Friday, November 29, 2019

ಕೆಲವು ಕನಸುಗಳು

   ಸಾಹುಕಾರರ ದೊಡ್ಡಮನೆಗೆ ಹಾಕಿದ್ದ ಮಿಣಿಮಿಣಿ ಬಲ್ಬಿನ ಸರ ಕೆಂಪುಬಿಳಿಕೆಂಪುಬಿಳಿಯಾಗಿ ತೋರುತ್ತಿತ್ತು. ಹೆಗಲ ಮೇಲೆ ಒಂದಿಪ್ಪತ್ತೈದು ಕೇಜಿ ತೂಕದ ಅಕ್ಕಿ ಚೀಲ ಹೊತ್ತಿದ್ದ ಅವನು ಬಿರ್ ಬಿರನೆ ಓಡಿದಂತೆ ನಡೆಯುತ್ತಿದ್ದ.ಹಿಂಗಾಲಿನ ಕೆಳಗೆ ನವೆದು ತೂತಾಗಿದ್ದ ಹವಾಯಿ ಚಪ್ಪಲಿ ಈಗ ಉಂಗುಷ್ಟವನ್ನೂ ಕಿತ್ತುಕೊಂಡಿತ್ತು. ಅಲ್ಲಲ್ಲಿ ನಿಂತು ಸರಿಮಾಡಿಕೊಳ್ಳುತ್ತಾ, ಕುಂಟುತ್ತಾ ನಡೆಯುತ್ತಿದ್ದ. ಪೇಟೆಯಿಂದ ಮದುವೆ ಅಡುಗೆಗೆ ಸಾಮಾನು ಹೋತ್ತು ತಂದಿದ್ದ ಲಾರಿಯಿಂದ ಈ ಚೀಲವೊಂದು ಕುಪ್ಪಳಿಸಿ ಮನೆಯಿಂದ ಒಂದು ಮೈಲಿ ದೂರದಲ್ಲಿ ಬಿದ್ದಿತ್ತು. ಇವನಪ್ಪ ಸಾವ್ಕಾರರ ಮನೆಯ ಖಾಯಂ ಆಳು, ಹಾಗಾಗಿ ಅವನಿಗೆ ಆ ಚೀಲವನ್ನು ಹುಡುಕಿ ಹೊತ್ತು ತರುವ ಕೆಲಸ ಬಂದಿತ್ತಾದರೂ ಅವನಿಗೆ ಸಾರಾಯಿ ಅಂಗಡಿಗೆ ಹೋಗುವ ಬಹಳ ಮುಖ್ಯವಾದ ಕೆಲಸ ಇದ್ದದ್ದರಿಂದ ಅದು ಇವನಿಗೆ ಬಂತು.
            ಸಾವ್ಕಾರರ ಮಗಳ ಮದುವೆ ನಾಳೆ! ಈ ವಿಷಯ ನೆನಪಾಗುತ್ತಿದ್ದಂತೆ ಅವನು ಒಂದು ಸಾರಿ ನಿಂತ. ಚಪ್ಪಲಿಯ ಉಂಗುಷ್ಟ ಕಿತ್ತು ಹೋಗಿತ್ತು ಬಹಳ ಕೋಪ ಬಂತು, ಯಾಕೆ ಎಂದು ಅವನಿಗೆ ಗೊತ್ತಿದ್ದರೂ ಗೊತ್ತಾಗಲಿಲ್ಲ. ಅದೇ ಕೋಪದಲ್ಲಿ ಉಂಗುಷ್ಟ ಕಿತ್ತು ಹೋಗಿದ್ದ ಚಪ್ಪಲಿಯನ್ನು ಎಡಗೈಲಿ ತೆಗೆದುಕೊಂಡು ಇದ್ದಷ್ಟೂ ತಾಕತ್ತು ಹಾಕಿ ದೂರ ಎಸೆದ. ಒಂದೇ ಚಪ್ಪಲಿಯಲ್ಲಿ ಒಂದು ನಾಲ್ಕು ಹೆಜ್ಜೆ ನಡೆದ. ಅದೂ ಕೋಪ ತರಿಸಿತು. ಸಾವ್ಕಾರರ ಮನೆ ಈಗ ಸ್ವಲ್ಪ ಸ್ಪಷ್ಟವಾಗಿತ್ತು. ಈಗ ಬಲ್ಪಿನ ಸರದಲ್ಲಿ ಕೆಂಪು, ಹಸಿರು, ನೀಲಿ, ಹಳದಿ ಹೀಗೆ ನಾಲ್ಕಾರು ಬಣ್ಣಗಳಿದ್ದವು. ಒಂಟಿ ಚಪ್ಫಲಿಯ ಕಿರಿಕಿರಿಯ ಮೇಲೆ ಈ ಕೈಗೆಟುಕದ ವಿಜ್ಞಾನ ಇನ್ನೂ ಕಂಗೆಡಿಸಿತು. ಕೋಪದಲ್ಲಿ 'ಯೇ..' ಎಂದು ಕೂಗಿದ,ಆ ಬರಕ್ಕೆ ಬಾಯಲ್ಲಿ ಹಾಕಿಕೊಂಡಿದ್ದ ಬರೀ ತಂಬಾಕಿನ ಹುಡಿ ಗಂಟಲೊಳಗೆ ಇಳಿಯಿತು.
      ಮತ್ತೆ 'ಯೇ ಬೇವರ್ಸಿ'ಎಂದು ನಿರ್ವಿಕಾರವಾಗಿ ನಿರಾಕಾರವೊಂದಕ್ಕೆ ಬೈದು ಅಕ್ಕಿ ಚೀಲವನ್ನು ಮುಂದಕ್ಕೆ ಎಸೆದ. ಅದೊಂದೈದಾರು ಅಡಿ ದೂರಕ್ಕೆ ಹೋಗಿ ದೊಪ್ಪನೆ ಬಿತ್ತು. ಹಾಕಿಕೊಂಡಿದ್ದ ಒಂಟಿ ಚಪ್ಪಲಿಯನ್ನು ಈ ಬಾರಿ ಬಲಗೈಯಲ್ಲೇ ತೆಗೆದುಕೊಂಡು ಓಡಿಹೋಗಿ ಎಸೆದ. 
        ಓಡಿದ ಬರದಲ್ಲಿ ಹೆಬ್ಬೆಟ್ಟಿಗೆ ಕಲ್ಲೊಂದು ಬಡಿಯಿತು. ಉಗುರು ಕಿತ್ತು ರಕ್ತ ಚಿಮ್ಮಿತು. ಅಲ್ಲೇ ಕುಸಿದು ಕೂತ.
            ಸಕಾರಣವಾದರೂ ಅವ್ಯಕ್ತವಾದ ಕೋಪ ವ್ಯಕ್ತವಾಗುತ್ತಿತ್ತು. ಸಾವ್ಕಾರರ ಮಗಳ ಜೊತೆ ಸೆಣ್ಣವನಿದ್ದಾಗಿಂದ ಬೆಳೆದಿದ್ದೇನೆ ನಿಜ! ಅವಳೇ ಕೆಟ್ಟ ಚಟ ಬಿಡು ಎಂದಳೆಂದು ಕುಡಿತ ಬಿಟ್ಟು ಗುಟ್ಕಾ ತಿನ್ನಲು ಶುರುಮಾಡಿದ್ದೇನೆ ನಿಜ ಆದರೆ ಅವಳ ಮದುವೆ ಅಂತಾದರೆ ನಾನ್ಯಾಕೆ ಕೋಪ ಮಾಡಿಕೊಳ್ಳಬೇಕು! ಅವನಿಗೆ ಅಂತಹ ಪ್ರಶ್ನೆಗಳೆಲ್ಲ ತಲೆಗೇ ಬರುವುದಿಲ್ಲ.
           ಈಗ ಕರೆಂಟು ಹೋಗಿದಬೇಕು, ಬಲ್ಬಿನ ಸರದಲ್ಲಿ ಬೆಳಕೇ ಇಲ್ಲ.
       ಒಂದು ತಂಬಾಕಿನ ಕೊಟ್ಟೆ ಒಡೆದು ಬಾಯಿಗೆ ಹಾಕಿದ. ಹೆಬ್ಬೆರಳ ತುದಿಗೆ ಕೈಗೆ ಸಿಕ್ಕಿದ ಗಿಡವೊಂದರ ಎಲೆ ಒತ್ತಿ ಹಿಡಿದ. ಸ್ವಲ್ಪಹೊತ್ತು ಬಿಟ್ಟು ಹೊರಡುವ ಎನಿಸಿತು. ಸಾವ್ಕಾರರ ಮಗಳು ನಾಳೆ ಗಂಡನ ಮನೆಗೆ ಹೋಗುತ್ತಾಳೆ ಒಂದು ವರ್ಷದಲ್ಲಿ ಅವಳಿಗೆ ಮಗನೋ, ಮಗಳೋ ಹುಟ್ಟುತ್ತದೆ ಎಂಬುದು ಅವನಿಗೆ ಮತ್ತೆ ಮತ್ತೆ ಕೋಪ ತರಿಸುತ್ತದೆ ಆದರೆ ಯಾಕೆಂದು ಗೊತ್ತಿಲ್ಲ ಆದರೆ ನಾಳೆ ಮದುವೆಗೆ, ನಾಡಿದ್ದು ಬೀಗರೂಟಕ್ಕೆ ಕೋಳಿ ಕಡಿಯುತ್ತಾರೆ ಎಂಬ ಸಂತೋಷವೂ ಇಲ್ಲದಿಲ್ಲ.
         ಇಷ್ಟೆಲ್ಲ ಯೋಚಿಸುತ್ತಿರುವಾಗ ಬೆನ್ನ ಮೇಲೆ ಯಾರೋ ಒದ್ದರು, ತಿರುಗಿ ನೋಡಿದರೆ ಅಪ್ಪ. ಮತ್ತೊಂದು ಒದ್ದ. ಇವನು ಎದ್ದ. ಮುಂದೆ ಓಡಿದ ಸ್ವಲ್ಪದೂರದಲ್ಲಿ ಅಕ್ಕಿ ಚೀಲ ಬಿದ್ದಿತ್ತು, ಒಡೆದು.
       ಕೆಲವು ಕನಸುಗಳು ನಸಾಗುವುದಿಲ್ಲ, ಇನ್ನು ಕೆಲವು ಅರ್ಥವೇ ಆಗುವುದಿಲ್ಲ.

Tuesday, November 26, 2019

ಸಿದ್ಧಾಂತ ವರ್ಸಸ್‌ ಕಾರ್ಯಸಾಧನೆ


      ಒಬ್ಬ ವ್ಯಕ್ತಿಯಾಗಲಿ, ಸಂಘಟನೆಯಾಗಲಿ ಅಥವಾ ರಾಜಕೀಯ ಪಕ್ಷಗಳಿಗಾಗಲಿ ನಿಲ್ಲುವುದು ಅವುಗಳ ಸಿದ್ಧಾಂತದ ತಳಹದಿಯ ಮೇಲೆ. ಸಿದ್ಧಾಂತದ ಒಂದು ಲಾಭ ಅಥವಾ ನಷ್ಟ ಎಂದರೆ ಅದು ತನ್ನಷ್ಟಕ್ಕೇ ಅದರ ಪ್ರತಿಪಾದರಕನಿಗೆ ಅಭಿಮಾನಿಗಳನ್ನು ಹಿಂಬಾಲಕರನ್ನೂ,ಬೆಂಬಲಿಗರನ್ನೂ ಜೊತೆಗೆ ವಿರೋಧಿಗಳನ್ನು ಹುಟ್ಟಿಸಿಕೊಳ್ಳುತ್ತದೆ. ವ್ಯಕ್ತಿ ಅಥವಾ ಪಕ್ಷ ಶುರುವಾಗುವುದು ಸ್ವಂತ ಇಚ್ಛೆಯಿಂದ ಆದರೂ ಕಾಲಾಂತರದಲ್ಲಿ ಅವು ನಿಲ್ಲುವುದು ಸಿದ್ಧಾಂತದ, ವಿಚಾರಧಾರೆಯ ತಳಹದಿಯ ಮೇಲೆ.
          ಭಾರತದ ದೊಡ್ಡ ಪಕ್ಷಗಳಲ್ಲಿ ಬಿಜೆಪಿ ಮೊದಲು ನಿಲ್ಲುತ್ತದೆ. ಬಲಪಂಥೀಯ ವಿಚಾರಧಾರೆಯ ಅತಿದೊಡ್ಡ ಪಕ್ಷ ಇದು‌. ಎಲ್ಲಾ ರಾಜಕಾರಣಿಗಳೂ ಸೆಕ್ಯುಲಾರಿಸಂ ಎಂಬ ಸುಳ್ಳು ನಷೆಯಲ್ಲಿದ್ದಾಗ  ರಾಮಮಂದಿರದ ಪರವಾಗಿ ಧ್ವನಿಯೇರಿಸಿ ಪಕ್ಷದ ಬಾವುಟ ನೆಟ್ಟವರು ಅಂದಿನ ಮುರುಳಿ ಮನೋಹರ್ ಜೋಷಿ ಲಾಲ್ ಕೃಷ್ಣ ಆಡ್ವಾಣಿ, ವಾಜಪೇಯವರಂತಹ ನಾಯಕರು. ಅಂದಿನಿಂದ ಇಲ್ಲಿಯವರೆಗೂ ಹಿಂದುತ್ವದ ದೊಡ್ಡ ಪ್ರತಿಪಾದಕನಾಗಿ ಬಿಜೆಪಿ ಗುರುತಿಸಿಕೊಂಡಿದೆಯಾದರೂ ಅಧಿಕಾರ ವಹಿಸಿಕೊಂಡಿದ್ದು ಬಹಳ ಕಡಿಮೆ.
          ಒಂದು ಹಂತದಲ್ಲಿ ತಮ್ಮ ಅತಿಯಾದ ಹಿಂದುತ್ವದಿಂದ ಅಡ್ವಾಣಿ ಪ್ರಧಾನಿಯಾಗುವ ಅವಕಾಶವನ್ನು ಕಳೆದುಕೊಂಡರು.
          ಆದರೆ ಇದೇ ಬಿಜೆಪಿಗೆ ಅದೇ ಮೂಲ ಸಿದ್ಧಾಂತದಲ್ಲೇ ಹೊಸ ಬಲ ಕೊಟ್ಟವರು ನರೇಂದ್ರ ಮೋದಿ. 2014 ರಲ್ಲಿ ಮೊದಲ ಬಾರಿ,2019 ರಲ್ಲಿ ಎರಡನೇ ಬಾರಿ ಮೋದಿ ಪೂರ್ಣ ಬಹುಮತದೊಂದಿಗೆ ಪ್ರಧಾನಿಯಾಗಿದ್ದಾರೆ.
        ಮೋದಿ ಬಂದನಂತರ ಬಿಜೆಪಿ ಬದಲಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ಎಂಬ ಸಿದ್ಧಾಂತ ಮೋದಿಯವರದ್ದು,ಅದನ್ನವರು ಪಾಲಿಸಿದ್ದಾರೆ ಕೂಡಾ.
   ‌‌‌‌‌‌‌‌‌‌‌‌‌‌  
     ಭ್ರಷ್ಟಾಚಾರ ನಿರ್ಮೂಲನೆಯ ಹೆಸರಿನಲ್ಲೇ ಬಂದ ಕೇಜ್ರಿವಾಲ್ ಇಂದು ಏನಾಗಿದ್ದಾರೆ ಎನ್ನುವುದು ನಮ್ಮ ಕಣ್ಣುಮುಂದಿದೆ.
       ಆದರೆ ಮೋದಿ ಹಾಗಾಗಲಿಲ್ಲ. ಅವರ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ‌. ರಾಫೇಲ್ ಹೆಸರಿನಲ್ಲಿ ಅವರನ್ನು ಬಗ್ಗಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದನಾದರೂ ಸುಪ್ರೀಂ ಕೈಯಲ್ಲಿ ಛೀಮಾರಿ ಹಾಕಿಸಿಕೊಂಡ.
            ಎತ್ತರದಲ್ಲಿ ಅಷ್ಟು ಶುದ್ಧಹಸ್ತರಾಗಿರುವ ಮೋದಿ ತಳ ಮಟ್ಟದಲ್ಲಿ ಸಂಪೂರ್ಣ ಭ್ರಷ್ಟಾಚಾರ ವಿರೋಧಿಯಾಗಿದ್ದಾರಾ?
        ಮಹಾರಾಷ್ಟ್ರದ ಪರಿಸ್ಥಿತಿ ಗೊತ್ತಿದ್ದದ್ದೇ. ಚುಣಾವಣಾ ಪೂರ್ವ ಮೈತ್ರಿಯಿಂದ ಅಧಿಕಾರದಾಸೆಗೆ ತನ್ನ ಸಿದ್ಧಾಂತವನ್ನು ಗಾಳಿಗೆ ತೂರಿದ ಶಿವಸೇನೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಯಿತು. ಆದರೆ ಏತನ್ಮಧ್ಯೆ ರಾಜ್ಯಪಾಲರು ರಾಷ್ಟ್ರಪತಿ ಆಡಳಿತ ಘೋಷಿಸಿದರು!
         ಹೀಗೆ ಬೆಳೆದು ಇನ್ನೇನು ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಬಹುಮತ ಸಾಬೀತುಪಡಿಸಬೇಕು ಎಂಬಷ್ಟರಲ್ಲಿ ಎನ್ ಸಿಪಿ ಶಾಸಕ ಅಜಿತ್ ಪವಾರ್ ಬಿಜೇಪಿಗೆ ಬೆಂಬಲ ಕೊಟ್ಟು ಹಠಾತ್ತನೆ ಫಡ್ನಿವೀಸ್ ಮುಖ್ಯಮಂತ್ರಿ ಆಗಿಬಿಟ್ಟರು. 
          ಶಿವಸೇನೆಗೆ ಪಾಠ ಕಲಿಸಲು ಬಿಜೆಪಿ ಇಟ್ಟ ಈ ಹೆಜ್ಜೆಯನ್ನು ಟೀಕಿಸುವ ನೈತಿಕತೆ ಬೇರೆ ಯಾವ ಪಕ್ಷಕ್ಕೂ ಖಂಡಿತವಾಗಿ ಇಲ್ಲ.
           ಕರ್ನಾಟಕದಲ್ಲಿ ಚುಣಾವಣೆಯಲ್ಲಿ ಬಹಳ ಮುಖ್ತ ಪಾತ್ರ ವಹಿಸಬಲ್ಲವರಾಗಿದ್ದ ಜನಾರ್ಧನ ರೆಡ್ಡಿಯನ್ನು ಬ್ರಷ್ಟ ಎಂಬ ಕಾರಣಕ್ಕೆ ಬಿಜೆಪಿ ಹೊರಗಿಟ್ಟಿತು ಆದರೆ ಕಾಂಗ್ರೆಸ್ ಜೈಲಿನಿಂದ ಬಂದ ಡಿ.ಕೆ ಯನ್ನು ಅಪ್ಪಿಕೊಂಡಿತು ಎಂಬಲ್ಲಿಗೆ ಬಿಜೆಪಿಯನ್ನು ನೈತಿಕವಾಗಿ ಎದುರಿಸುವ ಶಕ್ತಿ ಬೇರೆ ಪಕ್ಷಗಳಿಗಿಲ್ಲ.
       ಆಪರೇಶನ್ ಗಳು ಸರ್ವೇ ಸಾಮಾನ್ಯವಾಗಿರುವ ರಾಜಕೀಯ ಯುಗದಲ್ಲಿ ಆಪರೇಷನ್ ಕಮಲ ರಾಜಕೀಯ ನಡೆಯಾಗಿ ಕಾಣುತ್ತದೆಯೇ ಹೊರತು ಬ್ರಷ್ಟತೆ ಎನಿಸುವುದಿಲ್ಲ ಆದರೆ ನಿಜವಾಗಿ ನಮ್ಮಂತಹ ಮೋದಿ ಭಕ್ತರಿಗೆ ಷಾಕ್ ಕೊಟ್ಟ ವಿಚಾರ ಬೇರೆ ಇದೆ.
            ಅಜಿತ್ ಪವಾರ್ ಮೇಲೆ ಇದದ 70000 ಕೋಟಿಯ ಹಗರಣದ ವಿಚಾರಣೆಯನ್ನು ಕೈಬಿಡಲಾಗಿದೆ. ಇದು ಖಂಡಿತವಾಗಿ ಬೃಷ್ಟಾಚಾರಕ್ಕೆ ಕೊಡುವ ಬೆಂಬಲವಲ್ಲವೇ? ಅಂದರೆ ಸ್ವಂತ ಲಾಭಕ್ಕೆ ಸಿದ್ಧಾಂತವನ್ನು ಬಿಡಲು ಬಿಜೆಪಿ ಸಿದ್ಧವಾದಂತಲ್ಲವೆ?
        ಇಂತಹ ಕೆಳಮಟ್ಟದ ಕೆಲಸಕ್ಕೆ ಕೈ ಹಾಕುವುದಕ್ಕಿಂತ ವಿರೋಧ ಪಕ್ಷದಲ್ಲೇ ಗೌರವವಾಗಿ ಕೂರಬಹುದು ಎನಿಸುತ್ತದೆ.
        ಅಷ್ಟಕ್ಕೂ ಬಿಜೆಪಿ ಸರ್ಕಾರ ಬಿದ್ದಂತೇ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಹುಮತ ಸಾಬೀತಿಗು ಮೊದಲೆ ರಾಜಿನಾಮೆ ಕೊಟ್ಟಾಗಿದೆ ಅಂದರೆ ಅವರ ಬೆಂಬಲ ಇನ್ನು ಬಿಜೆಪಿಗೆ ಇಲ್ಲ ಎಂದಾಯಿತು‌. ಇನ್ನು ನಾಳೆ ಫಡ್ನಿವೀಸ್ ಬಹುಮತ ಸಾಬೀತುಪಡಿಸುವುದು ಕನಸಿನ ಮಾತು.
        ಇದರಿಂದ ಬಿಜೆಪಿ ಏನು ಸಾಧಿಸಿದಂತಾಯಿತು? ಆರಂಭ ಶೂರತ್ವದಿಂದ ಅಜಿತ್ ಪವಾರ್ ನ ಹಗರಣವನ್ನೂ ಕೈಬಿಟ್ಟು ಇತ್ತ ಅಧಿಕಾರವನ್ನೂ ಕಳೆದುಕೊಳ್ಳಲಿರುವ ಬಿಜೆಪಿ ಇಂತಹ ತಪ್ಪು ನಡೆಗಳಿಂದ ಅಭಿಮಾನಿಗಳ ಮನಸ್ಸಿನಲ್ಲಿ ಬೇಸರ ಮೂಡಿಸಿರುವುದು ಸುಳ್ಹಲ್ಲ. ನಿಮಗೇನನಿಸುತ್ತದೆ?

Monday, November 25, 2019

ಒಂದು ಸಿನಿಮಾ ಕತೆ

ಒಂದು ಸಿನಿಮಾ ಕಥೆ.
  ಸುಪ್ರೀಂ ಕೋರ್ಟಿನಲ್ಲಿ ಕೋಲಾಹಲ ಎಬ್ಬಿಸಿದ ಕೇಸು ಅದು.
ನಡೆದದ್ದಿಷ್ಟೆ,ಕನ್ನಡದ ಹಿರಿಯ,ಖ್ಯಾತ,'ಅನುಭವಿ' ನಿರ್ದೇಶಕರೊಬ್ಬರು
'ತುರಿಕೆ' ಎಂಬ ಚಿತ್ರ ಒಂದನ್ನು ಮಾಡಿದ್ದರು.ಚಿತ್ರೀಕರಣ ಮುಗಿದಮೇಲೆ
ಪ್ರಿಂಟು ಸೆನ್ಸಾರ್ ಬೋರ್ಡಿಗೆ ಹೋಯಿತು.ಚಿತ್ರದಲ್ಲಿ ನಾಯಕಿ
ಮಂಡಿಗಿಂತ ನಾಲ್ಕು ಅಂಗುಲ ಮೇಲೆ ಸ್ಕರ್ಟ್ ತೊಟ್ಟಿದ್ದಳಾದ್ದರಿಂದ
ಸೆನ್ಸಾರ್ ಮಂಡಳಿ ಚಿತ್ರ ಬಿಡುಗಡೆಗೆ ನಿರಾಕರಿಸಿತು.
                     ಇದರಿಂದ ರೊಚ್ಚಿಗೆದ್ದ ನಮ್ಮ'ಅನುಭವಿ' ನಿರ್ದೆಶಕರು
ವಯಸ್ಸಾಗಿದ್ದ ಕಾರಣ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಲಾರದೆ
ಲಿಫ್ಟ್ ಹತ್ತಿದರು.ಮೇಲೆ ಹೋದಮೇಲೆ ಯಾರೋ ವಿಚಾರಣೆ
ಗ್ರೌಂಡ್ ಫ್ಲೋರಿನಲ್ಲಿ ನಡೆಯುತ್ತದೆ ಎಂದು ಹೇಳಿದಕಾರಣ ಮತ್ತೆ
ಇಳಿದು ಬಂದರು.
                     ಎರಡೂ ಪಕ್ಷದ ವಾದ-ವಿವಾದಗಳು ತಿಂಗಳುಗಟ್ಟಲೆ
ನಡೆದವು.ಇದರಿಂದ ನಿರ್ಮಾಪಕರೂ,ವಿತರಕರೂ ಮೂಕವಾಗಿ
ಬಾಯಿಬಡಿದುಕೊಂಡದ್ದು ಯಾರಿಗೂ ಕೇಳಲಿಲ್ಲ.
              ಕೊನೆಗೂ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ಯ ನಂತರ ನೀಡಿದ ತೀರ್ಪು ನಿರ್ದೇಶಕರ ವಿರುದ್ಧವಾಗಿಯೇ ಬಂತು.
ನಟಿಯು ಬಟ್ಟೆಯನ್ನು ಮಂಡಿಗಿಂತ ನಾಲ್ಕು ಅಂಗುಲ ಮೇಲೆ
ಹಾಕಿಕೊಂಡಿದ್ದರಿಂದ ದೇಶದ ಸಂಸ್ಕೃತಿಗೆ ಬಹಳ ಧಕ್ಕೆಯಾಗುತ್ತದೆ.
ಮೂರು ಅಂಗುಲಕ್ಕೆ ಅದನ್ನು ಇಳಿಸಿದರೆ ಸಂಸ್ಕೃತಿ ಉಜ್ವಲವಾಗುತ್ತದೆ
ಎಂದು ತೀರ್ಪು ಹೊರಬಿದ್ದಿತ್ತು.
                ಏತನ್ಮಧ್ಯೆ ಸ್ತ್ರೀ ಭಕ್ತ ಎನಿಸಿಕೊಂಡ ‘ಹುಚ್ಚ ಸಂಕಟ್' ಎಂಬ
ವ್ಯಕ್ತಿ ಒಬ್ಬ ಟೀವಿ ಒಂದರಲ್ಲಿ ಕೂತು ನಿರ್ದೇಶಕನಿಗೆ ಬಾಯಿಗೆ ಬಂದಂತೆ ಬೈಯ್ದ.
ವಾದ ವಿಕೋಪಕ್ಕೆ ತಿರುಗಿತು,ಆ ಅಬ್ಬರದಲ್ಲಿ ಅಲ್ಲಿ ಕುಳಿತಿದ್ದ
ಏಂಕರ್ ಹುಡುಗಿ ‘ಆಲ್ ರೈಟ್' ಎನ್ನಲು ಬಾಯಿ ತೆಗೆಯುವಷ್ಟರಲ್ಲಿ
ಕೋಪಗೊಂಡ ಆತ ಆಕೆಗೇ ಕಪಾಳಮೋಕ್ಷ ಮಾಡಿಬಿಟ್ಟ ಅಲ್ಲಿಗೆ
'ಇಬ್ಬರ ಜಗಳ ನಾಲ್ಕನೇಯವಳಿಗೆ ಪೆಟ್ಟು' ಎಂಬಂತಾಯಿತು.
ಸ್ಟುಡಿಯೋದಿಂದ ಹೊರಬರುತ್ತಿದ್ದಂತೆ ಆತನನ್ನು ಬಂಧಿಸಲು ಪೊಲೀಸರು
ತಯಾರಿದ್ದರೂ ಅವನ ವಕೀಲ ನಾವು ಇದನ್ನೆಲ್ಲಾ ಮೊದಲೇ
ನಿರೀಕ್ಷಿಸಿದ್ದೆವು ಎಂದು ಏಂಟಿಸಿಪೇಟರಿ ಬೇಲ್ ತೋರಿಸಿದ
ಎಂಬಲ್ಲಿಗೆ ಈ ಪ್ರಕರಣ ಸುಖಾಂತ್ಯ ಕಂಡಿತು.
           ಇನ್ನು ಹೊರಬಿದ್ದ ತೀರ್ಪಿನಿಂದ ಕೋಪಗೊಂಡ ನಿರ್ದೇಶಕ ನ
ಅಭಿಮಾನಿಗಳು ಬಾರೀ ಪ್ರತಿಭಟನೆ ನಡೆಸಿ ಕರ್ನಾಟಕ ಬಂದ್ ಮಾಡಿದರು.
ಈ ಕುರಿತಾಗಿ ಸುಗ್ರಿವಾಜ್ಞೆಯನ್ನು ಹೊರಡಿಸಬೇಕೆಂದು ' ಹಕ್ಕೊತ್ತಾಯ'
ಮಾಡಿದರು.
                   ಈ ವಿಚಾರ ಸದನದಲ್ಲಿ ಚರ್ಚೆಯಾಯಿತು.ಕೆಲಸವಿಲ್ಲದೇ
ಕುಳಿತಿದ್ದ ವಿರೋಧ ಪಕ್ಷದ ನಾಯಕರು ಸದನದ ಬಾವಿಗಿಳಿದು
ಪ್ರತಿಭಟಿಸಿದರು.ಬರಗಾಲ ಬಂದಿದ್ದ ಕಾರಣ ಅಲ್ಲಿ ನೀರಿಲ್ಲವಾದ್ದರಿಂದ  ಅವರಿಗೆ ಏನೂ ತೊಂದರೆಯಾಗಲಿಲ್ಲ.ಊಟದರಾಮದ ವೇಳೆ ಅವರನ್ನು ಹಗ್ಗ
ಕೊಟ್ಟು ಮೇಲೆತ್ತಬೇಕಾಯಿತು.
                ಈ ಮಧ್ಯೆ ಮುಖ್ಯಮಂತ್ರಿ ಯ ಅಳಿಯನೇ ಆ ಚಿತ್ರದ
ನಿರ್ಮಾಪಕ ಆಗಿದ್ದರಿಂದ ಅವನಿಗೆ ಈ ವಿಚಾರ ನುಂಗಲೂ ಆಗದ,ಉಗುಳಲೂ ಆಗದ
ತುತ್ತಾಗಿ ಪರಿಣಮಿಸಿದೆ.ಸದನವನ್ನು ಸಭಾಪತಿಗಳು ಮಧ್ಯಾಹ್ನ
ನಾಲ್ಕು ಗಂಟೆಗೆ ಮುಂದೂಡಿದ್ದರಿಂದ ‘ಗಲಾಟೆ' ತಾತ್ಕಾಲಿಕ ಶಮನವಾಯಿತು.
        'ಇಲ್ಲಾದರೂ ಮಲಗುವ ಅಂತ ಬಂದರೆ ಅದಕ್ಕೂ ಬಿಡೋಲ್ವಲ್ಲ'
ಎಂಬ ಕೆಲವು ಲಾಸ್ಟ್ ಬೆಂಚ್ ಶಾಸಕರ ಧ್ವನಿ ಸದನದಲ್ಲಿ ಪ್ರತಿಧ್ವನಿಸಿತು.