Sunday, January 7, 2024

ಉತ್ತರಕಾಂಡ - ಕೆಲವು ಟಿಪ್ಪಣಿಗಳು


ನಾಲ್ಕುವರೆ ವರ್ಷಗಳ ನಂತರದ ಮರು ಓದಿನ ಹೊತ್ತಿನಲ್ಲಿ ಉತ್ತರಕಾಂಡದ ಕುರಿತಾದ ಕೆಲವು ಟಿಪ್ಪಣಿಗಳಿವು.  ರಾಮನು ಮಹಾವಿಷ್ಣುವಿನ ಅವತಾರ ಸೀತೆ ಮಹಾಲಕ್ಷ್ಮಿಯ ಅವತಾರ ಎನ್ನುವ ಭಕ್ತಿಭಾವವನ್ನು ಕೆಲಹೊತ್ತು ಕಳಚಿಡದ ಹೊರತು ಈ ಟಿಪ್ಪಣಿಗಳಿಗೆ ಅರ್ಥ ಬರುವುದಿಲ್ಲ.


1. ಕೃತಜ್ಞತೆ ಯಲ್ಲಿ ಭೈರಪ್ಪ ಹೇಳುವಂತೆ ಉತ್ತರಕಾಂಡ ವಾಲ್ಮೀಕಿ ರಾಮಾಯಣವನ್ನಾಧರಿಸಿದ ಲೇಖಕನ ನೇರ ಸೃಜನಶೀಲ ಪ್ರತಿಕ್ರಿಯೆಯೇ ಹೊರತು ವಾಲ್ಮೀಕಿ ರಾಮಾಯಣದ re-telling ಅಲ್ಲ ಮತ್ತು ಈ ವ್ಯತ್ಯಾಸ ಸೂಕ್ಮ್ಮವಾದದ್ದು‌. ಈ ಪ್ರತಿಕ್ರಿಯೆ ಎನ್ನುವ ಶಬ್ಧ ನೇರ 'ಪರ್ವ' ಕಾದಂಬರಿಯನ್ನುದ್ದೇಶಿಸಿದ್ದು. ವಾಲ್ಮೀಕಿ ರಾಮಾಯಣಕ್ಕೆ parallel ಆದ ಕೃತಿಯೊಂದನ್ನೂ ನಿರ್ಮಿಸ ಬಹುದಾದ ಸೃಜನಶೀಲ ಸ್ವಾತಂತ್ರ್ಯಕ್ಕೆ ಭೈರಪ್ಪ ಕೃತಜ್ಞತೆ ಯಲ್ಲೇ ಅಡಿಗಲ್ಲು ಹಾಕಿಕೊಂಡಿದ್ದಾರೆ.


2. ಸುಕೇಶಿ ರಾಮನ ಕುರಿತು ಸೀತೆಯಲ್ಲಿ ಸದಾ ಒಳ್ಳೆಯ ಮಾತುಗಳನ್ನೇ ಆಡುತ್ತಾಳೆ. 'ಭಾವಯ್ಯ ಚಿನ್ನದಂಥ ಮನುಷ್ಯ, ಒಂದೆರಡು ವರ್ಷ ಸುಮ್ಮನಿರು. ಅವರೇ ಇಲ್ಲಿಗೆ ಬಂದು ನಿನ್ನನ್ನು ಕರಕೊಂಡು ಹೋಗ್ತಾರೆ ನೋಡು' ಎನ್ನುತ್ತಾಳೆ. 'ಅವರ ಸ್ವಭಾವ ನಿನಗೆ ಗೊತ್ತಿಲ್ಲ' ಎನ್ನುವ ಸೀತೆಯ ಪ್ರತ್ಯುತ್ತರದ ಹಿಂದಿರುವ, ಆತ ಚಿನ್ನದಂಥ ಮನುಷ್ಯ ಆಗಿರುವುದಕ್ಕೇ ತನಗೆ ಈ ಸ್ಥಿತಿ ಬಂದಿರುವುದು ಮತ್ತು ಅದೇ ಕಾರಣಕ್ಕಾಗಿಯೇ ಆತ ತನ್ನನ್ನು ಬಂದು ಕರಕೊಂಡು ಹೋಗುವುದಿಲ್ಲ ಎನ್ನುವ ಪ್ರಾಮಾಣಿಕ ಭಾವ ಸುಕೇಶಿಗೆ ತಿಳಿಯುವುದಿಲ್ಲ.


3. ರಾಮನು ಸೀತೆಯನ್ನು ತ್ಯಜಿಸುವ ಹೊತ್ತಿಗೆ ಉದ್ಭವಿಸುವ ಪರಿಸ್ಥಿತಿ ಬಹಳ ಗೋಜಲಿನದ್ದು. ಮನುಷ್ಯ ಸಹಜವಾಗಿ ನೋಡಿದರೆ ಅಲ್ಲಿ ಯಾರಲ್ಲೂ ತಪ್ಪನ್ನು ಹುಡುಕುವಂತಿಲ್ಲ. ರಾಮಾಯಣದ ಬರವಣಿಗೆಗೆ ಸ್ಪೂರ್ತಿಯಾದ ನಿಷಾದನು ಹಕ್ಕಿಯನ್ನು ಕೊಂದು ಗಂಡು ಮತ್ತು ಹೆಣ್ಣು ಹಕ್ಕಿಗಳನ್ನು ಬೇರ್ಪಡಿಸುವಂತೆ. ಇಲ್ಲಿ ವಿಧಿಯೇ ನಿಷಾದ ರೂಪದಲ್ಲಿ ಬಂದಿದೆ, ಹಾಗಾದರೆ ಇದು ನಿಷಾದನ ತಪ್ಪೇ ಎಂದರೆ ಅಲ್ಲ. ಹಾಗೂ ಬೇರ್ಪಡಿಸುವುದೇ ಅವನ ಕರ್ಮ. 

ರಾವಣನಂತಹ ರಾಕ್ಷಸನ ಅಧೀನದಲ್ಲಿದ್ದ ಸ್ತ್ರೀಯೊಬ್ಬಳು ದೈಹಿಕವಾಗಿ "ಪಾವಿತ್ರ್ಯ" ವನ್ನು ಉಳಿಸಿಕೊಂಡಿರಲು ಸಾಧ್ಯವೇ ಎಂಬ ಭಾವ ಜನಸಾಮಾನ್ಯರಲ್ಲಿ ಮೂಡುವುದು ಅಸಹಜವಲ್ಲ ಆದರೆ ಇದಕ್ಕೆ ರಾಮನ ಉತ್ತರ ಏನಿರಬೇಕಿತ್ತು? ಸೀತೆಯನ್ನು ಪರಿತ್ಯಜಿಸಿದರೆ ಏನರ್ಥ? ಜನರ ಮಾತನ್ನು ಪುರಸ್ಕರಿಸುವುದು ಬೇರೆ ಒಪ್ಪುವುದು ಬೇರೆ. ಇದನ್ನು ರಾಮ ಏಕೆ ಮರೆತ? ಸೀತೆಯನ್ನು ಮನಸಾ ಒಪ್ಪಿ ಗೌರವಿಸುತ್ತಿದ್ದ ಇನ್ನುಳಿದ ಪ್ರಜೆಗಳ ಭಾವನೆಗೆ ಬೆಲೆ ಇಲ್ಲವೆ?


4. "ನಿನಗೆ ರಾಮನ ಮೇಲೆ ಇದ್ದಷ್ಟು ಪ್ರೀತಿ ನನಗೆ ಲಕ್ಷ್ಮಣನ ಮೇಲೆ ಇರಲಿಲ್ಲವೇನೋ" ಎನ್ನುತ್ತಾಳೆ ಊರ್ಮಿಳೆ. ಆದರೆ, ಅವರಿಬ್ಬರ ಗಂಡಂದಿರ ಮೂಲ ಗುಣಗಳಲ್ಲೇ ಹೋಲಿಕೆ ಮಾಡಲಾರದಂತಹ ವ್ಯತ್ಯಾಸಗಳಿವೆ. ಇದೇ ವಾಕ್ಯವನ್ನೇ ಆಧಾರವಾಗಿಟ್ಟುಕೊಂಡಾಗ ಇನ್ನೊಂದು ಪ್ರಶ್ನೆ ಹುಟ್ಪುತ್ತದೆ. ಲಕ್ಷ್ಮಣನಿಗೆ ಊರ್ಮಿಳೆಯಲ್ಲಿರುವಷ್ಟು ಪ್ರೀತಿ ರಾಮನಿಗೆ ಸೀತೆಯಮೇಲಿರಲಿಲ್ಲವೇನೋ!


5. ಲಕ್ಷ್ಮಣನಿಗೆ ರಾಮನ ನಿರ್ಧಾರದ ಮೇಲೆ ಕೋಪವಿದೆ. ಆದರೆ, ಅದನ್ನು ವಿರೋಧಿಸುವ ಮತ್ತು ಆ ವಿರೋಧವನ್ನು ವ್ಯಕ್ತಪಡಿಸುವ ಸಾಮರ್ಥ್ಯ ಇಲ್ಲ. ರಾಮನ ಕುರಿತಾಗಿ ಅವನಲ್ಲಿರುವ ವಿಪರೀತ ಭಕ್ತಿ, ಗೌರವಗಳೂ ಅದಕ್ಕೊಂದು ಕಾರಣ ಇರಬಹುದು. ಲಕ್ಷ್ಮಣ ಅಯೋಧ್ಯೆಯನ್ನು ತೊರೆದದ್ದು ರಾಮನ ಮೇಲಿನ ಬೇಸರಕ್ಕಿಂತಲೂ, ರಾಮನನ್ನು, ಅವನ ನಿರ್ಧಾರವನ್ನು ಎದುರಿಸಲಾದ ತನ್ನ ಅಸಹಾಯಕತೆಯ ಮೇಲಿನ ಸಿಟ್ಟಿನಿಂದ ಮತ್ತು ಅಂತಹ ಅಸಹಾಯಕತೆಯನ್ನು ಸೃಷ್ಟಿಸುತ್ತಿರುವ ಬಂಧನಗಳ ಮೇಲಿನ ಸಿಟ್ಟಿನಿಂದ.


6. "ಪೆದ್ದಿ ನಿನಗೆ ಯಾವಾಗ ಅರ್ಥ ಆಗುತ್ತೆ? ಭಾರ ಹೊತ್ತು, ನೋವು ಉಂಡು, ಎದೆಯ ಶಕ್ತಿಯನ್ನು ಉಣ್ಣಿಸಿ ಸಾಕೋದೇ ಹೆಣ್ಣಿನ ಕರ್ತವ್ಯ, ಅಧಿಕಾರ ಅಪ್ಪನದು ಅಂತ ಶಾಸ್ತ್ರ ಹೇಳುತ್ತೆ, ಅವುಗಳ ಅಪ್ಪ ಬಿಟ್ಟಾನೆಯೇ?" - ಊರ್ಮಿಳೆ.


7. ಗೌತಮರು ಅಹಲ್ಯೆಯನ್ನು ತಾವು ಯಾರ ಎದುರಿನಲ್ಲಿ ತಜಿಸಿದ್ದರೋ ಅವರೆದುರಲ್ಲಿಯೇ ಸ್ವೀಕರಿಸಬೇಕೆಂದು ರಾಮ ಹೇಳುತ್ತಾನೆ. ಅಹಲ್ಯೆಯ ಪಾವಿತ್ರ್ಯವನ್ನು ಅಂಗೀಕರಿಸುವ ಸ್ಥಾನದಲ್ಲಿ ನಿಂತು ಗೌತಮರ ಲೋಕಕ್ಕೆ ಆಕೆಯನ್ನು ಸ್ವೀಕರಿಸುವುದಾಗಿ ಹೇಳಿದರೆ ಅವಳ ತಪ್ಪಿನ ಹೊರತಾಗಿಯೂ ಶುದ್ಧಿ ದೊರಕುತ್ತದೆ. ಎಂದರೆ, ಪಾತಿವ್ರತ್ಯದಂತಹ ವಿಚಾರದ ಕುರಿತು ಪ್ರಪಂಚ ಏನೇ ಮಾತಾಡಿದರೂ ಅದು ದಂಪತಿಗಳ ನಡುವಣ ವಿಚಾರ. ಪತಿಯಾದವನೇ ಪತ್ನಿಯನ್ನು ಒಪ್ಪಿದ ಮೇಲೆ ಪ್ರಪಂಚವೂ ಒಪ್ಪಬೇಕು.


ಇವು ಓದುತ್ತಾ ಅದರೊಟ್ಟಿಗೆ ನಾನು ಮಾಡಿಕೊಂಡ ಟಿಪ್ಪಣಿಗಳು. ಇದರ ನಂತರ ಓದುತ್ತಾ ಒಟ್ಟಿಗೇ ಹೀಗೆ ಬರೆಯುವುದು ಓದಿನ ಪೂರ್ಣಾನುಭವವನ್ನು ಕೊಡುವುದಿಲ್ಲ ಎಂದು ಹೀಗೆ ಟಿಪ್ಪಣಿ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ.

 

ಕಾದಂಬರಿಯನ್ನು ಪೂರ್ತಿ ಓದಿ ಮುಗಿಸುವ ಹೊತ್ತಿಗೆ ಲಕ್ಷ್ಮಣ ಮನಸ್ಸನ್ನು ಆವರಿಸಿಕೊಳ್ಳುತ್ತಾನೆ. ನಾನು ಓದಿದ ಕನ್ನಡ ಕಾದಂಬರಿಗಳಲ್ಲಿ ನನ್ನ ಮೆಚ್ಚಿನ ಪಾತ್ರ ಉತ್ತರಕಾಂಡದ ಲಕ್ಷ್ಮಣ. ನಿಜವಾಗಿಯೂ ಲಕ್ಷ್ಮಣ ಎಂಬುವವನಿದ್ದರೆ ಅವನು ಇಂತವನೇ ಆಗಿದ್ದನಿರಬೇಕು. 


ರಾಮನನ್ನು ಹುಡುಕ ಹೊರಟಾಗ ಸೀತಿಯಿಂದ ಅವನೆದುರಿಸಿದ ಭರ್ತ್ಸನೆಯ ನುಡಿಗಳು, ಸೀತೆಯನ್ನು ಬಿಟ್ಟು ಬಂದುದಕಾಗಿ ಆತ ರಾಮನಿಂದ ತಲೆ ಬಗ್ಗಿಸಿಕೊಂಡು ಕೇಳಿದ ಮಾತುಗಳು, ಅಗ್ನಿ ಪ್ರವೇಶಕ್ಕೆ ಹೊರಟ ಸೀತೆಯ ರಟ್ಟೆ ಹಿಡಿದು ರಾಮನ ಕುರಿತು ಅವನಾಡುವ ಮಾತುಗಳು, ಸೀತೆಯನ್ನು ವಾಲ್ಮೀಕ್ಯಾಶ್ರಮಕ್ಕೆ ಬಿಟ್ಟು ಬಂದಮೇಲೆ ಅವನು ತೆಗೆದುಕೊಂಡ ನಿರ್ಧಾರಗಳು ಒಂದೊಂದೂ ಕೇವಲ ಕಲ್ಪನೆಯಲ್ಲಿ ಮಾತ್ರ ಸಾಧ್ಯ ಎನ್ನಿಸುವಂತವು. 



Sunday, September 10, 2023

ಈ ಕ್ಷಣದ ಕವಿತೆ ೧

ಅದು,
ನಡು ರಾತ್ರಿಯಲ್ಲಿ ಯಾವುದೋ
ಹಳೆಯ ಹಾಡಿನ ಎರಡನೇ ಸಾಲು 
ನೆನಪಾದಂತೆನೀವು 
ತಾಸುಗಟ್ಟಲೆ ತಲೆಯಲ್ಲೇ 
ಹುಡುಕುತ್ತೀರಿ, ಊಹ್ಞೂಂ

ಯಾವುದೋ ಗಡಿಬಿಡಿಯ 
ಗಲಿಬಿಲಿಯಲ್ಲಿ
ಮೊದಲು ಸಾಲು ಧುತ್ತನೆ
ಸಾಕ್ಷಾತ್ಕಾರವಾಗುತ್ತದೆ
ಎರಡು, ಮೂರನೇ ಸಾಲು
ಅಸ್ಪಷ್ಟ ಎನಿಸಿದರೂ
ನಿಮಗೆ ಜ್ಞಾನೋದಯದ ಸಂತಸ

ಒಂದರಘಳಿಗೆಯಷ್ಟೇ
ಸಂತೆಯಲ್ಲಿ ಮಗನನ್ನು ಕಳೆದುಕೊಂಡಂತೆ
ಅದರ ರಾಗಕ್ಕಾಗಿ ತಡಕಾಡುತ್ತೀರಿ
ಗಂಟಲಲ್ಲಿರುವ ಕೆಲವು ಅಸ್ಪಷ್ಟ, ಪರಿಚಿತ
ಟ್ಯೂನುಗಳ ಜೊತೆ, 
ಹೊಸಹಾಡನ್ನು ಮಲಗಿಸಿ 
ತಾಳೆಮಾಡುತ್ತೀರಿ
ಊಹ್ಞೂಂ.

ಕೊನೆಯುಸಿರಿನ ಘಳಿಗೆಯಲ್ಲೂ
ನಿಮಗದರ ರಾಗ ಹೊಳೆದೀತು
ಆದರೆ,
ಅದನ್ನು ಹಾಡಿದವರಾರು?

ಈ ಕ್ಷಣದ ಕವಿತೆ ೨

ಅವಳ ಕಣ್ಣುಗಳಲ್ಲಿ
ವೈಶಾಖ ಸೋರಗುತ್ತದೆ
ಬಾಯಾರಿದ ಒಣ ಭೂಮಿಯಂತೆ
ನಾನು ಆಕಾಶ ನೋಡುತ್ತೇನೆ
ಅವಳ ಕಣ್ರೆಪ್ಪೆ ಅಡ್ಡಬರುತ್ತದೆ

ಕ್ರೂರ ಮೇ ಬಿಸಿಲು ಫಳಫಳಿಸುತ್ತದೆ
ಅವಳ ಕಣ್ಣುಗಳಲ್ಲದು ಪ್ರತಿಫಲಿಸುತ್ತದೆ
ಅವಳು ಸೂರ್ಯನನ್ನು ನೆಟ್ಟ ಕಂಗಳಲ್ಲಿ
ನೋಡಿ ಅಣಕಿಸುತ್ತಾಳೆ

ನಾನು ಅವಳನ್ನು ನೋಡುತ್ತಾ
ಬೆವರೊರೆಸಿಕೊಳ್ಳುತ್ತೇನೆ
ಅವಳು ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ,
ಮತ್ತೆ ವೈಶಾಖದ ಸುಡುಬಿಸಿಲು
ನನ್ನಮೇಲೆ ದಾಳಿಯಿಡುತ್ತದೆ

ನಾನು ಮರಳಿನ ಮೇಲೇನೋ 
ಬರೆಯಬೇಕೆಂದುಕೊಳ್ಳುತ್ತೇನೆ,
ಅವಳು ಕೋಪಿಸಿಕೊಳ್ಳುತ್ತಾಳೆ
ಅರೆಕ್ಷಣ,
ಇಬ್ಬರಿಗೂ ಜ್ಞಾನೋದಯವಾಗುತ್ತದೆ
ಅವಳು ಬರೆಯಲು ಹೇಳುತ್ತಾಳೆ
ನಾನು ಬರೆಯುವುದಿಲ್ಲ.

ಈ ಕ್ಷಣದ ಕವಿತೆ ೩

ವೈಶಾಖದ ಮಳೆ
ಮಳೆಗಾಲದ ನೆನಪುಗಳ ಎಚ್ಚರ ಅದು
ಇದು ದೊಡ್ಡ ಹನಿಯೋ ಸಣ್ಣ ಹನಿಯೋ ತಿಳಿಯದಂಥ ದ್ವಂದ್ವ
ಕಳೆದ ಮಳೆಗಾಲಗಳ ಅಸ್ಪಷ್ಟ ಪ್ರತಿನಿಧಿ

ವೈಶಾಖದ ಮಳೆ
ಹಸಿಮೆಣಸು ತಿಂದಾಗ ಸಿಕ್ಕ ಸಿಹಿನೀರು
ಅದು ಆರ್ದ್ರ
ಅದೊಂದು ಸಚಿತ್ರ ವಿಸ್ಮಯ

ವೈಶಾಖದ ಮಳೆ
ಒಂದು ಬಿಡುಗಡೆಯ ಆಸೆ
ಅದು ತೀರಲು ಶುರುವಾದ ಆದರೆ ತೀರದ ದಾಹ

ವೈಶಾಖದ ಮಳೆ 
ಸುಡುವ ನಡು ಮಧ್ಯಾಹ್ನಗಳಿಂದ ನಮ್ಮನ್ನೊಂದುಕ್ಷಣ ಕಾಯುವ
ಆದರೆ ಮತ್ತದೇ
ಬೇಗೆಯ ಪ್ರಪಂಚಕ್ಕೆ ದೂಡಿ ಓಡಿಹೋಗುವ ನಿರ್ದಯ ಕ್ರೂರಿ

ಈ ಕ್ಷಣದ ಕವಿತೆ ೬

ನನ್ನ ಬಳಿ ಒಂದು 
ಕವಿತೆಯಿದೆ.
ಬಹಳ ಇಷ್ಟದಲ್ಲಿ
ಸಾಕಿ ಬೆಳೆಸಿದ ಕವಿತೆಯದು.

ಸೆಖೆಗಾಲದಲ್ಲಿ
ಅಚಾನಕ್ಕು ಮಳೆಯಾದಾಗ,
ಮರಳಮೇಲೆ ಕುಳಿತು
ತಾಸುಗಟ್ಟಲೆ
ಅಲೆಗಳು ಒಂದಾದಮೇಲೊಂದು
ಬಂದುಹೋಗುವುದನ್ನು ಕಾಣುವಾಗ,
ಕಣ್ಮುಚ್ಚಿ ಮುಲ್ತಾನಿಯಲ್ಲೋ, ಶುದ್ಧ ಕಲ್ಯಾಣದಲ್ಲೋ ಕಳೆದುಹೋದಾಗ,
ಮಳೆಗಾಲ ಕಳೆದ 
ಶುಭ್ರಮುಗಿಲಿನ ನಗು ಕಂಡಾಗ,
ಆಕೆ ನಿರಾಯಾಸವಾಗಿ
ಕೂದಲನ್ನು ಮೇಲಕ್ಕೆತ್ತಿ ಗಂಟಿಕ್ಕಿ
ನಕ್ಕಾಗ,
ಹೀಗೆ ಆಗಾಗ 
ಅದು ಇಂಚಿಂಚು ಬೆಳೆದು
ಚಂದವಾಗಿದೆ.

ನನ್ನಬಳಿ ಒಂದು ಚಂದದ
ಕವಿತೆಯಿದೆ
ಹಳೆಗಾಲದ ಕಥೆಗಳ ಹಾಗೆ
ಏಳು ಸುತ್ತಿನ ಕೋಟೆಯೊಳಗಿನ
ಪಂಜರದಲ್ಲಿ ಮಾಂತ್ರಿಕನ
ಜೀವದ ಗುಟ್ಪು ಇರುವಹಾಗೇ
ಈ ಕವಿತೆಯೊಳಗೇ 
ನನ್ನ ರಹಸ್ಯವಿದೆ

ನನ್ನ ಬಳಿ ಒಂದು 
ಕವಿತೆಯಿದೆ
ಆದರೆ
ನಾನದನ್ನು ಯಾರಿಗೂ
ಕೊಡಲಾರೆನಷ್ಟೇ.

ಈ ಕ್ಷಣದ ಕವಿತೆ ೪

ಅವಳು
ಬೆವರೇಳಿಸುವ ಮುಲ್ತಾನಿ
ಮೈಮರೆಸುವ ಕಲ್ಯಾಣಿ
ಆವರಿಸಿಕೊಳ್ಳುವ ಶುದ್ಧ ಕಲ್ಯಾಣ
ಪ್ರವಹಿಸುವ ಜೋಗ
ನಿದ್ರೆ ಕಸಿಯುವ ಮಾಲಕೌಂಸ
ಬಡಿದೆಬ್ಬಿಸುವ ತೋಡಿ
ಭಾವದಲ್ಲಿ ಮುಳುಗಿಸುವ ಭೈರವಿ
ಅವಳು

Thursday, July 6, 2023

ಈ ಕ್ಷಣದ ಕವಿತೆ ೫




ಕೆಲವೊಮ್ಮೆ ಕವಿತೆಗಳು
ಕೈಮೀರಿ ಬೆಳೆಯುತ್ತವೆ
ಶಬ್ಧಗಳು ಕೈಗೆ ಸಿಗದಂತೆ
ತಪ್ಪಿಸಿಕೊಂಡು ಒಮ್ಮೆಲೇ
ಧುತ್ತನೆ ಪ್ರತ್ಯಕ್ಷವಾಗಿ ಅಣಕಿಸುತ್ತವೆ.

ಒಮ್ಮೊಮ್ಮೆ, ಅವು
ವಿಪರೀತ ಅನರ್ಥಗಳನ್ನು ಕೊಟ್ಟು ಕಾಡುತ್ತವೆ
ಇನ್ನು ಕೆಲವೊಮ್ಮೆ, ಅರ್ಥವನ್ನೇ ಅಡಗಿಸಿಟ್ಟು
ಉಸಿರುಕಟ್ಟಿಸುತ್ತವೆ

ಒಂದೊಂದೇ ಅಕ್ಷರಗಳು
ಸಾಲುಹಚ್ಚಿ
ಬೆರಳುಗಳಮೇಲೆ ನಿಂತು
ಕಾಯತೊಡಗುತ್ತವೆ
ಜೀವಾವದಿ ಶಿಕ್ಷೆಯಿಂದ ಇನ್ನೇನು ಹೊರಬೀಳುತ್ತಿರುವ ಖೈದಿಯಂತೆ ಚಡಪಡಿಸುತ್ತವೆ
ಯಾರಬಗ್ಗೆಯೋ ಏನೊ!

ನನ್ನ ಕವಿತೆ ನಿಮ್ಮ ಕಣ್ಣಿಗೆ ಕಾಣುವುದಿಲ್ಲ,
ಅವನ್ನು ನನ್ನ ಕಣ್ಣಿನಿಂದ ಓದಿದ ದಿನ ನಿಮಗೆ ದೃಷ್ಟಿ ಬರುತ್ತದೆ.