Saturday, December 14, 2019

ಹೀಗೊಂದು ಭಟ್ಟರ ಕತೆ

ಬೆಳಿಗ್ಗೆ ಐದು ಗಂಟೆ.ರಾಮ ಭಟ್ಟರ ಮನೆಯ‌ ಹೊರಗೂ,ಒಳಗೂ ಹ್ಯಾಲೋವನ್ ಬಲ್ಬು ಉರಿಯುತ್ತಿತ್ತು.ಶಿಕಾರಿ ಮುಗಿಸಿ ಮನೆಗೆ ಹೊರಟಿದ್ದ ಗೋವಿಂದನಿಗೆ ಅದನ್ನು ನೋಡಿ ಇವತ್ತು ಅಮಾವಾಸ್ಯೆ ಎಂದು ನೆನಪಾಯ್ತು
."ನೀರು ಬಿಸಿ ಆಯ್ತಾ?" ಭಟ್ಟರು ಹೆಂಡತಿಯಬಳಿ ಕೇಳಿ "ಈಗಷ್ಟೆ ಬೆಂಕಿ ವಟ್ಟಿದ್ದೆ ಕೂಡ್ಲೇ ಬಿಸಿ ಅಪ್ಲೆ ಎಂತದು,ಸೌದಿ ಸ್ವಲ್ಪ ಮುಂದ್ ಮಾಡಿ ಹಾಲ್ ಕರೀತಿದ್ದೆ"ಎಂಬ ಉತ್ತರ ಪಡೆದರು.ನೀರು ಬಿಸಿ ಆಗುವ ತನಕ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ನೆನಪಾದದ್ದು ಮೊಬೈಲು.ಮಗ ಕೆಲಸ ಮಾಡುತ್ತಿದ್ದ ಅಂಗಡಿಯಿಂದ ಆರ್ನೂರು ರೂಪಾಯಿಗೆ ಒಂದು ಥರ್ಡ ಕ್ಲಾಸ್ ಥರ್ಡ ಹ್ಯಾಂಡ್ ಹಳೆ‌ ಲಟ್ಟು ಸ್ಯಾಮ್ಸಂಗ್ ಕೀಪ್ಯಾಡ್ ಮೊಬೈಲು ತಂದುಕೊಟ್ಟಿದ್ದ,ಅದಕ್ಕೊಂದು ಎರಡು ಜೀಬೀ ಮೆಮೋರಿ ಕಾರ್ಡು ಸಾಹುಕಾರನ ಕೃಪಾ ಕಟಾಕ್ಷದಿಂದ ಸಿಕ್ಕಿತ್ತು.ಅದರಲ್ಲಿ ಒಂದಿಷ್ಟು ಹಳೆಯ ರಾಜಕುಮಾರನ ಸಿನಿಮಾದ ಹಾಡುಗಳನ್ನು ತುಂಬಿಸಿಟ್ಟಿದ್ದ.ಅಪ್ಪನಿಗೆ ಹಾಡು ಹಾಕಿಕೊಳ್ಳುವ ಮೂಲಭೂತ ಶಿಕ್ಷಣ ಕೊಟ್ಟಿಟ್ಟಿದ್ಜ.ಬೇಜಾರಾದಾಗೆಲ್ಲ ದೂರದರ್ಶನದ ಮೂಲಭೂತ ಸೌಕರ್ಯ ಇಲ್ಲದ ಕಾರಣ ಆ ಮೊಬೈಲಿನಲ್ಲಿ ಹಾಡು ಕೇಳುವುದು ಭಟ್ಟರ ರೂಢಿ.ಹಾಡು ಹಾಕಿದರು."ಬಾನಿಗೊಂದು ಎಲ್ಲೆ ಎಲ್ಲಿದೇ ನಿನ್ನಾಸೆಗೆಲ್ಲಿ ‌ಕೊನೆಯಿದೇ" ಹಾಡು ಕೇಳಿ ಪಡುತ್ತಿದ್ದ ಆನಂದಕ್ಕೆ ಹೆಂಡತಿ ಸೀತಮ್ಮನ ಕೂಗು ಅಡ್ಡಗಾಲು ಹಾಕಿತು."ನೀರ್ ಬಿಶಿ ಆತು,ಯೋಳ್ ಗಂಟೆಗಾದ್ರೂ ಹೋಗ್ ಮುಟ್ತ್ರಾ, ಅಲ ಆ ಸುಟ್ ಪದ್ಯ ಕೇಳ್ತೇ ಕೂತ್ಕತ್ರಾ?" ಎಂದರು.
ಹೌದು ಭಟ್ಟರು ಅಷ್ಟು ಬೇಗ ಏಳಲೂ ಕಾರಣವಿತ್ತು.ಆ ದಿನ ಅಮಾವಾಸ್ಯೆ.ಊರಿಗಿದ್ದದ್ದು ಒಂದು ದೇವಸ್ಥಾನ.ಅದೂ ಬೆಟ್ಟದ ಮಧ್ಯ ಇತ್ತು.ಪ್ರತಿ ದಿನ ಅಲ್ಲಿ ಹೋಗಿ ಅಲ್ಲಿನ ಅಮ್ಮನವರಿಗೆ ಪೂಜೆ ಮಾಡುತ್ತಿದ್ದವರು ಭಟ್ಟರು.ದಿನಾ ಹತ್ತು ಗಂಟೆಗೆ ಹೋದರೆ ಸಾಕಿತ್ತು ಆದರೆ ಕಾರ್ತೀಕದ ಅಮಾವಾಸ್ಯೆ ಮಾತ್ರ ಅಲ್ಲಿ‌ ವಿಶೇಷ,ಆದಿನ‌ ಊರಿನಲ್ಲಿ ದೇವರ ಉತ್ಸವ.ಬೆಳಿಗ್ಗೆ ಬೆಟ್ಟದಿಂದ ಉತ್ಸವ ಹೊರಟರೆ ಹಿಂದಿರುಗಿ ಯಥಾಸ್ಥಾನಕ್ಕೆ ಬಂದು ಮುಟ್ಟಲು ಮಧ್ಯ ರಾತ್ರಿ ಆಗುತ್ತಿತ್ತು.ಊರಿನ ಪ್ರತಿಮನೆಗೂ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಮಾಡಿ ಅವರ‌ ಮನೆಯಲ್ಲಿ ಕಾಯಿ ಒಡೆದು ನೈವೇದ್ಯ ಮಾಡುವ ವಿಶೇಷ ಜವಾಬ್ದಾರಿ ಆದಿನ‌ ಭಟ್ಟರಿಗಿರುತ್ತಿತ್ತು.ಒಂದೊಂದು ಮನೆಯವರು ಯಥಾಶಕ್ತಿ ದಕ್ಷಿಣೆಯನ್ನು ಕೊಡುತ್ತಿದ್ದರು ಹಾಗಾಗಿ ಭಟ್ಟರಿಗೆ ಕೆಲಸದಲ್ಲಿ ಬೇಜಾರಿರಲಿಲ್ಲ.ಆದರೆ ಅವರ‌ ಆ ಉತ್ಸಾಹಕ್ಕೆ ಹಿನ್ನೆಡೆ ಎಂಬಂತೆ ಹೋದವರ್ಷ ಉತ್ಸವದ ದಿನ‌ ಚಿಕ್ಕದಾಗಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.ಅವರು ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಬಂದ ಕೆಲಸ ಅದು.ಅದನ್ನು ಮಗನಿಗೆ ಬಿಟ್ಟು ಬೇರೆ ಯಾರಿಗೂ ಕೊಡುವ ಇಷ್ಟ ಭಟ್ಟರಿಗಿರಲಿಲ್ಲ.ಆದ್ದರಿಂದ ಉತ್ಸವದ‌ ಮರುದಿನ ಮನೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು.ಮಗನ ಬಳಿ‌ "ಇನ್ನು ಒಂದು ತಪ್ರೆ ಎರ್ಡು ಉತ್ಸವ ನಾ ಮಾಡ್ತೆ ಆಮೇಲ್‌ ಪೂಜೆ ಉತ್ಸವ‌ ಎಲ್ ಜಬಾದಾರಿ ನಿಂದೇಯ ಹ್ಞ" ಎಂದಿದ್ದರು ಅದಕ್ಕೆ ಮಗ ಪ್ರಕಾಶ "ನೋಡ್ವ" ಎಂಬ ಹಾರಿಕೆಯ ಉತ್ತರ ಕೊಟ್ಟಿದ್ದ.ಅವನ ಉತ್ತರ‌ದಲ್ಲೇ ಅವನಿಗೆ ಮನಸ್ಸಿಲ್ಲ‌ ಅಂತ ತಿಳಿಯುತ್ತಿತ್ತು.ಅವನ ನಿರಾಸಕ್ತಿಗೂ ಕಾರಣವಿತ್ತು.ಪ್ರಕಾಶ ಮಂತ್ರ ಕಲಿತವನಲ್ಲ ಆದಕಾರಣ ಅಪ್ಪನನ್ನು ಕರೆದಂತೆ ಊರಿನಲ್ಲಿ ಅವನನ್ನು ಪೌರೋಹಿತ್ಯಕ್ಕೆ ಕರೆಯುತ್ತಿರಲಿಲ್ಲ.ಮಂತ್ರ ಕಲಿಯಲಿ ಎಂದು ಭಟ್ರು ಮಗನನ್ನು ವರದಳ್ಳಿಗೆ ಸೇರಿಸಿದ್ದರು ಆದ್ದರಿಂದ ಹತ್ತನೇ ತರಗತಿಗೆ ಶಾಲೆ ಬಿಟ್ಟಿದ್ದ.ಆದರೆ ಆರೆ ತಿಂಗಳಕ್ಕೆ ಮಂತ್ರ ಅವನಿಗೆ ಬೇಜಾರು ಬಂದಿತ್ತು,ಮಂತ್ರ ಅವನ ತಲೆಗೂ ಹತ್ತಿರಲಿಲ್ಲ.ಅಲ್ಲಿಂದ ಹಿಂದಿರುಗಿ ಮನೆಗೆ ಬಂದಿದ್ದ.ಮತ್ತೆ ತಿರುಗಿ ಶಾಲೆಗೆ ಹೋಗುವ ಗೋಜಿಗೆ ಹೋಗಲಿಲ್ಲ.ಖಾಲಿ ಮನೆಯಲ್ಲಿರುತ್ತಿದ್ದ ಮಗನಿಗೆ ಭಟ್ಟರು ಊರ ಮುಖ್ಯಸ್ಥರ ಭಯಂಕರ ಇನ್ಪ್ಲೂಯನ್ಸಿನಲ್ಲಿ ಪೇಟೆಯಲ್ಲಿ ಮೊಬೈಲ್ ಅಂಗಡಿ ಒಂದರಲ್ಲಿ ಕೆಲಸ ಕೊಡಿಸಿದ್ದರು.ತಿಂಗಳಿಗೆ ನಾಲ್ಕು ಸಾವಿರ ದುಡಿಯುತ್ತಿದ್ದ.ದೇವಸ್ಥಾನದ ಪೂಜೆಯಲ್ಲಿ ಭಟ್ರು ತಿಂಗಳಿಗೆ ಎರಡು ಸಾವಿರ ಗಳಿಸುತ್ತಿದ್ದರು.ಅಪರೂಪಕ್ಕೆ ಊರಿನಲ್ಲಿ ಪೌರೋಹಿತ್ಯವನ್ನೂ ಮಾಡಿ ಸ್ವಲ್ಪ ಹಣ‌ ಗಳಿಸುತ್ತಿದ್ದರು ಜೊತೆಗೆ ಒಂದು ಐವತ್ತು ಅಡಿಕೆ ಮರ‌ ಕೂಡ ಇತ್ತು‌.ಜೀವನಕ್ಕೆ ಹೀಗೆ ನಡೆದರೆ ಕಷ್ಟ ಇರಲಿಲ್ಲ.ಆದರೆ ಈಗ ಭಟ್ರು ನಿವೃತ್ತಿಯ ಯೋಚನೆ ಮಾಡಿ ಮಗನಿಗೆ ಪಟ್ಟ ಕಟ್ಟುವ ಯೋಚನೆಯಲ್ಲಿದ್ದರು.ಇದಕ್ಕೆ ಮಗನೂ ಒಪ್ಪಿದ್ದಾನೆ ಅಂದುಕೊಂಡಿದ್ದರು.
ನೀರು ಬಿಸಿಯಾದ ವಿಷಯ ಕೇಳಿ ಹಾಡು ಬಂದು ಮಾಡಿ ಟವಲ್ ತೆಗೆದುಕೊಂಡು ಸ್ನಾನಕ್ಕೆ ಹೊರಟರು.ಸ್ನಾನ ಮಾಡಿ ಹೊರಬರುವುದಕ್ಕೂ ಮಗ ಏಳುವುದಕ್ಕೂ ಸರಿ ಆಯ್ತು.ಅವನನ್ನು‌ ಕಂಡು
"ಇದು ನನ್ನ ಕೊನೆ ಉತ್ಸವ ಮುಂದಿನ ವರ್ಷದಿಂದ ನಿಂಗೆ ಬಂತು,ಹೇಗೇಗೆ ಮಾಡ್ಬೇಕು ಅಂತೆ ಸಮಾ ನೋಡ್ಕ ಇವತ್ತು ನೀನು ಬಾ.ಕೆಲ್ಸಕ್ಕೆ ಹೋಗಡ ಎಂದರು." ಅದಕ್ಕೆ ಪ್ರಕಾಶ "ಎಂತಾ! ನಾನು ಉತ್ಸವ ನಡೆಸೂದಾ? ಅದೆಲ್ಲ ಆಗ್ತಿಲ್ಲೆ ಆ ಆಸೆ ಎಲ್ಲ ಇಟ್ಕಂಬ್ದ ಬ್ಯಾಡ"ಅಂದ.ಭಟ್ಟರಿಗೆ ದಿಗಿಲು ಬಡಿದಂತಾಗಿತ್ತು.ಮಗನ ಮಾತು ಕೇಳಿ ಸೀತಮ್ಮ ಕೂಡಾ ಹೊರಗೆ ಬಂದರು.ಭಟ್ಟರು "ನಮ್ಮ ಅಪ್ಪ ಅಜ್ಜನ ಕಾಲದಿಂದ ನಡೆಸ್ಕ ಬಂದ ಪದ್ದತಿ ಇದು.ನೀ ಆಗ್ತಿಲ್ಲೆ ಹೇಳುಲ್ ಬತ್ತಿಲ್ಲೆ"ಎಂದರು ಅದಕ್ಕೆ ಮಗ ಸ್ವಲ್ಪ‌ ಕೋಪಗೊಂಡ "ಆಗ್ತಿಲ್ಲೆ‌ ಅಂದ್ರೆ ಆಗ್ತಿಲ್ಲೆ,ಅದೆಲ್ಲ ಹಿಡ್ಕಂಡ್ರೆ ಪೇಟೆ ಕೆಲ್ಸ ಬಿಡಕಾಗ್ತು ಅದೆಲ್ಲ ಸಾದ್ಯಿಲ್ಲೆ"ಅಂದ."ಸಾದ್ಯಿಲ್ಯ? ಹಾಂಗಾರ್ ನೀ ಈ ಮನೇಲ್ ಇಪ್ಲಕ್ಕೆ ಬತ್ತಿಲ್ಲೆ"ಅಂದರು ಭಟ್ರು.ಅದಕ್ಕೆ ಮಗ"ಲೈಕ್ ಆತು ನಾ ಪೇಟೇಲ್ ಬಾಡ್ಗೆ ಮನೆ ಹುಡ್ಕ್ತೆ ಇದ್ದೆ." ಎನ್ನುತ್ತಾ ಹೊರಗೆ ನಡೆದುಬಿಟ್ಟ.ಭಟ್ಟರಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು.ಎರಡು ತಿಂಗಳ ಹಿಂದಷ್ಟೇ ಕೇರಿ ತುದಿಯ‌ ಗೊಯ್ದನ ಮಗನಿಗೆ ಏನೋ‌ ಹೇಳಿದನೆಂದು ಪ್ರಕಾಶನ‌ ಮೇಲೆ ಅಟ್ರೋಸಿಟಿ ಕೇಸು ಹಾಕಿದ್ದಾಗ ಅವರಿವರ ಕೈ ಕಾಲು ‌ಹಿಡಿದು ಕೇಸನ್ನು ಹಿಂದಕ್ಕೆ ತೆಗೆಸಿದ ನೋವು ಇನ್ನೂ ಮಾಸಿರಲಿಲ್ಲ, ಅಷ್ಟರಲ್ಲೇ ಇಂತಹಾ ಪೆಟ್ಟು ಕೊಟ್ಟಿದ್ದ ಮಗ.
ಭಾರವಾದ ಮನಸಿನಲ್ಲೇ ಉತ್ಸವ‌ ಪೂಜೆ ನಡೆಸಿದರು.ಇಷ್ಟು ದಿನ ಶೃದ್ಧಾ ಭಕ್ತಿ ಸಮನ್ವಿತವಾಗಿ ಮಾಡುತ್ತಿದ್ದ ಪೂಜೆಯ‌ ಮೇಲೆ ಅಂದೇಕೋ ನಂಬಿಕೆ ಇರಲಿಲ್ಲ.ತಲೆಯಲ್ಲಿ "ಬಾನಿಗೊಂದು ಎಲ್ಲೆ ಎಲ್ಲಿದೇ" ಹಾಡು ತುಂಬೀತ್ತು. ಆ ಮಂತ್ರದ ಜೊತೆ‌ ಹಾಡನ್ನು ಹೇಳಿ ವಿಷಾದದ ನಗೆಯನ್ನೂ ನಕ್ಕಿದ್ದರು.ಇಷ್ಟು ದಿನ ಮಾಡಿದ ಪೂಜೆಗೆ ದೇವರೇಕೆ ನನಗೆ ಒಲಿಯಲಿಲ್ಲ,ಮಗ ಹೀಗಂದುಬಿಟ್ಟನಲ್ಲ ಎಂಬ ನೋವೆ ಅವರನ್ನು ತುಂಬಿತ್ತು.
ಉತ್ಸವ ಊರು ತಿರುಗಿ ಬೆಟ್ಟದಲ್ಲಿದ್ದ ದೇವಸ್ಥಾನಕ್ಕೆ ಹಿಂದಿರುಗಿ‌ ಬಂತು.ಅಷ್ಟಾವದಾನ ಸೇವೆಗಳು, ಮಂಗಳಾರತಿ,ತೀರ್ಥ ಪ್ರಸಾದ ವಿತರಣೆ ನಡೆದವು.ಬಂದ ಜನರೆಲ್ಲ ಹೊರಟರು.ಹೋಗುವಾಗ ಪಂಚಾಯಿತಿ ಅಧ್ಯಕ್ಷ ಕುಪ್ಪಣ್ಣ ಶೆಟ್ಟರು ಭಟ್ಟರನ್ನೊಮ್ಮೆ ಕರೆದರು.ಮಗನಿಗೆ ಪೇಟೆಯಲ್ಲಿ ಅವರದೇ ಜಾತಿಯವನೊಬ್ಬನ ಮೊಬೈಲ್ ಅಂಗಡಿಯಲ್ಲಿ ಕೆಲಸ ಕೊಡಿಸಿದ್ದು ಇವರೆ ಆದ್ದರಿಂದ ಭಟ್ಟರಿಗೆ ಅವರಮೇಲೆ ಸ್ವಲ್ಪ ಗೌರವ.ಅವರು ಭಟ್ಟರ ಬಳಿ"ನೋಡಿ ಬಟ್ರೇ ನಿಮ್ಮತ್ರ ಹೇಳ್ಬಾರ್ದು ಆದ್ರೂ ಹೇಳ್ತೇನೆ.ನಿಮ್ಮ ಪ್ರಕಾಶ ಪೇಟೆಯಲ್ಲಿ ನಮ್ಮವ್ರ ಹುಡುಗಿ ಒಂದನ್ನ ಲವ್‌ ಮಾಡಿದ್ದಾನಂತೆ.ಮೊನ್ನೆ ಹುಡುಗಿ ಕಡೆಯವರು ನಿಮ್ಮವ್ನಿಗೆ ಹೊಡಿಲಿಕ್ಕೆ ಬಂದಿದ್ರಂತೆ ನಮ್ಮ ದಿವಾಕರ ತಪ್ಸಿದಾನೆ.ಮಾಣಿ,ಕೂಸು ಬೆಂಗ್ಳೂರಿಗೆ ಓಡುವ ಐಡೀರಿಯಾ ಮಾಡಿದಾರಂತೆ ನಂಗೆ ದಿವಾಕರ ಹೇಳ್ದ.ನಿಮ್ಮ‌‌ ಹುಡುಗನಿಗೆ ಸ್ವಲ್ಪ ಹೇಳಿ‌ ಅದೆಲ್ಲ ಸಮ ಅಲ್ಲ ಅಂತ"ಎಂದು ಕುತ್ತಿಗೆ ಉದ್ದ ಮಾಡಿ ಅಮ್ಮನವರಿಗೊಂದು ನಮಸ್ಕಾರ ಮಾಡಿ ನಡೆದರು.
ಭಟ್ಟರ ಗಂಟಲು ಒಣಗಿತ್ತು,ಆಡಲು ಮಾತು‌ ಇರಲಿಲ್ಲ.ಬಹಳ ಹೊತ್ತು ಅಮ್ಮನವರ ಎದುರೇ ಕುಳಿತರು.ಕೊನೆಗೆ ಮನೆಗೆ ಹೊರಟರು.
ಗದ್ದೆಯ ಬದುವಿನ ಮೇಲೆ ನಡೆಯುತ್ತಿದ್ದ ಭಟ್ಟರಿಗೆ ವಿಚಿತ್ರ ಶಬ್ಧಗಳು ಕೇಳುತ್ತಿದ್ದವು."ಬಾನಿಗೊಂದು ಎಲ್ಲೆ ಎಲ್ಲಿದೇ" ಹಾಡು,ಮಗನ ಮಾತು,ಶೆಟ್ಟರ ಗುಟ್ಟು,ಕಾನ್ ಜಿರಲೆಯ ಕಿರ್ ಗುಡುವ ಸದ್ದು ಕಿವಿಯನ್ನು ಮುತ್ತಿತ್ತು.ಕಣ್ಣಿನ ಮೂಂದೆ ಬರೀ ಮಗನ ಮುಖ.ಇವೆಲ್ಲ ಸೇರಿ ಅವರಿಗೆ ಹೊಸ ತರಹದ ನೋವೊಂದನ್ನು ಕೊಡುತ್ತಿದ್ದವು.ಇದರ ಮಧ್ಯೆ ಅವರಿಗೆ ಎದೆನೋವು ಅರಿವಿಗೇ ಬರಲಿಲ್ಲ.ಪಯಣ ಸಾಕೆನಿಸಿತು, ಅಲ್ಲೇ ಕುಸಿದರು,ಕೂತರು.ಬಾಯಲ್ಲಿ"ಬಾನಿಗೊಂದು ಎಲ್ಲೆ ಎಲ್ಲಿದೇ"ಹಾಡು,ವಿಷಾದದ ನಗು ನಗುವಿನಲ್ಲಿ ತನ್ನ ಜೀವನಕ್ಕೇ ಕೋಪ ತರಿಸುವಂತಹ ಕುಹಕ.ಏಕೋ ಏಳಬೇಕು ಎನಿಸಲಿಲ್ಲ,ಮಲಗಿದರು,ಮಲಗಿಬಿಟ್ಟರು.
ಬೆಳಕಾಯಿತು,ಸೀತಮ್ಮ ಗಂಡ ಬರಲಿಲ್ಲ, ದೇವಸ್ಥಾನದಲ್ಲೇ ಉಳಿದಿರಬಹುದೆಂದು ಅಲ್ಲೇ ಹೊರಟರು.ಗದ್ದೆಯಲ್ಲಿ ಬಹಳ ಜನ ಸೇರಿದ್ದರು."ರಾತ್ರಿ ಪೂಜೆ ಮಾಡಿದ್ರಲ್ಲ ಮಾರಾಯ ಆರಾಮ್ ಇದ್ರಲ.ಇಲ್ ನೋಡ್ರೆ ಹೀಂಗಾಗದೆ.ಮನ್ಷನ ಜೀವವೇ ವಿಚಿತ್ರ ಅಲ್ವಾ!?"ಎನ್ನುತ್ತಿದ್ದ ಮಾತು ಕೇಳಿತು.


No comments:

Post a Comment