಯ ಉಲ್ಲಾಸ ಕರೆದ. ಅವನಿಗೂ ವತ್ತಾಯಮಾಡಿ ಒಂದು ಲಾಟರಿ ಕೊಟ್ಟಿದ್ದೆ. ಸಿಟ್ಟಿನಲ್ಲಿದ್ದ‌. ನಿನ್ನನ್ನ ನಂಬಿ ಇಪ್ಪತ್ತೈದು ರೂಪಾಯಿ ಕಳೆದುಕೊಂಡೆ ಅಂತ ಬೈದ. ನನಗೇನು ಅದು ಹೊಸತಲ್ಲ, ಅವನಿಗೂ. ಕುತೂಹಲಕ್ಕೆ ಯಾವ ಟಿಕೀಟಿಗೆ ಹೊಡೆದಿದೆ ಎಂದು ಕೇಳಿದೆ, "ಅದು ಯಾವುದೋ ಬಂದಿದೆ ನೋಡು, 7890 ಯಲ್ಲಿ ಮುಗಿಯುತ್ತದೆ" ಕಿವಿ ನೆಟ್ಟಗಾಯಿತು, ಪೇಪರು ಕಸಿದುಕೊಂಡು ನಾನೇ ಓದಿದೆ, ಹೌದು, 7890 ರಲ್ಲೇ ಮುಗಿಯುತ್ತದೆ, ಪೂರ್ತಿ ನಂಬರು ಓದಿದೆ, ಹೌದು ಅದೇ..... ರೂಮಿಗೆ ಓಡಿದೆ, ಅಲ್ಲೇ ಇತ್ತು ಆ ಟಿಕೀಟು,

ಹೌದು ಅದೇ.........

*ಕೇರಳದಲ್ಲಿ ಲಾಟರಿ ಟಿಕೀಟು ಮಾರುವವನಿಗೆ ಮಾರಾಟ ಆಗದೇ ಉಳಿದಿದ್ದ ಟಿಕೀಟಿಗೆ ಹನ್ನೆರಡು ಕೋಟಿಯ ಲಾಟರಿ ಹೊಡೆಯಿತು ಅನ್ನುವ ಸುದ್ದಿ ಓದಿ ಬರೆದ ಕಥೆ ಇದು.


Friday, September 18, 2020

ಕರ್ಣನಿಗೆ ಹೀಗೂ ಅನಿಸಿರಬಹುದು!

   ನಿಜವಾಗಿಯೂ ಇದು ಮೋಡ ಕವಿದ ವಾತಾವರಣವೋ‌? ಇಲ್ಲ ನನ್ನ ಮನಸ್ಸಿಗೆ ಕವಿದಿರುವ ಕತ್ತಲೆಯೋ? ತಿಳಿಯುತ್ತಿಲ್ಲ. ಯಾವ ಕಾರ್ಯದ ಉದ್ದೇಶ ಮೂಲದಿಂದ ಪ್ರಾಪ್ತವಾದ ಅಂತಃಪುರದ ಮಹಡಿಯಲ್ಲಿ, ಅದೇ ಕಾರ್ಯದಿಂದ ದೂರಸರಿದು ನಿಂತಿದ್ದೇನೆ. ಈಗ ಐದು ನಿಮಿಷದ ಹಿಂದೆ ಕೋಪದಲ್ಲಿ ದುರ್ಯೋಧನ ಜಡಿದು ಹೋದ ಕೋಣೆಯ ಬಾಗಿಲಿನ ಶಬ್ಧ ಇನ್ನೂ ಕೇಳುತ್ತಿದ್ದೆ. ಅವನ ಪಾಂಡವದ್ವೇಷದ ಪೂರ್ಣ ಕ್ರೊಧವನ್ನೂ ಅವನು ಆ ನಿಷ್ಪಾಪಿ,ನಿರ್ಜೀವಿ ಬಾಗಿಲಿನಮೇಲೇ ತೋರಿಸಿ ಹೋದ, ಅಷ್ಟು ಅಸಹಾಯಕನಾಗಿಹೋಗಿದ್ದ. ನನ್ನ ಕಾಲನ್ನೊಂದು ಹಿಡಿಯಲಿಲ್ಲ,ಹಸ್ತಿನಾವತಿಯ ಪೀಠದ ರಾಜಕುಮಾರನೆನ್ನುವ ಗೌರವಕ್ಕೆ.
    “ಕರ್ಣಾ! ಹಾಗನ್ನಬೇಡ” “ಕರ್ಣಾ! ಹಾಗೆ ಮಾಡಬೇಡ” “ಭೀಷ್ಮರ ಬಳಿಯಲ್ಲಿ ನಾನು ಹೇಳುತ್ತೇನೆ” “ನೀನಿಲ್ಲದಿದ್ದರೆ ಉತ್ಸಾಹವೇ ಇಲ್ಲ” ಹೀಗೆ, ಪ್ರಾಮಾಣಿಕವಾಗೋ, ನನ್ನನ್ನು ಒಲಿಸುವ ಸಲುವಾಗೋ ಬಹಳ ಪ್ರಯತ್ನ ಮಾಡಿದ. ಅವನಾಡಿದ ಪ್ರತೀಮಾತಿಗೂ, ಆಗಲಿ ದುರ್ಯೋಧನ ನಡೆ, ಬರುತ್ತೇನೆ ಎನ್ನುವ ಉತ್ತರ ನಾಲಿಗೆಯ ತುದಿ ವರೆಗೆ ಬಂದರೂ ಕೊಡಲಾಗದೇ ಹೋಯಿತಲ್ಲ! ಅಷ್ಟೇ ಏಕೆ, ಈಗ ನಾನು ಹೋಗಿ, ನಡೆದದ್ದನ್ನೆಲ್ಲಾ ಮರೆತು ಬಂದಿದ್ದೇನೆ ಅಂತ ಅವನೆದುರು ನಿಂತರೆ ಆವನೆಷ್ಟು ಆನಂದ ಪಡುತ್ತಾನೆ ಎನ್ನುವುದು ತಿಳಿಯದೇಹೋದದ್ದೇನಲ್ಲ. ಆದರೂ ಹಾಗೆ ಮಾಡಲು ನನ್ನ ಬಳಿ ಸಾಧ್ಯವಿಲ್ಲ, ಹಾಗಾದರೆ ಆ ಶಕ್ತಿ ಯಾವುದು?
       ಇಷ್ಟು ವರ್ಷ ಕೌರವನ ಪಾಂಡವ ವಿದ್ವೇಷದಲ್ಲಿ ಸಮಪಾಲು ವಹಿಸಿದವ ನಾನು, ಅಡಿಗಡಿಗೆ ಭೀಷ್ಮ, ದ್ರೋಣರು ಸೂತಪುತ್ರ ಎಂದು ಅವಮಾನ ಮಾಡಿದರೂ ಕೌರವನ ಸಂಗವನ್ನು ಬಿಡಲಿಲ್ಲ. ಕಾರಣ ಕೌರವನ ಮೇಲೆ ನನಗಿದ್ದ ಸ್ನೇಹ ಮತ್ತು ಗೌರವ, ಅವನು ನನಗೆ ಮಾಡಿರುವ ಉಪಕಾರವೇ ಅಂತಹದ್ದು‌. ಆದರೆ ಯುದ್ಧ ತೀರ್ಮಾನ ಆದಮೇಲೆ ಆದ ಕೆಲವು ಘಟನೆಗಳು ನನ್ನ ಮೇಲೆ ಇಷ್ಟು ಪ್ರಭಾವ ಮಾಡಿದ್ಯಾಕೆ?
         ಕೌರವ ಭೀಷ್ಮರಿಗೆ ಸೇನಾಧಿಪತಿಯ ಪಟ್ಟ ಕಟ್ಟಿದ, ನಿಜವಾಗಿ ಅದೊಂದು ಮೂರ್ಖ ನಿರ್ಧಾರ. ಯಾಕೆ? ನಾನು ಕೌರವನ ಆಸ್ಥಾನ ಸೇರಿದ ಕ್ಷಣದಿಂದಲೂ ಗಮನಿಸಿರುವ ವಿಷಯ, ಭೀಷ್ಮನಿಗೆ ಪಾಂಡವರ ಮೇಲಿರುವ ಪ್ರೀತಿ ಕೌರವನ ಮೇಲಿಲ್ಲ. ದ್ರೋಣ, ಕೃಪರಿಗೂ ಅಷ್ಟೆ. ಅವರಿಗೆಲ್ಲ ಪಾಂಡವರ ಮೇಲೇ ಮೋಹ. ಅಂತವರ ಕೈಯಲ್ಲಿ ನಮ್ಮ ಸೇನೆಯ ಲಗಾಮನ್ನ ಕೊಟ್ಟರೆ ಕಥೆ ಏನಾಗಬೇಡ? ಪಕ್ಷಪಾತಿಗಳಾದ ಅವರು ಕೌರವನ ಗೆಲುವಿಗಾಗಿ ಮನಃಪೂರ್ವಕವಾಗಿ ಹೋರಾಡಿಯಾರ? ಅದೊಂದೇ ಕಾರಣಕ್ಕೆ ಭೀಷ್ಮ ಸೇನಾಧಿಪತ್ಯವನ್ನು ನಾನು ವಿರೋಧಿಸಿದ್ದು. ಭೀಷ್ಮನ ಪರಾಕ್ರಮದ ಮೇಲೆ ನನಗೆ ಎಳ್ಳಷ್ಟೂ ಅನುಮಾನವಿಲ್ಲ ಆದರೆ ಕೌರವನ ಪರವಾಗಿ ಅವನ ಪ್ರಮಾಣಿಕತೆಯನ್ನ ನಾನು ಸ್ವಲ್ಪವೂ ನಂಬಲಾರೆ.
          ಸೈನಿಕರೆಲ್ಲ ಯುದ್ಧದ ತಯಾರಿಯಲ್ಲಿ ತೊಡಗಿದ್ದಾರೆ. ಅರಮನೆಯ ಕಡೆಯಿಂದ ರಥಗಳು ಹೊರಡುತ್ತಿವೆ. ಇವತ್ತು ರಾತ್ರಿಯೇ ಕುರುಕ್ಷೇತ್ರದಲ್ಲಿ ಬಿಡಾರ ಹೂಡುತ್ತಾರೆಂದು ಕೌರವ ಹೇಳಿದ. 
      ಅದೋ, ಕೌರವನ ರಥವೂ ಬಂತು. ಅಕ್ಕ ಪಕ್ಕದಲ್ಲಿ ಶಕುನಿ ದುಶ್ಯಾಸನರು ಕೂತಿದ್ದಾರೆ. ನನ್ನ ಅಂತಃಪುರದ ಎದುರೇ ಹೋಗುತ್ತಿದ್ದಾರೆ, ಶಕುನಿ ದುಶ್ಯಾಸನ ಇಬ್ಬರೂ ನನ್ನ ಕಡೆ ನೋಡಿದರು ಆದರೆ ಕೌರವ ನನ್ನ ಕಡೆ ತಿರುಗಲೂ ಇಲ್ಲ. ಅವನಿಗೆ ಬಹಳ ಬೇಸರವಾಗಿರುವುದರಲ್ಲಿ ಅನುಮಾನವಿಲ್ಲ. ನಾನು ಭೀಷ್ಮನ ಎದುರು ಪ್ರತಿಜ್ಞೆ ಮಾಡಿದಾಗ ಬರೀ ಕೋಪದಲ್ಲಿ ಆಡಿದ ಮಾತದು ಎಂದುಕೊಂಡಿದ್ದ ಅವನು.
         ಆದರೆ ಈಗ ಶಾಂತವಾಗಿ ಕೂತು ಯೋಚನೆ ಮಾಡಿದರೆ ನನ್ನ ಈ ನಿರ್ಧಾರದ ಕುರಿತಾದ ನನ್ನ ನಂಬಿಕೆಯ ಬುಡವೂ ಅಲುಗಾಡುತ್ತಿದೆ. ಕಾರಣ ಮೊನ್ನೆ ಕೃಷ್ಣ ಹೇಳಿದ ವಿಚಾರ, ನಂತರ ಕುಂತಿ ಆಡಿದ ಮಾತುಗಳು.
        ನನಗೂ ವಯಸ್ಸು ಕಡಿಮೆಯಲ್ಲ, ಅರವತ್ತರ ಮೇಲಾಯಿತು.‌ ಇಷ್ಟು ವರ್ಷಗಳ ಕಾಲ ನಾನು ಅನುಭವಿಸಿದ ಎಲ್ಲಾ ನೋವಿನ, ಅನ್ಯಾಯದ ಮೂಲವಾದದ್ದು ನನ್ನ ಕುಲ. ಇಡೀ ಲೋಕ ನನ್ನನ್ನು ಸೂತಪುತ್ರ ಎಂದೇ ಗುರುತಿಸಿತು, ಕಂಡು ನಕ್ಕಿತು. ನನ್ನನ್ನು ಆ ಅಪಮಾನದಿಂದ ಸ್ವಲ್ಪಮಟ್ಟಿಗೆ ರಕ್ಷಿಸಿದವನು ಕೌರವ. ಅವನ ಜೊತೆ ಸೇರಿ ಅವನ ಸಂತೋಷಕ್ಕಾಗಿ ಮಾಡಿದ ಕೆಲಸಗಳಿಂದ ನಾನು ದುಷ್ಟನಾಗೇ ಗುರುತಿಸಲ್ಪಟ್ಟೆ. ಇನ್ನು ಹಾಗೆ ಗುರುತಿಸಿಕೊಂಡಿರುವಬಗ್ಗೆ ನನ್ನ ಭಾವನೆ ಏನೆಂದು ಹೇಳುವುದು ಕಷ್ಟವೇ ಯಾಕೆಂದರೆ ಆ ಅಪವಾದ ಅನ್ಯಾಯ ಎಂದು ನಾನು ಭಾವಿಸಲಾರೆ ಯಾಕೆಂದರೆ ಹಲವಾರು ತಪ್ಪು ಕೆಲಸಗಳನ್ನು ನಾನು ಮಾಡಿದ್ದೇನೆ. ಆದರೆ ಅದೆಲ್ಲದರ ಮೂಲ ತಂತು ನನ್ನ ಕುಲವೇ ಆಗಿತ್ತು. 
       ಆದರೆ ಕೃಷ್ಣ ಈಗ ಬಂದು ಹೇಳುತ್ತಾನೆ, ನೀನು ಕುಂತಿಯ ಪುತ್ರ ಸೂತನಲ್ಲ. ಈಗಲೂ ನಿನಗೆ ಅವಕಾಶವಿದೆ, ಪಾಂಡವರ ಪಂಗಡ ಸೇರಿಕೋ, ಇಲ್ಲ ಹಸ್ತಿನಾವತಿಯ ಪಟ್ಟ ಏರು, ನಿನ್ನನ್ನು ನಾನು ರಾಜನನ್ನಾಗಿ ಮಾಡಿ ಎಡಬಲಗಳಲ್ಲಿ ಕೌರವ ಪಾಂಡವರನ್ನ ಕೂರಿಸುತ್ತೇನೆ ಎಂದು. 
           ಈ ವಿಷಯ ಮುಂದೊಂದು ದಿನ ಇಡೀ ಪ್ರಪಂಚಕ್ಕೆ ತಿಳಿಯುತ್ತದೆ. ಅದು ತಿಳಿದಾಗ ಆ ಸಂದರ್ಭದಲ್ಲಿ ಕರ್ಣನ ಉತ್ತರ ಹೇಗಿತ್ತು ಎನ್ನುವುದರ ಮೇಲೆ ಮುಂದೆ ಕರ್ಣನ ಗೌರವದ ತೀರ್ಮಾನ. ಸೋತಿದ್ದಾಗ ಅನ್ನ ಕೊಟ್ಟಿದ್ದ ಕೌರವನನ್ನ ಬಿಟ್ಟ ಕರ್ಣ ರಾಜ್ಯದಾಸೆಗೆ ಅವನನ್ನ ತೊರೆದನಂತೆ! ಎನ್ನುವ ಅಪವಾದ ಬೇಡ ಎಂದು ಕೃಷ್ಣನಬಳಿ ಖಡಾಖಂಡಿತವಾಗಿ ಹೇಳಿದ್ದೊಂದೆ, ಕೌರವನ ಋಣಭಾರವನ್ನು ತೀರಿಸುವುದೊಂದೇ ನನ್ನ ಪರಮಗುರಿ,ಅದಕ್ಕಿಂತ ದೊಡ್ಡದಾಗಿ ಬೇರೇನೂ ನನಗೆ ಕಾಣುವುದಿಲ್ಲ. ಹಸ್ತಿನಾವತಿಯ ಸಿಂಹಾಸನವೇಕೆ, ಅಮರಾವತಿಯದ್ದು ಕೊಟ್ಟರೂ ಬೇಡ ಅಂದೆ.
     ಕೃಷ್ಣ ದಡ್ಡನಾ? ಅವನಿಗೆ ನನ್ನ ನಿರ್ಧಾರ ಮೊದೆಲೇ ಗೊತ್ತಿತ್ತು ಆದರೂ ನನ್ನನ್ನ, ನನ್ನ ಕೌರವನೆಡೆಗಿನ ಸಮರ್ಪಣೆಯನ್ನ ಅಸ್ಥಿರಮಾಡುವ ರಾಜಕಾರಣದ ತಂತ್ರವೊಂದನ್ನ ಬಳಸಿದನವ ಅಷ್ಟೆ.
      ನಂತರ, ಕುಂತಿಯನ್ನ ಕಳುಹಿಸಿದ. ಇಷ್ಟು ವರ್ಷ ಕಣ್ಣೆದುರಿದ್ದರೂ ಒಂದೂ ಪ್ರೀತಿಯ ನೋಟವನ್ನ ಬೀರದಿದ್ದ ಆಕೆ ಬಂದು ಹೇಳುತ್ತಾಳೆ ನೀನು ನನ್ನ ಮಗ. ಅವಳ ಪ್ರೀತಿ ಮಾತೃ ವಾತ್ಸಲ್ಯಗಳು ಶುದ್ಧವಾದದ್ದೇ ಇರಬಹುದು ಆದರೆ ಅವಳ ಉದ್ದೇಶ ಸ್ಪಷ್ಟವಾಗಿತ್ತು. ನನಗೆ ನಾನು ಪಾಂಡವರ ಅಣ್ಣ ಎನ್ನುವುದು ತಿಳಿಯಬೇಕು. ಅದರ ಜೊತೆಗೆ ನಾನು ಕೌರವನ ಪಕ್ಷ ಬಿಟ್ಟು ಬರಬೇಕು‌. ಸಂಬಂಧವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಹೀನತೆ, ಒಂದು ಬಗೆಯ ಅಸಹ್ಯ ಉಂಟಾಯಿತು. ಇಲ್ಲಿಯ ವರೆಗೆ  ನನಗೆ ಮತ್ತು ನನ್ನಿಂದ ಆದ ಎಲ್ಲ ಅನ್ಯಾಯಗಳಿಗೂ ಅವಳೇ ಕಾರಣ ಎನ್ನಿಸಿತು. ಕೊನೆಗೂ ತಂತ್ರದಿಂದ ಭಾಷೆಯೊಂದನ್ನ ಕೊಂಡೇ ಹೋದಳು.
       ಈ ಗೊಂದಲದಲ್ಲಿದ್ದ ಸಂದರ್ಭದಲ್ಲಿ ನಡೆದ ಭೀಷ್ಮ ಸೇನಾಧಿಪತ್ಯದ ಪ್ರಕರಣ. ಈಗ ಕೂತು ಯೋಚಿಸಿದರೆ ನನ್ನ ಯುದ್ಧದಿಂದ ಹೊರಸರಿದ ನಿರ್ಧಾರಕ್ಕೂ ಬೇರೆಯದ್ದೇ ಅರ್ಥ ಕಾಣುತ್ತಿದೆ.
         ನಾನೇನಾದರೂ ಯುದ್ಧದಲ್ಲಿ ಭಾಗವಹಿಸಿದರೆ ಪಾಂಡವರ ಕಡೆಯ ಸೈನಿಕರನ್ನು ಕೊಲ್ಲಬೇಕಾಗುತ್ತದೆ. ಇದರಿಂದ ಅವರಿಗೆ ನಷ್ಟವಾಗುತ್ತದೆ ಎನ್ನುವ ಭಾವನೆ ನನ್ನ ಮನಸ್ಸಿನ ಮೂಲೆಯಲ್ಲಿತ್ತಾ?
     ಅದರ ಜೊತೆಗೆ ಇನ್ನೂ ಕೆಲವು ಪ್ರಶ್ನೆಗಳೂ ಕೆಣಕತ್ತಿವೆ-
  ಕೃಷ್ಣ ನನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ ಎಂದಾಗ ಒಪ್ಪಿಕೊಂಡು ನಂತರ ಆ ಸಿಂಹಾಸನವನ್ನು ಕೌರವನಿಗೆ ಕೊಡಬಹುದಿತ್ತು ಯಾಕೆ ಹಾಗೆ ಮಾಡಲಿಲ್ಲ? ಕುಂತಿ ಬಂದು ನನ್ನನ್ನು ಕೌರವನ ಪಕ್ಷ ಬಿಟ್ಟು ಬಾ ಎಂದಾಗ ಆಕೆಯ ಬಳಿಯಲ್ಲೇ ಅದನ್ನು ಹೋಗಿ ಯುಧಿಷ್ಠಿರನ ಬಳಿ ಹೇಳಿ ಪಾಂಡವರನ್ನೇ ನನ್ನ ಬಳಿ ಕರೆದುಕೊಂಡು ಬಾ ಅಂತ ಯಾಕೆ ಹೇಳಲಿಲ್ಲ? ಇನ್ನು ಅರ್ಧರಥಿಕಾನಿಗಿದ್ದುಕೊಂಡಾದರೂ ಕೌರವ ಸೇನೆಯ ಬಲ ಹೆಚ್ಚಿಸಬಹುದಿತ್ತು, ಸ್ವತಃ ಕೌರವನೇ ಬಂದು ಕೇಳಿದರೂ ಯಾಕೆ ಬರಲು ಒಪ್ಪಲಿಲ್ಲ? ಇದಕ್ಕೆಲ್ಲ ಪಾಂಡವರ ಪರವಾಗಿ ನನಗೆ ಹುಟ್ಟಿರಬಹುದಾದ ಅಂತಃಕರಣವೇ ಕಾರಣವಿರಬಹುದಾ?
   ಇನ್ನು ಭೀಷ್ಮ ಸಾಯದೇ ಹೋದರೆ? ನೆನೆದರೇ ಕಸಿವಿಸಿಯಾಗುತ್ತದೆ, ಭೀಷ್ಮನೇನಾದರೂ ಸಾಯದೇ ಒಬ್ಬನೇ ಯುದ್ಧವನ್ನು ಮುಗಿಸಿಬಿಟ್ಟರೆ? ಪಾಂಡವರನ್ನೆಲ್ಲ ಕೊಂದು, ಕೌರವನನ್ನ ಅಧಿಪತಿಯನ್ನಾಗಿ ಮಾಡಿಬಿಟ್ಟರೆ? ಕೌರವನ ಆಸ್ಥಾನದಲ್ಲಿ ನನ್ನ ಕಥೆ ಏನಾದೀತು?