ನಾಲ್ಕುವರೆ ವರ್ಷಗಳ ನಂತರದ ಮರು ಓದಿನ ಹೊತ್ತಿನಲ್ಲಿ ಉತ್ತರಕಾಂಡದ ಕುರಿತಾದ ಕೆಲವು ಟಿಪ್ಪಣಿಗಳಿವು. ರಾಮನು ಮಹಾವಿಷ್ಣುವಿನ ಅವತಾರ ಸೀತೆ ಮಹಾಲಕ್ಷ್ಮಿಯ ಅವತಾರ ಎನ್ನುವ ಭಕ್ತಿಭಾವವನ್ನು ಕೆಲಹೊತ್ತು ಕಳಚಿಡದ ಹೊರತು ಈ ಟಿಪ್ಪಣಿಗಳಿಗೆ ಅರ್ಥ ಬರುವುದಿಲ್ಲ.
1. ಕೃತಜ್ಞತೆ ಯಲ್ಲಿ ಭೈರಪ್ಪ ಹೇಳುವಂತೆ ಉತ್ತರಕಾಂಡ ವಾಲ್ಮೀಕಿ ರಾಮಾಯಣವನ್ನಾಧರಿಸಿದ ಲೇಖಕನ ನೇರ ಸೃಜನಶೀಲ ಪ್ರತಿಕ್ರಿಯೆಯೇ ಹೊರತು ವಾಲ್ಮೀಕಿ ರಾಮಾಯಣದ re-telling ಅಲ್ಲ ಮತ್ತು ಈ ವ್ಯತ್ಯಾಸ ಸೂಕ್ಮ್ಮವಾದದ್ದು. ಈ ಪ್ರತಿಕ್ರಿಯೆ ಎನ್ನುವ ಶಬ್ಧ ನೇರ 'ಪರ್ವ' ಕಾದಂಬರಿಯನ್ನುದ್ದೇಶಿಸಿದ್ದು. ವಾಲ್ಮೀಕಿ ರಾಮಾಯಣಕ್ಕೆ parallel ಆದ ಕೃತಿಯೊಂದನ್ನೂ ನಿರ್ಮಿಸ ಬಹುದಾದ ಸೃಜನಶೀಲ ಸ್ವಾತಂತ್ರ್ಯಕ್ಕೆ ಭೈರಪ್ಪ ಕೃತಜ್ಞತೆ ಯಲ್ಲೇ ಅಡಿಗಲ್ಲು ಹಾಕಿಕೊಂಡಿದ್ದಾರೆ.
2. ಸುಕೇಶಿ ರಾಮನ ಕುರಿತು ಸೀತೆಯಲ್ಲಿ ಸದಾ ಒಳ್ಳೆಯ ಮಾತುಗಳನ್ನೇ ಆಡುತ್ತಾಳೆ. 'ಭಾವಯ್ಯ ಚಿನ್ನದಂಥ ಮನುಷ್ಯ, ಒಂದೆರಡು ವರ್ಷ ಸುಮ್ಮನಿರು. ಅವರೇ ಇಲ್ಲಿಗೆ ಬಂದು ನಿನ್ನನ್ನು ಕರಕೊಂಡು ಹೋಗ್ತಾರೆ ನೋಡು' ಎನ್ನುತ್ತಾಳೆ. 'ಅವರ ಸ್ವಭಾವ ನಿನಗೆ ಗೊತ್ತಿಲ್ಲ' ಎನ್ನುವ ಸೀತೆಯ ಪ್ರತ್ಯುತ್ತರದ ಹಿಂದಿರುವ, ಆತ ಚಿನ್ನದಂಥ ಮನುಷ್ಯ ಆಗಿರುವುದಕ್ಕೇ ತನಗೆ ಈ ಸ್ಥಿತಿ ಬಂದಿರುವುದು ಮತ್ತು ಅದೇ ಕಾರಣಕ್ಕಾಗಿಯೇ ಆತ ತನ್ನನ್ನು ಬಂದು ಕರಕೊಂಡು ಹೋಗುವುದಿಲ್ಲ ಎನ್ನುವ ಪ್ರಾಮಾಣಿಕ ಭಾವ ಸುಕೇಶಿಗೆ ತಿಳಿಯುವುದಿಲ್ಲ.
3. ರಾಮನು ಸೀತೆಯನ್ನು ತ್ಯಜಿಸುವ ಹೊತ್ತಿಗೆ ಉದ್ಭವಿಸುವ ಪರಿಸ್ಥಿತಿ ಬಹಳ ಗೋಜಲಿನದ್ದು. ಮನುಷ್ಯ ಸಹಜವಾಗಿ ನೋಡಿದರೆ ಅಲ್ಲಿ ಯಾರಲ್ಲೂ ತಪ್ಪನ್ನು ಹುಡುಕುವಂತಿಲ್ಲ. ರಾಮಾಯಣದ ಬರವಣಿಗೆಗೆ ಸ್ಪೂರ್ತಿಯಾದ ನಿಷಾದನು ಹಕ್ಕಿಯನ್ನು ಕೊಂದು ಗಂಡು ಮತ್ತು ಹೆಣ್ಣು ಹಕ್ಕಿಗಳನ್ನು ಬೇರ್ಪಡಿಸುವಂತೆ. ಇಲ್ಲಿ ವಿಧಿಯೇ ನಿಷಾದ ರೂಪದಲ್ಲಿ ಬಂದಿದೆ, ಹಾಗಾದರೆ ಇದು ನಿಷಾದನ ತಪ್ಪೇ ಎಂದರೆ ಅಲ್ಲ. ಹಾಗೂ ಬೇರ್ಪಡಿಸುವುದೇ ಅವನ ಕರ್ಮ.
ರಾವಣನಂತಹ ರಾಕ್ಷಸನ ಅಧೀನದಲ್ಲಿದ್ದ ಸ್ತ್ರೀಯೊಬ್ಬಳು ದೈಹಿಕವಾಗಿ "ಪಾವಿತ್ರ್ಯ" ವನ್ನು ಉಳಿಸಿಕೊಂಡಿರಲು ಸಾಧ್ಯವೇ ಎಂಬ ಭಾವ ಜನಸಾಮಾನ್ಯರಲ್ಲಿ ಮೂಡುವುದು ಅಸಹಜವಲ್ಲ ಆದರೆ ಇದಕ್ಕೆ ರಾಮನ ಉತ್ತರ ಏನಿರಬೇಕಿತ್ತು? ಸೀತೆಯನ್ನು ಪರಿತ್ಯಜಿಸಿದರೆ ಏನರ್ಥ? ಜನರ ಮಾತನ್ನು ಪುರಸ್ಕರಿಸುವುದು ಬೇರೆ ಒಪ್ಪುವುದು ಬೇರೆ. ಇದನ್ನು ರಾಮ ಏಕೆ ಮರೆತ? ಸೀತೆಯನ್ನು ಮನಸಾ ಒಪ್ಪಿ ಗೌರವಿಸುತ್ತಿದ್ದ ಇನ್ನುಳಿದ ಪ್ರಜೆಗಳ ಭಾವನೆಗೆ ಬೆಲೆ ಇಲ್ಲವೆ?
4. "ನಿನಗೆ ರಾಮನ ಮೇಲೆ ಇದ್ದಷ್ಟು ಪ್ರೀತಿ ನನಗೆ ಲಕ್ಷ್ಮಣನ ಮೇಲೆ ಇರಲಿಲ್ಲವೇನೋ" ಎನ್ನುತ್ತಾಳೆ ಊರ್ಮಿಳೆ. ಆದರೆ, ಅವರಿಬ್ಬರ ಗಂಡಂದಿರ ಮೂಲ ಗುಣಗಳಲ್ಲೇ ಹೋಲಿಕೆ ಮಾಡಲಾರದಂತಹ ವ್ಯತ್ಯಾಸಗಳಿವೆ. ಇದೇ ವಾಕ್ಯವನ್ನೇ ಆಧಾರವಾಗಿಟ್ಟುಕೊಂಡಾಗ ಇನ್ನೊಂದು ಪ್ರಶ್ನೆ ಹುಟ್ಪುತ್ತದೆ. ಲಕ್ಷ್ಮಣನಿಗೆ ಊರ್ಮಿಳೆಯಲ್ಲಿರುವಷ್ಟು ಪ್ರೀತಿ ರಾಮನಿಗೆ ಸೀತೆಯಮೇಲಿರಲಿಲ್ಲವೇನೋ!
5. ಲಕ್ಷ್ಮಣನಿಗೆ ರಾಮನ ನಿರ್ಧಾರದ ಮೇಲೆ ಕೋಪವಿದೆ. ಆದರೆ, ಅದನ್ನು ವಿರೋಧಿಸುವ ಮತ್ತು ಆ ವಿರೋಧವನ್ನು ವ್ಯಕ್ತಪಡಿಸುವ ಸಾಮರ್ಥ್ಯ ಇಲ್ಲ. ರಾಮನ ಕುರಿತಾಗಿ ಅವನಲ್ಲಿರುವ ವಿಪರೀತ ಭಕ್ತಿ, ಗೌರವಗಳೂ ಅದಕ್ಕೊಂದು ಕಾರಣ ಇರಬಹುದು. ಲಕ್ಷ್ಮಣ ಅಯೋಧ್ಯೆಯನ್ನು ತೊರೆದದ್ದು ರಾಮನ ಮೇಲಿನ ಬೇಸರಕ್ಕಿಂತಲೂ, ರಾಮನನ್ನು, ಅವನ ನಿರ್ಧಾರವನ್ನು ಎದುರಿಸಲಾದ ತನ್ನ ಅಸಹಾಯಕತೆಯ ಮೇಲಿನ ಸಿಟ್ಟಿನಿಂದ ಮತ್ತು ಅಂತಹ ಅಸಹಾಯಕತೆಯನ್ನು ಸೃಷ್ಟಿಸುತ್ತಿರುವ ಬಂಧನಗಳ ಮೇಲಿನ ಸಿಟ್ಟಿನಿಂದ.
6. "ಪೆದ್ದಿ ನಿನಗೆ ಯಾವಾಗ ಅರ್ಥ ಆಗುತ್ತೆ? ಭಾರ ಹೊತ್ತು, ನೋವು ಉಂಡು, ಎದೆಯ ಶಕ್ತಿಯನ್ನು ಉಣ್ಣಿಸಿ ಸಾಕೋದೇ ಹೆಣ್ಣಿನ ಕರ್ತವ್ಯ, ಅಧಿಕಾರ ಅಪ್ಪನದು ಅಂತ ಶಾಸ್ತ್ರ ಹೇಳುತ್ತೆ, ಅವುಗಳ ಅಪ್ಪ ಬಿಟ್ಟಾನೆಯೇ?" - ಊರ್ಮಿಳೆ.
7. ಗೌತಮರು ಅಹಲ್ಯೆಯನ್ನು ತಾವು ಯಾರ ಎದುರಿನಲ್ಲಿ ತಜಿಸಿದ್ದರೋ ಅವರೆದುರಲ್ಲಿಯೇ ಸ್ವೀಕರಿಸಬೇಕೆಂದು ರಾಮ ಹೇಳುತ್ತಾನೆ. ಅಹಲ್ಯೆಯ ಪಾವಿತ್ರ್ಯವನ್ನು ಅಂಗೀಕರಿಸುವ ಸ್ಥಾನದಲ್ಲಿ ನಿಂತು ಗೌತಮರ ಲೋಕಕ್ಕೆ ಆಕೆಯನ್ನು ಸ್ವೀಕರಿಸುವುದಾಗಿ ಹೇಳಿದರೆ ಅವಳ ತಪ್ಪಿನ ಹೊರತಾಗಿಯೂ ಶುದ್ಧಿ ದೊರಕುತ್ತದೆ. ಎಂದರೆ, ಪಾತಿವ್ರತ್ಯದಂತಹ ವಿಚಾರದ ಕುರಿತು ಪ್ರಪಂಚ ಏನೇ ಮಾತಾಡಿದರೂ ಅದು ದಂಪತಿಗಳ ನಡುವಣ ವಿಚಾರ. ಪತಿಯಾದವನೇ ಪತ್ನಿಯನ್ನು ಒಪ್ಪಿದ ಮೇಲೆ ಪ್ರಪಂಚವೂ ಒಪ್ಪಬೇಕು.
ಇವು ಓದುತ್ತಾ ಅದರೊಟ್ಟಿಗೆ ನಾನು ಮಾಡಿಕೊಂಡ ಟಿಪ್ಪಣಿಗಳು. ಇದರ ನಂತರ ಓದುತ್ತಾ ಒಟ್ಟಿಗೇ ಹೀಗೆ ಬರೆಯುವುದು ಓದಿನ ಪೂರ್ಣಾನುಭವವನ್ನು ಕೊಡುವುದಿಲ್ಲ ಎಂದು ಹೀಗೆ ಟಿಪ್ಪಣಿ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ.
ಕಾದಂಬರಿಯನ್ನು ಪೂರ್ತಿ ಓದಿ ಮುಗಿಸುವ ಹೊತ್ತಿಗೆ ಲಕ್ಷ್ಮಣ ಮನಸ್ಸನ್ನು ಆವರಿಸಿಕೊಳ್ಳುತ್ತಾನೆ. ನಾನು ಓದಿದ ಕನ್ನಡ ಕಾದಂಬರಿಗಳಲ್ಲಿ ನನ್ನ ಮೆಚ್ಚಿನ ಪಾತ್ರ ಉತ್ತರಕಾಂಡದ ಲಕ್ಷ್ಮಣ. ನಿಜವಾಗಿಯೂ ಲಕ್ಷ್ಮಣ ಎಂಬುವವನಿದ್ದರೆ ಅವನು ಇಂತವನೇ ಆಗಿದ್ದನಿರಬೇಕು.
ರಾಮನನ್ನು ಹುಡುಕ ಹೊರಟಾಗ ಸೀತಿಯಿಂದ ಅವನೆದುರಿಸಿದ ಭರ್ತ್ಸನೆಯ ನುಡಿಗಳು, ಸೀತೆಯನ್ನು ಬಿಟ್ಟು ಬಂದುದಕಾಗಿ ಆತ ರಾಮನಿಂದ ತಲೆ ಬಗ್ಗಿಸಿಕೊಂಡು ಕೇಳಿದ ಮಾತುಗಳು, ಅಗ್ನಿ ಪ್ರವೇಶಕ್ಕೆ ಹೊರಟ ಸೀತೆಯ ರಟ್ಟೆ ಹಿಡಿದು ರಾಮನ ಕುರಿತು ಅವನಾಡುವ ಮಾತುಗಳು, ಸೀತೆಯನ್ನು ವಾಲ್ಮೀಕ್ಯಾಶ್ರಮಕ್ಕೆ ಬಿಟ್ಟು ಬಂದಮೇಲೆ ಅವನು ತೆಗೆದುಕೊಂಡ ನಿರ್ಧಾರಗಳು ಒಂದೊಂದೂ ಕೇವಲ ಕಲ್ಪನೆಯಲ್ಲಿ ಮಾತ್ರ ಸಾಧ್ಯ ಎನ್ನಿಸುವಂತವು.