Friday, February 11, 2022

ತಲೆ ಬುಡ ಇಲ್ಲದ ಕೆಲವು ಕಥೆಗಳು

  ಒಂದು ಕತೆ ಪುಸ್ತಕ ಬರೆದು ಅದನ್ನ ಪ್ರಕಟನೆ ಮಾಡಬೇಕು ಅನ್ನುವ ಹುಚ್ಚು ನನ್ನದು, ಬೇಕಾಗುವಷ್ಟು ಕತೆಗಳೂ ಇದ್ದವು. ಅವನ್ನು ಬರೆಯಲು ಮಾತ್ರ ಸಾಧ್ಯ ಆಗುತ್ತಿರಲಿಲ್ಲ. ಬರೆಯಬೇಕು ಅಂತ ಎಷ್ಟು ಅದುಕೊಂಡರೂ ಬೇರೆ ಯಾವುದೋ ಕೆಲಸ ಬಂದುಬಿಡುತ್ತಿತ್ತು. ಹೀಗೆ ಬರೆಯುವುದನ್ನು ಪ್ರಾರಂಭಮಾಡಿ, ಅರ್ಧದಲ್ಲೆ ಬಿಟ್ಟು ಅದನ್ನು ಮರೆತೇಹೊದದ್ದು ಎಷ್ಟುಬಾರಿಯೋ! ಕಡೆಗೂ ಒಂದು ನಿರ್ಧಾರಕ್ಕೆ ಬಂದೆ. ಪೇಟೆಯಿಂದ ದೂರದಲ್ಲಿ ನನ್ನ ಸಂಬಂಧಿಕರೊಬ್ಬರ ಮನೆಯೊಂದಿತ್ತು. ಆಗಾಗ ಅವರ ಮನೆಗೆ ಹೋಗು ಬರುತ್ತಿದ್ದೆ, ಒಂದು ಸಾರಿ ಹೋದಾಗ ಇಲ್ಲಿ ಒಂದು ನಾಲ್ಕು ದಿನ ಉಳಿದರೆ ನನ್ನದೂ ಒಂದು ಪುಸ್ತಕ ಬರುತ್ತದೆ ಎಂದೆನಿಸಿತು. ಅಲ್ಲಿನ ಪರಿಸ್ಥಿತಿ ಹಾಗಿತ್ತು. ಮುಖ್ಯವಾಗಿ ಯಾವುದೇ ಮೊಬೈಲಿನ ನೆಟ್ವರ್ಕು ಇರಲಿಲ್ಲ, ವಾತಾವರಣವೂ ಹಾಗಿತ್ತು. ಹಾಗಾಗಿ ಅಲ್ಲಿ ಹೋಗಿ ಉಳಿಯಲು ನಿಶ್ಚಯಿಸಿ ಒಂದು ಮುಹೂರ್ತವನ್ನೂ ಇಟ್ಟೆ.
       ಆರಿಸಿಕೊಂಡ ದಿನದಂದು ಅಲ್ಲಿಗೆ ಹೋದೆ. ಸುಂದರವಾದ ಜಾಗ ಅದು. ತೋಟದ ಮಧ್ಯದಲ್ಲಿ ಮನೆಯಿತ್ತು. ಮನೆಯಿಂದ ಸ್ವಲ್ಪ ಕೆಳಗೆ ಒಂದು ಹೊಳೆ. ಎಲ್ಲಾ ಕಾಲದಲ್ಲೂ ನೀರು ಹರಿಯುವ ಹೊಳೆ ಅದು. ಇನ್ನು ಮೇಲೆ ಹತ್ತಿದರೆ ವಿಶಾಲವಾದ ಕಾಡಿತ್ತು. ಮನೆಯ ಯಜಮಾನ ಸದಾಕಾಲ ತೋಟದಲ್ಲಿ ಕೆಲಸಮಾಡುವ ಕೃಷಿಕ. ಅವನ ಹೆಂಡತಿ ರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದಳು.
       ಕಥೆ ಬರೆಯುವ ಹುಮ್ಮಸ್ಸಿನಲ್ಲಿ ಅಲ್ಲಿ ಹೋಗಿದ್ದೆ ನಿಜ ಆದರೆ ಬರೆಯಲು ಮಾತ್ರ ಸಾಧ್ಯವಾಗಲಿಲ್ಲ. ಈಗ ಬರೆಯಬೇಕು, ಆಗ ಬರೆಯಬೇಕು ಎಂದುಕೊಂಡು ಪುಸ್ತಕ ಪೆನ್ನು ತೆಗೆದು ಮಡಸಿಡುವುದೇ ಆಗುತ್ತಿತ್ತು. ಬರೆಯಬೇಕು ಎಂದುಕೊಳ್ಳುವ ಹೊತ್ತಿಗೆ ಏನಾದರೂ ಹೊಸತೊಂದು ಕಾಣುತ್ತಿತ್ತು.
       ಹೋದ ಎರಡು ಮೂರು ದಿನದಲ್ಲಿ ಅಲ್ಲಿನ ಅಕ್ಕಪಕ್ಕದ ನಾಲ್ಕಾರು ಜನ ಸ್ನೇಹಿತರಾದರು. ಹೊಸಹೊಸ ವಿಚಾರಗಳನ್ನು ಹುಡುಕುವ ನನ್ನ ಆಸಕ್ತಿಯನ್ನ ತಿಳಿದ ಅವರು ದಿನ ಬೆಳಗಾದರೆ ಬಂದು ನನ್ನನ್ನು ಎಲ್ಲಾದರೂ ಕರೆದೊಯ್ಯುತ್ತಿದ್ದರು. ಮೀನು ಹಿಡಿಯುವುದು, ಬೇಟೆ ಆಡುವುದು, ಕೊಂದ ಪ್ರಾಣಿಯನ್ನ ಅಲ್ಲೇ ಎಲ್ಲಾದರೂ ಬೆಂಕಿ ಹಚ್ಚಿ ಬೇಯಿಸಿಕೊಂಡು ಉಪ್ಪುಕಾರ ಹಾಕಿ ತಿನ್ನುವುದು. ಹೀಗೆ ಹಲವು ಸಾಹಸಗಳನ್ನ ಅವರು ಮಾಡುತ್ತಿದ್ದರು. ಅವರ್ಯಾರೂ ಖಾಯಂ ಕೆಲಸ ಇದ್ದವರಲ್ಲ. ಎಲ್ಲಾದರೂ ಒಮ್ಮೊಮ್ಮೆ ಒಬ್ಬೊಬ್ಬರು ಕೆಲಸಕ್ಕೆ ಹೋಗುತ್ತಿದ್ದರು. ಅವರ ಜೊತೆ ತಿರುಗುತ್ತಾ ನನಗೆ ಬಂದ ಉದ್ದೇಶವೇ ಮರೆತುಹೋಗಿತ್ತು. 
       ಒಂದೆರಡು ವಾರಗಳೇ ಆಗಿರಬೇಕು. ಒಂದು ರಾತ್ರಿ ಎಲ್ಲಿಗೋ ಹೋಗಿ ಬಂದು ಮಲಗಿದೆ. ನಾನು ಕಥೆ ಬರೆಯಲು ಬಂದವನು ಅಂತಷ್ಟೇ ಗೊತ್ತಿದ್ದ ಮನೆಯ ಯಜಮಾನಿ ಒಂದು ಪುಸ್ತಕ ಕೊಟ್ಟಳು. ನಾನು ಬಂದ ಕೆಲಸವನ್ನ ನೆನಪಿಸಲಿಕ್ಕೆ ಕೊಟ್ಟಳೋ ಏನೋ ನಾನು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಆ ಪುಸ್ತಕಮಾತ್ರ ನನಗೆ ಹೊಸದೊಂದು ಅನುಭವವನ್ನೇ ಕೊಡಬಹುದೆಂದು ನಾ ಭಾವಿಸಿರಲಿಲ್ಲ.
       ಸೆಖೆಗಾಲ ಮುಗಿದು ಮಳೆಗಾಲ ಪ್ರವೇಶ ಮಾಡುತ್ತಿದ್ದ ಕಾಲ ಅದು. ಸುಮಾರು ದಿನದ ನಂತರ ಪುಸ್ತಕವನ್ನ ನೋಡಿದ ನನಗೆ ಅದನ್ನ ಕೂಡಲೇ ಓದಬೇಕು ಎನಿಸಿತು.
         ಎದ್ದು ಹೊರಗೆ ಅಂಗಳಕ್ಕೆ ಬಂದೆ‌. ಸದಾ ಉರಿಯುವ ಹ್ಯಾಲೋಜನ್ ಬಲ್ಬೊಂದು ಅಲ್ಲಿತ್ತು. ಅದರ ಕೆಳಗೆ ಕುಳಿತು ಪುಸ್ತಕವನ್ನ ತೆರೆದೆ. ಸಣ್ಣಗೆ ಗಾಳಿ ಬೀಸುತ್ತಿತ್ತು. ಆದರೂ ಸ್ವಲ್ಪ ಸೆಖೆಯಿತ್ತು. ಅಂಗಿ ಬಿಚ್ಚಿ ಓದಲು ಶುರು ಮಾಡಿದೆ. ಬಹಳ ಹಳೇ ಕಾಲದ ಪುಸ್ತಕ ಅದು.
         ಅಷ್ಟು ಹೊತ್ತಿಗೆ ಮನೆಯ ಯಜಮಾನ ಬಂದ. ತೋಟದಿಂದ ಅವ ಬಂದಿದ್ದ. ತೋಟಕ್ಕೆ ಹಂದಿಯ ಕಾಟ ಜೋರಾಗಿತ್ತು. ಅದಕ್ಕಾಗಿ ದಿನ ರಾತ್ರಿ ಮಲಗುವ ಹೊತ್ತಿಗೆ ಒಂದು ಗರ್ನಾಲು ಹೊಡೆಯುತ್ತಿದ್ದ. ಅಷ್ಟೇ ಅಲ್ಲದೆ ಸುಮಾರು ಮಧ್ಯ ರಾತ್ರಿಯ ಹೊತ್ತಿಗೆ ಮತ್ತೊಂದು ಗರ್ನಾಲು ಸ್ಪೋಟ ಆಗುವ ಉಪಾಯವೊಂದನ್ನ ಅವ ಮಾಡಿದ್ದ. ಆ ಉಪಾಯ ಇದಾಗಿತ್ತು, ಸೊಳ್ಳೆ ಬಾರದಿರಲಿ ಅಂತ ಹಚ್ಚುವ ಬತ್ತಿಯೊಂದನ್ನ ತೆಗೆದುಕೊಳ್ಳುತ್ತಿದ್ದ. ಅದನ್ನ ಅಲ್ಲೇ ಒಂದು ಮರಕ್ಕೆ ಕಟ್ಟುತ್ತಿದ್ದ. ಮಧ್ಯರಾತ್ರಿಯ ಹೊತ್ತಿಗೆ ಅದು ಸುಟ್ಟಿಕೊಂಡು ಬರಬಹುದಾದ ಜಾಗಕ್ಕೆ ಗರ್ನಾಲಿನ ಬತ್ತಿಯ ತುದಿಯನ್ನ ತಾಗಿಸಿ ಕಟ್ಟುತ್ತಿದ್ದ. ಸುಟ್ಟಿಕೊಂಡು ಬರುತ್ತಿದ್ದ ಆ ಬತ್ತಿ ಮಧ್ಯ ರಾತ್ರಿಯ ಹೊತ್ತಿಗೆ ಗರ್ನಾಲನ್ನ ಸ್ಪೋಟಿಸುತ್ತಿತ್ತು. ಅಷ್ಟು ಹೊತ್ತಿಗೆ ಆಗುವ ಆ ಸ್ಪೋಟದ ಶಬ್ಧಕ್ಕೆ ಬಂದ ಹಂದಿ ಹೆದರಿ ಪರಾರಿಯಾಗಲೇಬೇಕು ಎಂಬುದು ಅವನ ಉಪಾಯ.
         ಬಂದವನು ನನ್ನ ಬಳಿ ಇಲ್ಯಾಕೆ ಕೂತಿದ್ದೇನೆ ಅಂತ ಕೇಳಿದ. ನಾನು ಸಿಕ್ಕ ಪುಸ್ತಕವನ್ನ ತೋರಿಸಿ ಇದನ್ನ ಓದಿಕೊಂಡು ಮಲಗುತ್ತೇನೆ ಎಂದೆ. ಅವನೂ ಆ ಪುಸ್ತಕವನ್ನ ಓದಿರಲಿಲ್ಲ. ಓದುವ ಅಭ್ಯಾಸವೂ ಅವನಿಗಿರಲಿಲ್ಲ. ಆ ಪುಸ್ತಕ ಅವನ ಮನೆಗೆ ಎಲ್ಲಿಂದ ಬಂತು ಅಂತಲೂ ಅವನಿಗೆ ಗೊತ್ತಿರಲಿಲ್ಲ. ಅವನು ಒಳಗೆ ಹೋದ. ನಾನು ಪುಸ್ತಕ ತೆರೆದು ಓದತೊಡಗಿದೆ.
         ಪುಸ್ತಕದ ಹೆಸರಿದ್ದ ಪುಟ ಇರಲಿಲ್ಲ, ಯಾವುದೋ ಹುಳ ತಿಂದಿತ್ತು. ಪೀಠಿಕೆಯ ಪುಟ ಇತ್ತು. ಅದೂ ಪ್ರಾರಂಭದ ಪುಟ ಇರಲಿಲ್ಲ. ಕೊನೆಯ ಕೆಲವು ಸಾಲುಗಳು ಓದುವ‌ಹಾಗಿದ್ದವು. ಮುನ್ನುಡಿ ಬರೆದ ಲೇಖಕ ಕೊನೆಯಲ್ಲಿ, ಪುಸ್ತಕದಲ್ಲಿದ್ದ ಕಥೆಗಳು ಇದ್ದಹಾಗೇ ಅವನ ಜೀವನದಲ್ಲೂ ನಡೆದಿವೆ ಎಂದು ಬರೆದಿದ್ದ. ಓದಿದಷ್ಟು ಕತೆ ನಡೆದೇ ನಡೆಯುತ್ತದೆ, ಯಾವುದೇ ಕತೆಯನ್ನ ಅರ್ಧ ಓದಿ ಬಿಡಬೇಡಿ ಅಂತ ಎಚ್ಚರಿಸಿದ್ದ. ನನಗೂ ಆಸಕ್ತಿ ಕೆರಳಿ ಮೊದಲ ಕಥೆ ತೆರೆದೆ.
         ನಾಗರಹಾವು ಅಂತ ಮೊದಲ ಕಥೆಯ ಹೆಸರು. ಕಥೆ ಹೀಗಿತ್ತು - ಒಬ್ಬ ವ್ಯಕ್ತಿ ದಾರಿಯಲ್ಲಿ ನಡೆಯುತ್ತಿದ್ದಾಗ ಅವನಿಗೆ ನಾಗರ ಹಾವೊಂದು ಸಿಗುತ್ತದೆ. ಅದು ಅವನನ್ನ ಕಚ್ಚುವುದಿಲ್ಲ ಆದರೆ ಅವನನ್ನೇ ಹಿಂಬಾಲಿಸುತ್ತದೆ. ಭಯಪಟ್ಟ ವ್ಯಕ್ತಿ ಓಡಲು ಶುರುಮಾಡುತ್ತಾನೆ. ಓಡಿ ಓಡಿ ಸಾಕಾಗಿ ಒಂದು ಮರದ ಕೆಳಗೆ ನಿಲ್ಲುತ್ತಾನೆ. ಹಿಂತಿರುಗಿ ನೋಡಿದರೆ ಹಾವು ಅಲ್ಲೇ ಇರುತ್ತದೆ. ಅದು ಇನ್ನೇನು ಅವನನ್ನ ಕಚ್ಚಲು ಹೆಡೆಯೆತ್ತುತ್ತದೆ, ಅವನು ಅದಕ್ಕೆ ಭಕ್ತಿಯಿಂದ ಕೈಮುಗಿಯುತ್ತಾನೆ, ಆಗ ಆ ಹಾವು ಅವನನ್ನ ಬಿಟ್ಟು ಅಲ್ಲಿಂದ ಹೋಗಿಬಿಡುತ್ತದೆ. ಇದು ಕಥೆಯ ಸಾರಾಂಶವಾಗಿತ್ತು. 
         ಅಷ್ಟು ಹೊತ್ತಿಗೆ ತೋಟದಲ್ಲಿ ಏನೋ ಸದ್ದಾಯಿತು. ಹಂದಿಯಿರಬೇಕು, ನನಗೂ ಭಯವಾಯಿತು. ಪುಸ್ತಕ ಮಡಚಿಟ್ಟು ಒಳಗೆ ಮಲಗಿದೆ.
         ಮರುದಿನ ಬೆಳಿಗ್ಗೆ ನನ್ನ ಸ್ನೇಹಿತರು ಯಾರೂ ಬರಲಿಲ್ಲ. ಒಬ್ಬನಿಗೇ ಬೇಸರವಾಯಿತು. ಎದ್ದು ಎಲ್ಲಾದರೂ ತಿರುಗಲು ಹೊರಟೆ. ಅಲ್ಲೇ ಹತ್ತಿರದಲ್ಲೆಲ್ಲೋ ಒಂದು ಹಳೆಯ ದೇವಸ್ಥಾನ ಇದೆ ಎಂದು ಕೇಳಿದ್ದೆ, ಅಲ್ಲೇ ಹೋಗೋಣ ಎಂದು ಹೊರಟೆ. 
         ನಡೆದು ಹೋಗುತ್ತಿದ್ದೆ. ಹಿಂದುಗಡೆ ಏನೋ ಸದ್ದಾಯಿತು. ಅನುಮಾನದಲ್ಲಿ ತಿರುಗಿ ನೋಡಿದರೆ ನಾಗರಹಾವು! ಎದೆ ಧಸಕ್ಕೆಂದಿತು. ನಡಿಗೆಯ ವೇಗ ಹೆಚ್ಚುಮಾಡಿದೆ. ಹಾವು ಹಿಂದೇ ಇತ್ತು. ಭಯ ಹೆಚ್ಚಾಗತೊಡಗಿತು. ಓಟಕ್ಕಿತ್ತೆ, ಓಡಿ ಓಡಿ ಸಾಕಾಗಿ ಒಂದು ಮರದ ಬಳಿ ನಿಂತು ಸುಧಾರಿಸಿಕೊಂಡೆ. ನಿಟ್ಟುಸಿರು ಬಿಟ್ಟು ಹಿಂದಿರುಗಿ ನೋಡುತ್ತೇನೆ ಹಾವು ಅಲ್ಲೇ ಇದೆ! ಪ್ರಾಣವೇ ಹೋದ ಹಾಗಾಯಿತು. ಹಾವು ಹತ್ತಿರ ಬಂತು, ಇನ್ನೇನು ಕಚ್ಚಲು ಹೆಡೆಯೆತ್ತಿತು. ಕಥೆ ನೆನಪಾಯಿತು, ಹಾವಿಗೆ ಕೈ ಮುಗಿದೆ. ಕಚ್ಚಲು ಬಂದ ಹಾವು ಹಿಂದೆ ಸರಿದು ಅಲ್ಲಿಂದ ಹರಿದುಹೋಯಿತು. 
       ಮನೆಗೆ ಬಂದವನಿಗೆ ಅದೇ ಗುಂಗು. ಓದಿದ ಕಥೆ ಹೂಬೇಹೂಬು ನಡೆದಿತ್ತು. ಅದನ್ನ ಓದುವ ಆಸಕ್ತಿ ಒತ್ತರಿಸುತ್ತಿತ್ತು. ಆದರೆ ರಾತ್ರಿ ಮಲಗಬೇಕಾದರೆ ಓದಬೇಕು ಎಂದು ಉತ್ಸಾಹವನ್ನು ತಡೆದುಕೊಂಡೆ.
       ರಾತ್ರಿ ಊಟವಾಯಿತು. ಪುಸ್ತಕ ತೆಗೆದುಕೊಂಡೆ. ಎರಡನೇ ಕಥೆ ಓದಲು ಶುರುಮಾಡಿದೆ. ಆ ಕಥೆಯ ಸಾರಾಂಶ ಹೀಗಿತ್ತು - ವ್ಯಕ್ತಿಯೊಬ್ಬನಿಗೆ ಕಾಡಿನಲ್ಲಿ ಏನನ್ನೋ ಕಂಡಂತಾಗುತ್ತದೆ. ಅದೇನೆಂದು ನೋಡುವ ಕುತೂಹಲದಲ್ಲಿ ಆತ ಅಲ್ಲಿಗೆ ಹೋಗುತ್ತಾನೆ. ಆ ಜಾಗಕ್ಕೆ ಹೋಗುವಷ್ಟರಲ್ಲಿ ಆ ಆಕೃತಿ ಮತ್ತೂ ಸ್ವಲ್ಪ ದೂರ ಹೋಗಿರುತ್ತದೆ. ಆತ ಅದನ್ನು ಬೆನ್ನಟ್ಟುತ್ತಾನೆ. ಎಷ್ಟು ಪ್ರಯತ್ನಮಾಡಿದರೂ ಅದು ಅವನ ಕೈಗೆ ಸಿಗುವುದಿಲ್ಲ. ಹಾಗೆ ಬೆನ್ನಟ್ಟಿ ಹೋಗಿ ಹೋಗಿ ಆತ ಕಾಡಿನ ಮಧ್ಯ ಹೋಗಿಬಿಡುತ್ತಾನೆ. ಹೋದವನಿಗೆ ಬಂದ ದಾರಿಯೇ ಮರೆತುಹೋಗುತ್ತದೆ. ಹಿಂದಿರುಗಿ ಹೋಗುವ ದಾರಿ ಕಾಣದೇ ಕಂಗಾಲಾದ ಅವನು ದಾರಿ ಹುಡುಕುತ್ತಾ ಅಲ್ಲೇ ಅಲೆಯುತ್ತಾನೆ. ಕೆಲ ಹೊತ್ತಿನ ನಂತರ ದೂರದಲ್ಲಿ ಎತ್ತರಕ್ಕೆ ಒಂದು ದೊಡ್ಡ ಮರ ಕಾಣುತ್ತದೆ, ಆ ಮರವನ್ನು ಕಂಡು ಪರಿಚಯವಿದ್ದ ಆತ ಅದನ್ನೇ ಗುರುತಾಗಿಟ್ಟುಕೊಂಡು ನಡೆದು ಹೋಗಿ ಮನೆ ತಲುಪುತ್ತಾನೆ. 
       ರೋಮಾಂಚನಕಾರಿಯಾಗಿತ್ತು‌ ಈ ಕಥೆ. ಮರುದಿನ ಬೆಳಿಗ್ಗೆ ಎದ್ದವನು ಮೇಲಿನ ಕಾಡಿನಲ್ಲಿ ಏನಾದರೂ ಕಾಣುವುದೋ ಅಂತ ಕಾಯತೊಡಗಿದೆ. ಮಧ್ಯಾಹ್ನದ ಹೊತ್ತಿಗೆ ಏನೋ ಕಂಡಂತಾಯಿತು. ಮನೆ ಎದೆ ಧಸಕ್ಕೆಂದಿತು. ಓಡಿದೆ. ಅದರ ಹಿಂದೇ ಓಡತೊಡಗಿದೆ. ಮೊದಲೇ ಓದಿದಹಾಗೇ ಆಯಿತು. ಕಾಡಿನ ಒಳಗೆ ಕಳೆದು ಹೋದೆ. ದಾರಿ ಸಿಗುತ್ತದೆ ಅಂತ ಗೊತ್ತಿದ್ದರೂ ಹುಡುಕತೊಡಗಿದೆ. ಆದರೆ ನಾನಂದುಕೊಂಡಹಾಗೆ ಆಗಲಿಲ್ಲ. ಕತ್ತಲಾದರೂ ಸರಿಯಾದ ದಾರಿ ತಿಳಿಯಲಿಲ್ಲ. ಕಥೆ ನಂಬಿ ಬಂದ ನನ್ನ ಮೂರ್ಖತನಕ್ಕೆ ತನ್ನನ್ನ ಹಳಿದುಕೊಂಡೆ. ಆದದ್ದಾಗಲಿ ಎಂದು ಬಂದ ದಾರಿಯ ಅಂದಾಜಿನಲ್ಲೇ ನಡೆಯತೊಡಗಿದೆ. ಕಡೆಗೂ ಹಾದಿ ಸಿಕ್ಕಿತು. ಬಂದು ನೋಡಿದೆ, ದೊಡ್ಡ ಮರ ಅಲ್ಲೇ ಇತ್ತು. ನಾನು ಗಮನಿಸಿರಲಿಲ್ಲ.
       ಮನೆಗೆ ತಲುಪುವಷ್ಟರಲ್ಲೇ ಕತ್ತಲಾಗಿತ್ತು. ನಡೆದು ಬಾರೀ ಸುಸ್ತಾಗಿತ್ತು ಕೂಡಾ. ಊಟವನ್ನೂ ಮಾಡದೇ ಮಲಗಿದೆ. ರಾತ್ರಿ ಎರಡು ಗರ್ನಾಲಿನ ಅಸ್ಪಷ್ಟ ಸದ್ದಿಗೆ ಎಚ್ಚರವಾಯಿತು ಆದರೂ ನಿದ್ರೆ ಜೋರಾಗಿ ಬಂತು. 
       ಮರುದಿನ ಸಂಜೆಯವರೆಗೂ ನಾನು ಏಳಲಿಲ್ಲ. ಅಷ್ಟು ಸಾಕಾಗಿತ್ತು. ನಿದ್ರೆಯೂ ಜೋರಾಗೇ ಬರುತ್ತಿತ್ತು. ಸಂಜೆಗೆ ಸರಿಯಾಗಿ ಎಚ್ಚರವಾಯಿತು. ಎದ್ದು ಒಂದು ಚಹಾ ಕುಡಿದೆ. ದೀರ್ಘವಾದ ನಿದ್ರೆಯಿಂದ ದೇಹ ಹಗುರವಾಗಿತ್ತು.
       ಮಳೆಗಾಲದ ಆಗಮನದ ಸೂಚನೆ ಇತ್ತು. ಮೋಡ ಕವಿದಿತ್ತು. ಆ ರಾತ್ರಿ ಭರ್ಜರಿ ಮಳೆ ಸುರಿಯಬಹುದೆಂದು ನಾನು ಅಂದಾಜಿಸಿದೆ. ಕೆಲ ಹೊತ್ತಿನಲ್ಲಿ ಜಡಿಮಳೆ ಶುರುವಾಯಿತು. ಬೇರೆ ಶಬ್ಧವೂ ಕೇಳದಂತೆ ಮಳೆ ಬೀಳುತ್ತಿತ್ತು. ಜೋರಾಗಿ ಗಾಳಿ ಬೀಸಿ ಕರೆಂಟೂ ಹೋಯಿತು. ಮನೆಯವರೆಲ್ಲ ಊಟ ಮಾಡಿ ಮಲಗಿದರು. ನಾನು ಊಟ ಮಾಡಿ ಮನೆಯೊಳಗೇ ಸಣ್ಣ ಸೀಮೇ ಎಣ್ಣೆ ದೀಪ ಹಚ್ಚಿಕೊಂಡು ಕಥೆ ಪುಸ್ತಕ ತೆರೆದೆ. 
       ಮೂರನೇಯ ಕಥೆ, ಪ್ರಾಯಶಃ ಅದೇ ಕೊನೇಯ ಕಥೆಯಾಗಿತ್ತು. ಓದಲು ಶುರುಮಾಡಿದೆ. ಆ ಕಥೆ ಹೀಗಿತ್ತು - ಅದೊಂದು ಹಳ್ಳಿಯ ಮನೆ, ಮನೆಯ ಪಕ್ಕವೇ ದೊಡ್ಡ ಹೊಳೆಯೊಂದಿರುತ್ತದೆ. ಒಂದು ದಿನ ಜೋರಾಗಿ ಮಳೆ ಸುರಿಯಲು ಶುರುಮಾಡುತ್ತದೆ. ಎಷ್ಟೆಂದರೆ ಆ ಮಳೆ ನಿಲ್ಲುವುದೇ ಇಲ್ಲ. ಹೀಗೆ ಸುರಿದ ಮಳೆಗೆ ಹೊಳೆ ತುಂಬಿ ಹರಿದು ನೀರು ಏರಿ ಪ್ರವಾಹ ಬರುತ್ತದೆ, ಏರಿಬಂದ ಪ್ರವಾಹ ಮನೆಯನ್ನು, ಮನೆಯವರನ್ನು ಮುಳುಗಿಸಿಬಿಡುತ್ತದೆ. 
        ಒಂದು ಪುಟ ಮುಗಿದಿತ್ತು. ಮುಂದಿನ ಪುಟ ತಿರುಗಿಸಿದೆ. ಹೃದಯಾಘಾತ ಆಗುವುದೊಂದು ಬಾಕಿ. ಮುಂದೆ ಪುಟವೇ ಇರಲಿಲ್ಲ. ಅಲ್ಲಿ ಬೇರೇನೋ ಇತ್ತು. ಕಥೆಯ ಮುಂದಿನ ಬಾಗ ಹರಿದು ನಾಶವಾಗಿತ್ತು. ಅಂದರೆ, ಅಲ್ಲಿಂದ ತಪ್ಪಿಸಿಕೊಳ್ಳುವ ದಾರಿ ಹೇಗೆಂದು ಇರಲಿಲ್ಲ. ಅಷ್ಟೇ ಹೊತ್ತಿಗೆ ಹೊರಗೇನು ಶಬ್ಧ ಕೇಳಿದಂತಾಗಿ ಮನೆಯ ಬಾಗಿಲು ತೆರೆದೆ ಪ್ರವಾಹದ ನೀರು ದುಸ್ಸೆಂದು ಒಳನುಗ್ಗಿತು.....