Friday, November 29, 2019

ಕೆಲವು ಕನಸುಗಳು

   ಸಾಹುಕಾರರ ದೊಡ್ಡಮನೆಗೆ ಹಾಕಿದ್ದ ಮಿಣಿಮಿಣಿ ಬಲ್ಬಿನ ಸರ ಕೆಂಪುಬಿಳಿಕೆಂಪುಬಿಳಿಯಾಗಿ ತೋರುತ್ತಿತ್ತು. ಹೆಗಲ ಮೇಲೆ ಒಂದಿಪ್ಪತ್ತೈದು ಕೇಜಿ ತೂಕದ ಅಕ್ಕಿ ಚೀಲ ಹೊತ್ತಿದ್ದ ಅವನು ಬಿರ್ ಬಿರನೆ ಓಡಿದಂತೆ ನಡೆಯುತ್ತಿದ್ದ.ಹಿಂಗಾಲಿನ ಕೆಳಗೆ ನವೆದು ತೂತಾಗಿದ್ದ ಹವಾಯಿ ಚಪ್ಪಲಿ ಈಗ ಉಂಗುಷ್ಟವನ್ನೂ ಕಿತ್ತುಕೊಂಡಿತ್ತು. ಅಲ್ಲಲ್ಲಿ ನಿಂತು ಸರಿಮಾಡಿಕೊಳ್ಳುತ್ತಾ, ಕುಂಟುತ್ತಾ ನಡೆಯುತ್ತಿದ್ದ. ಪೇಟೆಯಿಂದ ಮದುವೆ ಅಡುಗೆಗೆ ಸಾಮಾನು ಹೋತ್ತು ತಂದಿದ್ದ ಲಾರಿಯಿಂದ ಈ ಚೀಲವೊಂದು ಕುಪ್ಪಳಿಸಿ ಮನೆಯಿಂದ ಒಂದು ಮೈಲಿ ದೂರದಲ್ಲಿ ಬಿದ್ದಿತ್ತು. ಇವನಪ್ಪ ಸಾವ್ಕಾರರ ಮನೆಯ ಖಾಯಂ ಆಳು, ಹಾಗಾಗಿ ಅವನಿಗೆ ಆ ಚೀಲವನ್ನು ಹುಡುಕಿ ಹೊತ್ತು ತರುವ ಕೆಲಸ ಬಂದಿತ್ತಾದರೂ ಅವನಿಗೆ ಸಾರಾಯಿ ಅಂಗಡಿಗೆ ಹೋಗುವ ಬಹಳ ಮುಖ್ಯವಾದ ಕೆಲಸ ಇದ್ದದ್ದರಿಂದ ಅದು ಇವನಿಗೆ ಬಂತು.
            ಸಾವ್ಕಾರರ ಮಗಳ ಮದುವೆ ನಾಳೆ! ಈ ವಿಷಯ ನೆನಪಾಗುತ್ತಿದ್ದಂತೆ ಅವನು ಒಂದು ಸಾರಿ ನಿಂತ. ಚಪ್ಪಲಿಯ ಉಂಗುಷ್ಟ ಕಿತ್ತು ಹೋಗಿತ್ತು ಬಹಳ ಕೋಪ ಬಂತು, ಯಾಕೆ ಎಂದು ಅವನಿಗೆ ಗೊತ್ತಿದ್ದರೂ ಗೊತ್ತಾಗಲಿಲ್ಲ. ಅದೇ ಕೋಪದಲ್ಲಿ ಉಂಗುಷ್ಟ ಕಿತ್ತು ಹೋಗಿದ್ದ ಚಪ್ಪಲಿಯನ್ನು ಎಡಗೈಲಿ ತೆಗೆದುಕೊಂಡು ಇದ್ದಷ್ಟೂ ತಾಕತ್ತು ಹಾಕಿ ದೂರ ಎಸೆದ. ಒಂದೇ ಚಪ್ಪಲಿಯಲ್ಲಿ ಒಂದು ನಾಲ್ಕು ಹೆಜ್ಜೆ ನಡೆದ. ಅದೂ ಕೋಪ ತರಿಸಿತು. ಸಾವ್ಕಾರರ ಮನೆ ಈಗ ಸ್ವಲ್ಪ ಸ್ಪಷ್ಟವಾಗಿತ್ತು. ಈಗ ಬಲ್ಪಿನ ಸರದಲ್ಲಿ ಕೆಂಪು, ಹಸಿರು, ನೀಲಿ, ಹಳದಿ ಹೀಗೆ ನಾಲ್ಕಾರು ಬಣ್ಣಗಳಿದ್ದವು. ಒಂಟಿ ಚಪ್ಫಲಿಯ ಕಿರಿಕಿರಿಯ ಮೇಲೆ ಈ ಕೈಗೆಟುಕದ ವಿಜ್ಞಾನ ಇನ್ನೂ ಕಂಗೆಡಿಸಿತು. ಕೋಪದಲ್ಲಿ 'ಯೇ..' ಎಂದು ಕೂಗಿದ,ಆ ಬರಕ್ಕೆ ಬಾಯಲ್ಲಿ ಹಾಕಿಕೊಂಡಿದ್ದ ಬರೀ ತಂಬಾಕಿನ ಹುಡಿ ಗಂಟಲೊಳಗೆ ಇಳಿಯಿತು.
      ಮತ್ತೆ 'ಯೇ ಬೇವರ್ಸಿ'ಎಂದು ನಿರ್ವಿಕಾರವಾಗಿ ನಿರಾಕಾರವೊಂದಕ್ಕೆ ಬೈದು ಅಕ್ಕಿ ಚೀಲವನ್ನು ಮುಂದಕ್ಕೆ ಎಸೆದ. ಅದೊಂದೈದಾರು ಅಡಿ ದೂರಕ್ಕೆ ಹೋಗಿ ದೊಪ್ಪನೆ ಬಿತ್ತು. ಹಾಕಿಕೊಂಡಿದ್ದ ಒಂಟಿ ಚಪ್ಪಲಿಯನ್ನು ಈ ಬಾರಿ ಬಲಗೈಯಲ್ಲೇ ತೆಗೆದುಕೊಂಡು ಓಡಿಹೋಗಿ ಎಸೆದ. 
        ಓಡಿದ ಬರದಲ್ಲಿ ಹೆಬ್ಬೆಟ್ಟಿಗೆ ಕಲ್ಲೊಂದು ಬಡಿಯಿತು. ಉಗುರು ಕಿತ್ತು ರಕ್ತ ಚಿಮ್ಮಿತು. ಅಲ್ಲೇ ಕುಸಿದು ಕೂತ.
            ಸಕಾರಣವಾದರೂ ಅವ್ಯಕ್ತವಾದ ಕೋಪ ವ್ಯಕ್ತವಾಗುತ್ತಿತ್ತು. ಸಾವ್ಕಾರರ ಮಗಳ ಜೊತೆ ಸೆಣ್ಣವನಿದ್ದಾಗಿಂದ ಬೆಳೆದಿದ್ದೇನೆ ನಿಜ! ಅವಳೇ ಕೆಟ್ಟ ಚಟ ಬಿಡು ಎಂದಳೆಂದು ಕುಡಿತ ಬಿಟ್ಟು ಗುಟ್ಕಾ ತಿನ್ನಲು ಶುರುಮಾಡಿದ್ದೇನೆ ನಿಜ ಆದರೆ ಅವಳ ಮದುವೆ ಅಂತಾದರೆ ನಾನ್ಯಾಕೆ ಕೋಪ ಮಾಡಿಕೊಳ್ಳಬೇಕು! ಅವನಿಗೆ ಅಂತಹ ಪ್ರಶ್ನೆಗಳೆಲ್ಲ ತಲೆಗೇ ಬರುವುದಿಲ್ಲ.
           ಈಗ ಕರೆಂಟು ಹೋಗಿದಬೇಕು, ಬಲ್ಬಿನ ಸರದಲ್ಲಿ ಬೆಳಕೇ ಇಲ್ಲ.
       ಒಂದು ತಂಬಾಕಿನ ಕೊಟ್ಟೆ ಒಡೆದು ಬಾಯಿಗೆ ಹಾಕಿದ. ಹೆಬ್ಬೆರಳ ತುದಿಗೆ ಕೈಗೆ ಸಿಕ್ಕಿದ ಗಿಡವೊಂದರ ಎಲೆ ಒತ್ತಿ ಹಿಡಿದ. ಸ್ವಲ್ಪಹೊತ್ತು ಬಿಟ್ಟು ಹೊರಡುವ ಎನಿಸಿತು. ಸಾವ್ಕಾರರ ಮಗಳು ನಾಳೆ ಗಂಡನ ಮನೆಗೆ ಹೋಗುತ್ತಾಳೆ ಒಂದು ವರ್ಷದಲ್ಲಿ ಅವಳಿಗೆ ಮಗನೋ, ಮಗಳೋ ಹುಟ್ಟುತ್ತದೆ ಎಂಬುದು ಅವನಿಗೆ ಮತ್ತೆ ಮತ್ತೆ ಕೋಪ ತರಿಸುತ್ತದೆ ಆದರೆ ಯಾಕೆಂದು ಗೊತ್ತಿಲ್ಲ ಆದರೆ ನಾಳೆ ಮದುವೆಗೆ, ನಾಡಿದ್ದು ಬೀಗರೂಟಕ್ಕೆ ಕೋಳಿ ಕಡಿಯುತ್ತಾರೆ ಎಂಬ ಸಂತೋಷವೂ ಇಲ್ಲದಿಲ್ಲ.
         ಇಷ್ಟೆಲ್ಲ ಯೋಚಿಸುತ್ತಿರುವಾಗ ಬೆನ್ನ ಮೇಲೆ ಯಾರೋ ಒದ್ದರು, ತಿರುಗಿ ನೋಡಿದರೆ ಅಪ್ಪ. ಮತ್ತೊಂದು ಒದ್ದ. ಇವನು ಎದ್ದ. ಮುಂದೆ ಓಡಿದ ಸ್ವಲ್ಪದೂರದಲ್ಲಿ ಅಕ್ಕಿ ಚೀಲ ಬಿದ್ದಿತ್ತು, ಒಡೆದು.
       ಕೆಲವು ಕನಸುಗಳು ನಸಾಗುವುದಿಲ್ಲ, ಇನ್ನು ಕೆಲವು ಅರ್ಥವೇ ಆಗುವುದಿಲ್ಲ.

No comments:

Post a Comment