ಹೋದಬಾರಿ ಬಂದಾಗ ಹ್ಯಾಗಿತ್ತೋ ಹಾಗೇ ಇದೆ ಊರು,ಮಲಗಿ. ಪೇಟೆಯಿಂದ ರಾತ್ರಿ ಬಸ್ಸು ಹತ್ತಿದರೆ ಊರು ಮುಟ್ಟುವ ಹೊತ್ತೀಗೆ ಬೆಳಗಿನ ಜಾವ. ಬಸ್ಸು ಇಳಿದವನೇ ಸರಸರ ನಡೆಯಲು ಶುರು ಮಾಡಿದೆ.
ಸುಮಾರು ಮೂರ್ನಾಲ್ಕು ಮೈಲೇ ನಡೆಯಬೇಕೇನೊ! ಒಳದಾರಿ ಹಿಡಿದರೆ ಅರ್ಧ ದೂರ.
ಒಳದಾರಿ ಸ್ಮಶಾನವನ್ನು ಹೊಕ್ಕು, ಹುಲ್ಲಿನ ಬೇಣವನ್ನು ದಾಟಿ, ಹೆಗಡರ ಹನ್ನೆರಡೆಕರೆ ತೋಟದ ಮೂಲಕ ನಮ್ಮ ಮನೆ ಸೇರುತ್ತದೆ.
ಕತ್ತಲು ಪೂರ್ತಿ ಇಳಿದಿರಲಿಲ್ಲ. ಅಲ್ಲೇ, ಒಂದು ಅಶ್ವತ್ಥ ಕಟ್ಟೆ ಇತ್ತು. ಅಲ್ಲೇ ಕಾಲುಚಾಚಿದೆ. ಹಳೆಯದ್ದೆಲ್ಲ ಒಮ್ಮೆ ನೆನಪಾಯ್ತು.
ಆ ದಿನ. ನಾನೂ ಅವಳೂ, ಅಪ್ಪನ ಮುಂದೆ ಹೋಗಿ ನಿಂತೆವು.ಅಪ್ಪ ದುರುದುರನೆ ನೋಡಿದ. ಅವನ ಕಣ್ಣಲ್ಲೆ ಬೆಂಕಿ ಕಂಡಂತಾಯಿತಲ್ಲ! ಆ ಬೆಂಕಿ ಧಗಧಗಧಗನೆ ಉರಿದು, ಅವನ ಕಣ್ಣಲ್ಲೆಲ್ಲಾ ಹರಡಿ ನಂತರ ತಲೆ ಪೂರ್ತಿ ಬೆಂಕಿಯಾಗಿ, ನಂತರ ದೇಹ ಹೊತ್ತಿ ಉರಿದು ನಂತರ ಅವನು ಕೂತಿದ್ದ ಕುರ್ಚಿಗೆ ಹತ್ತಿ ಅದಕ್ಕೆ ಜೀವ ಬಂದು ಅದು ಧಗಧಗಿಸಿ ಕೈಕಾಲುಗಳು ಬೇರೆಯಾಗಿ ಮನೆಯನ್ನೆಲ್ಲಾ ಪಸರಿಸಿ ನನ್ನನ್ನೂ,ಅವಳನ್ನೂ ನಾಲಕ್ಕೂ ದಿಕ್ಕಿನಿಂದ ಸುತ್ತುವರಿದು ಅಲ್ಲಿ ನಾವು ಒಂದಾದಂತೆ ನಂತರ ಆ ಬೆಂಕಿ ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿ ಮರ ಮಟ್ಟು ಹಟ್ಟಿ ಮನೆಗಳಿಗೆಲ್ಲಾ ಹೊತ್ತಿ ಊರಿಗೆ ಊರೇ ಭಸ್ಮವಾದಂತೆ ತೋರಿತಲ್ಲ!
ಅವನ ಕಣ್ಣು ಕಂಡಕೂಡಲೆ ನನಗೆ ತಿಳಿದಿತ್ತಲ್ಲ, ಅಪ್ಪ ಒಪ್ಪುವುದಿಲ್ಲ ಎಂದು, ಆದರೆ, ಅವಳ ಹೊಟ್ಟೆಗಿಂತ ದೊಡ್ಡದು ಬೇರೇನೂ ನನಗೆ ಕಾಣಲಿಲ್ಲ.
ಅಪ್ಪ ಮಾತೇ ಆಡಲಿಲ್ಲ.ಎಷ್ಟು ಹೊತ್ತು ನಾವು ಜಗುಲಿಯ ಮೇಲೆ ಕೂತಿರಲಿಲ್ಲ. ಊಹೂಂ. ಮಾತೇ ಇಲ್ಲ. ಇನ್ನೇನು ಹೊರಡುವಾಗಿ ' ಜಾತಿಗೆಟ್ಟವನು ಮತ್ತೆ ಈಕಡೆ ಬಂದ್ರೆ ಹುಷಾರು' ಅಂದ!
ಆಗ ಮುಖ ತಿರುಗಿಸಿದವನು! ಈಗ ಮತ್ತೆ ಇತ್ತಕಡೆ ನೋಡಿದ್ದು, ಐದು ವರ್ಷ!
ಬೆಳಕು ಹರಿಯಿತು. ನಾಲ್ಕಾರು ಜನ ಅದು ಇದು ಮಾತಾಡುತ್ತಾ ಬಂದು ನನ್ನನ್ನು ನೋಡದೇ ಅಥವಾ ಅಂತೇ ಹೋದರು. ಎದ್ದು ಹೆಜ್ಜೆ ಹಾಕಿದೆ.
ದೂರದಲ್ಲಿ ಮನೆ ಕಂಡಿತು. ಎದುರಿಗೆ ಕಡುಮಾಡು ಹೊಸತು ಮಾಡಿಸಿದ್ದಾನೆ ಅಪ್ಪ. ಸರಸರನೆ ನಡೆದೆ. ಐದು ವರ್ಷದ ಹಿಂದೆ ನಾನು ಇಲ್ಲಿಂದ ಹೋಗುವಾಗ ಹೀಗೆ ಇತ್ತಾ? ನೆನಪಾಗಲಿಲ್ಲ.
ಬಾಗಿಲು ತೆಗೆದೇ ಇತ್ತು. ಹೊರಗೇ ನಿಲ್ಲುವ ಅನಿವಾರ್ಯತೆಯೇನೂ ಕಾಣಲಿಲ್ಲ,ಒಳಗೇ ಹೋಗಿ ಕೂತೆ.
ಅಪ್ಪ ಎದ್ದಂತಿಲ್ಲ. ಅಮ್ಮ ಎದ್ದಿದ್ದರೂ ಹೊರಗೆ ಬಂದಿರಲಿಲ್ಲ, ಒಳಗೆ ಹೋಗುವ ಧಿಮಾಕು ನನಗಿರಲಿಲ್ಲ,ನನ್ನದೇ ಮನೆಯಲ್ಲಿ ಪರಕೀಯನಾಗಿ ಕುಳಿತೆ.
ಸುಮಾರು ಐದು ನಿಮಿಷದ ನಂತರ ಅಪ್ಪ ಪಂಜಿ ಸುತ್ತಿಕೊಳ್ಳುತ್ತಾ ಹೊರಗೆ ಬಂದ. ನನ್ನನ್ನ ನೋಡಿದವನು ಬೇರೇನೂ ಮಾಡಲಿಲ್ಲ, ನೇರವಾಗಿ ನನ್ನ ಹತ್ತಿರಬಂದು ಕತ್ತಿನ ಪಟ್ಟಿ ಹಿಡಿದು ದರದರನೆ ಎಳೆದುಕೊಂಡು ಹೋಗಿ ಬಾಗಿಲಿನ ಹೊರಗೆ ದೂಡಿದ. ನಾನು ಹೋಗಿ ಬಿದ್ದೆ. ' ಜಾತಿ ಬಿಟ್ಟವರೆಲ್ಲ ಮನೆ ಒಳಗೆ ಬರೋಕ್ ಶುರುವಾದ್ರು' ಎಂದ ಥೂ ಎಂದು ನನ್ನ ಎದುರೇ ಉಗಿದ. ಒಳಗೆ ಹೋಗಿಬಿಟ್ಟ. ಅಮ್ಮ ದೂರದಿಂದಲೇ ನೋಡಿದಳು, ಏನೂ ಮಾತಾಡಲಿಲ್ಲ!
ನಾನೂ ಎದ್ದೆ, ಎದ್ದವನು ಒಂದೇಸಮನೆ ಓಡಲು ಶುರುಮಾಡಿದೆ. ಗಾಳಿಗಿಂತ ವೇಗವಾಗಿ ಓಡಿದ್ದೆನೇನೊ! ಓಡುವಾಗಿ ಒಂದೆರಡುಕಡೆ ಬಿದ್ದು- ಎದ್ದು ಆಡಿದೆ. ಮುಖ ಒಂದೆರಡುಕಡೆ ಗಾಯವಾಗಿತ್ತು. ಬಟ್ಟೆ ನಾಲ್ಕಾರುಕಡೆ ಹರಿದುಹೋಗಿತ್ತು. ಬಸ್ಟ್ಯಾಂಡಿಗೆ ಹೋಗುವವರೆಗೆ ಥೇಟ್ ಹುಚ್ಚನಂತಾಗಿದ್ದೆ.
ಕೂತು ಸಾವರಿಸಿಕೊಳ್ಳುತ್ತಿದ್ದಾಗೆ ಮೋಟರ್ ಬೈಕೊಂದು ಬಂದು ನಿಂತಿತು, ಚಿಕ್ಕಪ್ಪ.
'ಬೇಜಾರಾಗ್ಬೇಡ, ನಿನ್ನಪ್ಪ ಹಾಗೇ' ಎಂದ. ಮಗನಾಗಿ ನನಗಿಂತ ಅವನಿಗೆ ಜಾಸ್ತಿ ಗೊತ್ತಿದ್ದಿತ್ತು. ನಾನು ಒಂದೂ ಮಾತಾಡಲಿಲ್ಲ.
' ನೀನೂ ಆದಿನ ಮಾಡಿದ್ದು ತಪ್ಪೇ' ನಾನು ಅವಳ ಜೊತೆ ಹೋದಬಗ್ಗೆ ಹೇಳಿದ್ದ. ನನಗೂ ಈಗ ಕೋಪ ಬಂತು, 'ಪ್ರೀತಿ ಪ್ರೇಮ ಅಂದರೆ ನಿಂಗೆಂತ ಗೊತ್ತು'.
'ನಾನೂ ಪ್ರೀತಿಸಿಯೇ ಮದುವೆಯಾದದ್ದು, ನಿನ್ನ ಹಾಗೇ ಬೇರೆ ಜಾತಿಯವಳೇ, ನಿನ್ನಪ್ಪನೇ ನಿಂತು ಮದುವೆ ಮಾಡಿಸದ್ದು'
ನನ್ನಪ್ಪನಾ? ಬೇರೆ ಜಾತಿಯವಳನ್ನು ಮದುವೆಯಾದದ್ದಕ್ಕೆ ಐದು ವರ್ಷಗಳ ನಂತರ ಬಂದ ಮಗನನ್ನೇ ಹೊರಹಾಕಿದ ಅಪ್ಪ, ಅವನ ತಮ್ಮನಿಗೆ ಅಂತರ್ಜಾತಿ ಮದುವೆ ಮಾಡಿಸಿದ್ದನಾ?
ಅವನೇ ಮುಂದುವರಿಸಿದ. ' ಮದುವೆಯಾಗಿ ಒಂದೇ ವಾರಕ್ಕೆ ಊರಿಗೆ ಪ್ಲೇಗು ಬಂತು. ಅವಳೂ ಹೋದಳು, ನಮ್ಮಪ್ಪ, ಅಮ್ಮ ಹೋದದ್ದೂ ಆಗಲೇ'
' ಅವಳು ಬಂದದ್ದಕ್ಕೇ ಹಾಗಾಯಿತು ಅಂದುಕೊಂಡ ನಿನ್ನಪ್ಪ, ಆ ದಿನದಿಂದ ನನ್ನ ಹತ್ತಿರ ಒಂದೂ ಮಾತಾಡಿಲ್ಲ'
ಅವನೂ ಬಹಳ ಹಿಂದೆ ಹೋಗಿದ್ದ. ಚಿಕ್ಕಪ್ಪನಿಗೆಮದುವೆಯಾಗಿದ್ದ ವಿಷಯ ಆ ಘಳಿಗೆಯ ವರೆಗೂ ಗೊತ್ತಿಲ್ಲ!
ಅಪ್ಪನನ್ನ ಪೂರ್ತೀ ವಿರೋಧಿಸುವುದೂ ಹೇಗೆ?
ಸ್ವಲ್ಪ ಹೊತ್ತು ನಾವಿಬ್ಬರೂ ಮಾತಾಡಲಿಲ್ಲ. ನಾನೇ ಕೇಳಿದೆ ' ನನ್ನಪ್ಪನೆಗಲ್ಲ ಈ ಜಾತಿಯ ಸಂಕೊಲೆಯಿಂದ ಬಿಡುಗಡೆ ಯಾವಾಗ ಚಿಕ್ಕಪ್ಪ?'
ಬಹಳ ಹೊತ್ತು ಅವನೂ ಯೋಚಿಸಿದನಿರಬೇಕು ಹೇಳಿದ ' ಮಾಣಿ, ನಿನ್ನಪ್ಪನಿಗೋ ಅಂತವರಿಗೋ ಅಲ್ಲಾ, ನಮ್ಮ ಹಳ್ಳಿಗಳಿಗೂ ಜಾತಿ ಸಂಕೋಲೆಯಲ್ಲ, ವಸ್ತ್ರ ಇದ್ದಾಗೇ, ಅದನ್ನು ಕಳಚಿದರೆ ನಾವು ಬೆತ್ತಲಾಗಿಬಿಡುತ್ತೇವೆ, ನಿಮಗೆ ಹಾಗಲ್ಲ, ಬಟ್ಟೆ ಕಡಿಮೆಯಾದಷ್ಟೂ ನಿಮಗೆ ಫ್ಯಾಷನ್' ಬಹಳ ದೊಡ್ಡ ನಗಯೊಂದನ್ನು ನಕ್ಕು ಸುಮ್ಮನಾದ.
'ಅದು ಬಿಡು ಹೆಂಡತಿಯನ್ನು ಕರಕೊಂಡು ಬರಲಿಲ್ವ? ಎಲ್ಲಿ ಅಪ್ಪನ ಮನೆಯಲ್ಲಿದ್ದಾಳಾ?'
' ಇಲ್ಲ ಚಿಕ್ಕಪ್ಪ ಮೊದಲ ಹೆರಿಗೆಯಲ್ಲೇ ಅವಳೂ, ಮಗು ಇಬ್ಬರೂ ಹೋಗಿಬಿಟ್ಟರು'
ದೂರದಲ್ಲಿ ಬಸ್ಸು ಬಂದ ಶಬ್ಧ ಕೇಳಿಸಿತು.