ಕೆಲವು ವರ್ಷಗಳ ಹಿಂದೆ.........
ನಾನು ಕನ್ನಡದ ಸುದ್ದಿ ಪತ್ರಿಕೆ ಒಂದಕ್ಕೆ ಕೆಲಸ ಮಾಡುತ್ತಿದ್ದ ಕಾಲ. ಒಂದು ಭಾನುವಾರ ಮಧ್ಯಾಹ್ನ ಊಟ ಮಾಡಿ ಮಲಗಿ ಕಣ್ಮುಚ್ಚಿದ್ದಷ್ಟೆ, ಟೆಲಿಫೋನು ರಿಂಗಾಗಿತ್ತು. ಎತ್ತಿ ಮಾತಾಡಿದರೆ ಆ ಕಡೆಯಿಂದ ಗೆಳೆಯ ಗೊಪಿ. ಸ್ವಲ್ಪ ಅರ್ಜೆಂಟಿನಲ್ಲಿದ್ದ. ಒಂದು ಅಪರೂಪದ ಸುದ್ದಿ ಇದೆಯೆಂದೂ, ಇನ್ನೂ ಬೇರೆ ಯಾವುದೇ ಮಾಧ್ಯಮದವರಿಗೂ ಈ ವಿಚಾರ ತಿಳಿದಿಲ್ಲವೆಂದೂ ಮತ್ತು ನಾನು ಆದಷ್ಟು ಬೇಗ ಅವನು ಹೇಳುವ ಜಾಗಕ್ಕೆ ಹೋದಲ್ಲಿ ಒಂದು ಒಳ್ಳೆಯ ಸ್ಟೋರಿ ಕವರ್ ಮಾಡಬಹುದೆಂದು ಹೇಳಿದ. ಅದರ ನಂತರ ಅವನು ಕೊಟ್ಟ ವಿವರಗಳು ಅತ್ಯಂತ ಕುತೂಹಲಕಾರಿಯಾಗಿದ್ದವು. ಮೈಸೂರಿನ ಒಂದು ಹಳ್ಳಿಯ ಕಾಳಿಂಗ ಗೌಡ ಎಂಬವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಅವರ ಮನೆಯ ಪುಣ್ಯಕೋಟಿ ಎಂಬ ಹಸು ದೊಡ್ಡಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಅರ್ಭುತ ಎನ್ನುವ ಹುಲಿಯೊಂದು ಅದನ್ನು ಅಡ್ಡಗಟ್ಟಿ ತಿನ್ನುವುದಾಗಿ ಹೇಳಿತಂತೆ, ಆಗ ಪುಣ್ಯಕೋಟಿಯು ತನಗೆ ಮನೆಯಲ್ಲಿ ಚಿಕ್ಕ ಕರುವಿದೆ, ಅದಕ್ಕೆ ಹಾಲು ಕುಡಿಸಿ ಮತ್ತೆ ನಿನ್ನಲಿಯೇ ಬರುತ್ತೇನೆ, ಆಗ ನೀನು ನನ್ನನ್ನು ತಿನ್ನಬಹುದು, ಈಗ ಹೋಗಲು ಅವಕಾಶ ಕೊಡು ಎಂದು ಬೇಡಿಕೊಂಡಿತಂತೆ, ಈ ಮಾತನ್ನು ನಂಬಿದ ಹುಲಿ ಪುಣ್ಯಕೋಟಿಯನ್ನು ಬಿಟ್ಟು ಕಳುಹಿಸಿತಂತೆ. ಇಷ್ಟಕ್ಕೆ ಮುಗಿದಿದ್ದರೆ ಕಥೆಯನ್ನು ಜಾಣ ಹಸು ಎಂದೋ, ಮೂರ್ಖ ಹುಲಿ ಎಂದೋ ಕರೆದುಬಿಡಬಹುದಿತ್ತು ಆದರೆ, ಕಥೆಗೆ ಟ್ವಿಸ್ಟು ಬರುವುದೇ ಇಲ್ಲಿ. ಕರುವಿಗೆ ಹಾಲು ಕುಡಿಸಿದ ಪುಣ್ಯಕೋಟಿ, ತಾನು ಹೀಗೆ ಹುಲಿಗೆ ಮಾತು ಕೊಟ್ಟು ಬಂದಿರುವುದರಿಂದ ಹೋಗುತ್ತಿದ್ದೇನೆ ಮತ್ತು ನನ್ನ ಕರುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಅದರ ಸ್ನೇಹಿತೆಯರಾದ ಗಂಗೆ, ಗೌರಿ ಮುಂತಾದವರ ಬಳಿ ಕೇಳಿಕೊಂಡು ವಾಪಸ್ ಹುಲಿಯ ಬಳಿ ಹೊರಟು ಹೋಗಿದೆ. ಆಮೇಲೆ ಏನಾಗಿದೆ ಗೊತ್ತಿಲ್ಲ, ಪುಣ್ಯಕೋಟಿ ಮಧ್ಯರಾತ್ರಿಯ ಹೊತ್ತಿಗೆ ದೊಡ್ಡಿಗೆ ಹಿಂದಿರುಗಿದೆ. ಹಾಗೆ ಬರುವಾಗ ಅದು ವಿಪರೀತ ಭಯಕ್ಕೆ ಮತ್ತು ಮಾನಸಿಕ ಅಸಮತೋಲನಕ್ಕೆ ಒಳಗಾಗಿದೆ, ಏನಾಯಿತು ಎಂದು ಸ್ನೇಹಿತೆಯರು ಮತ್ತೆ ಮತ್ತೆ ಒತ್ತಾಯಿಸಿ ಕೇಳಿದಾಗ ಅರ್ಭುತ ಹಾರಿ ನೆಗೆದು ಪ್ರಾಣ ಬಿಟ್ಟ ವಿಚಾರವನ್ನು ಹೇಳಿದೆ. ಯಾಕೆ ಎಂದು ಕೇಳಿದರೆ ಉತ್ತರವಿಲ್ಲ. ಮರುದಿನ ಬೆಳಿಗ್ಗೆ ವಿಚಾರ ಕಾಳಿಂಗನಿಗೆ ತಿಳಿದಿದೆ, ಅವನು ನಮ್ಮ ಗೋಪಿಯ ಸಂಭಂದಿ, ಇವನಿಗೆ ಫೋನು ಮಾಡಿ ವಿಚಾರ ತಿಳಿಸಿ ಮುಂದೆ ಏನು ಮಾಡಬಹುದು ಎಂದು ಕೇಳಿದಾಗ ಕೂಡಲೇ ಪೋಲಿಸರಿಗೆ ವಿಚಾರ ತಿಳಿಸಬೇಕೆಂದೂ ಮತ್ತು ಯಾವುದೇ ಮಾಧ್ಯಮಕ್ಕೂ ವಿಷಯ ತಿಳಿಯದಂತೆ ನೋಡಿಕೊಳ್ಳಬೇಕೆಂದೂ, ಒಂದು ವೇಳೆ ಗೊತ್ತಾದರೆ, ಪುಣ್ಯಕೋಟಿಯ ಜೀವನ ಬಹಳ ಕಷ್ಟವಾಗಿ ಹೋಗುತ್ತದೆಯೆಂದು ಹೇಳಿದ್ದನಾದರೂ ಅದರ ಉದ್ದೇಶ ನನಗೆ ಉಪಕಾರ ಮಾಡುವುದಾಗಿತ್ತು.
ನಾನು ಮತ್ತು ನನ್ನ ಒಬ್ಬ ಸಹೋದ್ಯೋಗಿ ಮಿತ್ರ ಕಾಳಿಂಗನ ಮನೆ ತಲುಪುವ ಹೊತ್ತಿಗೆ ಸುಮಾರು ರಾತ್ರಿ ಎಂಟು ಗಂಟೆ. ಕಾಳಿಂಗನನ್ನು, ಪುಣ್ಯಕೋಟಿಯನ್ನು ಮಾತನಾಡಿಸಿ ವಿಚಾರ ತಿಳಿದುಕೊಂಡು ಬರುವ ಉದ್ದೇಶದಿಂದಷ್ಟೇ ನಾವಲ್ಲಿಗೆ ಹೋದದ್ದಾದರೂ ನಮ್ಮ ಆ ಪ್ರಯಾಣ ಎಂತಹ ದೊಡ್ಡ ಸಾಹಸವಾದೀತು ಎನ್ನುವ ಕಲ್ಪನೆಯೂ ನನಗೆ ಇರಲಿಲ್ಲ.
ಗೋಪಿಯ ಹೆಸರು ಹೇಳಿದಮೇಲೆ ಕಾಳಿಂಗ ನಮ್ಮನ್ನು ಮನೆಯೊಳಗೆ ಕರೆದುಕೊಂಡು ಅವನಿಗೆ ಗೊತ್ತಿರುವಷ್ಟು ವಿಚಾರಗಳನ್ನು ಹೇಳಿದ, ಅದರಲ್ಲಿ ನಮಗೆ ತಿಳಿದಿರುವುದಕ್ಕಿಂತ ಹೆಚ್ಚೇನೂ ಇರಲಿಲ್ಲ. ನಾನು ಅರ್ಭುತ ಆತ್ಮಹತ್ಯೆ ಮಾಡಿಕೊಂಡ ಜಾಗಕ್ಕೆ ನಮ್ಮನ್ನು ಕರೆದೊಯ್ಯುವಂತೆ ಕೇಳಿದಾಗ ಅದು ಕಾಡಿನ ಒಳಭಾಗದಲ್ಲಿದೆಯೆಂದೂ, ಪೋಲಿಸರೇ ಅಲ್ಲಿಗೆ ನಾಳೆ ಹೋಗುತ್ತಾರೆಂದೂ, ನಾವೂ ನಾಳೆಯೇ ಹೋಗೋಣ ಎಂದು ಹೇಳಿದಾಗ ನಾವು ಒಪ್ಪಲೇ ಬೇಕಾಯಿತು. ಆ ದಿನ ರಾತ್ರಿ ಕಾಳಿಂಗನ ಮನೆಯಲ್ಲೇ ನಾವು ಊಟಮಾಡಿ ಮಲಗಿದೆವು.
************
ನಾವು ಮರುದಿನ ಬೆಳಿಗ್ಗೆ ಸ್ಥಳಕ್ಕೆ ಹೋಗುವಷ್ಟರಲ್ಲೇ ಬಿಸಿಲು ಏರಿತ್ತು. ಕಾಳಿಂಗನ ಮನೆಯಿಂದ ಬೇಗನೆ ಹೊರಟೆವಾದರೂ ಕಾಡಿನ ಹಾದಿಯಲ್ಲಿ ಬೆಟ್ಟಗಳನ್ನು ಏರಿಳಿಯುತ್ತಾ ನಡೆಯುವಷ್ಟರಲ್ಲಿ ಹೊತ್ತು ಏರಿತ್ತು. ಅಷ್ಟರಲ್ಲಾಗಲೇ ಕೆಲವು ಪೋಲಿಸರು, ಗ್ರಾಮಸ್ಥರು ಅಲ್ಲಿದ್ದರು. ಅರ್ಭುತನ ಕಡೆಯಿಂದ ಅಕ್ರೂರ ಎನ್ನುವ ಆತನ ಒಬ್ಬ ಸ್ನೇಹಿತನನ್ನು ಹೊರತುಪಡಿಸಿ ಮತ್ಯಾರೂ ಇರಲಿಲ್ಲ. ಅಲ್ಲಿದ್ದ ಒಬ್ಬ ಪೋಲಿಸ್ ಅಧಿಕಾರಿಯ ಬಳಿ ಮಾತಾಡಿದಾಗ ಅರ್ಭುತನ ಕುಟುಂಬಸ್ಥರಿಗೆ ಇನ್ನೂ ವಿಚಾರ ತಿಳಿಸಿಲ್ಲ ಎಂದು ಹೇಳಿದ. ಅಕ್ರೂರ ವಿಷಯವನ್ನು ತಿಳಿಸುವುದಕ್ಕೆ ಅರ್ಭುತನ ಮನೆಗೆ ಹೊರಟಿದ್ದಾನೆ ಎಂದು ತಿಳಿಯಿತು. ಅವನ ಜೊತೆ ಹೋದರೆ ಅವನ ಮನೆಯವರನ್ನು ಮಾತಾಡಿಸಿ, ದಾರಿಯಲ್ಲಿ ಅವನ ಜೊತೆಯಲ್ಲಿ ಮಾತಾಡಿ ಅರ್ಭುತನ ಕುರಿತಾಗಿ ಇನ್ನೂ ಹೆಚ್ಚು ವಿಷಯಗಳನ್ನು ತಿಳಿದುಕೊಂಡು ಒಂದು ಆಸಕ್ತಿಕರವಾದ ಲೇಖನ ಬರೆಯಬಹುದು ಎಂದು ಬಲವಾಗಿ ಅನಿಸಿತು. ನನ್ನ ಸಹೋದ್ಯೋಗಿಯ ಬಳಿ ಅಲ್ಲಿನ ಆಗುಹೋಗುಗಳನ್ನು ಸರಿಯಾಗಿ ಗಮನಿಸಿಕೋಳ್ಳುವಂತೆ ಹೇಳಿ ನಾನು ಅಕ್ರೂರನೊಡನೆ ಅರ್ಭುತನ ಮನೆಯತ್ತ ಹೊರಟೆ.
ಅಕ್ರೂರನಿಗೆ ಅರ್ಭುತನ ಸಾವಿನಿಂದ ವಿಪರೀತ ಆಘಾತವಾದದ್ದು ಸ್ಪಷ್ಟವಿತ್ತು. ಅವನ ಮಾತಿನಲ್ಲೇ ಅದು ತಿಳಿಯುತ್ತಿತ್ತು. ಸ್ವಭಾವತಃ ಸ್ವಲ್ಪ ಹೆಚ್ಚೇ ಮಾತುಗಾರನಾಗಿದ್ದ ಅಕ್ರೂರ ನನ್ನೊಂದಿಗೆ ಒಂದೇ ಸಮನೆ ಮಾತಾಡತೊಡಗಿದ. ಆತ ಮತ್ತು ಅರ್ಭುತ ಬಾಲ್ಯ ಸ್ನೇಹಿತರಾಗಿದ್ದರು. ಒಟ್ಟಿಗೆ ಬೇಟೆಯಾಡಲು ಕಲಿತವರು.
ಅರ್ಭುತನ ಮದುವೆಯ ಹಿಂದೆ ಒಂದು ಕತೆಯಿತ್ತು. ಅರ್ಭುತ ಅವನ ಹೆಂಡತಿ ಕಾಳಿಯನ್ನು ಮೊದಲು ಭೇಟಿಯಾದದ್ದೇ ಆಕೆಯ ನಿಶ್ಚಿತಾರ್ಥದಲ್ಲಾಗಿತ್ತು, ಎಂದರೆ ಕಾಳಿ ಬೇರೆಯೊಬ್ಬನಿಗೆ ನಿಶ್ಚಯವಾದ ಹೆಣ್ಣು, ಆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲೇ ಅವರಿಬ್ಬರು ಪರಸ್ಪರ ನೋಡಿಕೊಂಡಿದ್ದರು, ಕಾಳಿಗೂ ಅರ್ಭುತ ಇಷ್ಟವಾಗಿದ್ದ. ಹಾಗಾಗಿ ನಿಶ್ಚಯವಾದ ಮದುವೆ ಮುರಿದು ಬಿದ್ದಿತ್ತು. ಮನೆಯವರ, ಊರಿನವರ ವಿರುದ್ಧವಾಗಿ ಅವರಿಬ್ಬರೂ ಮದುವೆಯಾಗಿದ್ದರು. ಇದಾದಮೇಲೆ ಊರಿನವರ ಮತ್ತು ಅರ್ಭುತನ ಕುಟುಂಬಕ್ಕೂ ಸಂಪರ್ಕ ಬಹಳ ಕಡಿಮೆಯಾಗಿತ್ತು. ಅರ್ಭುತ ಹೀಗೆ ಬೇರೆಯವನಿಗೆ ನಿಶ್ಚಯವಾಗಿದ್ದ ಹೆಣ್ಣನ್ನು ಮದುವೆಯಾದದ್ದು ಅಕ್ರೂರನಿಗೂ ಸರಿ ಎನಿಸಿರಲಿಲ್ಲ ಹಾಗಾಗಿ ಅವನೂ ಅರ್ಭುತನೊಂದಿಗಿನ ಸ್ನೇಹವನ್ನು ಸ್ವಲ್ಪ ಕಡಿಮೆ ಮಾಡಿದ್ದ.
ನನಗೆ ಇಂತಹ ಅರ್ಭುತನ ಬದುಕು ಹೇಗೆ ಸಾಗುತ್ತಿದ್ದಿರಬೇಕೆಂದು ಅಶ್ಚರ್ಯವಾಯಿತು. ಅದನ್ನೇ ಅಕ್ರೂರನ ಬಳಿ ಕೇಳಿದಾಗ ಅವನು ವಿಷಾದದ ನಗೆ ನಕ್ಕ. ಅವನು ಮುಂದೆ ಹೇಳಿದ ವಿಷಯ ಕೇಳಿ ನನಗೆ ಸತ್ತ ಅರ್ಭುತನ ಬಗ್ಗೆ ಕರುಣೆ ಮೂಡಿತು. ಹಾಗೆ ಮದುವೆಯಾದ ನಂತರ ಅರ್ಭುತ ಮತ್ತವನ ಹೆಂಡತಿ ತಮ್ಮ ತಮ್ಮ ಕುಟುಂಬಗಳಿಂದ ಸಂಪೂರ್ಣ ಹೊರಬಿದ್ದರಂತೆ, ಅದರಿಂದ ಕಾಳಿಗೆ ಅಂತಹ ದುಃಖವೇನೂ ಅಗದಿದ್ದರೂ, ತುಂಬು ಕುಟುಂಬದ ಪ್ರೀತಿಯಲ್ಲಿ ಬೆಳೆದ ಅರ್ಭುತನಿಗೆ ಇದರಿಂದ ಬಹಳ ವೇದನೆಯುಂಟಾಯಿತಂತೆ. ಇದರ ಜೊತೆಗೆ ಕಾಳಿ ಮಹತ್ವಾಕಾಂಕ್ಷೆಯ ಹೆಣ್ಣಾಗಿದ್ದಳು. ಅವಳಿಗೆ ಪ್ರತಿದಿನ ಎಳೆ ಜಿಂಕೆಯದ್ದೋ ಇಲ್ಲಾ ಬಲಿತ ಹಸುವಿನದ್ದೋ ಊಟವಾಗಬೇಕಿತ್ತು. ಆದರೆ ಪ್ರತೀದಿನ ಅವನ್ನು ಒದಗಿಸಲು ಅರ್ಭುತನಿಗೆ ಆಗದೇ ಹೋಯಿತು, ಇದರ ಜೊತೆಗೆ ಶಾಪವೋ ಎಂಬಂತೆ ಅವರಿಗೆ ವರ್ಷಗಳು ಕಳೆದರೂ ಮಕ್ಕಳು ಹುಟ್ಟಲಿಲ್ಲ. ಇದರಿಂದಲೂ ಅರ್ಭುತ ಬಹಳ ನೊಂದುಹೋಗಿದ್ದ. ಕಾಳಿಯೂ ಅವನನ್ನು ಅಲಕ್ಷಿಸತೊಡಗಿದ್ದಳು. ಪ್ರತಿದಿನ ಮನೆಯಲ್ಲಿ ಒಂದಲ್ಲಾ ಒಂದು ಜಗಳ. ಇದರಿಂದ ಬೇಸತ್ತ ಅರ್ಭುತ ಮನೆಗೆ ಬರುವುದನ್ನೇ ನಿಲ್ಲಿಸಿ ಬೇರೆ ಗುಹೆಯಲ್ಲೇ ವಾಸಿಸತೊಡಗಿದ್ದ. ಆ ಗುಹೆಯ ಬಳಿಯಲ್ಲೇ ಆತ ಆತ್ಮಹತ್ಯೆ ಮಾಡಿಕೊಂಡದ್ದು.
******************
ಹೀಗೆ ಮಾತಾಡುತ್ತ ಅಕ್ರೂರ ಚಿಂತಿಸಬಹುದಾದ ವಿಷಯವೊಂದನ್ನು ಹೇಳಿದ. ಇದರ ಕುರಿತಾಗಿ ಓದುಗರೇ ಚಿಂತಿಸಿ ಒಂದು ಸೂಕ್ತ ಪರಿಹಾರ ಕೊಡಬಲ್ಲರೆಂದು ನನಗೆ ಅನಿಸಿತು. ಎಷ್ಟೇ ಬೇಸರದಲ್ಲಿದ್ದರೂ, ಅರ್ಭುತ ಮಾನಸಿಕವಾಗಿ ಬಹಳ ಸಧೃಢನಾಗಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವಂತಃ ಹೇಡಿ ಆಗಿರಲಿಲ್ಲ. ಅವನ ಜೊತೆಯಲ್ಲೇ ಬೆಳೆದು ದೊಡ್ಡವನಾದ ಅಕ್ರೂರನಿಗಂತು ಇದು ಆತ್ಮಹತ್ಯೆ ಎನ್ನುವುದರಲ್ಲಿ ಸ್ವಲ್ಪವೂ ವಿಶ್ವಾಸವಿರಲಿಲ್ಲ. ಅದನ್ನು ಹೇಳುತ್ತಲೇ ಈ ಚಿಂತನೀಯ ವಿಷಯವನ್ನವನು ನನ್ನ ಬಳಿ ಹೇಳಿದ್ದು. ಅವನಿಗೆ ಇದೊಂದು ಕೊಲೆ ಎಂದು ಬಲವಾದ ಸಂಶಯ. ಯಾವ ಜೀವಿಯಾದರೂ ತನ್ನ ಜೀವವನ್ನು ಅಪ್ರತಿಭವಾಗಿ ಪರರಿಗೆ ಒಪ್ಪಿಸಲು ಮುಂದಾಗುವುದಿಲ್ಲ, ತನ್ನದೆನ್ನುವ ಒಂದು ಚೆಂದದ ಸಂಸಾರವನ್ನು ಹೊಂದಿರುವ ಪುಣ್ಯಕೋಟಿ ಅದಕ್ಕೆ ಒಪ್ಪಿರುವುದಕ್ಕೆ ಹೇಗೆ ಸಾಧ್ಯ, ಅಂದರೆ ಅಕ್ರೂರನ ಪ್ರಕಾರ, ಅತಿಯಾದ ಆದರ್ಶಕ್ಕೆ ಒಳಗಾದ ಪುಣ್ಯಕೋಟಿ ಅರ್ಭುತನಿಗೆ ಆಹಾರವಾಗಲೆಂದು ಅವನ ಗುಹೆಯಬಳಿ ಬಂದಿದೆ, ಅರ್ಭುತನೂ ಹಲವು ದಿನಗಳ ನಂತರ ಹಸುವಿನ ಮಾಂಸವನ್ನು ತೆಗೆದುಕೊಂಡು ಕಾಳಿಯ ಬಳಿಯಲ್ಲಿ ಹೋಗುವ ಕನಸು ಕಂಡಿದ್ದನಿರಬೇಕು ಆದರೆ ಅರ್ಭುತನ ಗುಹೆಯ ಬಳಿಗೆ ತಲುಪುವಷ್ಟರಲ್ಲಿ ಪುಣ್ಯಕೋಟಿಯ ಆದರ್ಶ ಸವೆದುಹೋಗಿ ಬದುಕುವ ಆಸೆ ಬಲಿತು ನಿಂತಿದೆ. ಆ ಸಮಯಕ್ಕೇ ಅರ್ಭುತನೂ ಪುಣ್ಯಕೋಟಿಯನ್ನು ಕೊಲ್ಲಲು ಮುಂದಾಗಿದ್ದಾನೆ. ಪುಣ್ಯಕೋಟಿಯೂ ಅವನನ್ನು ತಡೆಯುವ ಪ್ರಯತ್ನ ಮಾಡಿದೆ. ಈ ಜಟಾಪಟಿಯಲ್ಲಿ ಅರ್ಭುತನನ್ನು ಹೆಚ್ಚು ಕಡಿಮೆ ಅವನಷ್ಟೇ ಬಲಿಷ್ಟಳಾದ ಪುಣ್ಯಕೋಟಿ ಪ್ರಪಾತಕ್ಕೆ ತಳ್ಳಿದ್ದಾಳೆ.
ಅಕ್ರೂರ ಹೀಗೆ ಹೇಳುವಾಗ ನಾನು ಪುಣ್ಯಕೋಟಿಯ ದೇಹವನ್ನು ನೆನೆದೆ. ಆದರೆ ನಾನಿನ್ನೂ ಅರ್ಭುತನನ್ನು ನೋಡಿರಲಿಲ್ಲ, ಆದರೆ ಅರ್ಭುತನೂ ಅಕ್ರೂರನಷ್ಟೇ ಬಲಿಷ್ಟನಾಗಿದ್ದ ಪಕ್ಷದಲ್ಲಿ ಅಕ್ರೂರ ಹೇಳಿದಂತೆ ನಡೆದಿರುವುದೂ ಸಾಧ್ಯವಿದೆ ಎನಿಸಿತು. ಪುಣ್ಯಕೋಟಿ ಮಾನಸಿಕವಾಗಿ ಅಷ್ಟು ಕುಗ್ಗಿ ಹೋದದ್ದಕ್ಕೂ, ತಾನು ಕೊಲೆಗಾರ್ತಿಯಾಗಿಹೋದೆನೆನ್ನುವ ಪಾಪಪ್ರಜ್ಞೆಯೇ ಕಾರಣವಾಗಿರಬಹುದೆಂದು ಊಹಿಸಿದೆ.
********************
ಸುಮಾರು ಎರಡು ತಾಸಿನ ಪ್ರಯಾಣದ ನಂತರ ನಾವು ಅರ್ಭುತನ ಮನೆ ತಲುಪಿದೆವು. ಮನೆಯಲ್ಲಿ ಕಾಳಿ ಒಬ್ಬಳೇ ಇದ್ದಳು. ಬಂದ ನನ್ನನ್ನು ಮತ್ತು ಅಕ್ರೂರನನ್ನು ಒಮ್ಮೆಗೆ ಕಂಡು ಸ್ವಲ್ಪ ಹೆಚ್ಚೇ ಮುಜುಗರಪಟ್ಟಳು. ಅಕ್ರೂರ ಯಾವುದೇ ಹಿಂಜರಿಕೆಯಿಲ್ಲದೆ ಅರ್ಭುತನ ಸಾವಿನ ಸುದ್ದಿ ಹೇಳಿದ, ಒಂದು ಕ್ಷಣ ದುಃಖದಲ್ಲಿ ಎಂಬಂತೆ ತಲೆ ಬಗ್ಗಿಸಿದಳು. ನಾಲ್ಕು ಹನಿ ಕಣ್ಣೀರೇನು ಅವಳ ಕಣ್ಣಿನಿಂದ ಉದುರಿದಂತೆ ನನಗೆ ಕಾಣಲಿಲ್ಲ. ಮರುಕ್ಷಣವೇ ಸಾವರಿಸಿಕೊಂಡು ನಮ್ಮ ಜೊತೆ ಹೊರಟು ನಿಂತಳು. ಸ್ತ್ರೀ ಸಹಜವಾದ ಅಲ್ಲ ಪತ್ನಿ ಸಹಜವಾದ ಯಾವ ಪ್ರಶ್ನೆಗಳನ್ನೂ ಆಕೆ ಕೇಳಲಿಲ್ಲ. ಅಕ್ರೂರನಲ್ಲಿ ಹೆಚ್ಚು ಮಾತನಾಡುವುದು ಆಕೆಗೆ ಇಷ್ಟವಿಲ್ಲ ಎಂಬುದು ಸ್ಪಷ್ಟವಿತ್ತು. ನಾವಿಬ್ಬರೂ ಕಾಳಿಯನ್ನು ಕರೆದುಕೊಂಡು, ಒಂದೂ ಮಾತಿಲ್ಲದೇ ಮತ್ತೆ ಎರಡು ತಾಸು ನಡೆದು ಅರ್ಭುತ ಸತ್ತ ಜಾಗಕ್ಕೆ ಹಿಂದಿರುಗಿದೆವು.
**********************
ನಾವು ಬರುವಷ್ಟರಲ್ಲಿ ಹೊತ್ತು ಇಳಿಯಹತ್ತಿತ್ತು. ಪೋಲಿಸರು ಅರ್ಭುತನ ಹೆಣವನ್ನು ಪ್ರಪಾತದಿದಂದ ಎತ್ತಿ ಬಯಲಿನಲ್ಲಿ ಮಲಗಿಸಿದ್ದರು. ನನ್ನ ಸಹೋದ್ಯೋಗಿ ಅವನ ಫೋಟೋಗಳನ್ನು ಅದಾಗಲೇ ತೆಗೆದುಕೊಂಡು ಹೊರಡಲು ಕಾದು ನಿಂತಿದ್ದ. ನಾನೂ ಹೋಗಿ ಅರ್ಭುತನ ಹೆಣ ನೋಡಿದೆ. ಅವನ ಮೈಮೇಲೆಲ್ಲಾ ಗಾಯವಾಗಿ ರಕ್ತ ಹರಿದು ಹೆಪ್ಪುಗಟ್ಟಿತ್ತು. ತಲೆ ವೇಗವಾಗಿ ಹೋಗಿ ಕಲ್ಲುಬಂಡೆಗೆ ಹೊಡೆದ ಪರಿಣಾಮ ಜೀವ ಹೋಗಿತ್ತು, ಸತ್ತ ಅರ್ಭುತನ ಕಣ್ಣಲ್ಲಿ ಅಪಾರವಾದ ವೇದನೆ ಮತ್ತು ಅಶ್ಚರ್ಯಗಳಿದ್ದವು.
ಹೆಣವನ್ನು ನೋಡಿದ ಕಾಳಿ ಅಷ್ಟೇನು ದುಃಖಿಸಲಿಲ್ಲ. ಅಕ್ರೂರ ಹೆಣವನ್ನು ಕಂಡು ಕಣ್ಣೀರು ಹಾಕಿಯಾನು ಎನ್ನುವ ನನ್ನ ನಿರೀಕ್ಷೆ ಸುಳ್ಳಾದದ್ದು ಕಂಡು ನನಗೇ ಅಚ್ಚರಿಯಾಯಿತು. ಪೋಲಿಸರು ಪೋಸ್ಟ್ ಮಾರ್ಟಮ್ಮಿಗೆ ಹೆಣ ತೆಗೆದುಕೊಂಡು ಹೋಗುತ್ತೇವೆಂದಾಗಲೂ ಕಾಳಿ ಮಾತಾಡಲಿಲ್ಲ. ಪೋಲಿಸರು ಹೆಣವನ್ನು ತೆಗೆದುಕೊಂಡು, ಕಾಳಿಯನ್ನೂ ಕರೆದುಕೊಂಡು ಠಾಣೆಗೆ ಹೋದರು. ಊರಿನವರೆಲ್ಲಾ ಅಷ್ಟೊತ್ತಿಗಾಗಲೇ ಹೋಗಿಯಾಗಿತ್ತು. ಕವಿಯುತ್ತಿದ್ದ ಕತ್ತಲೆಯಲ್ಲಿ ನಾನು, ನನ್ನ ಸಹೋದ್ಯೋಗಿ ಮತ್ತು ಅಕ್ರೂರ ಮಾತ್ರ ನಿಂತಿದ್ದೆವು.
ನಾನು ಅಕ್ರೂರನಿಗೆ ಧನ್ಯವಾದ ಹೇಳಿ, ಸಹೋದ್ಯೋಗಿಯೊಂದಿಗೆ ಮನೆಯತ್ತ ಹೊರಟೆ. ಕತ್ತಲಲ್ಲಿ ಅಕ್ರೂರನ ಮುಖದಲ್ಲಿ ಯಾವ ಭಾವನೆಯಿತ್ತೋ ತಿಳಿಯುವಂತಿರಲಿಲ್ಲ. ಬೆನ್ನು ಮಾಡಿ ಹೊರಟಿದ್ದ ನನ್ನನ್ನು ಅಕ್ರೂರ ಕರೆದು ನಿಲ್ಲಿಸಿದ. ಸಹೋದ್ಯೋಗಿಯ ಬಳಿ ಕಾಳಿಂಗನ ಮನೆಗೆ ಹೋಗಿ ಹೊರಡುವ ತಯಾರಿ ಮಾಡಿಕೊಳ್ಳುವಂತೆ ಹೇಳಿ ನಾನು ತಿರುಗಿ ಅಕ್ರೂರನ ಬಳಿ ಬಂದೆ.
ಅರ್ಭುತನನ್ನು ಪುಣ್ಯಕೋಟಿಯೇ ಕೊಂದಿರಬಹುದೆಂಬ ಅವನ ಶಂಕೆಯನ್ನು ಪೋಲಿಸರೂ ಗಂಭೀರವಾಗಿ ಪರಿಗಣಿಸುವಂತೆ ನಾನು ನನ್ನ ಪ್ರಭಾವವನ್ನು ಬಳಸಿ ಮಾಡಬೇಕೆಂದು ಕೇಳಿಕೊಂಡ. ನನ್ನ ಬಳಿ ಅಂತಹ ವಿಶೇಷ ಪ್ರಭಾವವೇನೂ ಇರದಿದ್ದರೂ ನಾನು ಆಗಲಿ ಎಂದೆ. ಬಹಳ ಹೊತ್ತಿನಿಂದ ಕೊರೆಯುತ್ತಿದ್ದ ಸಂಶಯವನ್ನು ಅಕ್ರೂರನಲ್ಲಿ ಕೇಳದೇ ಇರುವುದು ನನಗೆ ಸಾಧ್ಯವಾಗಲಿಲ್ಲ. ಆರ್ಭುತನ ಹೆಣ ನೋಡಿ ಒಂದು ಹನಿ ಕಣ್ಣೀರನ್ನು ಹಾಕಲಿಲ್ಲವಲ್ಲ ಯಾಕೆ? ನಿಮ್ಮ ನಡುವೆ ಇದ್ದದ್ದು ಯಾವ ಬಗೆಯ ಸ್ನೇಹ ಎಂದು ಕೇಳಿದೆ.
ಕಾಳಿ, ಸತ್ತ ಅರ್ಭುತನ ಹೆಂಡತಿಯೇ ಕಣ್ಣೀರು ಹಾಕಲಿಲ್ಲ, ಇನ್ನು ನಾನು ಯಾಕೆ ಹಾಕಿಯೇನು? ಎಂದು ಕೇಳಿದನಾದರೂ ಅವನಿಗೆ ಇನ್ನು ಸುಮ್ಮನಿರುವುದು ಸಾಧ್ಯವಿಲ್ಲ ಎನಿಸಿರಬೇಕು. ಮುಂದುವರಿದು ಮಾತಾಡಿದ,
"ಅದನ್ನು ಹೇಳದೇ ಹೋಗುವುದು ನನಗೆ ಸಾಧ್ಯವಿಲ್ಲ ಎನಿಸುತ್ತದೆ, ನಿಜ ಹೇಳಬೇಕೆಂದರೆ ಇದನ್ನು ಹೇಳಲೆಂದೇ ಹೊರಟಿದ್ದ ನಿಮ್ಮನ್ನು ಮತ್ತೆ ಕರೆದೆ" ಇಷ್ಟು ಹೇಳಿ ಅವನೊಂದುಕ್ಷಣ ಸುಮ್ಮನಾದ. ಏನೋ ಬಹಳ ಗಂಭೀರವಾದ ವಿಷಯವನ್ನು ಹೇಳಲೆಂದು ಅವನು ಸಿದ್ಧನಾಗುತ್ತಿರುವುದು ಸ್ಪಷ್ಟವಿತ್ತು, ಸಿದ್ಧನಾಗಿ ಮೌನವನ್ನು ಮುರಿದು ಆಡಿದ,
"ಅರ್ಭುತ ಕಾಳಿಯನ್ನು ಮೊದಲಸಾರಿ ನೋಡಿದ್ದು ನನ್ನದೇ ನಿಶ್ಚಿತಾರ್ಥದಲ್ಲಾಗಿತ್ತು."