ಯಾವ ತಲೆಕೆಟ್ಟವ ಹೇಳಿದ್ದಾನೋ ಈ ಜನಗಳಿಗೆ, ಲಾಟರಿ ಟಿಕೀಟು ಕೊಂಡುಕೊಂಡರೆ ದಿವಾಳಿಯಾಗಿಹೋಗ್ತೀರಿ ಅಂತ! ಸಿಕ್ಕಬೇಕು ಅವನು ನನಗೆ.
ಬೆಳಿಗ್ಗೆಯಿಂದ ಬಿಸಿಲಲ್ಲಿ ನಿಂತಿದ್ದೇನೆ. ನಾಲ್ಕು ಅಂದರೆ ನಾಲ್ಕೇ ಟಿಕೀಟು ಮಾರಾಟವಾಗಾದೆ. ಹಾಗಾದರೆ ಒಂದು ಇಪ್ಪತ್ತೈದು ರೂಪಾಯಿ ಖರ್ಚುಮಾಡಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಧೈರ್ಯ ಇಲ್ಲವ ಜನರಿಗೆ? ಇದಕ್ಕೇ ಹಿಂದೇಟುಹಾಕುವವರು ಇನ್ನು ಏನು ಸಾಧನೆ ಮಾಡಿಯಾರು!
ನನ್ನಷ್ಟೇ ವಯಸ್ಸಿನವ ಆದರೆ ಅಣ್ಣ ಒಂದು ಟಿಕೀಟು ತೆಕೊ, ಸ್ವಲ್ಪ ದೊಡ್ಡವ ಆದರೆ ಯಜಮಾನ್ರೆ ಒಂದು ಟಿಕೀಟು ತೆಕೊಳ್ಳಿ, ಸಣ್ಣವ ಆದರೆ ತಮ್ಮ ಒಂದು ಟಿಕೀಟು ತೆಕೊ, ಒಮ್ಮೊಮ್ಮೆ ಟಿಕೀಟು ಮಾರ್ತಿದ್ದೇನೋ? ಭಿಕ್ಷೆ ಬೇಡ್ತಿದ್ದೇನೋ? ನನಗೇ ಅನುಮಾನ. ಬಿಟ್ಟು ಹೋಗಿಬಿಡುವ ಅಂದರೆ ಬೇರೆ ದಂದೆ ಗೊತ್ತಿರಬೇಕಲ್ಲ!
ಒಂದು ತಿಂಗಳಾಗ್ತಾ ಬಂತು. ಈ ಲಾಟರಿಗಳ ಆಯಸ್ಸು ಮುಗಿಯುತ್ತೆ ಇನ್ನೇನು. ಹಾಕಿದ ಬಂಡವಾಳವೂ ಈ ಸಾರಿ ಬಂದಿರುವುದು ಅನುಮಾನ. ಲಾಟರಿ ಕೊಳ್ಳುವುದನ್ನ ನಿಲ್ಲಿಸಿರುವ ಜನ ಬುದ್ಧಿವಂತರಾಗಿದ್ದಾರಾ? ಜಾಗೃತರಾಗಿದ್ದಾರಾ? ದಡ್ಡರಾಗಿದ್ದಾರಾ? ಹೇಡಿಗಳಾಗಿದ್ದಾರಾ? ಬಡವರಾಗಿದ್ದಾರಾ? ಇಲ್ಲಾ ಹಣವೇ ಬೇಡ ಅನ್ನುವಷ್ಟು ಶ್ರೀಮಂತರಾಗಿದ್ದಾರಾ? ದೇವರೇ ಬಲ್ಲ.
ಕೊನೇಯ ಬಸ್ಸೂ ಬಂದಾಯಿತು. ಇವರಲ್ಲಿ ಯಾರಾದರೂ ಒಂದು ಟಿಕೀಟು ಕೊಂಡರೆ ಮುಂದಿನ ವ್ಯಾಪಾರಕ್ಕಾಗುವಷ್ಟಾದರೂ ಉಂಡಮೇಲೆ ಮಿಕ್ಕೀತು. ಇಲ್ಲ ಅಂದರೆ ಮತ್ತೆ ಸಾಲಕೊಡುವವರನ್ನ ಹುಡುಕದೇ ಗತಿಯಿಲ್ಲ.
" ಸ್ವಾಮಿ, ಸಾರ್, ಅಣ್ಣಾ, ಯಜಮಾನ್ರೇ, ಹೋಯ್ ಒಂದು ಲಾಟರಿ ತೆಕೊಳ್ರೀ, ಹನ್ನೆರಡು... ಬರೊಬ್ಬರೆ ಹನ್ನೆರಡು ಕೋಟಿ ಹೊಡೆದರೆ ಒಂದೇ ದಿನಕ್ಕೆ ಕೋಟ್ಯಾಧೀಶರಾಗ್ತೀರೀ....."
ಊಹೂಂ, ಯಾರೂ ಕೊಳ್ಳಲಿಲ್ಲ! "ನೀನೇ ಇಟ್ಕೋ ನಿಂಗೇ ಹೊಡಿಯುತ್ತೆ" ಅಂತ ಯಾವನೋ ಹಾಸ್ಯಮಾಡಿಯೂ ಹೋದ. ನನಗೂ ನಗು ಬಂತು. ಅವನ ಹಾಸ್ಯಕ್ಕಲ್ಲ ಅವ ಹೇಳಿದ್ದು ಎಂದಾದರೂ ನಿಜವಾದೀತಾ ಎನ್ನುವ ಕಲ್ಪನೆಯಲ್ಲಿ.
ಈಗ ಪೂರ್ತಿ ಕತ್ತಲು ಆವರಿಸಿದೆ, ಏನೂ ಕಾಣುವುದಿಲ್ಲ. ಇನ್ನು ಇಲ್ಲಿ ಕೂತೂ ಉಪಯೋಗ ಇಲ್ಲ. ಜನ ಓಡಾಡುವ ಹೊತ್ತಿಗೇ ವ್ಯಾಪಾರ ಗಿಟ್ಟಲಿಲ್ಲ, ಇನ್ನು ಈಗ ಗಿಟ್ಟೀತ? ಬಿಸಿಲಲ್ಲಿ ನಿಂತು ಹೊಟ್ಟೆಯೂ ಚುರುಗುಟ್ಟುತ್ತಿದೆ. ಇವತ್ತಿಗೆ ಈ ಲಾಟರಿ ವ್ಯಾಪಾರ ಸಾಕು. ಸ್ವಲ್ಪ ಕಷ್ಟ ಆದರೂ ಸರಿ, ಕೂಲಿಯನ್ನಾದರೂ ಮಾಡಿ ಬದುಕುತ್ತೇನೆ.
ದಿನಾ ಹೀಗೇ, ನಾಳಿನ ಹಸಿವು ನೆನಪಾಗಿ ಇಂದಿನ ಹಸಿವು ಅರ್ಧದಲ್ಲೇ ಶಮನ ಆಗಿಹೋಗಿರುತ್ತದೆ. ದೀಪವಾರಿಸಿ ಮಲಗುವುದೇ ಇನ್ನು, ಇದೊಂದು ಟಿಕೀಟಾದರೂ ಮಾರಾಟವಾಗಬಾರದಿತ್ತ, ನನ್ನನ್ನೇ ನೋಡಿ ನಗುತ್ತಿದೆ ಇದು! 7890 ಯಲ್ಲಿ ಮುಗಿಯುತ್ತದೆ. ನಾಳೆಯಿಂದ ಇದಕ್ಕೆ ಯಾವ ಬೆಲೆಯೂ ಇಲ್ಲ. ನನಗೆ ಇಂದಾದರೂ ಇದೆಯಾ? ಮಲಗಿ ಎಷ್ಟೋ ಹೊತ್ತಿನ ಮೇಲೆ ನಿದ್ರೆ ಬರುತ್ತದೆ.
ಅಂಗಡಿಯ ಉಲ್ಲಾಸ ಕರೆದ. ಅವನಿಗೂ ವತ್ತಾಯಮಾಡಿ ಒಂದು ಲಾಟರಿ ಕೊಟ್ಟಿದ್ದೆ. ಸಿಟ್ಟಿನಲ್ಲಿದ್ದ. ನಿನ್ನನ್ನ ನಂಬಿ ಇಪ್ಪತ್ತೈದು ರೂಪಾಯಿ ಕಳೆದುಕೊಂಡೆ ಅಂತ ಬೈದ. ನನಗೇನು ಅದು ಹೊಸತಲ್ಲ, ಅವನಿಗೂ. ಕುತೂಹಲಕ್ಕೆ ಯಾವ ಟಿಕೀಟಿಗೆ ಹೊಡೆದಿದೆ ಎಂದು ಕೇಳಿದೆ, "ಅದು ಯಾವುದೋ ಬಂದಿದೆ ನೋಡು, 7890 ಯಲ್ಲಿ ಮುಗಿಯುತ್ತದೆ" ಕಿವಿ ನೆಟ್ಟಗಾಯಿತು, ಪೇಪರು ಕಸಿದುಕೊಂಡು ನಾನೇ ಓದಿದೆ, ಹೌದು, 7890 ರಲ್ಲೇ ಮುಗಿಯುತ್ತದೆ, ಪೂರ್ತಿ ನಂಬರು ಓದಿದೆ, ಹೌದು ಅದೇ..... ರೂಮಿಗೆ ಓಡಿದೆ, ಅಲ್ಲೇ ಇತ್ತು ಆ ಟಿಕೀಟು,
ಹೌದು ಅದೇ.........
*ಕೇರಳದಲ್ಲಿ ಲಾಟರಿ ಟಿಕೀಟು ಮಾರುವವನಿಗೆ ಮಾರಾಟ ಆಗದೇ ಉಳಿದಿದ್ದ ಟಿಕೀಟಿಗೆ ಹನ್ನೆರಡು ಕೋಟಿಯ ಲಾಟರಿ ಹೊಡೆಯಿತು ಅನ್ನುವ ಸುದ್ದಿ ಓದಿ ಬರೆದ ಕಥೆ ಇದು.
No comments:
Post a Comment