Monday, November 25, 2019

ಒಂದು ಸಿನಿಮಾ ಕತೆ

ಒಂದು ಸಿನಿಮಾ ಕಥೆ.
  ಸುಪ್ರೀಂ ಕೋರ್ಟಿನಲ್ಲಿ ಕೋಲಾಹಲ ಎಬ್ಬಿಸಿದ ಕೇಸು ಅದು.
ನಡೆದದ್ದಿಷ್ಟೆ,ಕನ್ನಡದ ಹಿರಿಯ,ಖ್ಯಾತ,'ಅನುಭವಿ' ನಿರ್ದೇಶಕರೊಬ್ಬರು
'ತುರಿಕೆ' ಎಂಬ ಚಿತ್ರ ಒಂದನ್ನು ಮಾಡಿದ್ದರು.ಚಿತ್ರೀಕರಣ ಮುಗಿದಮೇಲೆ
ಪ್ರಿಂಟು ಸೆನ್ಸಾರ್ ಬೋರ್ಡಿಗೆ ಹೋಯಿತು.ಚಿತ್ರದಲ್ಲಿ ನಾಯಕಿ
ಮಂಡಿಗಿಂತ ನಾಲ್ಕು ಅಂಗುಲ ಮೇಲೆ ಸ್ಕರ್ಟ್ ತೊಟ್ಟಿದ್ದಳಾದ್ದರಿಂದ
ಸೆನ್ಸಾರ್ ಮಂಡಳಿ ಚಿತ್ರ ಬಿಡುಗಡೆಗೆ ನಿರಾಕರಿಸಿತು.
                     ಇದರಿಂದ ರೊಚ್ಚಿಗೆದ್ದ ನಮ್ಮ'ಅನುಭವಿ' ನಿರ್ದೆಶಕರು
ವಯಸ್ಸಾಗಿದ್ದ ಕಾರಣ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಲಾರದೆ
ಲಿಫ್ಟ್ ಹತ್ತಿದರು.ಮೇಲೆ ಹೋದಮೇಲೆ ಯಾರೋ ವಿಚಾರಣೆ
ಗ್ರೌಂಡ್ ಫ್ಲೋರಿನಲ್ಲಿ ನಡೆಯುತ್ತದೆ ಎಂದು ಹೇಳಿದಕಾರಣ ಮತ್ತೆ
ಇಳಿದು ಬಂದರು.
                     ಎರಡೂ ಪಕ್ಷದ ವಾದ-ವಿವಾದಗಳು ತಿಂಗಳುಗಟ್ಟಲೆ
ನಡೆದವು.ಇದರಿಂದ ನಿರ್ಮಾಪಕರೂ,ವಿತರಕರೂ ಮೂಕವಾಗಿ
ಬಾಯಿಬಡಿದುಕೊಂಡದ್ದು ಯಾರಿಗೂ ಕೇಳಲಿಲ್ಲ.
              ಕೊನೆಗೂ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ಯ ನಂತರ ನೀಡಿದ ತೀರ್ಪು ನಿರ್ದೇಶಕರ ವಿರುದ್ಧವಾಗಿಯೇ ಬಂತು.
ನಟಿಯು ಬಟ್ಟೆಯನ್ನು ಮಂಡಿಗಿಂತ ನಾಲ್ಕು ಅಂಗುಲ ಮೇಲೆ
ಹಾಕಿಕೊಂಡಿದ್ದರಿಂದ ದೇಶದ ಸಂಸ್ಕೃತಿಗೆ ಬಹಳ ಧಕ್ಕೆಯಾಗುತ್ತದೆ.
ಮೂರು ಅಂಗುಲಕ್ಕೆ ಅದನ್ನು ಇಳಿಸಿದರೆ ಸಂಸ್ಕೃತಿ ಉಜ್ವಲವಾಗುತ್ತದೆ
ಎಂದು ತೀರ್ಪು ಹೊರಬಿದ್ದಿತ್ತು.
                ಏತನ್ಮಧ್ಯೆ ಸ್ತ್ರೀ ಭಕ್ತ ಎನಿಸಿಕೊಂಡ ‘ಹುಚ್ಚ ಸಂಕಟ್' ಎಂಬ
ವ್ಯಕ್ತಿ ಒಬ್ಬ ಟೀವಿ ಒಂದರಲ್ಲಿ ಕೂತು ನಿರ್ದೇಶಕನಿಗೆ ಬಾಯಿಗೆ ಬಂದಂತೆ ಬೈಯ್ದ.
ವಾದ ವಿಕೋಪಕ್ಕೆ ತಿರುಗಿತು,ಆ ಅಬ್ಬರದಲ್ಲಿ ಅಲ್ಲಿ ಕುಳಿತಿದ್ದ
ಏಂಕರ್ ಹುಡುಗಿ ‘ಆಲ್ ರೈಟ್' ಎನ್ನಲು ಬಾಯಿ ತೆಗೆಯುವಷ್ಟರಲ್ಲಿ
ಕೋಪಗೊಂಡ ಆತ ಆಕೆಗೇ ಕಪಾಳಮೋಕ್ಷ ಮಾಡಿಬಿಟ್ಟ ಅಲ್ಲಿಗೆ
'ಇಬ್ಬರ ಜಗಳ ನಾಲ್ಕನೇಯವಳಿಗೆ ಪೆಟ್ಟು' ಎಂಬಂತಾಯಿತು.
ಸ್ಟುಡಿಯೋದಿಂದ ಹೊರಬರುತ್ತಿದ್ದಂತೆ ಆತನನ್ನು ಬಂಧಿಸಲು ಪೊಲೀಸರು
ತಯಾರಿದ್ದರೂ ಅವನ ವಕೀಲ ನಾವು ಇದನ್ನೆಲ್ಲಾ ಮೊದಲೇ
ನಿರೀಕ್ಷಿಸಿದ್ದೆವು ಎಂದು ಏಂಟಿಸಿಪೇಟರಿ ಬೇಲ್ ತೋರಿಸಿದ
ಎಂಬಲ್ಲಿಗೆ ಈ ಪ್ರಕರಣ ಸುಖಾಂತ್ಯ ಕಂಡಿತು.
           ಇನ್ನು ಹೊರಬಿದ್ದ ತೀರ್ಪಿನಿಂದ ಕೋಪಗೊಂಡ ನಿರ್ದೇಶಕ ನ
ಅಭಿಮಾನಿಗಳು ಬಾರೀ ಪ್ರತಿಭಟನೆ ನಡೆಸಿ ಕರ್ನಾಟಕ ಬಂದ್ ಮಾಡಿದರು.
ಈ ಕುರಿತಾಗಿ ಸುಗ್ರಿವಾಜ್ಞೆಯನ್ನು ಹೊರಡಿಸಬೇಕೆಂದು ' ಹಕ್ಕೊತ್ತಾಯ'
ಮಾಡಿದರು.
                   ಈ ವಿಚಾರ ಸದನದಲ್ಲಿ ಚರ್ಚೆಯಾಯಿತು.ಕೆಲಸವಿಲ್ಲದೇ
ಕುಳಿತಿದ್ದ ವಿರೋಧ ಪಕ್ಷದ ನಾಯಕರು ಸದನದ ಬಾವಿಗಿಳಿದು
ಪ್ರತಿಭಟಿಸಿದರು.ಬರಗಾಲ ಬಂದಿದ್ದ ಕಾರಣ ಅಲ್ಲಿ ನೀರಿಲ್ಲವಾದ್ದರಿಂದ  ಅವರಿಗೆ ಏನೂ ತೊಂದರೆಯಾಗಲಿಲ್ಲ.ಊಟದರಾಮದ ವೇಳೆ ಅವರನ್ನು ಹಗ್ಗ
ಕೊಟ್ಟು ಮೇಲೆತ್ತಬೇಕಾಯಿತು.
                ಈ ಮಧ್ಯೆ ಮುಖ್ಯಮಂತ್ರಿ ಯ ಅಳಿಯನೇ ಆ ಚಿತ್ರದ
ನಿರ್ಮಾಪಕ ಆಗಿದ್ದರಿಂದ ಅವನಿಗೆ ಈ ವಿಚಾರ ನುಂಗಲೂ ಆಗದ,ಉಗುಳಲೂ ಆಗದ
ತುತ್ತಾಗಿ ಪರಿಣಮಿಸಿದೆ.ಸದನವನ್ನು ಸಭಾಪತಿಗಳು ಮಧ್ಯಾಹ್ನ
ನಾಲ್ಕು ಗಂಟೆಗೆ ಮುಂದೂಡಿದ್ದರಿಂದ ‘ಗಲಾಟೆ' ತಾತ್ಕಾಲಿಕ ಶಮನವಾಯಿತು.
        'ಇಲ್ಲಾದರೂ ಮಲಗುವ ಅಂತ ಬಂದರೆ ಅದಕ್ಕೂ ಬಿಡೋಲ್ವಲ್ಲ'
ಎಂಬ ಕೆಲವು ಲಾಸ್ಟ್ ಬೆಂಚ್ ಶಾಸಕರ ಧ್ವನಿ ಸದನದಲ್ಲಿ ಪ್ರತಿಧ್ವನಿಸಿತು.

7 comments: