ಯಾವಾಗಲೂ ಹೀಗೆ, ನನಗೆ ಮಾತ್ರವೋ, ಎಲ್ಲರಿಗೂ ಹೀಗೆಯೋ ಗೊತ್ತಿಲ್ಲ. ಯಾವಾಗ ಮಳೆಯಂಗಿ ಧರಿಸಿಕೊಂಡು ಹೋಗುತ್ತೇನೋ, ಒಂದು ಹನಿ ಮಳೆಯೂ ಬರುವುದಿಲ್ಲ, ಯಾವ ದಿನ ಮಳೆಯಂಗಿ ಮರೆತು ಹೋಗುತ್ತೇನೋ ಆ ದಿನ ಧಾರಾಕಾರ ಮಳೆ ಸುರಿಯುತ್ತದೆ.
ಆ ದಿನವೂ ಹಾಗಾಯಿತು. ಐದೇ ನಿಮಿಷದಲ್ಲಿ ಬಿಸಿಲು ಕರಗಿ ಕಾರ್ಮೋಡ ಆವರಿಸಿಬಿಟ್ಟಿತು. 'ನೆಮ್ಮದಿ ಕೇಂದ್ರ' ಕ್ಕೆ ಯಾವುದೋ ಕೆಲಸದ ಮೇಲೆ ಹೋಗಿದ್ದೆ. ಅಲ್ಲಿದ್ದ ಉದ್ದದ ಸರತಿ ಸಾಲಿನಲ್ಲಿ ಕೆಲಸ ಆಗಲಿಲ್ಲ, ಮಧ್ಯಾಹ್ನ ಒಂದು ಗಂಟೆ ಆಯಿತು. ಸಾಲಿನಲ್ಲಿ ನಿಂತು ಕಾಲು ನೋಯಲು ಶುರುವಾಗಿತ್ತು, ಮೊಬೈಲು ಫೋನು ನೋಡಿ ನೋಡಿ ಕಣ್ಣೂ ಉರಿ ಶುರುವಾಗಿತ್ತು, ಅಷ್ಟೇ ಹೊತ್ತಿಗೆ ಒಳಗಿದ್ದವನು ಊಟಕ್ಕೆ ನಡೆದು ಬಿಟ್ಟ. ಮೊಬೈಲಿನಲ್ಲಿ ಚಾರ್ಜೂ ಖಾಲಿಯಾಗಿತ್ತು, ಹೊಟ್ಟೆಯೂ ಹಸಿಯುತ್ತಿತ್ತು, ಅಕ್ಕಪಕ್ಕ ಹತ್ತಾರು ಜನ ನಿಂತಿದ್ದರಿಂದ ಸುಡುವ ಸೆಖೆ ಬೇರೆ, ನೆಮ್ಮದಿ ಕೇಂದ್ರಕ್ಕೆ ಹೋಗಿ ನೆಮ್ಮದಿಯೇ ಹಾಳಾಗಿತ್ತು. ಇನ್ನವನು ಊಟಮಾಡಿ ಬರುವುದು ಮಧ್ಯಾಹ್ನ ಮೂರುಗಂಟೆಗೆ ಅಂತ ಯಾರೋ ಹೇಳಿದರು, ನನಗಂತೂ ಅಷ್ಟು ಹೊತ್ತು ಮತ್ತೆ ಅಲ್ಲಿ ನಿಲ್ಲುವುದು ಸಾಧ್ಯವಿಲ್ಲದೆ ಮನೆಗೆ ಹೊರಟಿದ್ದೆ, ಆಗಲೇ ಹೀಗೆ ಇದ್ದಕ್ಕಿದ್ದಂತೆ ಮೋಡ ಮುಸುಕಿದ್ದು.
ಸಣ್ಣಗೆ ಮಳೆಯ ಹನಿ ಶುರುವಾಗಿತ್ತು. ಅಲ್ಲೇ ಮುಂದಿದ್ದ ಸಣ್ಣ ಅಂಗಡಿಯೊಂದರ ಬಳಿ ನಿಲ್ಲೋಣ ಎಂದುಕೊಂಡೆ, ಆದರೆ ಅಲ್ಲಿ ನೋಡಿದರೆ ಮೂರ್ನಾಲ್ಕು ಬೈಕುಗಳು ಆಗಲೇ ನಿಂತಿದ್ದವು. ಹಾಗಾಗಿ ಅಲ್ಲಿ ನಿಲ್ಲದೆ ಮುಂದುವರಿದೆ. ಮಳೆಯೂ ಅಷ್ಟೇನು ಜೋರಾಗಿರಲಿಲ್ಲ ಹಾಗಾಗಿ ಅದು ಜೋರಾಗುವುದರೊಳಗೆ ಮನೆ ಸೇರಬೇಕು ಎಂದುಕೊಂಡು ವೇಗ ಹೆಚ್ಙಿಸಿದೆ.
ಆದರೆ, ಮಳೆಯ ಹನಿಗಳು ಜೋರಾಗಿ ಬೀಳತೊಡಗಿದವು. ಪ್ಯಾಂಟಿನ ಕಿಸೆಯೊಳಗೆ ನನ್ನ ಮೊಬೈಲಿತ್ತು. ಸದ್ಯ ಸದ್ಯ ಅದರ ಡಿಸ್ಪ್ಲೇ ಹಾಳಾಗಿತ್ತು, ಮೂರು ಸಾವಿರ ಕೊಟ್ಟು ಹೊಸತು ಹಾಕಿಸಿದ್ದೆ. ಈಗ ಮಳೆಯ ನೀರು ಅದಕ್ಕೆ ತಾಗಿ ಅದೇನಾದರೂ ಹಾಳಾದರೆ ಎಂದು ಭಯವಾಯಿತು. ಒಂದು ಕೈಯಿಂದ ಅದನ್ನು ತೆಗೆದುಕೊಂಡು ಸೊಂಟಕ್ಕೆ ಸಿಕ್ಕಿಸಿಕೊಂಡೆ, ಅಂಗಿಯ ಕೆಳಗೆ.
ಈಗ ಮಳೆ ಭಾರೀ ಜೋರಾಗಿತ್ತು. ನಾನು ಹೆಲ್ಮೆಟ್ಟೂ ಧರಿಸಿರಲಿಲ್ಲವಾದ್ದರಿಂದ ಮಳೆಯ ಹನಿಗಳು ಸೂಜಿಯಂತೆ ಮುಖಕ್ಕೆ ಚುಚ್ಚಿ ಉರಿ ಹುಟ್ಟಿಸುತ್ತಿದ್ದವು. ಹಿಂದೆ ಅಂಗಡಿಯಲ್ಲೇ ನಿಂತುಕೊಳ್ಳದೇ ಬಂದದ್ದಕ್ಕೆ ನನ್ನನ್ನೇ ಬೈದುಕೊಂಡೆ.
ಈಗ ಎದುರು ಏನೂ ಕಾಣುತ್ತಿರಲಿಲ್ಲ. ಧೋ ಎಂದು ಮಳೆ ಸುರಿಯುತ್ತಿತ್ತು, ಮಳೆಯ ಶಬ್ಧ ಒಂದು ಬಿಟ್ಟರೆ ಬೇರೇನೂ ಕೇಳುತ್ತಿರಲಿಲ್ಲ. ಮೊಬೈಲು ಸಿಕ್ಕಿಸಿಕೊಂಡಿದ್ದ ಸೊಂಟದ ಭಾಗದವರೆಗೂ ನೀರು ತಲುಪಿತ್ತು, ಅದೇ ನೀರು ಪ್ಯಾಂಟಿನ ಒಳಗೂ ಹೋಗಿ ಭಾರೀ ತೊಂದರೆ ಕೊಡಲು ಶುರುಮಾಡಿತ್ತು.
ಆದದ್ದಾಗಲಿ ಎಂದು ಗಾಡಿಯ ವೇಗವನ್ನು ಏರಿಸಿದೆ. ಅಲ್ಲೇ ಬಲಕ್ಕೆ ತಿರುಗಿದರೆ ಸ್ವಲ್ಪ ದೂರದಲ್ಲಿ ಹಾಳುಬಿದ್ದಂತಿರುವ ಹಳೆಯ ಮಂಟಪದಂತದ್ದೇನೋ ಇತ್ತು, ಮನೆ ಹತ್ತಿರವೇನೂ ಇರಲಿಲ್ಲ, ಹಾಗಾಗಿ ಮಳೆ ನಿಲ್ಲುವ ತನಕ ಅಲ್ಲಿ ನಿಲ್ಲೋಣ ಎಂದು ಅತ್ತ ಕಡೆ ಗಾಡಿ ತಿರುಗಿಸಿದೆ. ಯಾರೂ ಹೆಚ್ಚು ಓಡಾಡದ ದಾರಿಯದು. ಎಷ್ಟೋ ವರ್ಷದ ಹಿಂದೆ ಮಾಡಿ ಈಗ ಪೂರ್ಣ ಶಿಥಿಲವಾಗಿದ್ದ ರಸ್ತೆ ಬೇರೆ. ಆದರೂ ಮೊದಲು ಓಡಾಡಿದ್ದ ಅಂದಾಜಿನ ಮೇಲೇ ಗಾಡಿ ಓಡಿಸುತ್ತಿದ್ದೆ, ಮಳೆ ಎಷ್ಟು ಜೋರಾಗಿತ್ತೆಂದರೆ ಪೂರ್ತಿ ಕಣ್ಣು ತೆರೆಯುವಂತೆಯೂ ಇರಲಿಲ್ಲ.
ಸ್ವಲ್ಪ ದೂರದಲ್ಲಿ ಮಂಟಪ ಕಾಣುತ್ತಿತ್ತು, ಇನ್ನೇನು. ಅಲ್ಲಿ ತಲುಪುತ್ತಿದ್ದೆ, ಅಷ್ಟರಲ್ಲಿ, ಅಲ್ಲೇ ಪಕ್ಕದಲ್ಲೆಲ್ಲೋ ಮೇಯುತ್ತಿದ್ದ ಎಮ್ಮೆಯೊಂದು ಗಾಡಿಯ ಸದ್ದಿಗೆ ಹೆದರಿ ರಸ್ತೆಯ ಕಡೆಗೇ ಓಡಿ ಬಂದಿತು, ಆ ಜಡಿ ಮಳೆಯಲ್ಲಿ ನನಗದು ಕಾಣಲೂ ಇಲ್ಲ. ಅಷ್ಟೇ ಹೊತ್ತಿಗೆ ಸೊಂಟದಿಂದ ನನ್ನ ಮೊಬೈಲೂ ಜಾರಿ ಹೊರಬರುತ್ತಿತ್ತು, ನನ್ನ ಗಮನ ಒಂದು ಕ್ಷಣ ಆ ಕಡೆ ಹೋಯಿತು ಅದೇ ಕ್ಷಣಕ್ಕೆ ಆ ಎಮ್ಮೆಯೂ ಎದುರು ಬಂದಿತ್ತು.
ನನ್ನ ಗಾಡಿ ಎಮ್ಮೆಗೆ ಗುದ್ದಿತು. ಎಡಕ್ಕೆ ವಾಲಿದ ಗಾಡಿ ಪಲ್ಟಿಯಾಯಿತು. ನನ್ನ ಮೊಬೈಲು ಅಲ್ಲೇ ಎಮ್ಮೆಯ ಎದುರು ಬಿತ್ತು, ಹುಲ್ಲು, ಹಿಂಡಿಗಳನ್ನು ಬಿಟ್ಟು ಮೊಬೈಲಿನಂತಹ ಆಧುನಿಕ ಉಪಕರಣಗಳ ಕಿಂಚಿತ್ತು ಜ್ಞಾನ ಇರದಿದ್ದ ಆ ಎಮ್ಮೆ ಮುಖ ಅಡಿಯಾಗಿ ಬಿದ್ದಿದ್ದ ನನ್ನ ಮೊಬೈಲನ್ನು ಮೆಟ್ಟಿ ಹಾರಿಸಿ ಕಣ್ಮರೆಯಾಯಿತು.
ಬೀಳುವಾಗ ನನ್ನ ಕಾಲು ಬೈಕಿನ ಇಂಜಿನ್ನಿನ ಭಾಗದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಬಿದ್ದ ಬೈಕು ವೇಗದಲ್ಲಿದ್ದ ಕಾರಣ ನನ್ನನ್ನೂ ಅದರ ಜೊತೆ ರಸ್ತೆಯ ಮೇಲೆ ಎಳೆದುಕೊಂಡು ಹೋಯಿತು. ನನ್ನ ಎಡ ಭುಜ ಪೂರ್ತೀ ತರಚಿಹೋಗಿ ರಕ್ತ ಸುರಿಯತೊಡಗಿತು. ಎಡಗಾಲು ಇಂಜಿನ್ನಿನ ಹತ್ತಿರ ಸಿಕ್ಕಿ ಹಾಕಿಕೊಂಡಿದ್ದರಿಂದ ಅದು ಸುಟ್ಟು ಉರಿಯುತ್ತಿತ್ತು.
ಹೇಗಾದರೂ ತಪ್ಪಿಸಿಕೊಳ್ಳಬೇಕೆಂದು ಆ ಕಾಲನ್ನು ಜೋರಾಗಿ ಎಳೆದೆ, ಚಪ್ಪಲಿಯನ್ನು ಅಲ್ಲೇ ಬಿಟ್ಟು ಕಾಲು ಹೊರಬಂತು ಆದರೆ ಬರುವಾಗ ಸೈಲೆಂನ್ಸರಿನ ಕೆಳ ಅಂಚಿಗೆ ಸಿಕ್ಕಿ ಹೆಬ್ಬೆರಳಿನ ಉಗುರು ಕಿತ್ತು ಹೋಯಿತು. ಕಾಲು ಹೊರಗೆಳೆದ ರಭಸಕ್ಕೆ ಅಲ್ಲೇ ಪಕ್ಕದಲ್ಲಿ ಆಗತಾನೇ ತಯಾರಾಗಿದ್ದ ತಾಜಾ ಕೆಸರಿನಲ್ಲಿ ಹೋಗಿ ಬಿದ್ದೆ.
ಎಡ ಭುಜದಿಂದ ಎದೆ, ಹೊಟ್ಟೆಯ ವರೆಗೂ ತರೆದ ಗಾಯವಾಗಿ ರಕ್ತ ಸುರಿಯಲು ಶುರುವಾಗಿತ್ತು, ಕಿತ್ತು ಹೋಗಿದ್ದ ಎಡಗಾಲಿನ ಉಗುರಿನ ಜಾಗದಲ್ಲಿ ಕೆಸರು ತುಂಬಿ ಉರಿ ಶುರುವಾಗಿತ್ತು.
ಮಳೆ ನಿಂತು ಸಣ್ಣ ಸಣ್ಣ ಹನಿಗಳು ಮಾತ್ರ ಬೀಳುತ್ತಿದ್ದವು. ನನ್ನ ಬೈಕು ಅಲ್ಲೇ ಸ್ವಲ್ಪ ಮುಂದೆ ಕೆಲ ಕ್ಷಣ ಶಬ್ಧಮಾಡುತ್ತಾ ಬಿದ್ದಿದ್ದು ನಂತರ ಶಾಂತವಾಯಿತು, ನನ್ನ ಮೊಬೈಲು ಅಲ್ಲೇ ಸ್ವಲ್ಪ ದೂರದಲ್ಲಿ ಬಿದ್ದಿತ್ತು, ಅದರ ಗ್ಲಾಸು ಒಡೆದು ಪುಡಿಯಾದದ್ದು ಸರಿಯಾಗಿ ಕಾಣಿಸುತ್ತಿತ್ತು.
ಕೆಸರಿನಲ್ಲಿ ಬಿದ್ದಿರಲಾರದೆ ಎಡಗೈ ಊರಿ ಏಳಲು ನೋಡಿದ, ಕೈ ಊರುತ್ತಿದ್ದಂತೆ ಅಸಾಧ್ಯ ನೋವಾಯಿತು. ಹೆಚ್ಚಾಗಿ ಮೂಳೆ ಮುರಿದಿರಬೇಕು. ಅಲ್ಲೇ ಕುಸಿದೆ. ಬಲಗಾಲಿನ ಕೆಳಭಾಗವೂ ತರಚಿಹೋಗಿದ್ದು ಈಗ ಅನುಭವ ಆಗುತ್ತಿತ್ತು. ಡಾಂಬರ ರಸ್ತೆಯ ಮೇಲೆ ತಿಕ್ಕಿ ಹೋಗಿದ್ದರಿಂದ ತರಚಿದ ಗಾಯ ಬೆಂಕಿಯಲ್ಲಿ ಬೆಂದಷ್ಟು ಸುಡುತ್ತಿತ್ತು, ಆ ಬೇಗೆಯನ್ನು ನಿವಾರಿಸಿಕೊಳ್ಳಲು ಕೆಸರಿನಲ್ಲಿ ಪೂರ್ತಿ ದೇಹವನ್ನು ಅದ್ದಿದೆ. ಸ್ವಲ್ಪ ತಂಪಿನ ಅನುಭವವಾಗಿ ಉರಿ ಸ್ವಲ್ಪ ಶಮನವಾಗಿ ಹಾಯೆನಿಸಿತು ಆದರೆ ಎದ್ದು ನಿಲ್ಲುವ ತ್ರಾಣ ಉಳಿದಿರಲಿಲ್ಲ.
ಸುಮಾರು ಅರ್ಧಗಂಟೆ ಆ ಕಡೆ ಯಾವ ನರ ಪ್ರಾಣಿಯೂ ಸುಳಿಯಲಿಲ್ಲ. ನನಗೆ ಗುದ್ದಿ ಬೀಳಿಸಿದ್ದ ಎಮ್ಮೆಯೂ ಅದರ ಸಹಚರರ ಜೊತೆ ನನ್ನೆದುರೇ ಹಾದುಹೋಯಿತು. ನನ್ನನ್ನು ಕಂಡು ಅದರಲ್ಲಿ ಯಾವ ಬದಲಾವಣೆಯೂ ಆದಂತೆ ಕಾಣಲಿಲ್ಲ. ಅಂತೂ ಕೆಲ ಹೊತ್ತಿನ ಮೇಲೆ ದೂರದಲ್ಲಿ ಕೇಳಿದ ಯಾವುದೋ ಬೈಕಿನ ದನಿ ಸ್ಪಷ್ಟವಾಗುತ್ತಾ ಆಗುತ್ತಾ ಹತ್ತಿರವಾಯಿತು. ಅಂತೂ ಯಾವನೋ ಒಬ್ಬ ಬಂದ. ನನ್ನ ಬೈಕು ಅವನಿಗೆ ಮೊದಲು ಕಂಡಿತು, ಅಲ್ಲೇ ಸ್ವಲ್ಪ ಮುಂದೆ ಗಾಜು ಚೂರಾಗಿ ಬಿದ್ದಿದ್ದ ಮೊಬೈಲೂ ಕಂಡಿತು. ಗಾಡಿ ನಿಲ್ಲಿಸಿ ಇಳಿದ. ಇಳಿದವನು ಅಲ್ಲೇ ಪಕ್ಕದಲ್ಲಿ ಸಣ್ಣಗೆ ನರಳುತ್ತಿದ್ದ ನನನ್ನು ಕಂಡ. ಅಬ್ಬಾ ಅಂತೂ ಒಬ್ಬ ಬಂದನಲ್ಲ ಅಂತ ನನಗೆ ಸ್ವಲ್ಪ ಸಮಾಧಾನವಾಯಿತು.
ಅವನು ಎರಡುಮೂರು ಬಾರಿ ನನ್ನನ್ನು, ಬಿದ್ದಿದ್ದ ನನ್ನ ಮೊಬೈಲನ್ನೂ ನೋಡಿದ. ನನ್ನ ಮೊಬೈಲನ್ನೇ ಬೇಗ ರಿಪೇರಿ ಮಾಡಬಹುದು ಎಂದು ಅವನಿಗನಿಸಿತಿರಬೇಕು, ಅದನ್ನೇ ಎತ್ತಿ ಕಿಸೆಗೆ ಇಳಿಸಿಕೊಂಡು ಬೈಕು ಚಾಲು ಮಾಡಿದ.
Yavga agiddu macha idu
ReplyDeleteImaginational story
Delete