ಕೃಷ್ಣನ ಅಜ್ಜ ಭಾಸ್ಕರನ ಅಜ್ಜನ ಕಾಲದ ಒಕ್ಕಲು. ಭಾಸ್ಕರನ ಮನೆಯ ಗದ್ದೆಯಲ್ಲಿ ಆತ ಗೇಣಿ ಮಾಡುತ್ತಿದ್ದ. ಅವನಿಗೆ ಕುಡಿತದ ಚಟ. ಕುಡಿದು ಕುಡಿದು ಮೈ ತುಂಬಾ ಸಾಲ ಮಾಡಿಕೊಳ್ಳುತ್ತಿದ್ದ.ಗೇಣಿ ಕೊಡುವ ಸಮಯದಲ್ಲಿ ಕೈಯಲ್ಲಿ ಏನೂ ಉಳಿಯುತ್ತಿರಲಿಲ್ಲ. ಭಾಸ್ಕರನ ಅಜ್ಜನ ಬಳಿ ಬಂದು ಕಾಡಿ ಬೇಡಿ ಏನೂ ಕೊಡದೇ ಲೆಕ್ಕ ಚುಕ್ತಾ ಮಾಡಿಸಿಕೊಳ್ಳುತ್ತಿದ್ಜ. ಇವನಿಗೂ ಅವನನ್ನು ಕಂಡು ಅಯ್ಯೋ ಎನಿಸುತ್ತಿತ್ತು. ಪಾಪ ಎಂದು ಬಿಡುತ್ತಿದ್ದ.
ಹೀಗಿರುವಾಗ, ಇಂದಿರಾಗಾಂಧಿ ಬಂದಳು. ಕೃಷ್ಣನ ಅಜ್ಜ ಯಾರದೋ ಮಾತು ಕೇಳಿ ಡಿಕ್ಲೇರೇಷನ್ ಹಾಕಿದ. ಗದ್ದೆ ಅವನ ಹೆಸರಿಗೇ ಆಯಿತು. ಈಗ ಅವನು ರಾಜಾರೋಷವಾಗಿ ಸಾರಾಯಿ ಅಂಗಡಿಗೆ ಹೋಗಬಹುದಾಗಿತ್ತು. ಇದರಿಂದ ಭಾಸ್ಕರನ ಅಜ್ಜನೇನು ಬೇಜಾರು ಮಾಡಿಕೊಳ್ಳಲಿಲ್ಲ ಏಕೆಂದರೆ ಅವರ ಗದ್ದೆ ಕೇವಲ ಕೃಷ್ಣನ ಅಜ್ಜನಿಗೆ ಮಾತ್ರ ಹೋಗಿರಲಿಲ್ಲ, ಅವರ ಕೈಯಲ್ಲಿ ಒಂದು ಹಿಡಿ ಮಣ್ಣೂ ಉಳಿದಿರಲಿಲ್ಲ, ಬೇಜಾರು ಮಾಡಿಕೊಂಡು ಪ್ರಯೋಜನವಿರಲಿಲ್ಲ.
ಕಾಲಾಂತರದಲ್ಲಿ ಅವರು ಹೇಗೋ ಬದುಕಿದರು ಬಿಡಿ. ಇಲ್ಲಿ ಕೃಷ್ಣ, ಭಾಸ್ಕರರ ಕತೆ ಇಲ್ಲ ಆದರೆ ಅವರ ಹೆಸರು ಏಕಿದೆ??!
******************
ಕೃಷ್ಣನ ಅಜ್ಜ ಎಂತವನಾದರೂ ಅಪ್ಪ ಅಂತವನಲ್ಲ.ಬಹಳ ಕಷ್ಟಪಟ್ಟು ಆತ ಶಾಲೆಗೆ ಹೋಗಿದ್ದ.ಬೆನ್ನಮೇಲೆ ಬಿದ್ದ ಏಟನ್ನು ತಡೆದುಕೊಳ್ಳುವುದು ಕಷ್ಟವಲ್ಲವೇ?! ಹೀಗೇ ಹಾಗೆ ಹತ್ತನೇ ಕ್ಲಾಸು ಪಾಸಾದ. ಭರ್ಜರಿ ಸರ್ಕಾರೀ ಕೆಲಸವೊಂದು 'ಸುಲಭವಾಗಿ' ಸಿಕ್ಕಿತು. ಗದ್ದೆ ಅವನಿಗೆ ಬೇಡವಾಯಿತು. ಆದರೆ, ಭಾಸ್ಕರನ ಅಪ್ಪನಿಗೆ ಹಾಗಾಗಲಿಲ್ಲ. ಬಡತನದಲ್ಲಿ ಆತ ಶಾಲೆಗೂ ಹೋಗಲಿಲ್ಲ. ಚಿಕ್ಕ ಪುಟ್ಟ ಪೌರೋಹಿತ್ಯ ಕಲಿತು ಜೀವನ ನಡೆಸಿದ.
***********************
ಕೃಷ್ಣ, ಭಾಸ್ಕರ ಇಬ್ಬರೂ ಸ್ನೇಹಿತರು. ಒಂದೇ ಶಾಲೆಗೆ ಹೋದವರು. ಒಟ್ಟಿಗೇ ರಜೆ ಮಾಡಿದವರು. ಒಟ್ಟಿಗೆ ಕದ್ದು ಸಿಕ್ಕಿಬಿದ್ದು ಪೆಟ್ಟು ತಿಂದವರು. ಒಟ್ಟಿಗೇ ಡಿಗ್ರೀ ಮುಗಿಸಿದರು. ಸಾಧಾರಣ ಅಂಕವೂ ಬಂತು, ಆ ಮಾರ್ಕಿಗೆ ಕೃಷ್ಣನಿಗೆ ಸರ್ಕಾರೀ ಕೆಲಸವೇ ಸಿಕ್ಕಿತು, ಅವನನ್ನು ಜಾತಿ ಕೈ ಹಿಡಿಯಿತು, ಆದರೆ ಭಾಸ್ಕರನ ಕತೆ ಹಾಗಾಗಲಿಲ್ಲ ಅವನನ್ನು ಜಾತಿ ಕೈ ಹಿಡಿಯುವುದು ಸಾಯಲಿ ಅವನ ಹಣೆಬರಹಕ್ಕೆ ಜಾತಿಯವಳನ್ನು ಕೈ ಹಿಡಿಯಲೂ ಆಗಲಿಲ್ಲ- ಅದು ಬಿಡಿ.
ಭಾಸ್ಕರ ಬಹಳ ಕಷ್ಟಪಟ್ಟ, ಯಾವ ಕೆಲಸವೂ ಸಿಗದೇ ಸೋತ. ಆಗ ಒಂದು ಕಾಲದಲ್ಲಿ ನಮ್ಮದೇ ಆಗಿದ್ದ ಗದ್ದೆ ಕಂಡಿತು. ಈಗ ಅದು ಕೃಷ್ಣನ ಗದ್ದೆಯಾಗಿತ್ತು ಅದನ್ನು ಗೇಣಿಗೆ ತೆಗೆದುಕೊಳ್ಳಲು ನಿರ್ಧರಿಸಿದ. ಕೃಷ್ಣನ ಬಳಿ ಕೇಳಿಯೂ ಕೇಳಿದ. ಕೃಷ್ಣನೂ ಒಪ್ಪಿ ಕೊಟ್ಟ.
ಈ ವರ್ಷ ಮಳೆಯಾಗದೆ ಬೆಳೆ ಹಾಳಾಗಿದೆ. ಗೇಣಿ ಕೊಡಲು ದುಡ್ಡಿಲ್ಲ, ದುಡ್ಡು ಕೊಟ್ಟಿಲ್ಲ ಎಂದು ಕೃಷ್ಣ ಭಾಸ್ಕರನ ಮೇಲೆ ಕೇಸು ಹಾಕಿದ್ದಾನೆ , ಇತ್ತ ಭಾಸ್ಕರ ಮತ್ತೆ ಇಂದಿರಾಗಾಂಧಿ ಯಾವಾಗ ಬರುತ್ತಾಳೆ ಎಂದು ಕಾಯುತ್ತಿದ್ದಾನೆ!
No comments:
Post a Comment