"ಕೆಲಸದ ಹೆಂಗಸು ಇನ್ನೂ ಬರಲಿಲ್ಲ, ಒಂಭತ್ತಾಯಿತು, ಸ್ವಲ್ಪ ನೋಡಿ ಬಾ" ಮನೆಯಲ್ಲಿ ಹೇಳಿದರು. ಬೈಕಿನ ಮೇಲೆ ಹೊರಟೆ. ನಮ್ಮ ಮನೆಯಿಂದ ಒಂದು ಮೈಲು ಅವಳ ಮನೆ. ಅರ್ಧ ದಾರಿಯಲ್ಲಿ ಅವಳು ಕಂಡಳು. ನಡೆದುಕೊಂಡು ಬರುತ್ತಿದ್ದಳು.
"ಈಗಾ ಬರುವುದು?" ನಾನೆಂದೆ. ಅವಳು ಮಾತಾಡಲಿಲ್ಲ ಅಸ್ಪಷ್ಟ ನಗುವೊಂದನ್ನು ನಕ್ಕು ಸುಮ್ಮನಾದಳು. ಬೈಕು ಹತ್ತು ಎಂದೆ. ಅದಕ್ಕೆ ಅವಳು ಒಪ್ಪಲಿಲ್ಲ, ನಡೆದೇ ಬರುತ್ತೇನೆ ಎಂದಳು.
" ಕವಳ ಜಗಿಯುತ್ತಾ ಸಿಕ್ಕವರ ಜೊತೆ ಸುದ್ದಿ ಹೊಡೆಯುತ್ತಾ ನಿಲ್ಲಬೇಡ, ಹತ್ತು ಗಂಟೆಯ ಒಳಗಾದರೂ ಬಂದು ಮುಟ್ಟು, ಇನ್ನೂರು ರೂಪಾಯಿಗೆ ಒಂದು ಪೈಸೆ ಕಡಿಮೆಕೊಟ್ಟರೂ ಊರು ಕೇರಿ ಒಂದು ಮಾಡುತ್ತೀರಿ ಮತ್ತೆ" ಎಂದವನು ನಾನು ಹಿಂದಿರುಗಿದೆ.
ಬರುತ್ತಾ ದಾರಿಯಲ್ಲಿ ನೆರಮನೆಯ ರಾಮ ಸಿಕ್ಕಿದ. "ಹೋಯ್ ಸ್ವಲ್ಪ ಕೋಟಕಂಡದ ತನಕ ಬಿಡಿ ನೋಡುವ" ಅಂದ, ಆತ ಸ್ವಲ್ಪ ಗಡಿಬಿಡಿಯಲ್ಲಿದ್ದ. "ಏನೋ ಬಾರಿ ಅರ್ಜೆಂಟಾ?" ನಾನು ಕೇಳಿದೆ. "ಯಾರೋ ಕಾಲಿಯಂತೆ ಅಲ್ಲಿ, ಸೌದಿ ಮಾಡಲು ಬರಬೇಕಂತೆ ಫೋನು ಬಂದಿತ್ತು."
ಅಂತೂ, ಹತ್ತುಗಂಟೆಗೆ ಕೆಲಸದಾಕೆ ಬಂದು ಸೇರಿದಳು. "ಇಷ್ಟು ತಡಮಾಡುವುದಾದರೆ ನೀನು ಬರುವುದು ಬೇಡ" ಅಮ್ಮ ಎಚ್ಚರಿಕೆಯೊಂದಿಗೇ ಮಾತು ಶುರು ಮಾಡಿದಳು. " ಅವರ ಊರಿನಲ್ಲಿ ಯಾರೋ ಬೆಳಿಗ್ಗೆ ಸತ್ತರಂತೆ, ಅಲ್ಲಿ ಹೋಗಿ ಬಂದಳೇನೊ! ಇರಲಿ ಬಿಡು" ನಾನೆಂದೆ. " ಹೌದಾ! ಯಾರು?" ಅಮ್ಮ ಕೇಳಿದಳು, ಆಕೆ ಏನೂ ಮಾತಾಡದೇ ತೋಟಕ್ಕೆ ಹೋದಳು, "ನೋಡು ಅವಳ ಸೊಕ್ಕನ್ನ!" ಅಮ್ಮನ ಮಾತು.
ಆಕೆಯನ್ನು ನೋಡಿದರೆ ನನಗೂ ಕನಿಕರ ಎನಿಸುತ್ತಿತ್ತು. ಆಕೆಯ ಗಂಡ ಸತ್ತು ಬಹಳ ವರ್ಷ ಆಗಿತ್ತು. ಒಬ್ಬ ಮಗ ಮಲ್ಪೆಯ ಬಂದರೀನಲ್ಲಿ ಕೆಲಸಕ್ಕಿದ್ದ. ಆತ ಮನೆಗೆ ಬರುವವನಲ್ಲ.ಯಾವಾಗಲೋ ಒಮ್ಮೆ ಬಂದಾಗ ಹೆಂಡ ಕುಡಿದ ಎಂದು ಇವಳೇ ಬೈದಳಂತೆ, ಅದಾದಮೇಲೆ ಆತ ಬರಲಿಲ್ಲ.
ದಿನ ಬಹಳ ಮಾತಾಡುತ್ತಿದ್ದವಳು ಆಕೆ,ಆದಿನ ಒಂದೂ ಮಾತಾಡಲಿಲ್ಲ! ಇಡೀ ದಿನ ಯಾವುದೋ ಆಲೋಚನೆಯಲ್ಲಿದ್ದಳು.
ಸಂಜೆ ಹೊರಡುವ ಸಮಯಕ್ಕೆ ಮೊದಲ ಮಾತಾಡಿದಳು " ದುಡ್ಡು ಬೇಕಾಗಿತ್ತು"
" ಎಷ್ಟು ಕೆಲಸ ಆಯಿತು? ಐದು ಅಲ್ಲವ" ಒಂದು ಸಾವಿರ ಅಪ್ಪ ಕೊಟ್ಟ.
"ಐದು ಸಾವಿರ ಬೇಕಾಗಿತ್ತು" ಅವಳೆಂದಳು!
" ಅಷ್ಟೆಲ್ಲ ಯಾಕೆ!" ಅಮ್ಮ,
"ನಿನ್ನೆ ರಾತ್ರಿ ಮಗ ಮನೆಗೆ ಬಂದ" ಅವಳು
"ಮಗ ಬಂದರೆ ದುಡ್ಡು ತಂದಿರ ಬೇಕಲ್ಲ?! ಐದು ಸಾವಿರ ಏಕೆ?" ಅಪ್ಪ
"ಸ್ವಲ್ಪ ಖರ್ಚಿದೆ" ಅವಳ ಶಬ್ದಗಳು ಒದ್ದೆಯಾಗಿದ್ದವು
" ಏನು ಅದು ಐದು ಸಾವಿರದ ಕರ್ಚು?" ಅಮ್ಮ ಕೇಳಿದಳು,
" ರಾತ್ರಿ ಕುಡಿದು ಬಂದ ಮಗ ಮನೆಯ ಹಿಂದಿದ್ದ ನೆಲಬಾವಿಯಲ್ಲಿ ಬಿದ್ದು ಸತ್........" ಅವಳಿಗೆ ಮಾತು ಮುಗಿಸಲಾಗಲಿಲ್ಲ!
No comments:
Post a Comment