ಮಳೆನೀರಿನ ರುಚಿ ಯಾವುದು? ನೀರಿನ ರುಚಿ ಯಾವುದು. ಆವಾಗಿನಿಂದ ಮಳೆ ನೀರು ಅವನ ಬಾಯೊಳಗೆ ಹೋಗುತ್ತಿದೆ,ಆದರೆ ಅದರ ರುಚಿ ತಿಳಿಯಯುತ್ತಿಲ್ಲ. ಆರು ತಿಂಗಳು ಮಲಗಿದ್ದ. ಜ್ವರ ಎಂದಿದ್ದರು ಡಾಕ್ಟರು. ಆರು ತಿಂಗಳಲ್ಲಿ ಬದುಕೇ ಬದಲಾಗಿತ್ತು.
ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಬಿಟ್ಟು ಹೋಗಿದ್ದಳು. ಅವನದ್ದೇನೂ ಅಂತಹ ದೊಡ್ಡ ದುಡಿಮೆಯಲ್ಲ. ಮದುವೆ ಬ್ರೋಕರ್!
ಸೀಸನ್ನಿನಲ್ಲಿ ನಾಲ್ಕೈದು ಮದುವೆ ಮಾಡಿಸಿ ವರ್ಷವಿಡೀ ಬದುಕುತ್ತಿದ್ದ. ಜೊತೆಗೆ ಹೆಂಡತಿ. ಪ್ರೇಮ ವಿವಾಹ ಬೇರೆ. ಅವನಿಗೆ ಪ್ರೇಮ ಹೇಗಾಯಿತು ಎಂಬುದು ಅಪ್ರಸ್ತುತ!
ಮಟ ಮಟ ಸೀಸನ್ನಿನಲ್ಲೇ ಕೆಟ್ಟ ಜ್ವರ ಹಿಡಿಯಿತು. ಹೆಂಡತಿ ಸೇವೆ ಮಾಡುವಷ್ಟು ಮಾಡಿದಳು. ಕೊನೆಗೆ ಅವಳಿಗೂ ಸಾಕಾಯಿತು.
ಒಮ್ಮೆ ಅವನೇ ಸಾಯಲಿ ಎಂದು ಬಯಸಿದ್ದ ಅವನ ಅಮ್ಮ ಇರದಿದ್ದರೆ ಅವನ ಕತೆಯೇ ಬೇರೆಯಾಗುತ್ತಿತ್ತು- ಅದು ಬಿಡಿ.
ಆರು ತಿಂಗಳ ಮೇಲೆ, ಬಿರು ಮಳೆಯಲ್ಲಿ ಒಂದು ಗಂಡು ಬಂದಿದ್ದಾನೆ. ವಯಸ್ಸು ಸುಮಾರಾಗಿದೆ. ಹೆಣ್ಣಾಗಿದ್ದರೆ ಇವನೇ ಆಗುತ್ತಿದ್ದನೇನೊ! ಆದರೆ ಗಂಡು, ಹೆಣ್ಣು ಹುಡುಕಬೇಕು. ಕರ್ಕಿಯಲ್ಲಿ ಇವನಿಗೆ ಹೊಂದುವಂತ ಹೆಣ್ಣಿದೆ ಅಂದರಂತೆ. ಒಂದೆರಡು ತಿರುಗಾಟ ಮಾಡಿದ. ಅವರು ಏನೂ ಖಾಯಾಸು ಮಾಡಲಿಲ್ಲ. ಮೂರನೇ ಬಾರಿ ಹೋದಾಗ ದುಡ್ಡು ಗಿಡ್ಡು ಬೇಕಾದರೆ ಕೇಳಿ ಎಂದನಂತೆ, ಅವರು ಭೋ....ಮಗನೆ ಅಂತ ಬೈದರು. ನಾಯಿಯಂತೆ ಹಿಂದಿರುಗಿದ. ಆತ್ಮಾಭಿಮಾನ ಯಾರಿಗಿಲ್ಲ?
ಈಗ, ಮೊನ್ನೆ ಅವರೇ ಫೋನು ಮಾಡಿದ್ದರು. ಒಂದು ಐದು ಲಕ್ಷ ಕೊಡಿಸಿ ಅಂದರು. ಇವನಿಗೂ ಆಸೆ ಚಿಗುರಿತು. ಹಳೆ ಹೆಂಡತಿಗೆ ಫೋನು ಮಾಡಿದಾಗ ಆಕೆ ಸತ್ತರೂ ಬರುವುದಿಲ್ಲ ಎಂದಿದ್ದಳು. ಆದರೂ ಗಾಡಿ ಮಾಡಿಕೊಂಡು ಮಾವನಮನೆ ವರೆಗೆ ಹೋಗಿಬರುವ ಚಟ ಇವನಿಗೆ.
ಐದು ಲಕ್ಷದ ಪ್ರಸ್ತಾಪ ಗಂಡಿನಕಡೆಯವರ ಬಳಿ ಇಟ್ಟ. ದುಡ್ಡಿಗಾದರೆ ನೀನು ಬೇಕಾ? ಭೋ...ಮಗನೆ ಅಂತ ಅವರೂ ಬೈದರು! ಇವನೂ ಕೆರಳಿಹೋದ ಅಲ್ಲಿಂದ ಸುಮ್ಮನೆ ಕಾಲ್ಕಿತ್ತ.
ಸಂಜೆ ಗಂಡಿನಕಡೆಯದ್ದಿ ಫೋನು! ಐದು ಬಾರೀ ಜಾಸ್ತಿಆಯಿತು! ನಮ್ಮ ಗಂಡು ಚಂದ ಇದ್ದಾನೆ, ಹೆಣ್ಣಿನ ಚಂದ ನಮಗೆ ಬೇಡ. ಮೂರಕ್ಕೆ ಒಪ್ಪಿಸಿದರೆ. ನಿನಗೊಂದು ಸ್ವಲ್ಪ ಕೊಡುವ ಎಂದರು.
ಮತ್ತೆ ಬೈಕು ತೆಗೆದುಕೊಂಡು ಕರ್ಕಿಗೆ ಹೊರಟಾಗಲಿ ಜಿರಾಪತಿ ಮಳೆ ಹೋಯ್ದು ಬಾಯೊಳಗೆಲ್ಲಾ ನೀರು ತುಂಬಿ ಮಳೆಗೆ ರುಚಿ ಇಲ್ಲ ಅನಿಸಿದ್ದು.
ಮಳೆನೀರು ಮುಖವನ್ನು ಚುಚ್ಚಿದ ನೋವಿಗಿಂತ ಮಾನಗೆಟ್ಟ ತನ್ನ ವ್ಯವಹಾರ ಇನ್ನೂ ಚುಚ್ಚಿತ್ತು ಅವನನ್ನು.
ಅವರು ಬೈದಾಗ ಬೇಕಾದರೆ ಸಂಬಂಧ ಬೆಳೆಸಿ, ಬೇಡಾದರೆ ಬಿಡಿ ಭೋ...ಮಕ್ಕಳ ಎಂದು ನಾನೇಕೆ ಹೇಳಲಿಲ್ಲ? ಥು ಈ ಮಳೆನೀರು ಸಕ್ಕರೆಯಷ್ಟು ಸಿಹಿಯಿದ್ದರೆ ಎಷ್ಟು ಚನ್ನಾಗಿತ್ತು? ಅದನ್ನು ಕುಡಿಯುತ್ತಾ ಗಾಡಿ ಹೊಡೆಯಬಹುದಿತ್ತು. ಮಳೆನೀರಿಗೆ ರುಚಿ ಇಲ್ಲ, ಎಲ್ಲದಕ್ಕೂ ರುಚಿ ಇರಬೇಕೆಂದಿಲ್ಲ. ಕಂಡ ಸಂಬಂಧ ಎಲ್ಲ ಕೂಡಬೇಕೆಂದಿಲ್ಲ. ಭೋ.....ಮಗ ಎಂದು ಬೈಸಿಕೊಂಡು ನಾನೇಕೆ ಇವರನ್ನು ಕೂಡಿಸಬೇಕು ಸಾಯಲಿ ಈ ಭೋ...ಮಕ್ಕಳು ಎಂದು ಗಾಡಿಯನ್ನು ತಿರುಗಿಸಿಬಿಟ್ಟ. ಅದು ಮೊದಲೆ ನ್ಯಾಷನಲ್ ಹೈವೇ ಕೇಳಬೇಕೆ? ಅವನ ಗ್ರಹಚಾರಕ್ಕೆ ಅಷ್ಟೇಹೊತ್ತಿಗೆ ದೊಡ್ಡ ಮ್ಯಾಂಗ್ನೀಸ್ ಗೂಡ್ಸೊಂದು ಧುತ್ತನೆ ಬಂದಿತ್ತು.
ಇತ್ತ,ಅದೇ ಗಂಡು ಹೆಣ್ಣು ಬೇರೆ ಯಾವುದೋ ಬ್ರೋಕರನ್ನು ಹಿಡಿದು ಅವನ ಹದ್ನಾಲ್ಕನೇ ಸಮಾರಾಧನೆಯಂದೆ ಉಂಗುರ ಬದಲಾಯಿಸಿಕೊಂಡರಂತೆ ಎಂಬುದು ಮತ್ತೊಂದು ಕತೆ!
Sunday, December 15, 2019
ಮಳೆಗೆಂಥಾ ರುಚಿ
Subscribe to:
Post Comments (Atom)
No comments:
Post a Comment