Friday, September 18, 2020

ಕರ್ಣನಿಗೆ ಹೀಗೂ ಅನಿಸಿರಬಹುದು!

   ನಿಜವಾಗಿಯೂ ಇದು ಮೋಡ ಕವಿದ ವಾತಾವರಣವೋ‌? ಇಲ್ಲ ನನ್ನ ಮನಸ್ಸಿಗೆ ಕವಿದಿರುವ ಕತ್ತಲೆಯೋ? ತಿಳಿಯುತ್ತಿಲ್ಲ. ಯಾವ ಕಾರ್ಯದ ಉದ್ದೇಶ ಮೂಲದಿಂದ ಪ್ರಾಪ್ತವಾದ ಅಂತಃಪುರದ ಮಹಡಿಯಲ್ಲಿ, ಅದೇ ಕಾರ್ಯದಿಂದ ದೂರಸರಿದು ನಿಂತಿದ್ದೇನೆ. ಈಗ ಐದು ನಿಮಿಷದ ಹಿಂದೆ ಕೋಪದಲ್ಲಿ ದುರ್ಯೋಧನ ಜಡಿದು ಹೋದ ಕೋಣೆಯ ಬಾಗಿಲಿನ ಶಬ್ಧ ಇನ್ನೂ ಕೇಳುತ್ತಿದ್ದೆ. ಅವನ ಪಾಂಡವದ್ವೇಷದ ಪೂರ್ಣ ಕ್ರೊಧವನ್ನೂ ಅವನು ಆ ನಿಷ್ಪಾಪಿ,ನಿರ್ಜೀವಿ ಬಾಗಿಲಿನಮೇಲೇ ತೋರಿಸಿ ಹೋದ, ಅಷ್ಟು ಅಸಹಾಯಕನಾಗಿಹೋಗಿದ್ದ. ನನ್ನ ಕಾಲನ್ನೊಂದು ಹಿಡಿಯಲಿಲ್ಲ,ಹಸ್ತಿನಾವತಿಯ ಪೀಠದ ರಾಜಕುಮಾರನೆನ್ನುವ ಗೌರವಕ್ಕೆ.
    “ಕರ್ಣಾ! ಹಾಗನ್ನಬೇಡ” “ಕರ್ಣಾ! ಹಾಗೆ ಮಾಡಬೇಡ” “ಭೀಷ್ಮರ ಬಳಿಯಲ್ಲಿ ನಾನು ಹೇಳುತ್ತೇನೆ” “ನೀನಿಲ್ಲದಿದ್ದರೆ ಉತ್ಸಾಹವೇ ಇಲ್ಲ” ಹೀಗೆ, ಪ್ರಾಮಾಣಿಕವಾಗೋ, ನನ್ನನ್ನು ಒಲಿಸುವ ಸಲುವಾಗೋ ಬಹಳ ಪ್ರಯತ್ನ ಮಾಡಿದ. ಅವನಾಡಿದ ಪ್ರತೀಮಾತಿಗೂ, ಆಗಲಿ ದುರ್ಯೋಧನ ನಡೆ, ಬರುತ್ತೇನೆ ಎನ್ನುವ ಉತ್ತರ ನಾಲಿಗೆಯ ತುದಿ ವರೆಗೆ ಬಂದರೂ ಕೊಡಲಾಗದೇ ಹೋಯಿತಲ್ಲ! ಅಷ್ಟೇ ಏಕೆ, ಈಗ ನಾನು ಹೋಗಿ, ನಡೆದದ್ದನ್ನೆಲ್ಲಾ ಮರೆತು ಬಂದಿದ್ದೇನೆ ಅಂತ ಅವನೆದುರು ನಿಂತರೆ ಆವನೆಷ್ಟು ಆನಂದ ಪಡುತ್ತಾನೆ ಎನ್ನುವುದು ತಿಳಿಯದೇಹೋದದ್ದೇನಲ್ಲ. ಆದರೂ ಹಾಗೆ ಮಾಡಲು ನನ್ನ ಬಳಿ ಸಾಧ್ಯವಿಲ್ಲ, ಹಾಗಾದರೆ ಆ ಶಕ್ತಿ ಯಾವುದು?
       ಇಷ್ಟು ವರ್ಷ ಕೌರವನ ಪಾಂಡವ ವಿದ್ವೇಷದಲ್ಲಿ ಸಮಪಾಲು ವಹಿಸಿದವ ನಾನು, ಅಡಿಗಡಿಗೆ ಭೀಷ್ಮ, ದ್ರೋಣರು ಸೂತಪುತ್ರ ಎಂದು ಅವಮಾನ ಮಾಡಿದರೂ ಕೌರವನ ಸಂಗವನ್ನು ಬಿಡಲಿಲ್ಲ. ಕಾರಣ ಕೌರವನ ಮೇಲೆ ನನಗಿದ್ದ ಸ್ನೇಹ ಮತ್ತು ಗೌರವ, ಅವನು ನನಗೆ ಮಾಡಿರುವ ಉಪಕಾರವೇ ಅಂತಹದ್ದು‌. ಆದರೆ ಯುದ್ಧ ತೀರ್ಮಾನ ಆದಮೇಲೆ ಆದ ಕೆಲವು ಘಟನೆಗಳು ನನ್ನ ಮೇಲೆ ಇಷ್ಟು ಪ್ರಭಾವ ಮಾಡಿದ್ಯಾಕೆ?
         ಕೌರವ ಭೀಷ್ಮರಿಗೆ ಸೇನಾಧಿಪತಿಯ ಪಟ್ಟ ಕಟ್ಟಿದ, ನಿಜವಾಗಿ ಅದೊಂದು ಮೂರ್ಖ ನಿರ್ಧಾರ. ಯಾಕೆ? ನಾನು ಕೌರವನ ಆಸ್ಥಾನ ಸೇರಿದ ಕ್ಷಣದಿಂದಲೂ ಗಮನಿಸಿರುವ ವಿಷಯ, ಭೀಷ್ಮನಿಗೆ ಪಾಂಡವರ ಮೇಲಿರುವ ಪ್ರೀತಿ ಕೌರವನ ಮೇಲಿಲ್ಲ. ದ್ರೋಣ, ಕೃಪರಿಗೂ ಅಷ್ಟೆ. ಅವರಿಗೆಲ್ಲ ಪಾಂಡವರ ಮೇಲೇ ಮೋಹ. ಅಂತವರ ಕೈಯಲ್ಲಿ ನಮ್ಮ ಸೇನೆಯ ಲಗಾಮನ್ನ ಕೊಟ್ಟರೆ ಕಥೆ ಏನಾಗಬೇಡ? ಪಕ್ಷಪಾತಿಗಳಾದ ಅವರು ಕೌರವನ ಗೆಲುವಿಗಾಗಿ ಮನಃಪೂರ್ವಕವಾಗಿ ಹೋರಾಡಿಯಾರ? ಅದೊಂದೇ ಕಾರಣಕ್ಕೆ ಭೀಷ್ಮ ಸೇನಾಧಿಪತ್ಯವನ್ನು ನಾನು ವಿರೋಧಿಸಿದ್ದು. ಭೀಷ್ಮನ ಪರಾಕ್ರಮದ ಮೇಲೆ ನನಗೆ ಎಳ್ಳಷ್ಟೂ ಅನುಮಾನವಿಲ್ಲ ಆದರೆ ಕೌರವನ ಪರವಾಗಿ ಅವನ ಪ್ರಮಾಣಿಕತೆಯನ್ನ ನಾನು ಸ್ವಲ್ಪವೂ ನಂಬಲಾರೆ.
          ಸೈನಿಕರೆಲ್ಲ ಯುದ್ಧದ ತಯಾರಿಯಲ್ಲಿ ತೊಡಗಿದ್ದಾರೆ. ಅರಮನೆಯ ಕಡೆಯಿಂದ ರಥಗಳು ಹೊರಡುತ್ತಿವೆ. ಇವತ್ತು ರಾತ್ರಿಯೇ ಕುರುಕ್ಷೇತ್ರದಲ್ಲಿ ಬಿಡಾರ ಹೂಡುತ್ತಾರೆಂದು ಕೌರವ ಹೇಳಿದ. 
      ಅದೋ, ಕೌರವನ ರಥವೂ ಬಂತು. ಅಕ್ಕ ಪಕ್ಕದಲ್ಲಿ ಶಕುನಿ ದುಶ್ಯಾಸನರು ಕೂತಿದ್ದಾರೆ. ನನ್ನ ಅಂತಃಪುರದ ಎದುರೇ ಹೋಗುತ್ತಿದ್ದಾರೆ, ಶಕುನಿ ದುಶ್ಯಾಸನ ಇಬ್ಬರೂ ನನ್ನ ಕಡೆ ನೋಡಿದರು ಆದರೆ ಕೌರವ ನನ್ನ ಕಡೆ ತಿರುಗಲೂ ಇಲ್ಲ. ಅವನಿಗೆ ಬಹಳ ಬೇಸರವಾಗಿರುವುದರಲ್ಲಿ ಅನುಮಾನವಿಲ್ಲ. ನಾನು ಭೀಷ್ಮನ ಎದುರು ಪ್ರತಿಜ್ಞೆ ಮಾಡಿದಾಗ ಬರೀ ಕೋಪದಲ್ಲಿ ಆಡಿದ ಮಾತದು ಎಂದುಕೊಂಡಿದ್ದ ಅವನು.
         ಆದರೆ ಈಗ ಶಾಂತವಾಗಿ ಕೂತು ಯೋಚನೆ ಮಾಡಿದರೆ ನನ್ನ ಈ ನಿರ್ಧಾರದ ಕುರಿತಾದ ನನ್ನ ನಂಬಿಕೆಯ ಬುಡವೂ ಅಲುಗಾಡುತ್ತಿದೆ. ಕಾರಣ ಮೊನ್ನೆ ಕೃಷ್ಣ ಹೇಳಿದ ವಿಚಾರ, ನಂತರ ಕುಂತಿ ಆಡಿದ ಮಾತುಗಳು.
        ನನಗೂ ವಯಸ್ಸು ಕಡಿಮೆಯಲ್ಲ, ಅರವತ್ತರ ಮೇಲಾಯಿತು.‌ ಇಷ್ಟು ವರ್ಷಗಳ ಕಾಲ ನಾನು ಅನುಭವಿಸಿದ ಎಲ್ಲಾ ನೋವಿನ, ಅನ್ಯಾಯದ ಮೂಲವಾದದ್ದು ನನ್ನ ಕುಲ. ಇಡೀ ಲೋಕ ನನ್ನನ್ನು ಸೂತಪುತ್ರ ಎಂದೇ ಗುರುತಿಸಿತು, ಕಂಡು ನಕ್ಕಿತು. ನನ್ನನ್ನು ಆ ಅಪಮಾನದಿಂದ ಸ್ವಲ್ಪಮಟ್ಟಿಗೆ ರಕ್ಷಿಸಿದವನು ಕೌರವ. ಅವನ ಜೊತೆ ಸೇರಿ ಅವನ ಸಂತೋಷಕ್ಕಾಗಿ ಮಾಡಿದ ಕೆಲಸಗಳಿಂದ ನಾನು ದುಷ್ಟನಾಗೇ ಗುರುತಿಸಲ್ಪಟ್ಟೆ. ಇನ್ನು ಹಾಗೆ ಗುರುತಿಸಿಕೊಂಡಿರುವಬಗ್ಗೆ ನನ್ನ ಭಾವನೆ ಏನೆಂದು ಹೇಳುವುದು ಕಷ್ಟವೇ ಯಾಕೆಂದರೆ ಆ ಅಪವಾದ ಅನ್ಯಾಯ ಎಂದು ನಾನು ಭಾವಿಸಲಾರೆ ಯಾಕೆಂದರೆ ಹಲವಾರು ತಪ್ಪು ಕೆಲಸಗಳನ್ನು ನಾನು ಮಾಡಿದ್ದೇನೆ. ಆದರೆ ಅದೆಲ್ಲದರ ಮೂಲ ತಂತು ನನ್ನ ಕುಲವೇ ಆಗಿತ್ತು. 
       ಆದರೆ ಕೃಷ್ಣ ಈಗ ಬಂದು ಹೇಳುತ್ತಾನೆ, ನೀನು ಕುಂತಿಯ ಪುತ್ರ ಸೂತನಲ್ಲ. ಈಗಲೂ ನಿನಗೆ ಅವಕಾಶವಿದೆ, ಪಾಂಡವರ ಪಂಗಡ ಸೇರಿಕೋ, ಇಲ್ಲ ಹಸ್ತಿನಾವತಿಯ ಪಟ್ಟ ಏರು, ನಿನ್ನನ್ನು ನಾನು ರಾಜನನ್ನಾಗಿ ಮಾಡಿ ಎಡಬಲಗಳಲ್ಲಿ ಕೌರವ ಪಾಂಡವರನ್ನ ಕೂರಿಸುತ್ತೇನೆ ಎಂದು. 
           ಈ ವಿಷಯ ಮುಂದೊಂದು ದಿನ ಇಡೀ ಪ್ರಪಂಚಕ್ಕೆ ತಿಳಿಯುತ್ತದೆ. ಅದು ತಿಳಿದಾಗ ಆ ಸಂದರ್ಭದಲ್ಲಿ ಕರ್ಣನ ಉತ್ತರ ಹೇಗಿತ್ತು ಎನ್ನುವುದರ ಮೇಲೆ ಮುಂದೆ ಕರ್ಣನ ಗೌರವದ ತೀರ್ಮಾನ. ಸೋತಿದ್ದಾಗ ಅನ್ನ ಕೊಟ್ಟಿದ್ದ ಕೌರವನನ್ನ ಬಿಟ್ಟ ಕರ್ಣ ರಾಜ್ಯದಾಸೆಗೆ ಅವನನ್ನ ತೊರೆದನಂತೆ! ಎನ್ನುವ ಅಪವಾದ ಬೇಡ ಎಂದು ಕೃಷ್ಣನಬಳಿ ಖಡಾಖಂಡಿತವಾಗಿ ಹೇಳಿದ್ದೊಂದೆ, ಕೌರವನ ಋಣಭಾರವನ್ನು ತೀರಿಸುವುದೊಂದೇ ನನ್ನ ಪರಮಗುರಿ,ಅದಕ್ಕಿಂತ ದೊಡ್ಡದಾಗಿ ಬೇರೇನೂ ನನಗೆ ಕಾಣುವುದಿಲ್ಲ. ಹಸ್ತಿನಾವತಿಯ ಸಿಂಹಾಸನವೇಕೆ, ಅಮರಾವತಿಯದ್ದು ಕೊಟ್ಟರೂ ಬೇಡ ಅಂದೆ.
     ಕೃಷ್ಣ ದಡ್ಡನಾ? ಅವನಿಗೆ ನನ್ನ ನಿರ್ಧಾರ ಮೊದೆಲೇ ಗೊತ್ತಿತ್ತು ಆದರೂ ನನ್ನನ್ನ, ನನ್ನ ಕೌರವನೆಡೆಗಿನ ಸಮರ್ಪಣೆಯನ್ನ ಅಸ್ಥಿರಮಾಡುವ ರಾಜಕಾರಣದ ತಂತ್ರವೊಂದನ್ನ ಬಳಸಿದನವ ಅಷ್ಟೆ.
      ನಂತರ, ಕುಂತಿಯನ್ನ ಕಳುಹಿಸಿದ. ಇಷ್ಟು ವರ್ಷ ಕಣ್ಣೆದುರಿದ್ದರೂ ಒಂದೂ ಪ್ರೀತಿಯ ನೋಟವನ್ನ ಬೀರದಿದ್ದ ಆಕೆ ಬಂದು ಹೇಳುತ್ತಾಳೆ ನೀನು ನನ್ನ ಮಗ. ಅವಳ ಪ್ರೀತಿ ಮಾತೃ ವಾತ್ಸಲ್ಯಗಳು ಶುದ್ಧವಾದದ್ದೇ ಇರಬಹುದು ಆದರೆ ಅವಳ ಉದ್ದೇಶ ಸ್ಪಷ್ಟವಾಗಿತ್ತು. ನನಗೆ ನಾನು ಪಾಂಡವರ ಅಣ್ಣ ಎನ್ನುವುದು ತಿಳಿಯಬೇಕು. ಅದರ ಜೊತೆಗೆ ನಾನು ಕೌರವನ ಪಕ್ಷ ಬಿಟ್ಟು ಬರಬೇಕು‌. ಸಂಬಂಧವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಹೀನತೆ, ಒಂದು ಬಗೆಯ ಅಸಹ್ಯ ಉಂಟಾಯಿತು. ಇಲ್ಲಿಯ ವರೆಗೆ  ನನಗೆ ಮತ್ತು ನನ್ನಿಂದ ಆದ ಎಲ್ಲ ಅನ್ಯಾಯಗಳಿಗೂ ಅವಳೇ ಕಾರಣ ಎನ್ನಿಸಿತು. ಕೊನೆಗೂ ತಂತ್ರದಿಂದ ಭಾಷೆಯೊಂದನ್ನ ಕೊಂಡೇ ಹೋದಳು.
       ಈ ಗೊಂದಲದಲ್ಲಿದ್ದ ಸಂದರ್ಭದಲ್ಲಿ ನಡೆದ ಭೀಷ್ಮ ಸೇನಾಧಿಪತ್ಯದ ಪ್ರಕರಣ. ಈಗ ಕೂತು ಯೋಚಿಸಿದರೆ ನನ್ನ ಯುದ್ಧದಿಂದ ಹೊರಸರಿದ ನಿರ್ಧಾರಕ್ಕೂ ಬೇರೆಯದ್ದೇ ಅರ್ಥ ಕಾಣುತ್ತಿದೆ.
         ನಾನೇನಾದರೂ ಯುದ್ಧದಲ್ಲಿ ಭಾಗವಹಿಸಿದರೆ ಪಾಂಡವರ ಕಡೆಯ ಸೈನಿಕರನ್ನು ಕೊಲ್ಲಬೇಕಾಗುತ್ತದೆ. ಇದರಿಂದ ಅವರಿಗೆ ನಷ್ಟವಾಗುತ್ತದೆ ಎನ್ನುವ ಭಾವನೆ ನನ್ನ ಮನಸ್ಸಿನ ಮೂಲೆಯಲ್ಲಿತ್ತಾ?
     ಅದರ ಜೊತೆಗೆ ಇನ್ನೂ ಕೆಲವು ಪ್ರಶ್ನೆಗಳೂ ಕೆಣಕತ್ತಿವೆ-
  ಕೃಷ್ಣ ನನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ ಎಂದಾಗ ಒಪ್ಪಿಕೊಂಡು ನಂತರ ಆ ಸಿಂಹಾಸನವನ್ನು ಕೌರವನಿಗೆ ಕೊಡಬಹುದಿತ್ತು ಯಾಕೆ ಹಾಗೆ ಮಾಡಲಿಲ್ಲ? ಕುಂತಿ ಬಂದು ನನ್ನನ್ನು ಕೌರವನ ಪಕ್ಷ ಬಿಟ್ಟು ಬಾ ಎಂದಾಗ ಆಕೆಯ ಬಳಿಯಲ್ಲೇ ಅದನ್ನು ಹೋಗಿ ಯುಧಿಷ್ಠಿರನ ಬಳಿ ಹೇಳಿ ಪಾಂಡವರನ್ನೇ ನನ್ನ ಬಳಿ ಕರೆದುಕೊಂಡು ಬಾ ಅಂತ ಯಾಕೆ ಹೇಳಲಿಲ್ಲ? ಇನ್ನು ಅರ್ಧರಥಿಕಾನಿಗಿದ್ದುಕೊಂಡಾದರೂ ಕೌರವ ಸೇನೆಯ ಬಲ ಹೆಚ್ಚಿಸಬಹುದಿತ್ತು, ಸ್ವತಃ ಕೌರವನೇ ಬಂದು ಕೇಳಿದರೂ ಯಾಕೆ ಬರಲು ಒಪ್ಪಲಿಲ್ಲ? ಇದಕ್ಕೆಲ್ಲ ಪಾಂಡವರ ಪರವಾಗಿ ನನಗೆ ಹುಟ್ಟಿರಬಹುದಾದ ಅಂತಃಕರಣವೇ ಕಾರಣವಿರಬಹುದಾ?
   ಇನ್ನು ಭೀಷ್ಮ ಸಾಯದೇ ಹೋದರೆ? ನೆನೆದರೇ ಕಸಿವಿಸಿಯಾಗುತ್ತದೆ, ಭೀಷ್ಮನೇನಾದರೂ ಸಾಯದೇ ಒಬ್ಬನೇ ಯುದ್ಧವನ್ನು ಮುಗಿಸಿಬಿಟ್ಟರೆ? ಪಾಂಡವರನ್ನೆಲ್ಲ ಕೊಂದು, ಕೌರವನನ್ನ ಅಧಿಪತಿಯನ್ನಾಗಿ ಮಾಡಿಬಿಟ್ಟರೆ? ಕೌರವನ ಆಸ್ಥಾನದಲ್ಲಿ ನನ್ನ ಕಥೆ ಏನಾದೀತು?
          

Thursday, September 17, 2020

ಅಪಘಾತ


   ಯಾವಾಗಲೂ ಹೀಗೆ, ನನಗೆ ಮಾತ್ರವೋ, ಎಲ್ಲರಿಗೂ ಹೀಗೆಯೋ ಗೊತ್ತಿಲ್ಲ. ಯಾವಾಗ ಮಳೆಯಂಗಿ ಧರಿಸಿಕೊಂಡು ಹೋಗುತ್ತೇನೋ, ಒಂದು ಹನಿ ಮಳೆಯೂ ಬರುವುದಿಲ್ಲ, ಯಾವ ದಿನ ಮಳೆಯಂಗಿ ಮರೆತು ಹೋಗುತ್ತೇನೋ ಆ ದಿನ ಧಾರಾಕಾರ ಮಳೆ ಸುರಿಯುತ್ತದೆ.
        ಆ ದಿನವೂ ಹಾಗಾಯಿತು. ಐದೇ ನಿಮಿಷದಲ್ಲಿ ಬಿಸಿಲು ಕರಗಿ ಕಾರ್ಮೋಡ ಆವರಿಸಿಬಿಟ್ಟಿತು. 'ನೆಮ್ಮದಿ ಕೇಂದ್ರ' ಕ್ಕೆ ಯಾವುದೋ ಕೆಲಸದ ಮೇಲೆ ಹೋಗಿದ್ದೆ. ಅಲ್ಲಿದ್ದ ಉದ್ದದ ಸರತಿ ಸಾಲಿನಲ್ಲಿ ಕೆಲಸ ಆಗಲಿಲ್ಲ, ಮಧ್ಯಾಹ್ನ ಒಂದು ಗಂಟೆ ಆಯಿತು. ಸಾಲಿನಲ್ಲಿ ನಿಂತು ಕಾಲು ನೋಯಲು ಶುರುವಾಗಿತ್ತು, ಮೊಬೈಲು ಫೋನು ನೋಡಿ ನೋಡಿ ಕಣ್ಣೂ ಉರಿ ಶುರುವಾಗಿತ್ತು, ಅಷ್ಟೇ ಹೊತ್ತಿಗೆ ಒಳಗಿದ್ದವನು ಊಟಕ್ಕೆ ನಡೆದು ಬಿಟ್ಟ. ಮೊಬೈಲಿನಲ್ಲಿ ಚಾರ್ಜೂ ಖಾಲಿಯಾಗಿತ್ತು, ಹೊಟ್ಟೆಯೂ ಹಸಿಯುತ್ತಿತ್ತು, ಅಕ್ಕಪಕ್ಕ ಹತ್ತಾರು ಜನ ನಿಂತಿದ್ದರಿಂದ ಸುಡುವ ಸೆಖೆ ಬೇರೆ, ನೆಮ್ಮದಿ ಕೇಂದ್ರಕ್ಕೆ ಹೋಗಿ ನೆಮ್ಮದಿಯೇ ಹಾಳಾಗಿತ್ತು. ಇನ್ನವನು ಊಟಮಾಡಿ ಬರುವುದು ಮಧ್ಯಾಹ್ನ ಮೂರುಗಂಟೆಗೆ ಅಂತ ಯಾರೋ ಹೇಳಿದರು, ನನಗಂತೂ ಅಷ್ಟು ಹೊತ್ತು ಮತ್ತೆ ಅಲ್ಲಿ ನಿಲ್ಲುವುದು ಸಾಧ್ಯವಿಲ್ಲದೆ ಮನೆಗೆ ಹೊರಟಿದ್ದೆ, ಆಗಲೇ ಹೀಗೆ ಇದ್ದಕ್ಕಿದ್ದಂತೆ ಮೋಡ ಮುಸುಕಿದ್ದು.
         ಸಣ್ಣಗೆ ಮಳೆಯ ಹನಿ ಶುರುವಾಗಿತ್ತು. ಅಲ್ಲೇ ಮುಂದಿದ್ದ ಸಣ್ಣ ಅಂಗಡಿಯೊಂದರ ಬಳಿ ನಿಲ್ಲೋಣ ಎಂದುಕೊಂಡೆ, ಆದರೆ ಅಲ್ಲಿ ನೋಡಿದರೆ ಮೂರ್ನಾಲ್ಕು ಬೈಕುಗಳು ಆಗಲೇ ನಿಂತಿದ್ದವು. ಹಾಗಾಗಿ ಅಲ್ಲಿ ನಿಲ್ಲದೆ ಮುಂದುವರಿದೆ. ಮಳೆಯೂ ಅಷ್ಟೇನು ಜೋರಾಗಿರಲಿಲ್ಲ ಹಾಗಾಗಿ ಅದು ಜೋರಾಗುವುದರೊಳಗೆ ಮನೆ ಸೇರಬೇಕು ಎಂದುಕೊಂಡು ವೇಗ ಹೆಚ್ಙಿಸಿದೆ.
     ಆದರೆ, ಮಳೆಯ ಹನಿಗಳು ಜೋರಾಗಿ ಬೀಳತೊಡಗಿದವು. ಪ್ಯಾಂಟಿನ ಕಿಸೆಯೊಳಗೆ ನನ್ನ ಮೊಬೈಲಿತ್ತು. ಸದ್ಯ ಸದ್ಯ ಅದರ ಡಿಸ್ಪ್ಲೇ ಹಾಳಾಗಿತ್ತು, ಮೂರು ಸಾವಿರ ಕೊಟ್ಟು ಹೊಸತು ಹಾಕಿಸಿದ್ದೆ. ಈಗ ಮಳೆಯ ನೀರು ಅದಕ್ಕೆ ತಾಗಿ ಅದೇನಾದರೂ ಹಾಳಾದರೆ ಎಂದು ಭಯವಾಯಿತು. ಒಂದು ಕೈಯಿಂದ ಅದನ್ನು ತೆಗೆದುಕೊಂಡು ಸೊಂಟಕ್ಕೆ ಸಿಕ್ಕಿಸಿಕೊಂಡೆ, ಅಂಗಿಯ ಕೆಳಗೆ. 
       ಈಗ ಮಳೆ ಭಾರೀ ಜೋರಾಗಿತ್ತು. ನಾನು ಹೆಲ್ಮೆಟ್ಟೂ ಧರಿಸಿರಲಿಲ್ಲವಾದ್ದರಿಂದ ಮಳೆಯ ಹನಿಗಳು ಸೂಜಿಯಂತೆ ಮುಖಕ್ಕೆ ಚುಚ್ಚಿ ಉರಿ ಹುಟ್ಟಿಸುತ್ತಿದ್ದವು. ಹಿಂದೆ ಅಂಗಡಿಯಲ್ಲೇ ನಿಂತುಕೊಳ್ಳದೇ ಬಂದದ್ದಕ್ಕೆ ನನ್ನನ್ನೇ ಬೈದುಕೊಂಡೆ. 
      ಈಗ ಎದುರು ಏನೂ ಕಾಣುತ್ತಿರಲಿಲ್ಲ. ಧೋ ಎಂದು ಮಳೆ ಸುರಿಯುತ್ತಿತ್ತು, ಮಳೆಯ ಶಬ್ಧ ಒಂದು ಬಿಟ್ಟರೆ ಬೇರೇನೂ ಕೇಳುತ್ತಿರಲಿಲ್ಲ. ಮೊಬೈಲು ಸಿಕ್ಕಿಸಿಕೊಂಡಿದ್ದ ಸೊಂಟದ ಭಾಗದವರೆಗೂ ನೀರು ತಲುಪಿತ್ತು, ಅದೇ ನೀರು ಪ್ಯಾಂಟಿನ ಒಳಗೂ ಹೋಗಿ ಭಾರೀ ತೊಂದರೆ ಕೊಡಲು ಶುರುಮಾಡಿತ್ತು.
     ಆದದ್ದಾಗಲಿ ಎಂದು ಗಾಡಿಯ ವೇಗವನ್ನು ಏರಿಸಿದೆ. ಅಲ್ಲೇ ಬಲಕ್ಕೆ ತಿರುಗಿದರೆ ಸ್ವಲ್ಪ ದೂರದಲ್ಲಿ ಹಾಳುಬಿದ್ದಂತಿರುವ ಹಳೆಯ ಮಂಟಪದಂತದ್ದೇನೋ ಇತ್ತು, ಮನೆ ಹತ್ತಿರವೇನೂ ಇರಲಿಲ್ಲ, ಹಾಗಾಗಿ ಮಳೆ ನಿಲ್ಲುವ ತನಕ ಅಲ್ಲಿ ನಿಲ್ಲೋಣ ಎಂದು ಅತ್ತ ಕಡೆ ಗಾಡಿ ತಿರುಗಿಸಿದೆ. ಯಾರೂ ಹೆಚ್ಚು ಓಡಾಡದ ದಾರಿಯದು. ಎಷ್ಟೋ ವರ್ಷದ ಹಿಂದೆ ಮಾಡಿ ಈಗ ಪೂರ್ಣ ಶಿಥಿಲವಾಗಿದ್ದ ರಸ್ತೆ ಬೇರೆ. ಆದರೂ ಮೊದಲು ಓಡಾಡಿದ್ದ ಅಂದಾಜಿನ ಮೇಲೇ ಗಾಡಿ ಓಡಿಸುತ್ತಿದ್ದೆ, ಮಳೆ ಎಷ್ಟು ಜೋರಾಗಿತ್ತೆಂದರೆ ಪೂರ್ತಿ ಕಣ್ಣು ತೆರೆಯುವಂತೆಯೂ ಇರಲಿಲ್ಲ.
       ಸ್ವಲ್ಪ ದೂರದಲ್ಲಿ ಮಂಟಪ ಕಾಣುತ್ತಿತ್ತು, ಇನ್ನೇನು. ಅಲ್ಲಿ ತಲುಪುತ್ತಿದ್ದೆ, ಅಷ್ಟರಲ್ಲಿ, ಅಲ್ಲೇ ಪಕ್ಕದಲ್ಲೆಲ್ಲೋ ಮೇಯುತ್ತಿದ್ದ ಎಮ್ಮೆಯೊಂದು ಗಾಡಿಯ ಸದ್ದಿಗೆ ಹೆದರಿ ರಸ್ತೆಯ ಕಡೆಗೇ ಓಡಿ ಬಂದಿತು, ಆ ಜಡಿ ಮಳೆಯಲ್ಲಿ ನನಗದು ಕಾಣಲೂ ಇಲ್ಲ. ಅಷ್ಟೇ ಹೊತ್ತಿಗೆ ಸೊಂಟದಿಂದ ನನ್ನ ಮೊಬೈಲೂ ಜಾರಿ ಹೊರಬರುತ್ತಿತ್ತು, ನನ್ನ ಗಮನ ಒಂದು ಕ್ಷಣ ಆ ಕಡೆ ಹೋಯಿತು ಅದೇ ಕ್ಷಣಕ್ಕೆ ಆ ಎಮ್ಮೆಯೂ ಎದುರು ಬಂದಿತ್ತು‌.
         ನನ್ನ ಗಾಡಿ ಎಮ್ಮೆಗೆ ಗುದ್ದಿತು. ಎಡಕ್ಕೆ ವಾಲಿದ ಗಾಡಿ ಪಲ್ಟಿಯಾಯಿತು. ನನ್ನ ಮೊಬೈಲು ಅಲ್ಲೇ ಎಮ್ಮೆಯ ಎದುರು ಬಿತ್ತು, ಹುಲ್ಲು, ಹಿಂಡಿಗಳನ್ನು ಬಿಟ್ಟು ಮೊಬೈಲಿನಂತಹ ಆಧುನಿಕ ಉಪಕರಣಗಳ ಕಿಂಚಿತ್ತು ಜ್ಞಾನ ಇರದಿದ್ದ ಆ ಎಮ್ಮೆ ಮುಖ ಅಡಿಯಾಗಿ ಬಿದ್ದಿದ್ದ ನನ್ನ ಮೊಬೈಲನ್ನು ಮೆಟ್ಟಿ ಹಾರಿಸಿ ಕಣ್ಮರೆಯಾಯಿತು.
       ಬೀಳುವಾಗ ನನ್ನ ಕಾಲು ಬೈಕಿನ ಇಂಜಿನ್ನಿನ ಭಾಗದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಬಿದ್ದ ಬೈಕು ವೇಗದಲ್ಲಿದ್ದ ಕಾರಣ ನನ್ನನ್ನೂ  ಅದರ ಜೊತೆ ರಸ್ತೆಯ ಮೇಲೆ ಎಳೆದುಕೊಂಡು ಹೋಯಿತು. ನನ್ನ ಎಡ ಭುಜ ಪೂರ್ತೀ ತರಚಿಹೋಗಿ ರಕ್ತ ಸುರಿಯತೊಡಗಿತು. ಎಡಗಾಲು ಇಂಜಿನ್ನಿನ ಹತ್ತಿರ ಸಿಕ್ಕಿ ಹಾಕಿಕೊಂಡಿದ್ದರಿಂದ ಅದು ಸುಟ್ಟು ಉರಿಯುತ್ತಿತ್ತು.
      ಹೇಗಾದರೂ ತಪ್ಪಿಸಿಕೊಳ್ಳಬೇಕೆಂದು ಆ ಕಾಲನ್ನು ಜೋರಾಗಿ ಎಳೆದೆ, ಚಪ್ಪಲಿಯನ್ನು ಅಲ್ಲೇ ಬಿಟ್ಟು ಕಾಲು ಹೊರಬಂತು ಆದರೆ ಬರುವಾಗ ಸೈಲೆಂನ್ಸರಿನ ಕೆಳ ಅಂಚಿಗೆ ಸಿಕ್ಕಿ ಹೆಬ್ಬೆರಳಿನ ಉಗುರು ಕಿತ್ತು ಹೋಯಿತು. ಕಾಲು ಹೊರಗೆಳೆದ ರಭಸಕ್ಕೆ ಅಲ್ಲೇ ಪಕ್ಕದಲ್ಲಿ ಆಗತಾನೇ ತಯಾರಾಗಿದ್ದ ತಾಜಾ ಕೆಸರಿನಲ್ಲಿ ಹೋಗಿ ಬಿದ್ದೆ.
        ಎಡ ಭುಜದಿಂದ ಎದೆ, ಹೊಟ್ಟೆಯ ವರೆಗೂ ತರೆದ ಗಾಯವಾಗಿ ರಕ್ತ ಸುರಿಯಲು ಶುರುವಾಗಿತ್ತು, ಕಿತ್ತು ಹೋಗಿದ್ದ ಎಡಗಾಲಿನ ಉಗುರಿನ ಜಾಗದಲ್ಲಿ ಕೆಸರು ತುಂಬಿ ಉರಿ ಶುರುವಾಗಿತ್ತು.
        ಮಳೆ ನಿಂತು ಸಣ್ಣ ಸಣ್ಣ ಹನಿಗಳು ಮಾತ್ರ ಬೀಳುತ್ತಿದ್ದವು. ನನ್ನ ಬೈಕು ಅಲ್ಲೇ ಸ್ವಲ್ಪ ಮುಂದೆ ಕೆಲ ಕ್ಷಣ ಶಬ್ಧಮಾಡುತ್ತಾ ಬಿದ್ದಿದ್ದು ನಂತರ ಶಾಂತವಾಯಿತು, ನನ್ನ ಮೊಬೈಲು ಅಲ್ಲೇ ಸ್ವಲ್ಪ ದೂರದಲ್ಲಿ ಬಿದ್ದಿತ್ತು, ಅದರ ಗ್ಲಾಸು ಒಡೆದು ಪುಡಿಯಾದದ್ದು ಸರಿಯಾಗಿ ಕಾಣಿಸುತ್ತಿತ್ತು. 
       ಕೆಸರಿನಲ್ಲಿ ಬಿದ್ದಿರಲಾರದೆ ಎಡಗೈ ಊರಿ ಏಳಲು ನೋಡಿದ, ಕೈ ಊರುತ್ತಿದ್ದಂತೆ ಅಸಾಧ್ಯ ನೋವಾಯಿತು. ಹೆಚ್ಚಾಗಿ ಮೂಳೆ ಮುರಿದಿರಬೇಕು. ಅಲ್ಲೇ ಕುಸಿದೆ. ಬಲಗಾಲಿನ ಕೆಳಭಾಗವೂ ತರಚಿಹೋಗಿದ್ದು ಈಗ ಅನುಭವ ಆಗುತ್ತಿತ್ತು. ಡಾಂಬರ ರಸ್ತೆಯ ಮೇಲೆ ತಿಕ್ಕಿ ಹೋಗಿದ್ದರಿಂದ ತರಚಿದ ಗಾಯ ಬೆಂಕಿಯಲ್ಲಿ ಬೆಂದಷ್ಟು ಸುಡುತ್ತಿತ್ತು, ಆ ಬೇಗೆಯನ್ನು ನಿವಾರಿಸಿಕೊಳ್ಳಲು ಕೆಸರಿನಲ್ಲಿ ಪೂರ್ತಿ ದೇಹವನ್ನು ಅದ್ದಿದೆ. ಸ್ವಲ್ಪ ತಂಪಿನ ಅನುಭವವಾಗಿ ಉರಿ ಸ್ವಲ್ಪ ಶಮನವಾಗಿ ಹಾಯೆನಿಸಿತು ಆದರೆ ಎದ್ದು ನಿಲ್ಲುವ ತ್ರಾಣ ಉಳಿದಿರಲಿಲ್ಲ. 
       ಸುಮಾರು ಅರ್ಧಗಂಟೆ ಆ ಕಡೆ ಯಾವ ನರ ಪ್ರಾಣಿಯೂ ಸುಳಿಯಲಿಲ್ಲ. ನನಗೆ ಗುದ್ದಿ ಬೀಳಿಸಿದ್ದ ಎಮ್ಮೆಯೂ ಅದರ ಸಹಚರರ ಜೊತೆ ನನ್ನೆದುರೇ ಹಾದುಹೋಯಿತು. ನನ್ನನ್ನು ಕಂಡು ಅದರಲ್ಲಿ ಯಾವ ಬದಲಾವಣೆಯೂ ಆದಂತೆ ಕಾಣಲಿಲ್ಲ. ಅಂತೂ ಕೆಲ ಹೊತ್ತಿನ ಮೇಲೆ ದೂರದಲ್ಲಿ ಕೇಳಿದ ಯಾವುದೋ ಬೈಕಿನ ದನಿ ಸ್ಪಷ್ಟವಾಗುತ್ತಾ ಆಗುತ್ತಾ ಹತ್ತಿರವಾಯಿತು. ಅಂತೂ ಯಾವನೋ ಒಬ್ಬ ಬಂದ. ನನ್ನ ಬೈಕು ಅವನಿಗೆ ಮೊದಲು ಕಂಡಿತು, ಅಲ್ಲೇ ಸ್ವಲ್ಪ ಮುಂದೆ ಗಾಜು ಚೂರಾಗಿ ಬಿದ್ದಿದ್ದ ಮೊಬೈಲೂ ಕಂಡಿತು. ಗಾಡಿ ನಿಲ್ಲಿಸಿ ಇಳಿದ. ಇಳಿದವನು ಅಲ್ಲೇ ಪಕ್ಕದಲ್ಲಿ ಸಣ್ಣಗೆ  ನರಳುತ್ತಿದ್ದ ನನನ್ನು ಕಂಡ. ಅಬ್ಬಾ ಅಂತೂ ಒಬ್ಬ ಬಂದನಲ್ಲ ಅಂತ ನನಗೆ ಸ್ವಲ್ಪ ಸಮಾಧಾನವಾಯಿತು.
       ಅವನು ಎರಡುಮೂರು ಬಾರಿ ನನ್ನನ್ನು, ಬಿದ್ದಿದ್ದ ನನ್ನ ಮೊಬೈಲನ್ನೂ ನೋಡಿದ. ನನ್ನ ಮೊಬೈಲನ್ನೇ ಬೇಗ ರಿಪೇರಿ ಮಾಡಬಹುದು ಎಂದು ಅವನಿಗನಿಸಿತಿರಬೇಕು, ಅದನ್ನೇ ಎತ್ತಿ ಕಿಸೆಗೆ ಇಳಿಸಿಕೊಂಡು ಬೈಕು ಚಾಲು ಮಾಡಿದ.

Tuesday, July 21, 2020

ಸಿನಿಮಾದ ಭಾಷೆ ಎಷ್ಟು effective ಆಗಬಲ್ಲದು?

       ಸಿನಿಮಾ! ನಮಗೆಲ್ಲರಿಗೂ ಇದೊಂದು ರೋಚಕ ಸಂಗತಿ. ಭಾರತದಲ್ಲಂತೂ ಸಿನಿಮಾಗಳ ಸಾಗರವೇ ಇದೆ. ಹಿಂದಿ, ತಮಿಳು, ತೆಲಗು, ಕನ್ನಡ, ಮಲ್ಯಾಳಂ, ಮರಾಠಿ, ಭೋಜ್ಪುರಿ, ಬೆಂಗಾಳಿ, ಗುಜರಾತಿ ಎಷ್ಟೋ‌ ಇಂಡಸ್ಟ್ರೀಗಳು. ವರ್ಷಕ್ಕೆ ಸಾವಿರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತವೆ. ಅದರ ಜೊತೆಗೆ ಹಾಲೀವುಡ್ಡು, ಕೊರಿಯನ್, ಪ್ರೆಂಚು, ಜಪ್ನೀಸ್ ಹೀಗೆ ಯಾವ್ಯಾವುದೇ ಅರ್ಥವಾಗಲಾರದ ಭಾಷೆಯ ಚಿತ್ರಗಳನ್ನೂ ನಾವು ಸಬ್ಟೈಟಲ್ ಹಾಕಿಕೊಂಡಾದರೂ ನೋಡುತ್ತೇವೆ. ಇದರ ಜೊತೆಗೆ ವೆಬ್ ಸೀರೀಸ್ ಗಳು. ದಿನಾ ಹತ್ತು ಹೊಸ ಹೋಸ ಚಿತ್ರಗಳನ್ನು ನೋಡಿದರೂ ಎಷ್ಟೋ ವರ್ಷಗಳಷ್ಟು ನೋಡಬಹುದಾದಷ್ಟು ದೊಡ್ಡದು ಸಿನಿಮಾ ಪ್ರಪಂಚ!
       ಇನ್ನು ಸಿನಿಮಾ ವೀಕ್ಷಕರಲ್ಲೂ ಎರಡು ವಿಧ. ಮೊದಲನೇಯವರು ಕೇವಲ ಸಿನಿಮಾದ ಕತೆ ಹೇಗಿದೆ? ಫೈಟ್ ಸಿಕ್ವೆನ್ಸ್ ಗಳು ಹೇಗಿವೆ? ಕಾಮಿಡಿ ಎಷ್ಟಿದೆ? ಸೀನ್ ಗಳು ಹೇಗಿವೆ? ಮ್ಯೂಸಿಕ್ ಹೇಗಿದೆ? ಇದನ್ನು ನೋಡುವವರು. ಇನ್ನೊಂದು ವರ್ಗದವರು ಸ್ಕ್ರೀನ್ ಪ್ಲೇ ಹೇಗಿದೆ? ಸಿನಿಮಾಟೋಗ್ರಫಿ ಹೇಗಿದೆ? ಯಾವ ಸೀನಿಗೆ ಯಾವ ಕಲರ್ರು? ನಟರು ಪಾತ್ರಕ್ಕೆ ಉಚಿತವಾದ ಬಟ್ಟೆ ಹಾಕಿದ್ದಾರಾ? ನಟರ ಹಾವಭಾವ ಎಷ್ಟು ನ್ಯಾಚುರಲ್ಲಾಗಿದೆ? ಕತೆ ಎಷ್ಟು ಸಹಜ? ಸತ್ಯಕ್ಕೆ ಎಷ್ಟು ಹತ್ತಿರ? ನಮಗೆ ಗೊತ್ತಾಗದೆ ಪ್ರಭಾವ ಬೀರುವಂತ ಯಾವ ಟೆಕ್ನಿಕ್ಕನ್ನ ಉಪಯೋಗಿಸಿದ್ದಾರೆ? ಇದನ್ನ ನೋಡುವವರು. ಎಷ್ಟು ಕಾರು ಬ್ಲಾಸ್ಟ್ ಆಯಿತು? ಎಷ್ಟು ಅಂಗಡಿಗಳು ಹಾನಿಯಾದವು ಎನ್ನುವ ಬಗ್ಗೆಲ್ಲಾ ಈ ಎರಡನೇ ವರ್ಗ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಎರಡನೇ ವರ್ಗ ಬೆಳೆಯುತ್ತಿದೆ. ಕಮರ್ಷಿಯಲ್ ಸಿನಿಮಾದಲ್ಲೂ ಜನ ಇದನ್ನೆಲ್ಲ ಹುಡುಕುತ್ತಾರೆ. ಕೆಜಿಎಫ್ ಚಿತ್ರ ಅಷ್ಟು ದೊಡ್ಡ ಯಶಸ್ಸು ಗಳಿಸಲು ನಿರ್ದೇಶಕ ಈ ಅಂಶಗಳನ್ನೆಲ್ಲ ಗಮನಿಸಿದ್ದು ಕಾರಣ.
        ಇವತ್ತಿನ ಸಿನಿಮಾ ಲೋಕವನ್ನು ಸಸ್ಪೆನ್ಸ್ ಥ್ರಿಲ್ಲರ್ ಗಳು ಆವರಿಸಿಕೊಂಡಿವೆ. ಆದರೆ ಆವು ಮೂಲತಃ ಭಾರತದ ಜೋನರ್ ಗಳಲ್ಲ‌. ಸಾಮಾಜಿಕವಾದ ಕಮರ್ಶಿಯಲ್ ಚಿತ್ರಗಳೇ ಪ್ರಾರಂಭದಿಂದಲೂ ಭಾರತೀಯರಿಂದ ಇಷ್ಟ ಪಡಲ್ಪಟ್ಟಿವೆ. ಅತ್ಯಂತ ಲಾಜಿಕಲ್ ಹಾಗೂ ಬೌದ್ಧಿಕವಾದ ಚಿಂತನೆಗಳನ್ನು ಬಯಸುವ ಸಸ್ಪೆನ್ಸ್ ಥ್ರಿಲ್ಲರ್ ಗಳನ್ನು ನಾವು ಮೆಚ್ಚುತ್ತಿದ್ದೇವೆ ಎಂದರೆ ಅದಕ್ಕೆ ಬದಲಾಗಿರುವ ನಮ್ಮ ಮನಸ್ಥಿತಿಯೇ ಕಾರಣ.
          ಭಾರತೀಯ ಚಿತ್ರರಂಗಗಳೆಲ್ಲದರ ನಡುವೆ ನನಗೆ ವಿಶೇಷ ಅಥವಾ ಔಟ್ ಸ್ಟ್ಯಾಂಡಿಂಗ್ ಅನ್ನಿಸುವವು ಎಂದರೆ ಮಲ್ಯಾಳಂ ಚಿತ್ರಗಳು. ನೋಡಲು ಶುರುಮಾಡಿದರೆ ಯಾರನ್ನಾದರೂ ಸೆಳೆದುಬಿಡಬಹುದಾದ ನೇಟಿವೀಟಿ ಅವುಗಳಲ್ಲಿರುತ್ತದೆ. ಬೇರೆಲ್ಲಾ ಭಾಷೆಯವರು ಹಾಲಿವುಡ್ಡಿಗೆ ಪೈಪೋಟಿ ಕೊಡಲು ಹೊರಟಿರುವಾಗ ಶುದ್ಧ ನೇಟಿವ್ ಮನೋರಂಜನೆ ಕೊಡುವ ಮಲ್ಯಾಳಂ ಚಿತ್ರಗಳು ಬಹಳ ಪ್ರಾಮಾಣಿಕವಾಗಿ ತೋರುತ್ತವೆ. ಹಾಗಾಗಿ ಮಲ್ಯಾಳಂನಲ್ಲಿ ಬೇರೆ ಭಾಷೆಯಿಂದ ರಿಮೇಕ್ ಆದವುಗಳು ದುರ್ಲಭ.
          ಸೀನಿಮಾ ಒಂದು ಎಷ್ಟು ಇಫೆಕ್ಟಿವ್ ಆಗಿರಬಹುದು ಎನ್ನುವುದಕ್ಕೆ ನಾನು ಸದ್ಯ ನೋಡಿದ 'ಕಪ್ಪೆಲ' ಒಂದು ಅದ್ಭುತ ಉದಾಹರಣೆ. ನಾಯಕಿ ಜೆಸ್ಸಿ (ಅನ್ನಾ) ಗೆ ಫೋನಿನ ಮೂಲಕ ವಿಷ್ಣು (ರೋಷನ್ ಮ್ಯಾಥ್ಯೂ) ವಿನ ಪರಿಚಯ ಆಗುತ್ತದೆ. ಪರಿಚಯದಿಂದ ಅದು ಪ್ರೇಮಕ್ಕೆ ತಿರುಗುತ್ತದೆ. ಜೆಸ್ಸಿಯ ತಂದೆ ಕಟ್ಟಾ ಸಂಪ್ರದಾಯಸ್ಥ. ಬೇರೆ ಧರ್ಮದ ಹುಡುಗನನ್ನು ಮಗಳು ಮದುವೆ ಆಗುವುದನ್ನು ಸುತಾರಾಂ ಒಪ್ಪಲಾರ. ಅದೇ ಊರಿನ ಬಟ್ಟೆ ಅಂಗಡಿಯೊಂದರ ಮಾಲಿಕ ಬೆನ್ನಿ (ಸುಧಿ) ಅವನಿಗೆ ಜೆಸ್ಸಿಯನ್ನು ಕಂಡರೆ ಪ್ರೇಮ. ಜೆಸ್ಸಿಯ ತಂದೆಗೂ ಈ ಸಂಬಂಧ ಒಪ್ಪಿಗೆ. ಹಾಗಾಗಿ ಅವನು ಬೆನ್ನಿಯ ಬಳಿ ಮನೆಗೆ ಹೆಣ್ಣು ನೋಡಲು ಬರುವಂತೆ ಹೇಳುತ್ತಾನೆ. ಅಷ್ಟೊತ್ತಿಗಾಗಲೇ ಜೆಸ್ಸಿ ವಿಷ್ಣುವನ್ನು ಫೋನಿನಲ್ಲೇ ಪ್ರೀತಿಸಿಯಾಗಿದೆ‌. ಇದನ್ನು ಹೇಮಲಾರದ ಜೆಸ್ಸಿ ಸಂಕಟಪಡುತ್ತಾಳೆ. ಆ ಕ್ಷಣಕ್ಕೆ ನೋಡುತ್ತಿರುವ ಪ್ರೇಕ್ಷಕನೂ ಅದೇ ಸಂಕಟ ಅನುಭವಿಸುತ್ತಾನೆ! ಆದರೆ ಬೆನ್ನಿಯ ಅಮ್ಮ ಸೊಕ್ಕಿನ ಹೆಂಗಸು. ಅವಳು ಈ ಸಂಬಂಧವನ್ನು ನಿರಾಕರಿಸಿದಾಗ ಜೆಸ್ಸಿಗೆ ಎಷ್ಟು ಆನಂದವಾಯಿತೋ ನೋಡುವವರಿಗೂ ಅಷ್ಟೇ ಆನಂದ.
          ಈ ಮಧ್ಯೆ ಬೆನ್ನಿ ತಾಯಿಯನ್ನು ವಿರೋಧಿಸಿ ಜೆಸ್ಸಿಯನ್ನು ಮದುವೆಯಾಗಲು ನಿರ್ಧಾರ ಮಾಡುತ್ತಾನೆ. ಆಗ ಮತ್ತೆ ಜೆಸ್ಸಿಯೊಂದಿಗೆ ಪ್ರೇಕ್ಷಕರು ಸಂಕಟಕ್ಕೆ ಸಿಕ್ಕುತ್ತಾರೆ. ಜೆಸ್ಸೀ ಮತ್ತು ವಿಷ್ಣುವಿನ ಪ್ರೇಮಕ್ಕೆ ಅಡ್ಡಗಾಲುಹಾಕಿದ ಬೆನ್ನಿಯಮೇಲೆ ಕೋಪಗೊಳ್ಳುತ್ತಾರೆ.
           ಸೆಕೆಂಡ್ ಹಾಫಿನಲ್ಲಿ ಜೆಸ್ಸಿ ವಿಷ್ಣುವನ್ನು ನೋಡಲು ಬೇರೆ ಊರಿನ ಬಸ್ಟ್ಯಾಂಡೊಂದಕ್ಕೆ ಹೋಗುತ್ತಾಳೆ. ಅಲ್ಲಿಗೆ ಬರುವ ವಿಷ್ಣುವಿನ ಮೊಬೈಲು ಕಳೆದು ಹೋಗಿ ರೋಯ್ ( ಶ್ರೀನಾಥ್ ಭಸಿ) ಗೆ ಸಿಗುತ್ತದೆ. ರೋಯ್ ಒಬ್ಬ ಕಳ್ಳನಂತೆ ಕಾಣುತ್ತಾನೆ. ಹೇಗಾದರೂ ಆ ಮೊಬೈಲು ವಿಷ್ಣುವಿಗೆ ಸಿಗಲಪ್ಪ ಅನಿಸುತ್ತದೆ. 
           ಅಂತೂ ವಿಷ್ಣುವಿಗೆ ಮೊಬೈಲು ಸಿಕ್ಕಿ ಅವರಿಬ್ಬರು ಒಂದಾದಾಗ ನಮಗೂ ನಿರಾಳ. ಆದರೆ ರೋಯ್ ಅವರನ್ನು ಯಾಕೋ ಹಿಂಬಾಲಿಸತೊಡಿದಾಗ ಅವನೊಬ್ಬ ದುಷ್ಟ ಎಂದು ನಮ್ಮ ಮನಸಿನಲ್ಲಿ ಸ್ಪಷ್ಟವಾಗುತ್ತದೆ. ಹೀಗೆ ಮುಂದೆ ರೋಯ್ ಹಾಗೂ ವಿಷ್ಣುವಿನ ಮಧ್ಯೆ ಸಣ್ಣ ಹೊಡೆದಾಟವಾಗಿ ಜೆಸ್ಸಿಯ ಬಟ್ಟೆಯೂ ಕೊಳೆಯಾಗುತ್ತದೆ.
           ನಂತರ ವಿಷ್ಣು ಹಾಗೂ ಜೆಸ್ಸಿ ಪರಿಚಯದ ಲಾಡ್ಜೊಂದಕ್ಕೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ವಿಶ್ರಮಿಸುತ್ತಿರುತ್ತಾರೆ. ಇತ್ತ ರೋಯ್ ವಿಷ್ಣುವಿಗೆ ಹೊಡೆಯಲೆಂದು ತನ್ನ ಸ್ನೇಹಿತನೊಬ್ಬನನ್ನು ಕರೆದುಕೊಂಡು ಬರುತ್ತಾನೆ.
           ಆಗ ಕತೆಯಲ್ಲಿ ತಿರುವು, ನಿಜವಾಗಿ ವಿಷ್ಣು ಒಬ್ಬ ದುಷ್ಟನಾಗಿದ್ದ. ಅವನು ಜೆಸ್ಸಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ಪ್ರೇಕ್ಷಕನಿಗೆ ಕೇವಲ ವಿಷ್ಣುವಿನ ಬಗ್ಗೆ ಮಾತ್ರವಲ್ಲ ರೋಯ್, ಬೆನ್ನಿ , ಜೆಸ್ಸಿಯ ತಂದೆ ಎಲ್ಲರ ಬಗೆಗಿನ ಅಭಿಪ್ರಾಯವೂ ಒಂದೇ ಸಲ ಬದಲಾಗುತ್ತದೆ. ಜೆಸ್ಸಿಯನ್ನು ಆ ಹೊತ್ತಿನ ತನಕ ಮೆಚ್ಚುತ್ತಿದ್ದ ನಾವು ಅಲ್ಲಿಂದ ಕರುಣೆಯಲ್ಲಿ ನೋಡಲು ಶುರುಮೋಡುತ್ತೇವೆ. ಆ ಕ್ಷಣದ ವರೆಗೆ ದುಷ್ಟನಾಗಿದ್ದ ರೋಯ್ ಅಲ್ಲಿಂದ ನಾಯಕನಾಗುತ್ತಾನೆ. ಕಡೆಗೂ ಅವನು ಬಂದು ಜೆಸ್ಸಿಯನ್ನು ಕಾಪಾಡುತ್ತಾನೆ. ವಿಷ್ಣುವನ್ನು ಪೋಲಿಸರು ಬಂಧಿಸುತ್ತಾರೆ.
           ಜೆಸ್ಸಿ ತನ್ನ ಹಳ್ಳಿಗೆ ಮರಳುತ್ತಾಳೆ. ಬೆನ್ನಿಯನ್ನು ಅವಳೂ ಇಷ್ಟಪಡಲು ಪ್ರಾರಂಭಿಸುತ್ತಾಳೆ. ಒಂದು ಹಂತದಲ್ಲಿ ದುಷ್ಟನಾಗಿ ಕಂಡಿದ್ದ ಬೆನ್ನಿ ಈಗ ಇನ್ನೋಸೆಂಟ್ ನಾಯಕ!
           ಈ ಯಾವ ದೃಶ್ಯದಲ್ಲಿಯೂ ಯಾವುದೇ ಧ್ವನಿ ಹಿನ್ನಲೆಯಲ್ಲಿ ಏನನ್ನೂ ಹೇಳುವುದಿಲ್ಲ ಆದರೆ ದೃಶ್ಯಗಳೇ ನಮ್ಮ ಭಾವನೆಯ ಬದಲಾವಣೆಗೆ ಕಾರಣವಾಗುತ್ತವೆ. ನಮ್ಮಮುಂದೇ ಜೆಸ್ಸಿ ಶೊಷಣೆಗೆ ಒಳಗಾಗುತ್ತಿದ್ದರೂ ನಾವು ಅಸಹಾಯಕರಾದೆವಲ್ಲಾ ಎನ್ನುವ ಭಾವನೆ ಕಾಡುತ್ತದೆ.
          ಸಿನಿಮಾವೊಂದು ಇಷ್ಟು ಇಫೆಕ್ಟಿವ್ ಆಗಬಲ್ಲದು. ಕಪ್ಪೆಲ ಒಂದು ಉದಾಹರಣೆ ಅಷ್ಟೆ ನೇರವಾಗಿ ಮನಸ್ಸಿಗೆ ತಾಗುವ ಎಷ್ಟೋ ಮಲ್ಯಾಳಂ ಚಿತ್ರಗಳಿವೆ ಜಲ್ಲಿಕಟ್ಟು, ಕುಂಬಲಂಗೀ ನೈಟ್ಸ್, ಈ.ಮಾ.ಯು. , ವೈರಸ್ ನಂತವು ಕೆಲವು ಉದಾಹರಣೆಗಳು. 
          ನಮ್ಮನ್ನೂ ಕತೆಯ ಭಾಗವಾಗಿಸಬಲ್ಲ ಮಲ್ಯಾಳಂ ಚಿತ್ರಗಳು ಭಾರತದ ಔಟ್ ಸ್ಟ್ಯಾಂಡಿಂಗ್ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತವೆ ಎನ್ನುವುದು ನನ್ನ ಪಾಲಿಗಂತೂ ಸುಳ್ಳಲ್ಲ.
          
   

Friday, March 13, 2020

ಜಾತಿಬಿಟ್ಟವ

  ಹೋದಬಾರಿ ಬಂದಾಗ ಹ್ಯಾಗಿತ್ತೋ ಹಾಗೇ ಇದೆ ಊರು,ಮಲಗಿ. ಪೇಟೆಯಿಂದ ರಾತ್ರಿ ಬಸ್ಸು ಹತ್ತಿದರೆ ಊರು ಮುಟ್ಟುವ ಹೊತ್ತೀಗೆ ಬೆಳಗಿನ ಜಾವ. ಬಸ್ಸು ಇಳಿದವನೇ ಸರಸರ ನಡೆಯಲು ಶುರು ಮಾಡಿದೆ.
      ಸುಮಾರು ಮೂರ್ನಾಲ್ಕು ಮೈಲೇ ನಡೆಯಬೇಕೇನೊ! ಒಳದಾರಿ ಹಿಡಿದರೆ ಅರ್ಧ ದೂರ. 
      ‌ಒಳದಾರಿ ಸ್ಮಶಾನವನ್ನು ಹೊಕ್ಕು, ಹುಲ್ಲಿನ ಬೇಣವನ್ನು ದಾಟಿ, ಹೆಗಡರ ಹನ್ನೆರಡೆಕರೆ ತೋಟದ ಮೂಲಕ ನಮ್ಮ ಮನೆ ಸೇರುತ್ತದೆ.
        ಕತ್ತಲು ಪೂರ್ತಿ ಇಳಿದಿರಲಿಲ್ಲ. ಅಲ್ಲೇ, ಒಂದು ಅಶ್ವತ್ಥ ಕಟ್ಟೆ ಇತ್ತು. ಅಲ್ಲೇ ಕಾಲುಚಾಚಿದೆ. ಹಳೆಯದ್ದೆಲ್ಲ ಒಮ್ಮೆ ನೆನಪಾಯ್ತು.
        ಆ ದಿನ. ನಾನೂ ಅವಳೂ, ಅಪ್ಪನ ಮುಂದೆ ಹೋಗಿ ನಿಂತೆವು.ಅಪ್ಪ ದುರುದುರನೆ ನೋಡಿದ. ಅವನ ಕಣ್ಣಲ್ಲೆ ಬೆಂಕಿ ಕಂಡಂತಾಯಿತಲ್ಲ! ಆ ಬೆಂಕಿ ಧಗಧಗಧಗನೆ ಉರಿದು, ಅವನ ಕಣ್ಣಲ್ಲೆಲ್ಲಾ ಹರಡಿ ನಂತರ ತಲೆ ಪೂರ್ತಿ ಬೆಂಕಿಯಾಗಿ, ನಂತರ ದೇಹ ಹೊತ್ತಿ ಉರಿದು ನಂತರ ಅವನು ಕೂತಿದ್ದ ಕುರ್ಚಿಗೆ ಹತ್ತಿ ಅದಕ್ಕೆ ಜೀವ ಬಂದು ಅದು ಧಗಧಗಿಸಿ ಕೈಕಾಲುಗಳು ಬೇರೆಯಾಗಿ ಮನೆಯನ್ನೆಲ್ಲಾ ಪಸರಿಸಿ ನನ್ನನ್ನೂ,ಅವಳನ್ನೂ ನಾಲಕ್ಕೂ ದಿಕ್ಕಿನಿಂದ ಸುತ್ತುವರಿದು ಅಲ್ಲಿ ನಾವು ಒಂದಾದಂತೆ ನಂತರ ಆ ಬೆಂಕಿ ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿ ಮರ ಮಟ್ಟು ಹಟ್ಟಿ ಮನೆಗಳಿಗೆಲ್ಲಾ ಹೊತ್ತಿ ಊರಿಗೆ ಊರೇ ಭಸ್ಮವಾದಂತೆ ತೋರಿತಲ್ಲ!
         ಅವನ ಕಣ್ಣು ಕಂಡಕೂಡಲೆ ನನಗೆ ತಿಳಿದಿತ್ತಲ್ಲ, ಅಪ್ಪ ಒಪ್ಪುವುದಿಲ್ಲ ಎಂದು, ಆದರೆ, ಅವಳ ಹೊಟ್ಟೆಗಿಂತ ದೊಡ್ಡದು ಬೇರೇನೂ ನನಗೆ ಕಾಣಲಿಲ್ಲ.
           ಅಪ್ಪ ಮಾತೇ ಆಡಲಿಲ್ಲ.ಎಷ್ಟು ಹೊತ್ತು ನಾವು ಜಗುಲಿಯ ಮೇಲೆ ಕೂತಿರಲಿಲ್ಲ. ಊಹೂಂ. ಮಾತೇ ಇಲ್ಲ. ಇನ್ನೇನು ಹೊರಡುವಾಗಿ ' ಜಾತಿಗೆಟ್ಟವನು ಮತ್ತೆ ಈಕಡೆ ಬಂದ್ರೆ ಹುಷಾರು' ಅಂದ! 
           ಆಗ ಮುಖ ತಿರುಗಿಸಿದವನು! ಈಗ ಮತ್ತೆ ಇತ್ತಕಡೆ ನೋಡಿದ್ದು, ಐದು ವರ್ಷ!
          ಬೆಳಕು ಹರಿಯಿತು. ನಾಲ್ಕಾರು ಜನ ಅದು ಇದು ಮಾತಾಡುತ್ತಾ ಬಂದು ನನ್ನನ್ನು ನೋಡದೇ ಅಥವಾ ಅಂತೇ ಹೋದರು. ಎದ್ದು ಹೆಜ್ಜೆ ಹಾಕಿದೆ.
           ದೂರದಲ್ಲಿ ಮನೆ ಕಂಡಿತು. ಎದುರಿಗೆ ಕಡುಮಾಡು ಹೊಸತು ಮಾಡಿಸಿದ್ದಾನೆ ಅಪ್ಪ. ಸರಸರನೆ ನಡೆದೆ. ಐದು ವರ್ಷದ ಹಿಂದೆ ನಾನು ಇಲ್ಲಿಂದ ಹೋಗುವಾಗ ಹೀಗೆ ಇತ್ತಾ? ನೆನಪಾಗಲಿಲ್ಲ.
           ಬಾಗಿಲು ತೆಗೆದೇ ಇತ್ತು. ಹೊರಗೇ ನಿಲ್ಲುವ ಅನಿವಾರ್ಯತೆಯೇನೂ ಕಾಣಲಿಲ್ಲ,ಒಳಗೇ ಹೋಗಿ ಕೂತೆ.
           ಅಪ್ಪ ಎದ್ದಂತಿಲ್ಲ. ಅಮ್ಮ ಎದ್ದಿದ್ದರೂ ಹೊರಗೆ ಬಂದಿರಲಿಲ್ಲ, ಒಳಗೆ ಹೋಗುವ ಧಿಮಾಕು ನನಗಿರಲಿಲ್ಲ,ನನ್ನದೇ ಮನೆಯಲ್ಲಿ ಪರಕೀಯನಾಗಿ ಕುಳಿತೆ.
           ಸುಮಾರು ಐದು ನಿಮಿಷದ ನಂತರ ಅಪ್ಪ ಪಂಜಿ ಸುತ್ತಿಕೊಳ್ಳುತ್ತಾ ಹೊರಗೆ ಬಂದ. ನನ್ನನ್ನ ನೋಡಿದವನು ಬೇರೇನೂ ಮಾಡಲಿಲ್ಲ, ನೇರವಾಗಿ ನನ್ನ ಹತ್ತಿರಬಂದು ಕತ್ತಿನ ಪಟ್ಟಿ ಹಿಡಿದು ದರದರನೆ ಎಳೆದುಕೊಂಡು ಹೋಗಿ ಬಾಗಿಲಿನ ಹೊರಗೆ ದೂಡಿದ. ನಾನು ಹೋಗಿ ಬಿದ್ದೆ. ' ಜಾತಿ ಬಿಟ್ಟವರೆಲ್ಲ ಮನೆ ಒಳಗೆ ಬರೋಕ್ ಶುರುವಾದ್ರು' ಎಂದ ಥೂ ಎಂದು ನನ್ನ ಎದುರೇ ಉಗಿದ. ಒಳಗೆ ಹೋಗಿಬಿಟ್ಟ. ಅಮ್ಮ ದೂರದಿಂದಲೇ ನೋಡಿದಳು, ಏನೂ ಮಾತಾಡಲಿಲ್ಲ!
           ನಾನೂ ಎದ್ದೆ, ಎದ್ದವನು ಒಂದೇಸಮನೆ ಓಡಲು ಶುರುಮಾಡಿದೆ. ಗಾಳಿಗಿಂತ ವೇಗವಾಗಿ ಓಡಿದ್ದೆನೇನೊ! ಓಡುವಾಗಿ ಒಂದೆರಡುಕಡೆ ಬಿದ್ದು- ಎದ್ದು ಆಡಿದೆ. ಮುಖ ಒಂದೆರಡುಕಡೆ ಗಾಯವಾಗಿತ್ತು. ಬಟ್ಟೆ ನಾಲ್ಕಾರುಕಡೆ ಹರಿದುಹೋಗಿತ್ತು. ಬಸ್ಟ್ಯಾಂಡಿಗೆ ಹೋಗುವವರೆಗೆ ಥೇಟ್ ಹುಚ್ಚನಂತಾಗಿದ್ದೆ.
           ಕೂತು ಸಾವರಿಸಿಕೊಳ್ಳುತ್ತಿದ್ದಾಗೆ ಮೋಟರ್ ಬೈಕೊಂದು ಬಂದು ನಿಂತಿತು, ಚಿಕ್ಕಪ್ಪ.
           'ಬೇಜಾರಾಗ್ಬೇಡ, ನಿನ್ನಪ್ಪ ಹಾಗೇ' ಎಂದ. ಮಗನಾಗಿ ನನಗಿಂತ ಅವನಿಗೆ ಜಾಸ್ತಿ ಗೊತ್ತಿದ್ದಿತ್ತು. ನಾನು ಒಂದೂ ಮಾತಾಡಲಿಲ್ಲ‌.
           ' ನೀನೂ ಆದಿನ ಮಾಡಿದ್ದು ತಪ್ಪೇ' ನಾನು ಅವಳ ಜೊತೆ ಹೋದಬಗ್ಗೆ ಹೇಳಿದ್ದ. ನನಗೂ ಈಗ ಕೋಪ ಬಂತು, 'ಪ್ರೀತಿ ಪ್ರೇಮ ಅಂದರೆ ನಿಂಗೆಂತ ಗೊತ್ತು'.
           'ನಾನೂ ಪ್ರೀತಿಸಿಯೇ ಮದುವೆಯಾದದ್ದು, ನಿನ್ನ ಹಾಗೇ ಬೇರೆ ಜಾತಿಯವಳೇ, ನಿನ್ನಪ್ಪನೇ ನಿಂತು ಮದುವೆ ಮಾಡಿಸದ್ದು'
           ನನ್ನಪ್ಪನಾ? ಬೇರೆ ಜಾತಿಯವಳನ್ನು ಮದುವೆಯಾದದ್ದಕ್ಕೆ ಐದು ವರ್ಷಗಳ ನಂತರ ಬಂದ ಮಗನನ್ನೇ ಹೊರಹಾಕಿದ ಅಪ್ಪ, ಅವನ ತಮ್ಮನಿಗೆ ಅಂತರ್ಜಾತಿ ಮದುವೆ ಮಾಡಿಸಿದ್ದನಾ?
           ಅವನೇ ಮುಂದುವರಿಸಿದ. ' ಮದುವೆಯಾಗಿ ಒಂದೇ ವಾರಕ್ಕೆ ಊರಿಗೆ ಪ್ಲೇಗು ಬಂತು. ಅವಳೂ ಹೋದಳು, ನಮ್ಮಪ್ಪ, ಅಮ್ಮ ಹೋದದ್ದೂ ಆಗಲೇ' 
           ' ಅವಳು ಬಂದದ್ದಕ್ಕೇ ಹಾಗಾಯಿತು ಅಂದುಕೊಂಡ ನಿನ್ನಪ್ಪ, ಆ ದಿನದಿಂದ ನನ್ನ ಹತ್ತಿರ ಒಂದೂ ಮಾತಾಡಿಲ್ಲ'
           ಅವನೂ ಬಹಳ ಹಿಂದೆ ಹೋಗಿದ್ದ. ಚಿಕ್ಕಪ್ಪನಿಗೆಮದುವೆಯಾಗಿದ್ದ ವಿಷಯ ಆ ಘಳಿಗೆಯ ವರೆಗೂ ಗೊತ್ತಿಲ್ಲ!
           ಅಪ್ಪನನ್ನ ಪೂರ್ತೀ ವಿರೋಧಿಸುವುದೂ ಹೇಗೆ?
       ಸ್ವಲ್ಪ ಹೊತ್ತು ನಾವಿಬ್ಬರೂ ಮಾತಾಡಲಿಲ್ಲ. ನಾನೇ ಕೇಳಿದೆ ' ನನ್ನಪ್ಪನೆಗಲ್ಲ ಈ ಜಾತಿಯ ಸಂಕೊಲೆಯಿಂದ ಬಿಡುಗಡೆ ಯಾವಾಗ ಚಿಕ್ಕಪ್ಪ?'
       ಬಹಳ ಹೊತ್ತು ಅವನೂ ಯೋಚಿಸಿದನಿರಬೇಕು ಹೇಳಿದ ' ಮಾಣಿ, ನಿನ್ನಪ್ಪನಿಗೋ ಅಂತವರಿಗೋ ಅಲ್ಲಾ, ನಮ್ಮ ಹಳ್ಳಿಗಳಿಗೂ ಜಾತಿ ಸಂಕೋಲೆಯಲ್ಲ, ವಸ್ತ್ರ ಇದ್ದಾಗೇ, ಅದನ್ನು ಕಳಚಿದರೆ ನಾವು ಬೆತ್ತಲಾಗಿಬಿಡುತ್ತೇವೆ, ನಿಮಗೆ ಹಾಗಲ್ಲ, ಬಟ್ಟೆ ಕಡಿಮೆಯಾದಷ್ಟೂ ನಿಮಗೆ ಫ್ಯಾಷನ್' ಬಹಳ ದೊಡ್ಡ ನಗಯೊಂದನ್ನು ನಕ್ಕು ಸುಮ್ಮನಾದ.
      'ಅದು ಬಿಡು ಹೆಂಡತಿಯನ್ನು ಕರಕೊಂಡು ಬರಲಿಲ್ವ? ಎಲ್ಲಿ ಅಪ್ಪನ ಮನೆಯಲ್ಲಿದ್ದಾಳಾ?'
      ' ಇಲ್ಲ ಚಿಕ್ಕಪ್ಪ ಮೊದಲ ಹೆರಿಗೆಯಲ್ಲೇ ಅವಳೂ, ಮಗು ಇಬ್ಬರೂ ಹೋಗಿಬಿಟ್ಟರು' 
      ದೂರದಲ್ಲಿ ಬಸ್ಸು ಬಂದ ಶಬ್ಧ ಕೇಳಿಸಿತು.
          
         
        
       
       
    

Thursday, March 12, 2020

ಯುದ್ಧ-ಶಾಂತಿ

    "ಈ ಭೂಮಿ ಹುಟ್ಟುವಾಗಲೇ ಈ ಗಡಿಗಳೆಲ್ಲ ಇದ್ದಿತ್ತಾ?" ಅವನ ಪುಟ್ಟ ಮಗಳು ಹಿಂದೊಮ್ಮೆ ಕೇಳಿದ ಪ್ರಶ್ನೆ ಇದು. ಅವನಿನ್ನೂ ಅದಕ್ಕೆ ಉತ್ತರವನ್ನು ಹುಡುಕುವ ಧೈರ್ಯ ಮಾಡಿಲ್ಲ. ಅವನಿಗೆ ಗೊತ್ತಿರುವ ಉತ್ತರ ಅವನಿಗೆ ಯಾವಾಗಲೂ ಕಸಿವಿಸಿ ಉಂಟುಮಾಡುತ್ತದೆ.
        ದೇಶಕ್ಕೆ ಅವನೊಬ್ಬ ಸೈನಿಕ,ಅಥವಾ ಸೈನಿಕನಾಗಿರಲು ಅವನಿಗೊಂದು ದೇಶವಿದೆ. ಗಡಿಯ ಹತ್ತಿರವೇ ಅವನ ಮನೆ. ಕುಟುಂಬದ ಜೊತೆಗೇ ಅವನು ವಾಸವಿದ್ದ.
        ಶತ್ರು ದೇಶದ ಜೊತೆಗೆ ಯುದ್ಧ ಶುರುವಾಯಿತು. ಬೆಳಗಾದರೆ ಯುದ್ಧಕ್ಕೆ ಹೋಗುವುದು, ರಾತ್ರಿ ಮನೆಗೆ ಬರುವುದು ಮಾಡುತ್ತಿದ್ದ. ಮನೆಯಲ್ಲಿ ಅವನಿಗೆ ಬಹಳ ಗೌರವ. ಅವನ ತಮ್ಮ, ಅಣ್ಣ, ಹೆಂಡತಿ, ಮಕ್ಕಳು ಎಲ್ಲಾ ಅವನನ್ನು ಬಹಳ ಗೌರವಿಸುತ್ತಿದ್ದರು. ಯುದ್ಧ ಶುರುವಾದಮೇಲಂತೂ ಅದು ಜಾಸ್ತಿಯಾಯಿತು, ಎಷ್ಟೆಂದರೂ ಆತ ದೇಶಸೇವೆ ಮಾಡುತ್ತಿದ್ದ. ಮನೆಯ ಹೊರಗೆ ಎಂತದ್ದೇ ಬಾಂಬು,ಗುಂಡುಗಳ ಸದ್ದಿದ್ದರೂ ಮನೆಯೊಳಗೆ ಶಾಂತಿಯಿತ್ತು.
        ಯುದ್ಧ ತಿಂಗಳುಗಳ ಕಾಲ ಮುಂದುವರಿಯಿತು. ಎರಡೂಕಡೆ ಬಹಳ ಹಾನಿಯಾಯಿತು. ಅವನ ದೇಶದ ಸಾವಿರಾರು ಸೈನಿಕರು ಸತ್ತರು. ಯಾರ ದುರಾದೃಷ್ಟವೋ ಎಂಬಂತೆ ಅವನೂ ಸತ್ತು ಹೋದ!
        ಯುದ್ಧ ಮುಗಿಯಿತು, ಅವನ ದೇಶ ಗೆದ್ದಿತ್ತು. ದೇಶದಲ್ಲಿ ಸಂಭ್ರಮ ಮನೆಮಾಡಿತು.
        ಇದಾದ ಕೆಲವು ದಿನಗಳಲ್ಲಿ ಅವನ ಮನೆಯ ವಾತಾವರಣ ಸಂಪೂರ್ಣ ಬದಲಾಯಿತು. ಅವನ ಅಣ್ಣ ತಮ್ಮಂದಿರು ಅವನ ಹೆಂಡತಿ ಮಕ್ಕಳನ್ನು ಮನೆಯಿಂದ ಹೊರಹಾಕಿದರು. ಅವರವರಲ್ಲೇ ಮನಸ್ತಾಪ ಶುರುವಾಗಿ ಶಾಂತಿ ಇಲ್ಲದಾಯಿತು.
        ಯುದ್ಧ ಮುಗಿದು ದೇಶದಲ್ಲಿ ಶಾಂತಿ ನೆಲೆಸಿದರೂ, ಅವನ ಮನೆಯಲ್ಲೇ ಯುದ್ಧ ಪ್ರಾರಂಭವಾಗಿತ್ತು.
        ಈಗ ಹೇಳಿ ಅಂತರಂಗದ ಯುದ್ಧ-ಶಾಂತಿಗಳಿಗೆ ಯಾವುದರ ಹಂಗಿದೆ?

Tuesday, February 25, 2020

ಓಡಿಹೋಗೋಣ

  "ಮಲ್ಯಾಳಂ ಪಿಚ್ಚರಿನಲ್ಲಿ ಮಳೆ ಬಂದರೆ ನೋಡುತ್ತಿರುವವನೂ ಮಳೆಯಲ್ಲೇ ಅದ್ದುತ್ತಿರುವ ಹಾಗೆಆಗುತ್ತದೆ ಬೇಕಾದರೆ ಒಂದು ನೋಡು" ಎಂದು ಗೆಳೆಯ ಯಾವುದೋ ಒಂದು ಸೀನಿಮಾ ಕಳುಹಿಸಿದ್ದ, ಬೆಳಿಗ್ಗೆಯಿಂದ ಅದನ್ನೇ ಚಾದರ ಹೊದ್ದುಕೊಂಡು ನೋಡುತ್ತಾ ಮಲಗಿದ್ದ, ಮೂರ್ನಾಲ್ಕು ಬಾರಿ ಮಳೆ ಬರುವ ಸೀನನ್ನೇ ನೋಡಿದರೂ ಅವನಿಗೆ ಏನೂ ಅನಿಸಿರಲಿಲ್ಲ, ಏಳುವಾಗ ಬೆವರಿನಿಂದ ಮೈ ಅದ್ದೆಯಾಗಿತ್ತು.
     ಅವನು ಭಾಷೆ ಬಾರದ ಮಲ್ಯಾಳಂ ಸಿನಿಮಾ ನೋಡಲೂ ಕಾರಣವಿತ್ತು. "ಅಂತಾ ಸೀನೆಲ್ಲಾ ಬರ್ತದೆ" ಅಂತ ಚಿಕ್ಕ ವಯಸ್ಸಿನಲ್ಲೇ ಯಾರೋ ಹೇಳಿದ್ದು ಕೇಳಿದ್ದ.
      ಅಂತ ಸೀನು ಬಾರದಿರುವುದ್ದಕ್ಕಿಂತಲೂ ದೊಡ್ಡ ಕಷ್ಟ ಅವನ ಜೀವನದಲ್ಲಿ ನಡೆಯುತ್ತಿತ್ತು.
          ಅವನ ಹೆಸರು ಪ್ರವೀಣ.
      ಕಾಲೇಜು ಮುಗಿಸಿ ಪೇಟೆಯ ಅಂಗಡಿಯೊಂದರಲ್ಲಿ ಲೆಕ್ಖ ಬರೆಯುವ ಕೆಲಸ ಮಾಡುತ್ತಿದ್ದವನವನು. ಬೆಳಗ್ಗೆ ಕೂತು ಹೈವೇಯಲ್ಲಿ ಹೊಗೆಯುಗುಳುತ್ತಾ ಕಿರುಚಿ ಓಡುವ ಗಾಡಿಗಳನ್ನು ನೋಡುತ್ತಾ ಕೂತರೆ ಜೀವನವೇ ಒಂದು ಟೈಮ್ ಲ್ಯಾಪ್ಸ್ ವಿಡಿಯೋದಂತ ಅವನಿಗೆ ಭಾಸವಾಗುತ್ತಿತ್ತು.
      ಫೋನು ಗುಯ್ ಗುಟ್ಟಿತು. ಅತ್ತಕಡೆಯಿಂದ ಶೈಲಾ ಮಾತಾಡಿದಳು. ಅವಳ ಮನೆಯಲ್ಲಿ ಅವಳಿಗೆ ಗಂಡು ನೋಡಿದ್ದರಂತೆ. ನಿನ್ನ ಅಪ್ಪನನ್ನು ಮನೆಗೆ ಕರೆದುಕೊಂಡು ಬಾ ಎಂದು ಫೋನಿಟ್ಟಳು.
      ಜೀವನದ ಯಾವುದೋ ಅನಾಮಿಕ ಕ್ಷಣವೊಂದರಲ್ಲಿ ತನ್ನಷ್ಟಕ್ಕೇ ನಿಂತುಹೋಗಿರುವಂತೆ ಅವನಿಗೆ ಭಾಸವಾಯಿತು. ತಲೆಯಮೇಲೆ ಫ್ಯಾನೊಂದು ತಿರುಗುತ್ತಿತ್ತು, ಕಣ್ಣೆದುರಿನ ರಸ್ತೆಯಮೇಲೆ ನಿಮಿಷದಲ್ಲೇ ನೂರಾರು ವಾಹನಗಳು ಮಿಂಚಿ ಮರೆಯಾಗುತ್ತಿದ್ದವು, ಗೋಡೆಯ ಗಡಿಯಾರವೂ ಟಿಕ್ ಟಿಕ್ ಎಂದು ತನ್ನ ಇರುವನ್ನೂ ಮತ್ತೆ ಮತ್ತೆ ಸಾರುತ್ತಿತ್ತು, ಇಷ್ಟೆಲ್ಲಾ ಚಲನೆಯ ನಡುವೆಯೂ ಒಂದು ನಿರ್ವಾತದಲ್ಲೋ,ಸ್ತಬ್ಧತೆಯಲ್ಲೋ ಸಿಲುಕಿದಂತೆ ಅವನಿಗೆ ಭಾಸವಾಗುತ್ತಿತ್ತು.
      ಅರ್ಧದಿನ ರಜೆ ತೆಗೆದುಕೊಂಡು ಮನೆಗೆ ಹೊರಟ. ಪ್ರೇಮ ವೈಫಲ್ಯ ಅವನಿಗೆ ಇದು ಮೋದಲೇನಲ್ಲ, ಅವನ ಕೆಲವು ಪ್ರೀತಿಗಳು ಅವ್ಯಕ್ತವಾಗಿಯೇ ಸಾಮಾಧಿ‌ ಸೇರಿವೆ ಅಂತವುಗಳಲ್ಲಿ ಇದೂ ಒಂದಾಗಿಬಿಡಬಹುದೆಂಬ ಯೋಚನೆಯೂ ಅವನ ಸೆಖೆಯನ್ನು ಹೆಚ್ಚು ಮಾಡುತ್ತದೆ.
      ಅದು-ಇದು ಗಾಡಿ ಹಿಡಿದು ಮನೆ ಸೇರಿದ. ಅಪ್ಪನ ಬಳಿ ಹೇಳಬೇಕು ಆದರೆ ಹೇಳುವುದು ಹೇಗೆ ಎಂಬುದು ಅವನಿಗೂ ಗೊತ್ತಿಲ್ಲ. ಮೊದಲಬಾರಿ ಡಿಗ್ರಿಯಲ್ಲಿ ಇಂಗ್ಲೀಷು ಬ್ಯಾಕ್ ಆದಾಗ, ಸಂತೆ ಪೇಟೆಯಲ್ಲಿ ಪರ್ಸು ಕಳೆದುಕೊಂಡಾಗ, ಹೀಗೆ ಇನ್ನೂ ಭಯಂಕರ ಕ್ಷಣಗಳನ್ನು ಆತ ದಾಟಿ ಬಂದಿದ್ದನಾಗಿದ್ದರೂ ಆ ಎಲ್ಲಾ ಅನುಭವಗಳೂ ಅವನ ಭಯವನ್ನು ಹೆಚ್ಚು ಮಾಡಿದ್ದವಷ್ಟೇ.
       ಅಪ್ಪನ ಮುಂದೆ ಮೂರ್ನಾಲ್ಕು ಸಲ ಹೋಗಿ ನಿಂತನಾದರೂ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದೇನೆ, ಅವಳ ಮನೆಗೆ ಹೋಗಿ ಮಾತಾಡೋಣ ಅನ್ನುವಷ್ಟು ತೂಕದ, ಭೀಕರವಾದ ಮಾತುಗಳನ್ನು ಹೇಳುವ ಧೈರ್ಯ ಒಗ್ಗೂಡಲೇ ಇಲ್ಲ.
       ಪ್ರೀತಿಸಿದವರೆಲ್ಲ ಮಾಡುವ ಕೆಲಸ ಯಾವುದು? ಓಡಿ ಹೋಗುವುದು. ಹೌದು, ಅವಳ ಬಳಿ ಹಾಗೆ ಹೇಳಿಬಿಡಬೇಕು. ಓಡಿ ಹೋಗುವುದೇ ಮಾರ್ಗ,ನಾಡಿದ್ದೇ ಹೋಗಿ ಬಿಡೋಣ ಎಂದು ಅವಳ ಹತ್ತಿರ ಹೇಳಬೇಕು.
       ರಾತ್ರಿ ಅವಳಿಗೆ ಫೋನು ಮಾಡಿದ. ಏಳೆಂಟುಬಾರಿ ಫುಲ್ ರಿಂಗಾಗಿ ಕಟ್ಟಾದಮೇಲೆ ಒಂದು ಸಾರಿ ಫೋನೆತ್ತಿದಳು. ತೆಗೆದ ಬಾಯಿಗೆ ಹೇಳಿದ್ಯಾ ಅಂತ ಕೇಳಿದಳು. ಇವನು ನಾಳೆ ಬೆಳಿಗ್ಗೆ ಸಿಕ್ಕು ಮಾತಾಡುವುದಿದೆ ಎಂದು ಫೋನಿಟ್ಟ.
       ಬೆಳಗಾಯಿತು. ಕೆಲಸಕ್ಕೆ ರಜೆ ಹಾಕಿದ್ದ. ಅವಳನ್ನು ಭೇಟಿಯಾಗಬೇಕಿತ್ತು. ಸ್ನಾನಮಾಡಿ ಹೊರಟ. 
       ಇದ್ದಕ್ಕಿದ್ದ ಹಾಗೇ ತನಗೆ ಇಷ್ಟು ಧೈರ್ಯ ಹೇಗೆ ಬಂತು ಅಂತ ಅವನಿಗೂ ಅರ್ಥವಾಗಿರಲಿಲ್ಲ, ಅಪ್ಪನ ಬಳಿ ಮಾತಾಡುವುದಕ್ಕಿಂತ ಓಡಿಹೋಗುವುದು ಸುಲಭವಾ? ಅಪ್ಪ ಅಷ್ಟು ಹೆದರಿಸಿಟ್ಟಿದ್ದಾನಾ?ಓಡಿಹೋದರೆ, ಅಪ್ಪನಿಗೆ ವಿಷಯ ಹೇಳಿದರೆ ಏನು ವ್ಯತ್ಯಾಸ ಆಗಬಹುದು, ಈ ಗಾಡಿಗಳೆಲ್ಲ ನಿಂತಲ್ಲೇ ಇದ್ದು ರಸ್ತೆಯೇ ಚಲಿಸುವ ಹಾಗಿದ್ದರೆ ಎಷ್ಟು ಚನ್ನಾಗಿತ್ತು ಇಂಥದ್ದೆಲ್ಲಾ ಯೋಚನೆಗಳೆಲ್ಲ ತಲೆಯಲ್ಲಿ ಸುಳಿಯುತ್ತಿದ್ದಂತೆ ಸರ್ಕಲ್ ಬಂದಿತ್ತು. 
       ಸಮಯ ಹತ್ತಾಗಿದೆ, ಇನ್ನೇನು ಅವಳು ಬಂದುಬಿಡುತ್ತಾಳೆ. ಏನು ಹೇಳೋಣ? ಓಡಿ ಹೋಗೋಣ ಎನ್ನುವುದಾ? ಅಪ್ಪನ ಬಳಿ ಮಾತಾಡೋಕೆ ಆಗಲಿಲ್ಲ ಅಂತ ಹಲ್ಲು ಗಿಂಜುವುದಾ? ನೀನು ಅವನನ್ನೇ ಮದುವೆಯಾಗು ಎನ್ನುವುದಾ? ಓಡಿಹೋಗುವಷ್ಟು ದೊಡ್ಡ ಕಾರ್ಯಕ್ಕೆ ನಾನು ಸಿದ್ಧನಾಗಿದ್ದೇನಾ ಏಂಬಿತ್ಯಾದಿ ಯೋಚನೆಗಳನ್ನು ಮಾಡುತ್ತಾ ನಿಂತ. 
       ಗಡಿಯಾರ, ಗಾಡಿ, ನೆರಳುಗಳೆಲ್ಲಾ ಇವೆಲ್ಲಾ ನಮಗೆ ಸಂಬಂಧವೇ ಇಲ್ಲ ಅನ್ನುವಂತೆ ಓಡುತ್ತಿದ್ದವು, ವೇಗವಾಗಿ.

Friday, December 20, 2019

ತೊಂದರೆಯಲ್ಲ ಎನಿಸುವ ತೊಂದರೆಗಳ ನಡುವೆ

ಯಾವುದೋ ಹಿಂಜರಿಕೆ, ಏನನ್ನೋ
ಹೇಳಬಯಸುತ್ತಿರುತ್ತೇವೆ ಆದರೆ ಆ ಹಂತಕ್ಕೆ ಅದು ಜರೂರತ್ತು ಎನಿಸುವುದಿಲ್ಲ ಸುಮ್ಮನಾಗಿಬಿಡುತ್ತೇವೆ, ಹೇಳಿದ್ದರೆ ಚೆನ್ನಾಗಿತ್ತು ಎಂದು ಮತ್ಯಾವಾಗಲೋ ಅನಿಸುತ್ತಿರುತ್ತದೆ.
      ತೊಂದರೆಯೇ ಅಲ್ಲ ಅನಿಸುವ ಕೆಲವು ತೊಂದರೆಗಳು ಬಹಳ ಕಷ್ಟಕೊಟ್ಟುಬಿಡುತ್ತವೆ ನೋಡಿ. ಯಾವಾಗಲೋ ಒಮ್ಮೆ ಆಡಿದ ಮಾತು,ಮಾಡಿದ ತಪ್ಪು, ನಕ್ಕಿದ್ದು ಎಲ್ಲಾ ಆಗೀಗ ಮತ್ತೆ ಮತ್ತೆ ನೆನಪಾಗಿ ನಾಲಿಗೆ ಕಚ್ಚುವಂತಾಗುತ್ತದೆ, ನಮ್ಮ ಬಗ್ಗೆ ನಮಗೇ ನಾಚಿಕೆಯಾಗುತ್ತದೆ, ಕುಗ್ಗಿಹೋಗುವ ನಾಚಿಕೆಯೇನಲ್ಲದಿದ್ದರೂ ಮತ್ತೆ ಮತ್ತೆ ಮುದುಡಿಹೋಗುವಂತೆ ಮಾಡುತ್ತವೆ ಆ ನೆನಪುಗಳು.
       ಯಾವಾಗಲೋ ಒಮ್ಮೆ ಗುಂಪಿನ ನಡುವೇ ನೆಚ್ಚಿನ ಗೆಳೆಯನೋ! ಗೆಳತಿಯೋ! ನಿಮ್ಮಮೇಲೆ ಗಂಭೀರವಾದ ಹಾಸ್ಯ ಮಾಡುತ್ತಾರೆ, ನಿಮಗೂ ತಿರುಗಿ ಪಂಚ್ ಕೊಡುವ ಕೌಶಲ್ಯವಿರುತ್ತದೆ ಆದರೆ ಪ್ರೆಂಡ್ಷಿಪ್ಪು ಅಂತ ನೀವು ಸುಮ್ಮನಾಗಿರುತ್ತೀರಾದರೂ ಅದು ನಿಮ್ಮ ಮನಸ್ಸಿನ ಮೂಲೆಯಲ್ಲಿರುತ್ತದೆ. ಮತ್ತೆ ಮತ್ತೆ ಅವನೋ ಅವಳೋ ಎದುರು ಬಂದಾಗ ಏನಾದರೂ ಹೇಳೋಣ ಎನಿಸುತ್ತದೆ. ಆದರೆ ಸುಮ್ಮನಿರಬೇಕಾದ ಹಣೆಬರಹ ನಿಮ್ಮದು. ಆವತ್ತೇ ಹೇಳಿ ಮುಗಿಸಿದ್ದರೆ!
       ಯಾರೋ ಒಬ್ಬ ನೀವು ಆಗಾಗ ಭೇಟಿಯಾಗಿದ್ದ ವ್ಯಕ್ತಿ, ಅವನಿಗೆ ಸೂಕ್ಷ್ಮತೆಯ ಪರಿಜ್ಞಾನವೂ ಇಲ್ಲ, ನಿಮ್ಮ, ಅವನ ಸ್ನೇಹಿತರ ಎದುರು ನಿಮಗೆ ಬಹಳ ದೊಡ್ಡ ಅವಮಾನ ಮಾಡುತ್ತಾನೆ. ಅವನು ನಿಮಗಿಂತ ಗಟ್ಟಿ. ನೀವು ಅವನಿಗೆ ಏನೂ ಮಾಡಲಾರಿರಿ! ನಿಮ್ಮ ಸ್ನೇಹಿತರಿಗೆ ನೀವೂ ಗೊತ್ತು ಅವನೂ ಗೊತ್ತು. ಅವರೇನೂ ಅಂದುಕೊಳ್ಳದಿದ್ದರೂ ಏನೋ ಅಂದುಕೊಳ್ಳುತ್ತಾರೆ ಅಂತ ನೀವು ಅಂದುಕೊಂಡ ನೀವು ನಿಮ್ಮನ್ನು ಅವಮಾನಿಸಿದವನ ಮೇಲೆ ಅಸಹಾಯಕವಾದ ಕೋಪ ಕಾರುತ್ತಾ, ಅತಾರ್ಕಿಕವಾದ ಸೇಡಿನ ಕಲ್ಪನೆಗಳಲ್ಲಿ ಸ್ವಲ್ಪಕಾಲ ಕಳೆದು ಕಡೆಗೆ ಅದನ್ನು ಮರೆತು ಬಿಡುತ್ತೀರಿ.
        ಇಂತಹ ಸೆಣ್ಣ ಸೆಣ್ಣ ತೊಂದರೆಗಳು ಒಂದೆರಡಲ್ಲ. ಪೋಲಿಸ್ ಹಿಡಿದು ದಂಡಹಾಕುತ್ತಾನೆ, ಶಾಲೆಯಲ್ಲೋ,ಕಾಲೇಜಲ್ಲೋ ಮಾಸ್ತರರು ಗೊತ್ತಿಲ್ಲದ ಪ್ರಶ್ನೆ ಕೇಳಿ ಉತ್ತರ ಗೊತ್ತಿಲ್ಲದ ನಿಮಗೆ ಬೈಯುತ್ತಾರೆ, ಬಟ್ಟೆ ಅಂಗಡಿಯಲ್ಲಿ ಗೊತ್ತಿಲ್ಲದೇ ಯಾವುದೋ ಬಟ್ಟೆ ಕೊಂಡಿರುತ್ತೀರಿ ಅದರ ಬೆಲೆ ಕೇಳಿ ಒಮ್ಮೆ ಅಂಗಡಿಯವನ ಮುಂದೇ ಹೌಹಾರಿ ನಾಚುತ್ತೀರಿ, ಸ್ನೇಹಿತರ ಜೊತೆ ತಿಂಡಿ ತಿಂದು ಎಲ್ಲರೂ ಬಿಲ್ಲು ಕೊಡಲು ಮುಂದಾದಾಗ ಅಷ್ಟು ಹಣವಿರದ ನೀವು ಅಪ್ಪಿ ತಪ್ಪಿಯೂ ಆ ಗೋಜಿಗೂ ಹೋಗುವುದಿಲ್ಲ, ಯಾರೋ ನಿಮ್ಮ ಮುಂದೇ ನಿಮ್ಮಮೇಲೆ ತಮಾಷೆ ಮಾಡುತ್ತಾರೆ ಹೊಟ್ಟೆ ಉರಿದರೂ ತಡೆದುಕೊಳ್ಳುತ್ತೀರಿ, ಯಾವುದೋ ಪುಸ್ತಕ ಕಂಡು ಯಾರೂ ಕಾಣದಂತೆ ಅದರ ಬೆಲೆ ಹುಡುಕಿ ಬಹಳ ಜಾಸ್ತಿ ಎನಿಸಿ ಸುಮ್ಮನೆ ಬದಿಗಿಟ್ಟು ಯಾವುದೋ ನೆಚ್ಚಿನ ಸ್ನೇಹಿತನನ್ನು ಕಳೆದುಕೊಂಡಂತೆ ಭಾರವಾಗಿ ಅಲ್ಲಿಂದ ಕಾಲ್ಕೀಳುತ್ತೀರಿ, ಶಾಲೆ ಅಥವಾ ಕಾಲೇಜಿನಲ್ಲಿ ನೀವು ಬಹಳ ಪ್ರೇಮಿಸಿದ ವ್ಯಕ್ತಿಗೆ ಬೇರೆಯಾರೋ ಪ್ರೇಮಿಯಿದ್ದಾರೆ ಎಂದು ನಿಮಗೆ ತಿಳಿಯುತ್ತದೆ, ಶಾಲೆಯ ಪ್ರವಾಸಕ್ಕೆ ಅಪ್ಪ ದುಡ್ಡು ಕೊಡುವುದಿಲ್ಲ, ಯಾರೋ ನಿಮ್ಮನ್ನ ಇನ್ವೈಟ್ ಮಾಡಲಿ ಎಂದುಕೊಳ್ಳುತ್ತೀರಿ ಮಾಡುವುದಿಲ್ಲ, ಉಫ್! ಒಂದಾ ಎರಡಾ? ಇಂತಹ ಚಿಕ್ಕ ಚಿಕ್ಕ ಅವಮಾನ, ನೋವು, ತಪ್ಪು, ನಾಚಿಕೆಗಳ ಕೂಡುವಿಕೆಯೇ ಬದಕು, ಅದಿದ್ದರೇ ಚಂದ.
        ಅಷ್ಟೇ ಅಲ್ಲ, ಬದುಕಿನಲ್ಲಿ ಇನ್ನೂ ಇದೆ. ಈಗೇನು ಛಳಿಗಾಲ ಶುರುವಾಗಿದೆ. ದಪ್ಪ ಸ್ವೆಟರ್ ಹಾಕಿಕೊಂಡು ನಿಮ್ಮದೇ ರೂಮಿನಲ್ಲಿ ನೆಚ್ಚಿನ ಸಿನಿಮಾವನ್ನೋ, ಹಾಡನ್ನೋ, ಪುಸ್ತಕವನ್ನೋ ಆಸ್ವಾದಿಸುತ್ತಾ ಹಬೆಯಾಡುವ ಬಿಸಿಬಿಸಿ ಚಹಾವನ್ನು ಎದುರಿಗಿಟ್ಟುಕೊಂಡು ಕೂತು ನೋಡಿ! ಬದುಕಿನ ಸೌಂದರ್ಯದ ಕಿರುಗಿಟಕಿಯೊಂದು ನಿಮ್ಮೆಡೆಗೆ ತೆರೆದುಕೊಳ್ಳುತ್ತದೆ.

(ನಿಮ್ಮ ಯಾವುದಾಜರೂ ಮಝಾ ಆದ ಪಾಯಿಂಟ್ ಇದ್ದರೆ ಕಾಮೆಂಟ್ ಮಾಡಿ)