ನಿಜವಾಗಿಯೂ ಇದು ಮೋಡ ಕವಿದ ವಾತಾವರಣವೋ? ಇಲ್ಲ ನನ್ನ ಮನಸ್ಸಿಗೆ ಕವಿದಿರುವ ಕತ್ತಲೆಯೋ? ತಿಳಿಯುತ್ತಿಲ್ಲ. ಯಾವ ಕಾರ್ಯದ ಉದ್ದೇಶ ಮೂಲದಿಂದ ಪ್ರಾಪ್ತವಾದ ಅಂತಃಪುರದ ಮಹಡಿಯಲ್ಲಿ, ಅದೇ ಕಾರ್ಯದಿಂದ ದೂರಸರಿದು ನಿಂತಿದ್ದೇನೆ. ಈಗ ಐದು ನಿಮಿಷದ ಹಿಂದೆ ಕೋಪದಲ್ಲಿ ದುರ್ಯೋಧನ ಜಡಿದು ಹೋದ ಕೋಣೆಯ ಬಾಗಿಲಿನ ಶಬ್ಧ ಇನ್ನೂ ಕೇಳುತ್ತಿದ್ದೆ. ಅವನ ಪಾಂಡವದ್ವೇಷದ ಪೂರ್ಣ ಕ್ರೊಧವನ್ನೂ ಅವನು ಆ ನಿಷ್ಪಾಪಿ,ನಿರ್ಜೀವಿ ಬಾಗಿಲಿನಮೇಲೇ ತೋರಿಸಿ ಹೋದ, ಅಷ್ಟು ಅಸಹಾಯಕನಾಗಿಹೋಗಿದ್ದ. ನನ್ನ ಕಾಲನ್ನೊಂದು ಹಿಡಿಯಲಿಲ್ಲ,ಹಸ್ತಿನಾವತಿಯ ಪೀಠದ ರಾಜಕುಮಾರನೆನ್ನುವ ಗೌರವಕ್ಕೆ.
“ಕರ್ಣಾ! ಹಾಗನ್ನಬೇಡ” “ಕರ್ಣಾ! ಹಾಗೆ ಮಾಡಬೇಡ” “ಭೀಷ್ಮರ ಬಳಿಯಲ್ಲಿ ನಾನು ಹೇಳುತ್ತೇನೆ” “ನೀನಿಲ್ಲದಿದ್ದರೆ ಉತ್ಸಾಹವೇ ಇಲ್ಲ” ಹೀಗೆ, ಪ್ರಾಮಾಣಿಕವಾಗೋ, ನನ್ನನ್ನು ಒಲಿಸುವ ಸಲುವಾಗೋ ಬಹಳ ಪ್ರಯತ್ನ ಮಾಡಿದ. ಅವನಾಡಿದ ಪ್ರತೀಮಾತಿಗೂ, ಆಗಲಿ ದುರ್ಯೋಧನ ನಡೆ, ಬರುತ್ತೇನೆ ಎನ್ನುವ ಉತ್ತರ ನಾಲಿಗೆಯ ತುದಿ ವರೆಗೆ ಬಂದರೂ ಕೊಡಲಾಗದೇ ಹೋಯಿತಲ್ಲ! ಅಷ್ಟೇ ಏಕೆ, ಈಗ ನಾನು ಹೋಗಿ, ನಡೆದದ್ದನ್ನೆಲ್ಲಾ ಮರೆತು ಬಂದಿದ್ದೇನೆ ಅಂತ ಅವನೆದುರು ನಿಂತರೆ ಆವನೆಷ್ಟು ಆನಂದ ಪಡುತ್ತಾನೆ ಎನ್ನುವುದು ತಿಳಿಯದೇಹೋದದ್ದೇನಲ್ಲ. ಆದರೂ ಹಾಗೆ ಮಾಡಲು ನನ್ನ ಬಳಿ ಸಾಧ್ಯವಿಲ್ಲ, ಹಾಗಾದರೆ ಆ ಶಕ್ತಿ ಯಾವುದು?
ಇಷ್ಟು ವರ್ಷ ಕೌರವನ ಪಾಂಡವ ವಿದ್ವೇಷದಲ್ಲಿ ಸಮಪಾಲು ವಹಿಸಿದವ ನಾನು, ಅಡಿಗಡಿಗೆ ಭೀಷ್ಮ, ದ್ರೋಣರು ಸೂತಪುತ್ರ ಎಂದು ಅವಮಾನ ಮಾಡಿದರೂ ಕೌರವನ ಸಂಗವನ್ನು ಬಿಡಲಿಲ್ಲ. ಕಾರಣ ಕೌರವನ ಮೇಲೆ ನನಗಿದ್ದ ಸ್ನೇಹ ಮತ್ತು ಗೌರವ, ಅವನು ನನಗೆ ಮಾಡಿರುವ ಉಪಕಾರವೇ ಅಂತಹದ್ದು. ಆದರೆ ಯುದ್ಧ ತೀರ್ಮಾನ ಆದಮೇಲೆ ಆದ ಕೆಲವು ಘಟನೆಗಳು ನನ್ನ ಮೇಲೆ ಇಷ್ಟು ಪ್ರಭಾವ ಮಾಡಿದ್ಯಾಕೆ?
ಕೌರವ ಭೀಷ್ಮರಿಗೆ ಸೇನಾಧಿಪತಿಯ ಪಟ್ಟ ಕಟ್ಟಿದ, ನಿಜವಾಗಿ ಅದೊಂದು ಮೂರ್ಖ ನಿರ್ಧಾರ. ಯಾಕೆ? ನಾನು ಕೌರವನ ಆಸ್ಥಾನ ಸೇರಿದ ಕ್ಷಣದಿಂದಲೂ ಗಮನಿಸಿರುವ ವಿಷಯ, ಭೀಷ್ಮನಿಗೆ ಪಾಂಡವರ ಮೇಲಿರುವ ಪ್ರೀತಿ ಕೌರವನ ಮೇಲಿಲ್ಲ. ದ್ರೋಣ, ಕೃಪರಿಗೂ ಅಷ್ಟೆ. ಅವರಿಗೆಲ್ಲ ಪಾಂಡವರ ಮೇಲೇ ಮೋಹ. ಅಂತವರ ಕೈಯಲ್ಲಿ ನಮ್ಮ ಸೇನೆಯ ಲಗಾಮನ್ನ ಕೊಟ್ಟರೆ ಕಥೆ ಏನಾಗಬೇಡ? ಪಕ್ಷಪಾತಿಗಳಾದ ಅವರು ಕೌರವನ ಗೆಲುವಿಗಾಗಿ ಮನಃಪೂರ್ವಕವಾಗಿ ಹೋರಾಡಿಯಾರ? ಅದೊಂದೇ ಕಾರಣಕ್ಕೆ ಭೀಷ್ಮ ಸೇನಾಧಿಪತ್ಯವನ್ನು ನಾನು ವಿರೋಧಿಸಿದ್ದು. ಭೀಷ್ಮನ ಪರಾಕ್ರಮದ ಮೇಲೆ ನನಗೆ ಎಳ್ಳಷ್ಟೂ ಅನುಮಾನವಿಲ್ಲ ಆದರೆ ಕೌರವನ ಪರವಾಗಿ ಅವನ ಪ್ರಮಾಣಿಕತೆಯನ್ನ ನಾನು ಸ್ವಲ್ಪವೂ ನಂಬಲಾರೆ.
ಸೈನಿಕರೆಲ್ಲ ಯುದ್ಧದ ತಯಾರಿಯಲ್ಲಿ ತೊಡಗಿದ್ದಾರೆ. ಅರಮನೆಯ ಕಡೆಯಿಂದ ರಥಗಳು ಹೊರಡುತ್ತಿವೆ. ಇವತ್ತು ರಾತ್ರಿಯೇ ಕುರುಕ್ಷೇತ್ರದಲ್ಲಿ ಬಿಡಾರ ಹೂಡುತ್ತಾರೆಂದು ಕೌರವ ಹೇಳಿದ.
ಅದೋ, ಕೌರವನ ರಥವೂ ಬಂತು. ಅಕ್ಕ ಪಕ್ಕದಲ್ಲಿ ಶಕುನಿ ದುಶ್ಯಾಸನರು ಕೂತಿದ್ದಾರೆ. ನನ್ನ ಅಂತಃಪುರದ ಎದುರೇ ಹೋಗುತ್ತಿದ್ದಾರೆ, ಶಕುನಿ ದುಶ್ಯಾಸನ ಇಬ್ಬರೂ ನನ್ನ ಕಡೆ ನೋಡಿದರು ಆದರೆ ಕೌರವ ನನ್ನ ಕಡೆ ತಿರುಗಲೂ ಇಲ್ಲ. ಅವನಿಗೆ ಬಹಳ ಬೇಸರವಾಗಿರುವುದರಲ್ಲಿ ಅನುಮಾನವಿಲ್ಲ. ನಾನು ಭೀಷ್ಮನ ಎದುರು ಪ್ರತಿಜ್ಞೆ ಮಾಡಿದಾಗ ಬರೀ ಕೋಪದಲ್ಲಿ ಆಡಿದ ಮಾತದು ಎಂದುಕೊಂಡಿದ್ದ ಅವನು.
ಆದರೆ ಈಗ ಶಾಂತವಾಗಿ ಕೂತು ಯೋಚನೆ ಮಾಡಿದರೆ ನನ್ನ ಈ ನಿರ್ಧಾರದ ಕುರಿತಾದ ನನ್ನ ನಂಬಿಕೆಯ ಬುಡವೂ ಅಲುಗಾಡುತ್ತಿದೆ. ಕಾರಣ ಮೊನ್ನೆ ಕೃಷ್ಣ ಹೇಳಿದ ವಿಚಾರ, ನಂತರ ಕುಂತಿ ಆಡಿದ ಮಾತುಗಳು.
ನನಗೂ ವಯಸ್ಸು ಕಡಿಮೆಯಲ್ಲ, ಅರವತ್ತರ ಮೇಲಾಯಿತು. ಇಷ್ಟು ವರ್ಷಗಳ ಕಾಲ ನಾನು ಅನುಭವಿಸಿದ ಎಲ್ಲಾ ನೋವಿನ, ಅನ್ಯಾಯದ ಮೂಲವಾದದ್ದು ನನ್ನ ಕುಲ. ಇಡೀ ಲೋಕ ನನ್ನನ್ನು ಸೂತಪುತ್ರ ಎಂದೇ ಗುರುತಿಸಿತು, ಕಂಡು ನಕ್ಕಿತು. ನನ್ನನ್ನು ಆ ಅಪಮಾನದಿಂದ ಸ್ವಲ್ಪಮಟ್ಟಿಗೆ ರಕ್ಷಿಸಿದವನು ಕೌರವ. ಅವನ ಜೊತೆ ಸೇರಿ ಅವನ ಸಂತೋಷಕ್ಕಾಗಿ ಮಾಡಿದ ಕೆಲಸಗಳಿಂದ ನಾನು ದುಷ್ಟನಾಗೇ ಗುರುತಿಸಲ್ಪಟ್ಟೆ. ಇನ್ನು ಹಾಗೆ ಗುರುತಿಸಿಕೊಂಡಿರುವಬಗ್ಗೆ ನನ್ನ ಭಾವನೆ ಏನೆಂದು ಹೇಳುವುದು ಕಷ್ಟವೇ ಯಾಕೆಂದರೆ ಆ ಅಪವಾದ ಅನ್ಯಾಯ ಎಂದು ನಾನು ಭಾವಿಸಲಾರೆ ಯಾಕೆಂದರೆ ಹಲವಾರು ತಪ್ಪು ಕೆಲಸಗಳನ್ನು ನಾನು ಮಾಡಿದ್ದೇನೆ. ಆದರೆ ಅದೆಲ್ಲದರ ಮೂಲ ತಂತು ನನ್ನ ಕುಲವೇ ಆಗಿತ್ತು.
ಆದರೆ ಕೃಷ್ಣ ಈಗ ಬಂದು ಹೇಳುತ್ತಾನೆ, ನೀನು ಕುಂತಿಯ ಪುತ್ರ ಸೂತನಲ್ಲ. ಈಗಲೂ ನಿನಗೆ ಅವಕಾಶವಿದೆ, ಪಾಂಡವರ ಪಂಗಡ ಸೇರಿಕೋ, ಇಲ್ಲ ಹಸ್ತಿನಾವತಿಯ ಪಟ್ಟ ಏರು, ನಿನ್ನನ್ನು ನಾನು ರಾಜನನ್ನಾಗಿ ಮಾಡಿ ಎಡಬಲಗಳಲ್ಲಿ ಕೌರವ ಪಾಂಡವರನ್ನ ಕೂರಿಸುತ್ತೇನೆ ಎಂದು.
ಈ ವಿಷಯ ಮುಂದೊಂದು ದಿನ ಇಡೀ ಪ್ರಪಂಚಕ್ಕೆ ತಿಳಿಯುತ್ತದೆ. ಅದು ತಿಳಿದಾಗ ಆ ಸಂದರ್ಭದಲ್ಲಿ ಕರ್ಣನ ಉತ್ತರ ಹೇಗಿತ್ತು ಎನ್ನುವುದರ ಮೇಲೆ ಮುಂದೆ ಕರ್ಣನ ಗೌರವದ ತೀರ್ಮಾನ. ಸೋತಿದ್ದಾಗ ಅನ್ನ ಕೊಟ್ಟಿದ್ದ ಕೌರವನನ್ನ ಬಿಟ್ಟ ಕರ್ಣ ರಾಜ್ಯದಾಸೆಗೆ ಅವನನ್ನ ತೊರೆದನಂತೆ! ಎನ್ನುವ ಅಪವಾದ ಬೇಡ ಎಂದು ಕೃಷ್ಣನಬಳಿ ಖಡಾಖಂಡಿತವಾಗಿ ಹೇಳಿದ್ದೊಂದೆ, ಕೌರವನ ಋಣಭಾರವನ್ನು ತೀರಿಸುವುದೊಂದೇ ನನ್ನ ಪರಮಗುರಿ,ಅದಕ್ಕಿಂತ ದೊಡ್ಡದಾಗಿ ಬೇರೇನೂ ನನಗೆ ಕಾಣುವುದಿಲ್ಲ. ಹಸ್ತಿನಾವತಿಯ ಸಿಂಹಾಸನವೇಕೆ, ಅಮರಾವತಿಯದ್ದು ಕೊಟ್ಟರೂ ಬೇಡ ಅಂದೆ.
ಕೃಷ್ಣ ದಡ್ಡನಾ? ಅವನಿಗೆ ನನ್ನ ನಿರ್ಧಾರ ಮೊದೆಲೇ ಗೊತ್ತಿತ್ತು ಆದರೂ ನನ್ನನ್ನ, ನನ್ನ ಕೌರವನೆಡೆಗಿನ ಸಮರ್ಪಣೆಯನ್ನ ಅಸ್ಥಿರಮಾಡುವ ರಾಜಕಾರಣದ ತಂತ್ರವೊಂದನ್ನ ಬಳಸಿದನವ ಅಷ್ಟೆ.
ನಂತರ, ಕುಂತಿಯನ್ನ ಕಳುಹಿಸಿದ. ಇಷ್ಟು ವರ್ಷ ಕಣ್ಣೆದುರಿದ್ದರೂ ಒಂದೂ ಪ್ರೀತಿಯ ನೋಟವನ್ನ ಬೀರದಿದ್ದ ಆಕೆ ಬಂದು ಹೇಳುತ್ತಾಳೆ ನೀನು ನನ್ನ ಮಗ. ಅವಳ ಪ್ರೀತಿ ಮಾತೃ ವಾತ್ಸಲ್ಯಗಳು ಶುದ್ಧವಾದದ್ದೇ ಇರಬಹುದು ಆದರೆ ಅವಳ ಉದ್ದೇಶ ಸ್ಪಷ್ಟವಾಗಿತ್ತು. ನನಗೆ ನಾನು ಪಾಂಡವರ ಅಣ್ಣ ಎನ್ನುವುದು ತಿಳಿಯಬೇಕು. ಅದರ ಜೊತೆಗೆ ನಾನು ಕೌರವನ ಪಕ್ಷ ಬಿಟ್ಟು ಬರಬೇಕು. ಸಂಬಂಧವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಹೀನತೆ, ಒಂದು ಬಗೆಯ ಅಸಹ್ಯ ಉಂಟಾಯಿತು. ಇಲ್ಲಿಯ ವರೆಗೆ ನನಗೆ ಮತ್ತು ನನ್ನಿಂದ ಆದ ಎಲ್ಲ ಅನ್ಯಾಯಗಳಿಗೂ ಅವಳೇ ಕಾರಣ ಎನ್ನಿಸಿತು. ಕೊನೆಗೂ ತಂತ್ರದಿಂದ ಭಾಷೆಯೊಂದನ್ನ ಕೊಂಡೇ ಹೋದಳು.
ಈ ಗೊಂದಲದಲ್ಲಿದ್ದ ಸಂದರ್ಭದಲ್ಲಿ ನಡೆದ ಭೀಷ್ಮ ಸೇನಾಧಿಪತ್ಯದ ಪ್ರಕರಣ. ಈಗ ಕೂತು ಯೋಚಿಸಿದರೆ ನನ್ನ ಯುದ್ಧದಿಂದ ಹೊರಸರಿದ ನಿರ್ಧಾರಕ್ಕೂ ಬೇರೆಯದ್ದೇ ಅರ್ಥ ಕಾಣುತ್ತಿದೆ.
ನಾನೇನಾದರೂ ಯುದ್ಧದಲ್ಲಿ ಭಾಗವಹಿಸಿದರೆ ಪಾಂಡವರ ಕಡೆಯ ಸೈನಿಕರನ್ನು ಕೊಲ್ಲಬೇಕಾಗುತ್ತದೆ. ಇದರಿಂದ ಅವರಿಗೆ ನಷ್ಟವಾಗುತ್ತದೆ ಎನ್ನುವ ಭಾವನೆ ನನ್ನ ಮನಸ್ಸಿನ ಮೂಲೆಯಲ್ಲಿತ್ತಾ?
ಅದರ ಜೊತೆಗೆ ಇನ್ನೂ ಕೆಲವು ಪ್ರಶ್ನೆಗಳೂ ಕೆಣಕತ್ತಿವೆ-
ಕೃಷ್ಣ ನನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ ಎಂದಾಗ ಒಪ್ಪಿಕೊಂಡು ನಂತರ ಆ ಸಿಂಹಾಸನವನ್ನು ಕೌರವನಿಗೆ ಕೊಡಬಹುದಿತ್ತು ಯಾಕೆ ಹಾಗೆ ಮಾಡಲಿಲ್ಲ? ಕುಂತಿ ಬಂದು ನನ್ನನ್ನು ಕೌರವನ ಪಕ್ಷ ಬಿಟ್ಟು ಬಾ ಎಂದಾಗ ಆಕೆಯ ಬಳಿಯಲ್ಲೇ ಅದನ್ನು ಹೋಗಿ ಯುಧಿಷ್ಠಿರನ ಬಳಿ ಹೇಳಿ ಪಾಂಡವರನ್ನೇ ನನ್ನ ಬಳಿ ಕರೆದುಕೊಂಡು ಬಾ ಅಂತ ಯಾಕೆ ಹೇಳಲಿಲ್ಲ? ಇನ್ನು ಅರ್ಧರಥಿಕಾನಿಗಿದ್ದುಕೊಂಡಾದರೂ ಕೌರವ ಸೇನೆಯ ಬಲ ಹೆಚ್ಚಿಸಬಹುದಿತ್ತು, ಸ್ವತಃ ಕೌರವನೇ ಬಂದು ಕೇಳಿದರೂ ಯಾಕೆ ಬರಲು ಒಪ್ಪಲಿಲ್ಲ? ಇದಕ್ಕೆಲ್ಲ ಪಾಂಡವರ ಪರವಾಗಿ ನನಗೆ ಹುಟ್ಟಿರಬಹುದಾದ ಅಂತಃಕರಣವೇ ಕಾರಣವಿರಬಹುದಾ?
ಇನ್ನು ಭೀಷ್ಮ ಸಾಯದೇ ಹೋದರೆ? ನೆನೆದರೇ ಕಸಿವಿಸಿಯಾಗುತ್ತದೆ, ಭೀಷ್ಮನೇನಾದರೂ ಸಾಯದೇ ಒಬ್ಬನೇ ಯುದ್ಧವನ್ನು ಮುಗಿಸಿಬಿಟ್ಟರೆ? ಪಾಂಡವರನ್ನೆಲ್ಲ ಕೊಂದು, ಕೌರವನನ್ನ ಅಧಿಪತಿಯನ್ನಾಗಿ ಮಾಡಿಬಿಟ್ಟರೆ? ಕೌರವನ ಆಸ್ಥಾನದಲ್ಲಿ ನನ್ನ ಕಥೆ ಏನಾದೀತು?
No comments:
Post a Comment