Friday, December 20, 2019
ತೊಂದರೆಯಲ್ಲ ಎನಿಸುವ ತೊಂದರೆಗಳ ನಡುವೆ
Sunday, December 15, 2019
ಅದೇ ಮನೆ, ಅದೇ ಗದ್ದೆ
ಕೃಷ್ಣನ ಅಜ್ಜ ಭಾಸ್ಕರನ ಅಜ್ಜನ ಕಾಲದ ಒಕ್ಕಲು. ಭಾಸ್ಕರನ ಮನೆಯ ಗದ್ದೆಯಲ್ಲಿ ಆತ ಗೇಣಿ ಮಾಡುತ್ತಿದ್ದ. ಅವನಿಗೆ ಕುಡಿತದ ಚಟ. ಕುಡಿದು ಕುಡಿದು ಮೈ ತುಂಬಾ ಸಾಲ ಮಾಡಿಕೊಳ್ಳುತ್ತಿದ್ದ.ಗೇಣಿ ಕೊಡುವ ಸಮಯದಲ್ಲಿ ಕೈಯಲ್ಲಿ ಏನೂ ಉಳಿಯುತ್ತಿರಲಿಲ್ಲ. ಭಾಸ್ಕರನ ಅಜ್ಜನ ಬಳಿ ಬಂದು ಕಾಡಿ ಬೇಡಿ ಏನೂ ಕೊಡದೇ ಲೆಕ್ಕ ಚುಕ್ತಾ ಮಾಡಿಸಿಕೊಳ್ಳುತ್ತಿದ್ಜ. ಇವನಿಗೂ ಅವನನ್ನು ಕಂಡು ಅಯ್ಯೋ ಎನಿಸುತ್ತಿತ್ತು. ಪಾಪ ಎಂದು ಬಿಡುತ್ತಿದ್ದ.
ಹೀಗಿರುವಾಗ, ಇಂದಿರಾಗಾಂಧಿ ಬಂದಳು. ಕೃಷ್ಣನ ಅಜ್ಜ ಯಾರದೋ ಮಾತು ಕೇಳಿ ಡಿಕ್ಲೇರೇಷನ್ ಹಾಕಿದ. ಗದ್ದೆ ಅವನ ಹೆಸರಿಗೇ ಆಯಿತು. ಈಗ ಅವನು ರಾಜಾರೋಷವಾಗಿ ಸಾರಾಯಿ ಅಂಗಡಿಗೆ ಹೋಗಬಹುದಾಗಿತ್ತು. ಇದರಿಂದ ಭಾಸ್ಕರನ ಅಜ್ಜನೇನು ಬೇಜಾರು ಮಾಡಿಕೊಳ್ಳಲಿಲ್ಲ ಏಕೆಂದರೆ ಅವರ ಗದ್ದೆ ಕೇವಲ ಕೃಷ್ಣನ ಅಜ್ಜನಿಗೆ ಮಾತ್ರ ಹೋಗಿರಲಿಲ್ಲ, ಅವರ ಕೈಯಲ್ಲಿ ಒಂದು ಹಿಡಿ ಮಣ್ಣೂ ಉಳಿದಿರಲಿಲ್ಲ, ಬೇಜಾರು ಮಾಡಿಕೊಂಡು ಪ್ರಯೋಜನವಿರಲಿಲ್ಲ.
ಕಾಲಾಂತರದಲ್ಲಿ ಅವರು ಹೇಗೋ ಬದುಕಿದರು ಬಿಡಿ. ಇಲ್ಲಿ ಕೃಷ್ಣ, ಭಾಸ್ಕರರ ಕತೆ ಇಲ್ಲ ಆದರೆ ಅವರ ಹೆಸರು ಏಕಿದೆ??!
******************
ಕೃಷ್ಣನ ಅಜ್ಜ ಎಂತವನಾದರೂ ಅಪ್ಪ ಅಂತವನಲ್ಲ.ಬಹಳ ಕಷ್ಟಪಟ್ಟು ಆತ ಶಾಲೆಗೆ ಹೋಗಿದ್ದ.ಬೆನ್ನಮೇಲೆ ಬಿದ್ದ ಏಟನ್ನು ತಡೆದುಕೊಳ್ಳುವುದು ಕಷ್ಟವಲ್ಲವೇ?! ಹೀಗೇ ಹಾಗೆ ಹತ್ತನೇ ಕ್ಲಾಸು ಪಾಸಾದ. ಭರ್ಜರಿ ಸರ್ಕಾರೀ ಕೆಲಸವೊಂದು 'ಸುಲಭವಾಗಿ' ಸಿಕ್ಕಿತು. ಗದ್ದೆ ಅವನಿಗೆ ಬೇಡವಾಯಿತು. ಆದರೆ, ಭಾಸ್ಕರನ ಅಪ್ಪನಿಗೆ ಹಾಗಾಗಲಿಲ್ಲ. ಬಡತನದಲ್ಲಿ ಆತ ಶಾಲೆಗೂ ಹೋಗಲಿಲ್ಲ. ಚಿಕ್ಕ ಪುಟ್ಟ ಪೌರೋಹಿತ್ಯ ಕಲಿತು ಜೀವನ ನಡೆಸಿದ.
***********************
ಕೃಷ್ಣ, ಭಾಸ್ಕರ ಇಬ್ಬರೂ ಸ್ನೇಹಿತರು. ಒಂದೇ ಶಾಲೆಗೆ ಹೋದವರು. ಒಟ್ಟಿಗೇ ರಜೆ ಮಾಡಿದವರು. ಒಟ್ಟಿಗೆ ಕದ್ದು ಸಿಕ್ಕಿಬಿದ್ದು ಪೆಟ್ಟು ತಿಂದವರು. ಒಟ್ಟಿಗೇ ಡಿಗ್ರೀ ಮುಗಿಸಿದರು. ಸಾಧಾರಣ ಅಂಕವೂ ಬಂತು, ಆ ಮಾರ್ಕಿಗೆ ಕೃಷ್ಣನಿಗೆ ಸರ್ಕಾರೀ ಕೆಲಸವೇ ಸಿಕ್ಕಿತು, ಅವನನ್ನು ಜಾತಿ ಕೈ ಹಿಡಿಯಿತು, ಆದರೆ ಭಾಸ್ಕರನ ಕತೆ ಹಾಗಾಗಲಿಲ್ಲ ಅವನನ್ನು ಜಾತಿ ಕೈ ಹಿಡಿಯುವುದು ಸಾಯಲಿ ಅವನ ಹಣೆಬರಹಕ್ಕೆ ಜಾತಿಯವಳನ್ನು ಕೈ ಹಿಡಿಯಲೂ ಆಗಲಿಲ್ಲ- ಅದು ಬಿಡಿ.
ಭಾಸ್ಕರ ಬಹಳ ಕಷ್ಟಪಟ್ಟ, ಯಾವ ಕೆಲಸವೂ ಸಿಗದೇ ಸೋತ. ಆಗ ಒಂದು ಕಾಲದಲ್ಲಿ ನಮ್ಮದೇ ಆಗಿದ್ದ ಗದ್ದೆ ಕಂಡಿತು. ಈಗ ಅದು ಕೃಷ್ಣನ ಗದ್ದೆಯಾಗಿತ್ತು ಅದನ್ನು ಗೇಣಿಗೆ ತೆಗೆದುಕೊಳ್ಳಲು ನಿರ್ಧರಿಸಿದ. ಕೃಷ್ಣನ ಬಳಿ ಕೇಳಿಯೂ ಕೇಳಿದ. ಕೃಷ್ಣನೂ ಒಪ್ಪಿ ಕೊಟ್ಟ.
ಈ ವರ್ಷ ಮಳೆಯಾಗದೆ ಬೆಳೆ ಹಾಳಾಗಿದೆ. ಗೇಣಿ ಕೊಡಲು ದುಡ್ಡಿಲ್ಲ, ದುಡ್ಡು ಕೊಟ್ಟಿಲ್ಲ ಎಂದು ಕೃಷ್ಣ ಭಾಸ್ಕರನ ಮೇಲೆ ಕೇಸು ಹಾಕಿದ್ದಾನೆ , ಇತ್ತ ಭಾಸ್ಕರ ಮತ್ತೆ ಇಂದಿರಾಗಾಂಧಿ ಯಾವಾಗ ಬರುತ್ತಾಳೆ ಎಂದು ಕಾಯುತ್ತಿದ್ದಾನೆ!
ಮಳೆಗೆಂಥಾ ರುಚಿ
ಮಳೆನೀರಿನ ರುಚಿ ಯಾವುದು? ನೀರಿನ ರುಚಿ ಯಾವುದು. ಆವಾಗಿನಿಂದ ಮಳೆ ನೀರು ಅವನ ಬಾಯೊಳಗೆ ಹೋಗುತ್ತಿದೆ,ಆದರೆ ಅದರ ರುಚಿ ತಿಳಿಯಯುತ್ತಿಲ್ಲ. ಆರು ತಿಂಗಳು ಮಲಗಿದ್ದ. ಜ್ವರ ಎಂದಿದ್ದರು ಡಾಕ್ಟರು. ಆರು ತಿಂಗಳಲ್ಲಿ ಬದುಕೇ ಬದಲಾಗಿತ್ತು.
ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಬಿಟ್ಟು ಹೋಗಿದ್ದಳು. ಅವನದ್ದೇನೂ ಅಂತಹ ದೊಡ್ಡ ದುಡಿಮೆಯಲ್ಲ. ಮದುವೆ ಬ್ರೋಕರ್!
ಸೀಸನ್ನಿನಲ್ಲಿ ನಾಲ್ಕೈದು ಮದುವೆ ಮಾಡಿಸಿ ವರ್ಷವಿಡೀ ಬದುಕುತ್ತಿದ್ದ. ಜೊತೆಗೆ ಹೆಂಡತಿ. ಪ್ರೇಮ ವಿವಾಹ ಬೇರೆ. ಅವನಿಗೆ ಪ್ರೇಮ ಹೇಗಾಯಿತು ಎಂಬುದು ಅಪ್ರಸ್ತುತ!
ಮಟ ಮಟ ಸೀಸನ್ನಿನಲ್ಲೇ ಕೆಟ್ಟ ಜ್ವರ ಹಿಡಿಯಿತು. ಹೆಂಡತಿ ಸೇವೆ ಮಾಡುವಷ್ಟು ಮಾಡಿದಳು. ಕೊನೆಗೆ ಅವಳಿಗೂ ಸಾಕಾಯಿತು.
ಒಮ್ಮೆ ಅವನೇ ಸಾಯಲಿ ಎಂದು ಬಯಸಿದ್ದ ಅವನ ಅಮ್ಮ ಇರದಿದ್ದರೆ ಅವನ ಕತೆಯೇ ಬೇರೆಯಾಗುತ್ತಿತ್ತು- ಅದು ಬಿಡಿ.
ಆರು ತಿಂಗಳ ಮೇಲೆ, ಬಿರು ಮಳೆಯಲ್ಲಿ ಒಂದು ಗಂಡು ಬಂದಿದ್ದಾನೆ. ವಯಸ್ಸು ಸುಮಾರಾಗಿದೆ. ಹೆಣ್ಣಾಗಿದ್ದರೆ ಇವನೇ ಆಗುತ್ತಿದ್ದನೇನೊ! ಆದರೆ ಗಂಡು, ಹೆಣ್ಣು ಹುಡುಕಬೇಕು. ಕರ್ಕಿಯಲ್ಲಿ ಇವನಿಗೆ ಹೊಂದುವಂತ ಹೆಣ್ಣಿದೆ ಅಂದರಂತೆ. ಒಂದೆರಡು ತಿರುಗಾಟ ಮಾಡಿದ. ಅವರು ಏನೂ ಖಾಯಾಸು ಮಾಡಲಿಲ್ಲ. ಮೂರನೇ ಬಾರಿ ಹೋದಾಗ ದುಡ್ಡು ಗಿಡ್ಡು ಬೇಕಾದರೆ ಕೇಳಿ ಎಂದನಂತೆ, ಅವರು ಭೋ....ಮಗನೆ ಅಂತ ಬೈದರು. ನಾಯಿಯಂತೆ ಹಿಂದಿರುಗಿದ. ಆತ್ಮಾಭಿಮಾನ ಯಾರಿಗಿಲ್ಲ?
ಈಗ, ಮೊನ್ನೆ ಅವರೇ ಫೋನು ಮಾಡಿದ್ದರು. ಒಂದು ಐದು ಲಕ್ಷ ಕೊಡಿಸಿ ಅಂದರು. ಇವನಿಗೂ ಆಸೆ ಚಿಗುರಿತು. ಹಳೆ ಹೆಂಡತಿಗೆ ಫೋನು ಮಾಡಿದಾಗ ಆಕೆ ಸತ್ತರೂ ಬರುವುದಿಲ್ಲ ಎಂದಿದ್ದಳು. ಆದರೂ ಗಾಡಿ ಮಾಡಿಕೊಂಡು ಮಾವನಮನೆ ವರೆಗೆ ಹೋಗಿಬರುವ ಚಟ ಇವನಿಗೆ.
ಐದು ಲಕ್ಷದ ಪ್ರಸ್ತಾಪ ಗಂಡಿನಕಡೆಯವರ ಬಳಿ ಇಟ್ಟ. ದುಡ್ಡಿಗಾದರೆ ನೀನು ಬೇಕಾ? ಭೋ...ಮಗನೆ ಅಂತ ಅವರೂ ಬೈದರು! ಇವನೂ ಕೆರಳಿಹೋದ ಅಲ್ಲಿಂದ ಸುಮ್ಮನೆ ಕಾಲ್ಕಿತ್ತ.
ಸಂಜೆ ಗಂಡಿನಕಡೆಯದ್ದಿ ಫೋನು! ಐದು ಬಾರೀ ಜಾಸ್ತಿಆಯಿತು! ನಮ್ಮ ಗಂಡು ಚಂದ ಇದ್ದಾನೆ, ಹೆಣ್ಣಿನ ಚಂದ ನಮಗೆ ಬೇಡ. ಮೂರಕ್ಕೆ ಒಪ್ಪಿಸಿದರೆ. ನಿನಗೊಂದು ಸ್ವಲ್ಪ ಕೊಡುವ ಎಂದರು.
ಮತ್ತೆ ಬೈಕು ತೆಗೆದುಕೊಂಡು ಕರ್ಕಿಗೆ ಹೊರಟಾಗಲಿ ಜಿರಾಪತಿ ಮಳೆ ಹೋಯ್ದು ಬಾಯೊಳಗೆಲ್ಲಾ ನೀರು ತುಂಬಿ ಮಳೆಗೆ ರುಚಿ ಇಲ್ಲ ಅನಿಸಿದ್ದು.
ಮಳೆನೀರು ಮುಖವನ್ನು ಚುಚ್ಚಿದ ನೋವಿಗಿಂತ ಮಾನಗೆಟ್ಟ ತನ್ನ ವ್ಯವಹಾರ ಇನ್ನೂ ಚುಚ್ಚಿತ್ತು ಅವನನ್ನು.
ಅವರು ಬೈದಾಗ ಬೇಕಾದರೆ ಸಂಬಂಧ ಬೆಳೆಸಿ, ಬೇಡಾದರೆ ಬಿಡಿ ಭೋ...ಮಕ್ಕಳ ಎಂದು ನಾನೇಕೆ ಹೇಳಲಿಲ್ಲ? ಥು ಈ ಮಳೆನೀರು ಸಕ್ಕರೆಯಷ್ಟು ಸಿಹಿಯಿದ್ದರೆ ಎಷ್ಟು ಚನ್ನಾಗಿತ್ತು? ಅದನ್ನು ಕುಡಿಯುತ್ತಾ ಗಾಡಿ ಹೊಡೆಯಬಹುದಿತ್ತು. ಮಳೆನೀರಿಗೆ ರುಚಿ ಇಲ್ಲ, ಎಲ್ಲದಕ್ಕೂ ರುಚಿ ಇರಬೇಕೆಂದಿಲ್ಲ. ಕಂಡ ಸಂಬಂಧ ಎಲ್ಲ ಕೂಡಬೇಕೆಂದಿಲ್ಲ. ಭೋ.....ಮಗ ಎಂದು ಬೈಸಿಕೊಂಡು ನಾನೇಕೆ ಇವರನ್ನು ಕೂಡಿಸಬೇಕು ಸಾಯಲಿ ಈ ಭೋ...ಮಕ್ಕಳು ಎಂದು ಗಾಡಿಯನ್ನು ತಿರುಗಿಸಿಬಿಟ್ಟ. ಅದು ಮೊದಲೆ ನ್ಯಾಷನಲ್ ಹೈವೇ ಕೇಳಬೇಕೆ? ಅವನ ಗ್ರಹಚಾರಕ್ಕೆ ಅಷ್ಟೇಹೊತ್ತಿಗೆ ದೊಡ್ಡ ಮ್ಯಾಂಗ್ನೀಸ್ ಗೂಡ್ಸೊಂದು ಧುತ್ತನೆ ಬಂದಿತ್ತು.
ಇತ್ತ,ಅದೇ ಗಂಡು ಹೆಣ್ಣು ಬೇರೆ ಯಾವುದೋ ಬ್ರೋಕರನ್ನು ಹಿಡಿದು ಅವನ ಹದ್ನಾಲ್ಕನೇ ಸಮಾರಾಧನೆಯಂದೆ ಉಂಗುರ ಬದಲಾಯಿಸಿಕೊಂಡರಂತೆ ಎಂಬುದು ಮತ್ತೊಂದು ಕತೆ!
Saturday, December 14, 2019
ಹೀಗೊಂದು ಭಟ್ಟರ ಕತೆ
ಬೆಳಿಗ್ಗೆ ಐದು ಗಂಟೆ.ರಾಮ ಭಟ್ಟರ ಮನೆಯ ಹೊರಗೂ,ಒಳಗೂ ಹ್ಯಾಲೋವನ್ ಬಲ್ಬು ಉರಿಯುತ್ತಿತ್ತು.ಶಿಕಾರಿ ಮುಗಿಸಿ ಮನೆಗೆ ಹೊರಟಿದ್ದ ಗೋವಿಂದನಿಗೆ ಅದನ್ನು ನೋಡಿ ಇವತ್ತು ಅಮಾವಾಸ್ಯೆ ಎಂದು ನೆನಪಾಯ್ತು
."ನೀರು ಬಿಸಿ ಆಯ್ತಾ?" ಭಟ್ಟರು ಹೆಂಡತಿಯಬಳಿ ಕೇಳಿ "ಈಗಷ್ಟೆ ಬೆಂಕಿ ವಟ್ಟಿದ್ದೆ ಕೂಡ್ಲೇ ಬಿಸಿ ಅಪ್ಲೆ ಎಂತದು,ಸೌದಿ ಸ್ವಲ್ಪ ಮುಂದ್ ಮಾಡಿ ಹಾಲ್ ಕರೀತಿದ್ದೆ"ಎಂಬ ಉತ್ತರ ಪಡೆದರು.ನೀರು ಬಿಸಿ ಆಗುವ ತನಕ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ನೆನಪಾದದ್ದು ಮೊಬೈಲು.ಮಗ ಕೆಲಸ ಮಾಡುತ್ತಿದ್ದ ಅಂಗಡಿಯಿಂದ ಆರ್ನೂರು ರೂಪಾಯಿಗೆ ಒಂದು ಥರ್ಡ ಕ್ಲಾಸ್ ಥರ್ಡ ಹ್ಯಾಂಡ್ ಹಳೆ ಲಟ್ಟು ಸ್ಯಾಮ್ಸಂಗ್ ಕೀಪ್ಯಾಡ್ ಮೊಬೈಲು ತಂದುಕೊಟ್ಟಿದ್ದ,ಅದಕ್ಕೊಂದು ಎರಡು ಜೀಬೀ ಮೆಮೋರಿ ಕಾರ್ಡು ಸಾಹುಕಾರನ ಕೃಪಾ ಕಟಾಕ್ಷದಿಂದ ಸಿಕ್ಕಿತ್ತು.ಅದರಲ್ಲಿ ಒಂದಿಷ್ಟು ಹಳೆಯ ರಾಜಕುಮಾರನ ಸಿನಿಮಾದ ಹಾಡುಗಳನ್ನು ತುಂಬಿಸಿಟ್ಟಿದ್ದ.ಅಪ್ಪನಿಗೆ ಹಾಡು ಹಾಕಿಕೊಳ್ಳುವ ಮೂಲಭೂತ ಶಿಕ್ಷಣ ಕೊಟ್ಟಿಟ್ಟಿದ್ಜ.ಬೇಜಾರಾದಾಗೆಲ್ಲ ದೂರದರ್ಶನದ ಮೂಲಭೂತ ಸೌಕರ್ಯ ಇಲ್ಲದ ಕಾರಣ ಆ ಮೊಬೈಲಿನಲ್ಲಿ ಹಾಡು ಕೇಳುವುದು ಭಟ್ಟರ ರೂಢಿ.ಹಾಡು ಹಾಕಿದರು."ಬಾನಿಗೊಂದು ಎಲ್ಲೆ ಎಲ್ಲಿದೇ ನಿನ್ನಾಸೆಗೆಲ್ಲಿ ಕೊನೆಯಿದೇ" ಹಾಡು ಕೇಳಿ ಪಡುತ್ತಿದ್ದ ಆನಂದಕ್ಕೆ ಹೆಂಡತಿ ಸೀತಮ್ಮನ ಕೂಗು ಅಡ್ಡಗಾಲು ಹಾಕಿತು."ನೀರ್ ಬಿಶಿ ಆತು,ಯೋಳ್ ಗಂಟೆಗಾದ್ರೂ ಹೋಗ್ ಮುಟ್ತ್ರಾ, ಅಲ ಆ ಸುಟ್ ಪದ್ಯ ಕೇಳ್ತೇ ಕೂತ್ಕತ್ರಾ?" ಎಂದರು.
ಹೌದು ಭಟ್ಟರು ಅಷ್ಟು ಬೇಗ ಏಳಲೂ ಕಾರಣವಿತ್ತು.ಆ ದಿನ ಅಮಾವಾಸ್ಯೆ.ಊರಿಗಿದ್ದದ್ದು ಒಂದು ದೇವಸ್ಥಾನ.ಅದೂ ಬೆಟ್ಟದ ಮಧ್ಯ ಇತ್ತು.ಪ್ರತಿ ದಿನ ಅಲ್ಲಿ ಹೋಗಿ ಅಲ್ಲಿನ ಅಮ್ಮನವರಿಗೆ ಪೂಜೆ ಮಾಡುತ್ತಿದ್ದವರು ಭಟ್ಟರು.ದಿನಾ ಹತ್ತು ಗಂಟೆಗೆ ಹೋದರೆ ಸಾಕಿತ್ತು ಆದರೆ ಕಾರ್ತೀಕದ ಅಮಾವಾಸ್ಯೆ ಮಾತ್ರ ಅಲ್ಲಿ ವಿಶೇಷ,ಆದಿನ ಊರಿನಲ್ಲಿ ದೇವರ ಉತ್ಸವ.ಬೆಳಿಗ್ಗೆ ಬೆಟ್ಟದಿಂದ ಉತ್ಸವ ಹೊರಟರೆ ಹಿಂದಿರುಗಿ ಯಥಾಸ್ಥಾನಕ್ಕೆ ಬಂದು ಮುಟ್ಟಲು ಮಧ್ಯ ರಾತ್ರಿ ಆಗುತ್ತಿತ್ತು.ಊರಿನ ಪ್ರತಿಮನೆಗೂ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಮಾಡಿ ಅವರ ಮನೆಯಲ್ಲಿ ಕಾಯಿ ಒಡೆದು ನೈವೇದ್ಯ ಮಾಡುವ ವಿಶೇಷ ಜವಾಬ್ದಾರಿ ಆದಿನ ಭಟ್ಟರಿಗಿರುತ್ತಿತ್ತು.ಒಂದೊಂದು ಮನೆಯವರು ಯಥಾಶಕ್ತಿ ದಕ್ಷಿಣೆಯನ್ನು ಕೊಡುತ್ತಿದ್ದರು ಹಾಗಾಗಿ ಭಟ್ಟರಿಗೆ ಕೆಲಸದಲ್ಲಿ ಬೇಜಾರಿರಲಿಲ್ಲ.ಆದರೆ ಅವರ ಆ ಉತ್ಸಾಹಕ್ಕೆ ಹಿನ್ನೆಡೆ ಎಂಬಂತೆ ಹೋದವರ್ಷ ಉತ್ಸವದ ದಿನ ಚಿಕ್ಕದಾಗಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.ಅವರು ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಬಂದ ಕೆಲಸ ಅದು.ಅದನ್ನು ಮಗನಿಗೆ ಬಿಟ್ಟು ಬೇರೆ ಯಾರಿಗೂ ಕೊಡುವ ಇಷ್ಟ ಭಟ್ಟರಿಗಿರಲಿಲ್ಲ.ಆದ್ದರಿಂದ ಉತ್ಸವದ ಮರುದಿನ ಮನೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು.ಮಗನ ಬಳಿ "ಇನ್ನು ಒಂದು ತಪ್ರೆ ಎರ್ಡು ಉತ್ಸವ ನಾ ಮಾಡ್ತೆ ಆಮೇಲ್ ಪೂಜೆ ಉತ್ಸವ ಎಲ್ ಜಬಾದಾರಿ ನಿಂದೇಯ ಹ್ಞ" ಎಂದಿದ್ದರು ಅದಕ್ಕೆ ಮಗ ಪ್ರಕಾಶ "ನೋಡ್ವ" ಎಂಬ ಹಾರಿಕೆಯ ಉತ್ತರ ಕೊಟ್ಟಿದ್ದ.ಅವನ ಉತ್ತರದಲ್ಲೇ ಅವನಿಗೆ ಮನಸ್ಸಿಲ್ಲ ಅಂತ ತಿಳಿಯುತ್ತಿತ್ತು.ಅವನ ನಿರಾಸಕ್ತಿಗೂ ಕಾರಣವಿತ್ತು.ಪ್ರಕಾಶ ಮಂತ್ರ ಕಲಿತವನಲ್ಲ ಆದಕಾರಣ ಅಪ್ಪನನ್ನು ಕರೆದಂತೆ ಊರಿನಲ್ಲಿ ಅವನನ್ನು ಪೌರೋಹಿತ್ಯಕ್ಕೆ ಕರೆಯುತ್ತಿರಲಿಲ್ಲ.ಮಂತ್ರ ಕಲಿಯಲಿ ಎಂದು ಭಟ್ರು ಮಗನನ್ನು ವರದಳ್ಳಿಗೆ ಸೇರಿಸಿದ್ದರು ಆದ್ದರಿಂದ ಹತ್ತನೇ ತರಗತಿಗೆ ಶಾಲೆ ಬಿಟ್ಟಿದ್ದ.ಆದರೆ ಆರೆ ತಿಂಗಳಕ್ಕೆ ಮಂತ್ರ ಅವನಿಗೆ ಬೇಜಾರು ಬಂದಿತ್ತು,ಮಂತ್ರ ಅವನ ತಲೆಗೂ ಹತ್ತಿರಲಿಲ್ಲ.ಅಲ್ಲಿಂದ ಹಿಂದಿರುಗಿ ಮನೆಗೆ ಬಂದಿದ್ದ.ಮತ್ತೆ ತಿರುಗಿ ಶಾಲೆಗೆ ಹೋಗುವ ಗೋಜಿಗೆ ಹೋಗಲಿಲ್ಲ.ಖಾಲಿ ಮನೆಯಲ್ಲಿರುತ್ತಿದ್ದ ಮಗನಿಗೆ ಭಟ್ಟರು ಊರ ಮುಖ್ಯಸ್ಥರ ಭಯಂಕರ ಇನ್ಪ್ಲೂಯನ್ಸಿನಲ್ಲಿ ಪೇಟೆಯಲ್ಲಿ ಮೊಬೈಲ್ ಅಂಗಡಿ ಒಂದರಲ್ಲಿ ಕೆಲಸ ಕೊಡಿಸಿದ್ದರು.ತಿಂಗಳಿಗೆ ನಾಲ್ಕು ಸಾವಿರ ದುಡಿಯುತ್ತಿದ್ದ.ದೇವಸ್ಥಾನದ ಪೂಜೆಯಲ್ಲಿ ಭಟ್ರು ತಿಂಗಳಿಗೆ ಎರಡು ಸಾವಿರ ಗಳಿಸುತ್ತಿದ್ದರು.ಅಪರೂಪಕ್ಕೆ ಊರಿನಲ್ಲಿ ಪೌರೋಹಿತ್ಯವನ್ನೂ ಮಾಡಿ ಸ್ವಲ್ಪ ಹಣ ಗಳಿಸುತ್ತಿದ್ದರು ಜೊತೆಗೆ ಒಂದು ಐವತ್ತು ಅಡಿಕೆ ಮರ ಕೂಡ ಇತ್ತು.ಜೀವನಕ್ಕೆ ಹೀಗೆ ನಡೆದರೆ ಕಷ್ಟ ಇರಲಿಲ್ಲ.ಆದರೆ ಈಗ ಭಟ್ರು ನಿವೃತ್ತಿಯ ಯೋಚನೆ ಮಾಡಿ ಮಗನಿಗೆ ಪಟ್ಟ ಕಟ್ಟುವ ಯೋಚನೆಯಲ್ಲಿದ್ದರು.ಇದಕ್ಕೆ ಮಗನೂ ಒಪ್ಪಿದ್ದಾನೆ ಅಂದುಕೊಂಡಿದ್ದರು.
ನೀರು ಬಿಸಿಯಾದ ವಿಷಯ ಕೇಳಿ ಹಾಡು ಬಂದು ಮಾಡಿ ಟವಲ್ ತೆಗೆದುಕೊಂಡು ಸ್ನಾನಕ್ಕೆ ಹೊರಟರು.ಸ್ನಾನ ಮಾಡಿ ಹೊರಬರುವುದಕ್ಕೂ ಮಗ ಏಳುವುದಕ್ಕೂ ಸರಿ ಆಯ್ತು.ಅವನನ್ನು ಕಂಡು
"ಇದು ನನ್ನ ಕೊನೆ ಉತ್ಸವ ಮುಂದಿನ ವರ್ಷದಿಂದ ನಿಂಗೆ ಬಂತು,ಹೇಗೇಗೆ ಮಾಡ್ಬೇಕು ಅಂತೆ ಸಮಾ ನೋಡ್ಕ ಇವತ್ತು ನೀನು ಬಾ.ಕೆಲ್ಸಕ್ಕೆ ಹೋಗಡ ಎಂದರು." ಅದಕ್ಕೆ ಪ್ರಕಾಶ "ಎಂತಾ! ನಾನು ಉತ್ಸವ ನಡೆಸೂದಾ? ಅದೆಲ್ಲ ಆಗ್ತಿಲ್ಲೆ ಆ ಆಸೆ ಎಲ್ಲ ಇಟ್ಕಂಬ್ದ ಬ್ಯಾಡ"ಅಂದ.ಭಟ್ಟರಿಗೆ ದಿಗಿಲು ಬಡಿದಂತಾಗಿತ್ತು.ಮಗನ ಮಾತು ಕೇಳಿ ಸೀತಮ್ಮ ಕೂಡಾ ಹೊರಗೆ ಬಂದರು.ಭಟ್ಟರು "ನಮ್ಮ ಅಪ್ಪ ಅಜ್ಜನ ಕಾಲದಿಂದ ನಡೆಸ್ಕ ಬಂದ ಪದ್ದತಿ ಇದು.ನೀ ಆಗ್ತಿಲ್ಲೆ ಹೇಳುಲ್ ಬತ್ತಿಲ್ಲೆ"ಎಂದರು ಅದಕ್ಕೆ ಮಗ ಸ್ವಲ್ಪ ಕೋಪಗೊಂಡ "ಆಗ್ತಿಲ್ಲೆ ಅಂದ್ರೆ ಆಗ್ತಿಲ್ಲೆ,ಅದೆಲ್ಲ ಹಿಡ್ಕಂಡ್ರೆ ಪೇಟೆ ಕೆಲ್ಸ ಬಿಡಕಾಗ್ತು ಅದೆಲ್ಲ ಸಾದ್ಯಿಲ್ಲೆ"ಅಂದ."ಸಾದ್ಯಿಲ್ಯ? ಹಾಂಗಾರ್ ನೀ ಈ ಮನೇಲ್ ಇಪ್ಲಕ್ಕೆ ಬತ್ತಿಲ್ಲೆ"ಅಂದರು ಭಟ್ರು.ಅದಕ್ಕೆ ಮಗ"ಲೈಕ್ ಆತು ನಾ ಪೇಟೇಲ್ ಬಾಡ್ಗೆ ಮನೆ ಹುಡ್ಕ್ತೆ ಇದ್ದೆ." ಎನ್ನುತ್ತಾ ಹೊರಗೆ ನಡೆದುಬಿಟ್ಟ.ಭಟ್ಟರಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು.ಎರಡು ತಿಂಗಳ ಹಿಂದಷ್ಟೇ ಕೇರಿ ತುದಿಯ ಗೊಯ್ದನ ಮಗನಿಗೆ ಏನೋ ಹೇಳಿದನೆಂದು ಪ್ರಕಾಶನ ಮೇಲೆ ಅಟ್ರೋಸಿಟಿ ಕೇಸು ಹಾಕಿದ್ದಾಗ ಅವರಿವರ ಕೈ ಕಾಲು ಹಿಡಿದು ಕೇಸನ್ನು ಹಿಂದಕ್ಕೆ ತೆಗೆಸಿದ ನೋವು ಇನ್ನೂ ಮಾಸಿರಲಿಲ್ಲ, ಅಷ್ಟರಲ್ಲೇ ಇಂತಹಾ ಪೆಟ್ಟು ಕೊಟ್ಟಿದ್ದ ಮಗ.
ಭಾರವಾದ ಮನಸಿನಲ್ಲೇ ಉತ್ಸವ ಪೂಜೆ ನಡೆಸಿದರು.ಇಷ್ಟು ದಿನ ಶೃದ್ಧಾ ಭಕ್ತಿ ಸಮನ್ವಿತವಾಗಿ ಮಾಡುತ್ತಿದ್ದ ಪೂಜೆಯ ಮೇಲೆ ಅಂದೇಕೋ ನಂಬಿಕೆ ಇರಲಿಲ್ಲ.ತಲೆಯಲ್ಲಿ "ಬಾನಿಗೊಂದು ಎಲ್ಲೆ ಎಲ್ಲಿದೇ" ಹಾಡು ತುಂಬೀತ್ತು. ಆ ಮಂತ್ರದ ಜೊತೆ ಹಾಡನ್ನು ಹೇಳಿ ವಿಷಾದದ ನಗೆಯನ್ನೂ ನಕ್ಕಿದ್ದರು.ಇಷ್ಟು ದಿನ ಮಾಡಿದ ಪೂಜೆಗೆ ದೇವರೇಕೆ ನನಗೆ ಒಲಿಯಲಿಲ್ಲ,ಮಗ ಹೀಗಂದುಬಿಟ್ಟನಲ್ಲ ಎಂಬ ನೋವೆ ಅವರನ್ನು ತುಂಬಿತ್ತು.
ಉತ್ಸವ ಊರು ತಿರುಗಿ ಬೆಟ್ಟದಲ್ಲಿದ್ದ ದೇವಸ್ಥಾನಕ್ಕೆ ಹಿಂದಿರುಗಿ ಬಂತು.ಅಷ್ಟಾವದಾನ ಸೇವೆಗಳು, ಮಂಗಳಾರತಿ,ತೀರ್ಥ ಪ್ರಸಾದ ವಿತರಣೆ ನಡೆದವು.ಬಂದ ಜನರೆಲ್ಲ ಹೊರಟರು.ಹೋಗುವಾಗ ಪಂಚಾಯಿತಿ ಅಧ್ಯಕ್ಷ ಕುಪ್ಪಣ್ಣ ಶೆಟ್ಟರು ಭಟ್ಟರನ್ನೊಮ್ಮೆ ಕರೆದರು.ಮಗನಿಗೆ ಪೇಟೆಯಲ್ಲಿ ಅವರದೇ ಜಾತಿಯವನೊಬ್ಬನ ಮೊಬೈಲ್ ಅಂಗಡಿಯಲ್ಲಿ ಕೆಲಸ ಕೊಡಿಸಿದ್ದು ಇವರೆ ಆದ್ದರಿಂದ ಭಟ್ಟರಿಗೆ ಅವರಮೇಲೆ ಸ್ವಲ್ಪ ಗೌರವ.ಅವರು ಭಟ್ಟರ ಬಳಿ"ನೋಡಿ ಬಟ್ರೇ ನಿಮ್ಮತ್ರ ಹೇಳ್ಬಾರ್ದು ಆದ್ರೂ ಹೇಳ್ತೇನೆ.ನಿಮ್ಮ ಪ್ರಕಾಶ ಪೇಟೆಯಲ್ಲಿ ನಮ್ಮವ್ರ ಹುಡುಗಿ ಒಂದನ್ನ ಲವ್ ಮಾಡಿದ್ದಾನಂತೆ.ಮೊನ್ನೆ ಹುಡುಗಿ ಕಡೆಯವರು ನಿಮ್ಮವ್ನಿಗೆ ಹೊಡಿಲಿಕ್ಕೆ ಬಂದಿದ್ರಂತೆ ನಮ್ಮ ದಿವಾಕರ ತಪ್ಸಿದಾನೆ.ಮಾಣಿ,ಕೂಸು ಬೆಂಗ್ಳೂರಿಗೆ ಓಡುವ ಐಡೀರಿಯಾ ಮಾಡಿದಾರಂತೆ ನಂಗೆ ದಿವಾಕರ ಹೇಳ್ದ.ನಿಮ್ಮ ಹುಡುಗನಿಗೆ ಸ್ವಲ್ಪ ಹೇಳಿ ಅದೆಲ್ಲ ಸಮ ಅಲ್ಲ ಅಂತ"ಎಂದು ಕುತ್ತಿಗೆ ಉದ್ದ ಮಾಡಿ ಅಮ್ಮನವರಿಗೊಂದು ನಮಸ್ಕಾರ ಮಾಡಿ ನಡೆದರು.
ಭಟ್ಟರ ಗಂಟಲು ಒಣಗಿತ್ತು,ಆಡಲು ಮಾತು ಇರಲಿಲ್ಲ.ಬಹಳ ಹೊತ್ತು ಅಮ್ಮನವರ ಎದುರೇ ಕುಳಿತರು.ಕೊನೆಗೆ ಮನೆಗೆ ಹೊರಟರು.
ಗದ್ದೆಯ ಬದುವಿನ ಮೇಲೆ ನಡೆಯುತ್ತಿದ್ದ ಭಟ್ಟರಿಗೆ ವಿಚಿತ್ರ ಶಬ್ಧಗಳು ಕೇಳುತ್ತಿದ್ದವು."ಬಾನಿಗೊಂದು ಎಲ್ಲೆ ಎಲ್ಲಿದೇ" ಹಾಡು,ಮಗನ ಮಾತು,ಶೆಟ್ಟರ ಗುಟ್ಟು,ಕಾನ್ ಜಿರಲೆಯ ಕಿರ್ ಗುಡುವ ಸದ್ದು ಕಿವಿಯನ್ನು ಮುತ್ತಿತ್ತು.ಕಣ್ಣಿನ ಮೂಂದೆ ಬರೀ ಮಗನ ಮುಖ.ಇವೆಲ್ಲ ಸೇರಿ ಅವರಿಗೆ ಹೊಸ ತರಹದ ನೋವೊಂದನ್ನು ಕೊಡುತ್ತಿದ್ದವು.ಇದರ ಮಧ್ಯೆ ಅವರಿಗೆ ಎದೆನೋವು ಅರಿವಿಗೇ ಬರಲಿಲ್ಲ.ಪಯಣ ಸಾಕೆನಿಸಿತು, ಅಲ್ಲೇ ಕುಸಿದರು,ಕೂತರು.ಬಾಯಲ್ಲಿ"ಬಾನಿಗೊಂದು ಎಲ್ಲೆ ಎಲ್ಲಿದೇ"ಹಾಡು,ವಿಷಾದದ ನಗು ನಗುವಿನಲ್ಲಿ ತನ್ನ ಜೀವನಕ್ಕೇ ಕೋಪ ತರಿಸುವಂತಹ ಕುಹಕ.ಏಕೋ ಏಳಬೇಕು ಎನಿಸಲಿಲ್ಲ,ಮಲಗಿದರು,ಮಲಗಿಬಿಟ್ಟರು.
ಬೆಳಕಾಯಿತು,ಸೀತಮ್ಮ ಗಂಡ ಬರಲಿಲ್ಲ, ದೇವಸ್ಥಾನದಲ್ಲೇ ಉಳಿದಿರಬಹುದೆಂದು ಅಲ್ಲೇ ಹೊರಟರು.ಗದ್ದೆಯಲ್ಲಿ ಬಹಳ ಜನ ಸೇರಿದ್ದರು."ರಾತ್ರಿ ಪೂಜೆ ಮಾಡಿದ್ರಲ್ಲ ಮಾರಾಯ ಆರಾಮ್ ಇದ್ರಲ.ಇಲ್ ನೋಡ್ರೆ ಹೀಂಗಾಗದೆ.ಮನ್ಷನ ಜೀವವೇ ವಿಚಿತ್ರ ಅಲ್ವಾ!?"ಎನ್ನುತ್ತಿದ್ದ ಮಾತು ಕೇಳಿತು.
ಕೆಲಸದಾಕೆಯ ಕತೆ
"ಕೆಲಸದ ಹೆಂಗಸು ಇನ್ನೂ ಬರಲಿಲ್ಲ, ಒಂಭತ್ತಾಯಿತು, ಸ್ವಲ್ಪ ನೋಡಿ ಬಾ" ಮನೆಯಲ್ಲಿ ಹೇಳಿದರು. ಬೈಕಿನ ಮೇಲೆ ಹೊರಟೆ. ನಮ್ಮ ಮನೆಯಿಂದ ಒಂದು ಮೈಲು ಅವಳ ಮನೆ. ಅರ್ಧ ದಾರಿಯಲ್ಲಿ ಅವಳು ಕಂಡಳು. ನಡೆದುಕೊಂಡು ಬರುತ್ತಿದ್ದಳು.
"ಈಗಾ ಬರುವುದು?" ನಾನೆಂದೆ. ಅವಳು ಮಾತಾಡಲಿಲ್ಲ ಅಸ್ಪಷ್ಟ ನಗುವೊಂದನ್ನು ನಕ್ಕು ಸುಮ್ಮನಾದಳು. ಬೈಕು ಹತ್ತು ಎಂದೆ. ಅದಕ್ಕೆ ಅವಳು ಒಪ್ಪಲಿಲ್ಲ, ನಡೆದೇ ಬರುತ್ತೇನೆ ಎಂದಳು.
" ಕವಳ ಜಗಿಯುತ್ತಾ ಸಿಕ್ಕವರ ಜೊತೆ ಸುದ್ದಿ ಹೊಡೆಯುತ್ತಾ ನಿಲ್ಲಬೇಡ, ಹತ್ತು ಗಂಟೆಯ ಒಳಗಾದರೂ ಬಂದು ಮುಟ್ಟು, ಇನ್ನೂರು ರೂಪಾಯಿಗೆ ಒಂದು ಪೈಸೆ ಕಡಿಮೆಕೊಟ್ಟರೂ ಊರು ಕೇರಿ ಒಂದು ಮಾಡುತ್ತೀರಿ ಮತ್ತೆ" ಎಂದವನು ನಾನು ಹಿಂದಿರುಗಿದೆ.
ಬರುತ್ತಾ ದಾರಿಯಲ್ಲಿ ನೆರಮನೆಯ ರಾಮ ಸಿಕ್ಕಿದ. "ಹೋಯ್ ಸ್ವಲ್ಪ ಕೋಟಕಂಡದ ತನಕ ಬಿಡಿ ನೋಡುವ" ಅಂದ, ಆತ ಸ್ವಲ್ಪ ಗಡಿಬಿಡಿಯಲ್ಲಿದ್ದ. "ಏನೋ ಬಾರಿ ಅರ್ಜೆಂಟಾ?" ನಾನು ಕೇಳಿದೆ. "ಯಾರೋ ಕಾಲಿಯಂತೆ ಅಲ್ಲಿ, ಸೌದಿ ಮಾಡಲು ಬರಬೇಕಂತೆ ಫೋನು ಬಂದಿತ್ತು."
ಅಂತೂ, ಹತ್ತುಗಂಟೆಗೆ ಕೆಲಸದಾಕೆ ಬಂದು ಸೇರಿದಳು. "ಇಷ್ಟು ತಡಮಾಡುವುದಾದರೆ ನೀನು ಬರುವುದು ಬೇಡ" ಅಮ್ಮ ಎಚ್ಚರಿಕೆಯೊಂದಿಗೇ ಮಾತು ಶುರು ಮಾಡಿದಳು. " ಅವರ ಊರಿನಲ್ಲಿ ಯಾರೋ ಬೆಳಿಗ್ಗೆ ಸತ್ತರಂತೆ, ಅಲ್ಲಿ ಹೋಗಿ ಬಂದಳೇನೊ! ಇರಲಿ ಬಿಡು" ನಾನೆಂದೆ. " ಹೌದಾ! ಯಾರು?" ಅಮ್ಮ ಕೇಳಿದಳು, ಆಕೆ ಏನೂ ಮಾತಾಡದೇ ತೋಟಕ್ಕೆ ಹೋದಳು, "ನೋಡು ಅವಳ ಸೊಕ್ಕನ್ನ!" ಅಮ್ಮನ ಮಾತು.
ಆಕೆಯನ್ನು ನೋಡಿದರೆ ನನಗೂ ಕನಿಕರ ಎನಿಸುತ್ತಿತ್ತು. ಆಕೆಯ ಗಂಡ ಸತ್ತು ಬಹಳ ವರ್ಷ ಆಗಿತ್ತು. ಒಬ್ಬ ಮಗ ಮಲ್ಪೆಯ ಬಂದರೀನಲ್ಲಿ ಕೆಲಸಕ್ಕಿದ್ದ. ಆತ ಮನೆಗೆ ಬರುವವನಲ್ಲ.ಯಾವಾಗಲೋ ಒಮ್ಮೆ ಬಂದಾಗ ಹೆಂಡ ಕುಡಿದ ಎಂದು ಇವಳೇ ಬೈದಳಂತೆ, ಅದಾದಮೇಲೆ ಆತ ಬರಲಿಲ್ಲ.
ದಿನ ಬಹಳ ಮಾತಾಡುತ್ತಿದ್ದವಳು ಆಕೆ,ಆದಿನ ಒಂದೂ ಮಾತಾಡಲಿಲ್ಲ! ಇಡೀ ದಿನ ಯಾವುದೋ ಆಲೋಚನೆಯಲ್ಲಿದ್ದಳು.
ಸಂಜೆ ಹೊರಡುವ ಸಮಯಕ್ಕೆ ಮೊದಲ ಮಾತಾಡಿದಳು " ದುಡ್ಡು ಬೇಕಾಗಿತ್ತು"
" ಎಷ್ಟು ಕೆಲಸ ಆಯಿತು? ಐದು ಅಲ್ಲವ" ಒಂದು ಸಾವಿರ ಅಪ್ಪ ಕೊಟ್ಟ.
"ಐದು ಸಾವಿರ ಬೇಕಾಗಿತ್ತು" ಅವಳೆಂದಳು!
" ಅಷ್ಟೆಲ್ಲ ಯಾಕೆ!" ಅಮ್ಮ,
"ನಿನ್ನೆ ರಾತ್ರಿ ಮಗ ಮನೆಗೆ ಬಂದ" ಅವಳು
"ಮಗ ಬಂದರೆ ದುಡ್ಡು ತಂದಿರ ಬೇಕಲ್ಲ?! ಐದು ಸಾವಿರ ಏಕೆ?" ಅಪ್ಪ
"ಸ್ವಲ್ಪ ಖರ್ಚಿದೆ" ಅವಳ ಶಬ್ದಗಳು ಒದ್ದೆಯಾಗಿದ್ದವು
" ಏನು ಅದು ಐದು ಸಾವಿರದ ಕರ್ಚು?" ಅಮ್ಮ ಕೇಳಿದಳು,
" ರಾತ್ರಿ ಕುಡಿದು ಬಂದ ಮಗ ಮನೆಯ ಹಿಂದಿದ್ದ ನೆಲಬಾವಿಯಲ್ಲಿ ಬಿದ್ದು ಸತ್........" ಅವಳಿಗೆ ಮಾತು ಮುಗಿಸಲಾಗಲಿಲ್ಲ!
ನಡೆದಿರಬಹುದಾದ ಕತೆ
ಹಡಗು ಅಲೆಗಳನ್ನು ಸೀಳಿಕೊಂಡು ಹೋಗುತ್ತಿದೆಯೋ ಅಲೆ ಹಡಗನ್ನು ಸೀಳಿಕೊಂಡು ಹೋಗುತ್ತಿದೆಯೋ ತಿಳಿಯುತ್ತಿರಲಿಲ್ಲ. ದುಃಖ ಒತ್ತರಿಸಿಕೊಂಡು ಬರುತ್ತಿತ್ತು, ಮಗ ತಿರುಗಿಬಿಟ್ಟರೆ! ಎಂದು ಕಣ್ಣೀರನ್ನು ತಡೆದುಕೊಂಡು ಕುಳಿತಿದ್ದ. ಮನಸ್ಸಿಗೆ ಯಾರೋ ಪೆಟ್ರೋಲ್ ಹಾಕಿ ಬೆಂಕಿ ಕೊಟ್ಟಿದ್ದಾರೆ ಎನಿಸುತ್ತಿತ್ತು. ಪೆಟ್ರೋಲ್ ನ ನೆನಪಾದರೆ ಮತ್ತೆ ಹೊಟ್ಟೆಯ ಆಳದಿಂದ ನೋವು ಚುಚ್ಚಿಕೊಂಡು ಬರುತ್ತಿತ್ತು.
ಅವನದ್ದೇನು ಬಡ ಕುಟುಂಬವಲ್ಲ, ಆಗಿರಲೂ ಇಲ್ಲ. ಅವನ ಅಪ್ಪ ಪೆಟ್ರೋಲ್ ಮೈನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅವನೂ ನಂತರ ಅದೇ ಕೆಲಸಕ್ಕೆ ಸೇರಿದ, ಲೆಕ್ಕ ಬರೆಯುವುದು.ಅವನ ನಂತರ ಅವನ ಮಗನೂ ಅಲ್ಲೇ ಸೇರಿದ್ದ.
ವೆನಿಝುವೆಲಾ ಅಷ್ಟು ದೊಡ್ಡ ದೇಶವೇನಲ್ಲ. ಅಮೇರಿಕಾದ ಹತ್ತಿರವೇ ಇದೆ ಬೇರೆ. ಒಂದು ಕಾಲದಲ್ಲಿ ಬಹಳ ಶ್ರೀಮಂತವಾಗಿದ್ದ ದೇಶವದು ಆದರೆ ಕಾಲ ಚಕ್ರ ಎಂದೂ ಪಂಕ್ಚರ್ ಆಗುವುದಿಲ್ಲವಲ್ಲ! ಅದು ಚಲಿಸಿತು. ದೇಶದ ಆರ್ಥಿಕ ಸ್ಥಿತಿ ಬಹಳ ಹಾಳಾಯಿತು. ಜನ ಹೊಡೆದಾಡುವ ಹಂತಕ್ಕೆ ತಲುಪಿದರು.ಇವನ ಮಗ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಮೈನ್ ಕೂಡಾ ಬರಿದಾಯಿತು. ಮಗ ಕೆಲಸ ಕಳೆದುಕೊಂಡ.
ಜನರೆಲ್ಲಾ ಇರುವ ಮನೆ ಮಾರಿ ಗುಳೆ ಎದ್ದರು. ಬಿಸಿರಕ್ತದ ಮಗ, ಮನೆ ಮಾರಿದ್ದ, ಬೇರೆ ದೇಶಕ್ಕೆ ಹೊರಟಿದ್ದ.
ಇವನು ವಿರೋಧಿಸಿದ, ಇವನೇನು ರಾಮಾಯಣ ಓದಿದವನಲ್ಲ, ' ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ' ಇದೆಲ್ಲ ಅವನಿಗೆ ಗೊತ್ತಿಲ್ಲ ಆದರೆ ಅವನಿಗೆ ತನ್ನ ಊರನ್ನು ಬಿಡಲು ಮನಸ್ಸಿಲ್ಲ.
ಮಗ ಮಾತು ಕೇಳಲಿಲ್ಲ, ಆತ ಅಪ್ಪನಿಗಿಂತ ಜಾಸ್ತಿ ಓದಿದ್ದ, ಅಪ್ಪನಿಗಿಂತ ತನಗೆ ಜಾಸ್ತಿ ಗೊತ್ತಿದೆ ಎಂಬುದಾಗಿ ಆತ ನಂಬಿದ್ದ, ಪ್ರಪಂಚ ಕೂಡ.
ಒಂದು ಲಾರಿ ಬಂತು. ಮನೆಯ ಸಾಮಾನು ತುಂಬಿಕೊಂಡು ಹೊರಟರು. ಅವನಿಗೆ ಹೃದಯಾಘಾತ ಆಗಲಿಲ್ಲ! ಅಷ್ಟರಮಟ್ಟಿಗೆ ಅವನು ಗಟ್ಟಿ.
ಊರು ಬಿಡುವುದು ಯಾರಿಗೆ ಹೇಗೋ! ಆದರೆ ಅವನಿಗೆ ಮಾತ್ರ ಅದು ಅತೀವ ಯಾತನೆ. ಹುಟ್ಟಿ ಬೆಳೆದ ಮನೆ, ಸತ್ತ ಅಪ್ಪ-ಅಮ್ಮನ ನೆನಪು,ಹೀಗೆ ನೂರಾರು ನೆನಪುಗಳಿಂದ ಆತ ದೂರಾಗಿ ಬಂದಿದ್ದ.
ಹಡಗು ಕ್ಷಣ ಕ್ಷಣಕ್ಕೂ ವೇಗವನ್ನು ಹೆಚ್ಚಿಸುತ್ತಾ ಹೋಗುತ್ತಿತ್ತು. ಕಣ್ಣು ಹಾಯಿಸಿದಷ್ಟೂ ಸಮುದ್ರ. ಸಮುದ್ರ ಅವನಿಗೆ ನೋವಿನಂತೆ ಕಂಡಿತು.ನಾನು ನೋವಿನ ಮೇಲೇ ವಿಹರಿಸುತ್ತಿದ್ದೇನೆ ಎನಿಸಿತು. ನೋವಿನಲ್ಲೇ ಒಂದಾದರೆ ಹೇಗೆ!? ಎನಿಸಿತು.
ಮಗ ತಿರುಗಿ ನೋಡಿದರೆ ಅಪ್ಪ ಇರಲಿಲ್ಲ.