Saturday, December 14, 2019

ನಡೆದಿರಬಹುದಾದ ಕತೆ

ಹಡಗು ಅಲೆಗಳನ್ನು  ಸೀಳಿಕೊಂಡು ಹೋಗುತ್ತಿದೆಯೋ ಅಲೆ ಹಡಗನ್ನು ಸೀಳಿಕೊಂಡು ಹೋಗುತ್ತಿದೆಯೋ ತಿಳಿಯುತ್ತಿರಲಿಲ್ಲ. ದುಃಖ ಒತ್ತರಿಸಿಕೊಂಡು ಬರುತ್ತಿತ್ತು, ಮಗ ತಿರುಗಿಬಿಟ್ಟರೆ! ಎಂದು ಕಣ್ಣೀರನ್ನು ತಡೆದುಕೊಂಡು ಕುಳಿತಿದ್ದ. ಮನಸ್ಸಿಗೆ ಯಾರೋ ಪೆಟ್ರೋಲ್ ಹಾಕಿ ಬೆಂಕಿ ಕೊಟ್ಟಿದ್ದಾರೆ ಎನಿಸುತ್ತಿತ್ತು. ಪೆಟ್ರೋಲ್ ನ ನೆನಪಾದರೆ ಮತ್ತೆ ಹೊಟ್ಟೆಯ ಆಳದಿಂದ ನೋವು ಚುಚ್ಚಿಕೊಂಡು ಬರುತ್ತಿತ್ತು.
           ಅವನದ್ದೇನು ಬಡ ಕುಟುಂಬವಲ್ಲ, ಆಗಿರಲೂ ಇಲ್ಲ. ಅವನ ಅಪ್ಪ ಪೆಟ್ರೋಲ್ ಮೈನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅವನೂ ನಂತರ ಅದೇ ಕೆಲಸಕ್ಕೆ ಸೇರಿದ, ಲೆಕ್ಕ ಬರೆಯುವುದು.ಅವನ ನಂತರ ಅವನ ಮಗನೂ ಅಲ್ಲೇ ಸೇರಿದ್ದ.
        ವೆನಿಝುವೆಲಾ ಅಷ್ಟು ದೊಡ್ಡ ದೇಶವೇನಲ್ಲ. ಅಮೇರಿಕಾದ ಹತ್ತಿರವೇ ಇದೆ ಬೇರೆ. ಒಂದು ಕಾಲದಲ್ಲಿ ಬಹಳ ಶ್ರೀಮಂತವಾಗಿದ್ದ ದೇಶವದು ಆದರೆ ಕಾಲ ಚಕ್ರ ಎಂದೂ ಪಂಕ್ಚರ್ ಆಗುವುದಿಲ್ಲವಲ್ಲ! ಅದು ಚಲಿಸಿತು. ದೇಶದ ಆರ್ಥಿಕ ಸ್ಥಿತಿ ಬಹಳ ಹಾಳಾಯಿತು. ಜನ ಹೊಡೆದಾಡುವ ಹಂತಕ್ಕೆ ತಲುಪಿದರು.ಇವನ ಮಗ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಮೈನ್ ಕೂಡಾ ಬರಿದಾಯಿತು. ಮಗ ಕೆಲಸ ಕಳೆದುಕೊಂಡ.
         ಜನರೆಲ್ಲಾ ಇರುವ ಮನೆ ಮಾರಿ ಗುಳೆ ಎದ್ದರು. ಬಿಸಿರಕ್ತದ ಮಗ, ಮನೆ ಮಾರಿದ್ದ, ಬೇರೆ ದೇಶಕ್ಕೆ ಹೊರಟಿದ್ದ.
      ಇವನು ವಿರೋಧಿಸಿದ, ಇವನೇನು ರಾಮಾಯಣ ಓದಿದವನಲ್ಲ, ' ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ' ಇದೆಲ್ಲ ಅವನಿಗೆ ಗೊತ್ತಿಲ್ಲ ಆದರೆ ಅವನಿಗೆ ತನ್ನ ಊರನ್ನು ಬಿಡಲು ಮನಸ್ಸಿಲ್ಲ.
      ಮಗ ಮಾತು ಕೇಳಲಿಲ್ಲ, ಆತ ಅಪ್ಪನಿಗಿಂತ ಜಾಸ್ತಿ ಓದಿದ್ದ, ಅಪ್ಪನಿಗಿಂತ ತನಗೆ ಜಾಸ್ತಿ ಗೊತ್ತಿದೆ ಎಂಬುದಾಗಿ ಆತ ನಂಬಿದ್ದ, ಪ್ರಪಂಚ ಕೂಡ.
       ಒಂದು ಲಾರಿ ಬಂತು. ಮನೆಯ ಸಾಮಾನು ತುಂಬಿಕೊಂಡು ಹೊರಟರು. ಅವನಿಗೆ ಹೃದಯಾಘಾತ ಆಗಲಿಲ್ಲ! ಅಷ್ಟರಮಟ್ಟಿಗೆ ಅವನು ಗಟ್ಟಿ.
     ಊರು ಬಿಡುವುದು ಯಾರಿಗೆ ಹೇಗೋ! ಆದರೆ ಅವನಿಗೆ ಮಾತ್ರ ಅದು ಅತೀವ ಯಾತನೆ. ಹುಟ್ಟಿ ಬೆಳೆದ ಮನೆ, ಸತ್ತ ಅಪ್ಪ-ಅಮ್ಮನ ನೆನಪು,ಹೀಗೆ ನೂರಾರು ನೆನಪುಗಳಿಂದ ಆತ ದೂರಾಗಿ ಬಂದಿದ್ದ.
          ಹಡಗು ಕ್ಷಣ ಕ್ಷಣಕ್ಕೂ ವೇಗವನ್ನು ಹೆಚ್ಚಿಸುತ್ತಾ ಹೋಗುತ್ತಿತ್ತು. ಕಣ್ಣು ಹಾಯಿಸಿದಷ್ಟೂ ಸಮುದ್ರ. ಸಮುದ್ರ ಅವನಿಗೆ ನೋವಿನಂತೆ ಕಂಡಿತು.ನಾನು ನೋವಿನ ಮೇಲೇ ವಿಹರಿಸುತ್ತಿದ್ದೇನೆ ಎನಿಸಿತು. ನೋವಿನಲ್ಲೇ ಒಂದಾದರೆ ಹೇಗೆ!? ಎನಿಸಿತು.
        ಮಗ ತಿರುಗಿ ನೋಡಿದರೆ ಅಪ್ಪ ಇರಲಿಲ್ಲ.


No comments:

Post a Comment