ಸಿನಿಮಾ! ನಮಗೆಲ್ಲರಿಗೂ ಇದೊಂದು ರೋಚಕ ಸಂಗತಿ. ಭಾರತದಲ್ಲಂತೂ ಸಿನಿಮಾಗಳ ಸಾಗರವೇ ಇದೆ. ಹಿಂದಿ, ತಮಿಳು, ತೆಲಗು, ಕನ್ನಡ, ಮಲ್ಯಾಳಂ, ಮರಾಠಿ, ಭೋಜ್ಪುರಿ, ಬೆಂಗಾಳಿ, ಗುಜರಾತಿ ಎಷ್ಟೋ ಇಂಡಸ್ಟ್ರೀಗಳು. ವರ್ಷಕ್ಕೆ ಸಾವಿರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತವೆ. ಅದರ ಜೊತೆಗೆ ಹಾಲೀವುಡ್ಡು, ಕೊರಿಯನ್, ಪ್ರೆಂಚು, ಜಪ್ನೀಸ್ ಹೀಗೆ ಯಾವ್ಯಾವುದೇ ಅರ್ಥವಾಗಲಾರದ ಭಾಷೆಯ ಚಿತ್ರಗಳನ್ನೂ ನಾವು ಸಬ್ಟೈಟಲ್ ಹಾಕಿಕೊಂಡಾದರೂ ನೋಡುತ್ತೇವೆ. ಇದರ ಜೊತೆಗೆ ವೆಬ್ ಸೀರೀಸ್ ಗಳು. ದಿನಾ ಹತ್ತು ಹೊಸ ಹೋಸ ಚಿತ್ರಗಳನ್ನು ನೋಡಿದರೂ ಎಷ್ಟೋ ವರ್ಷಗಳಷ್ಟು ನೋಡಬಹುದಾದಷ್ಟು ದೊಡ್ಡದು ಸಿನಿಮಾ ಪ್ರಪಂಚ!
ಇನ್ನು ಸಿನಿಮಾ ವೀಕ್ಷಕರಲ್ಲೂ ಎರಡು ವಿಧ. ಮೊದಲನೇಯವರು ಕೇವಲ ಸಿನಿಮಾದ ಕತೆ ಹೇಗಿದೆ? ಫೈಟ್ ಸಿಕ್ವೆನ್ಸ್ ಗಳು ಹೇಗಿವೆ? ಕಾಮಿಡಿ ಎಷ್ಟಿದೆ? ಸೀನ್ ಗಳು ಹೇಗಿವೆ? ಮ್ಯೂಸಿಕ್ ಹೇಗಿದೆ? ಇದನ್ನು ನೋಡುವವರು. ಇನ್ನೊಂದು ವರ್ಗದವರು ಸ್ಕ್ರೀನ್ ಪ್ಲೇ ಹೇಗಿದೆ? ಸಿನಿಮಾಟೋಗ್ರಫಿ ಹೇಗಿದೆ? ಯಾವ ಸೀನಿಗೆ ಯಾವ ಕಲರ್ರು? ನಟರು ಪಾತ್ರಕ್ಕೆ ಉಚಿತವಾದ ಬಟ್ಟೆ ಹಾಕಿದ್ದಾರಾ? ನಟರ ಹಾವಭಾವ ಎಷ್ಟು ನ್ಯಾಚುರಲ್ಲಾಗಿದೆ? ಕತೆ ಎಷ್ಟು ಸಹಜ? ಸತ್ಯಕ್ಕೆ ಎಷ್ಟು ಹತ್ತಿರ? ನಮಗೆ ಗೊತ್ತಾಗದೆ ಪ್ರಭಾವ ಬೀರುವಂತ ಯಾವ ಟೆಕ್ನಿಕ್ಕನ್ನ ಉಪಯೋಗಿಸಿದ್ದಾರೆ? ಇದನ್ನ ನೋಡುವವರು. ಎಷ್ಟು ಕಾರು ಬ್ಲಾಸ್ಟ್ ಆಯಿತು? ಎಷ್ಟು ಅಂಗಡಿಗಳು ಹಾನಿಯಾದವು ಎನ್ನುವ ಬಗ್ಗೆಲ್ಲಾ ಈ ಎರಡನೇ ವರ್ಗ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಎರಡನೇ ವರ್ಗ ಬೆಳೆಯುತ್ತಿದೆ. ಕಮರ್ಷಿಯಲ್ ಸಿನಿಮಾದಲ್ಲೂ ಜನ ಇದನ್ನೆಲ್ಲ ಹುಡುಕುತ್ತಾರೆ. ಕೆಜಿಎಫ್ ಚಿತ್ರ ಅಷ್ಟು ದೊಡ್ಡ ಯಶಸ್ಸು ಗಳಿಸಲು ನಿರ್ದೇಶಕ ಈ ಅಂಶಗಳನ್ನೆಲ್ಲ ಗಮನಿಸಿದ್ದು ಕಾರಣ.
ಇವತ್ತಿನ ಸಿನಿಮಾ ಲೋಕವನ್ನು ಸಸ್ಪೆನ್ಸ್ ಥ್ರಿಲ್ಲರ್ ಗಳು ಆವರಿಸಿಕೊಂಡಿವೆ. ಆದರೆ ಆವು ಮೂಲತಃ ಭಾರತದ ಜೋನರ್ ಗಳಲ್ಲ. ಸಾಮಾಜಿಕವಾದ ಕಮರ್ಶಿಯಲ್ ಚಿತ್ರಗಳೇ ಪ್ರಾರಂಭದಿಂದಲೂ ಭಾರತೀಯರಿಂದ ಇಷ್ಟ ಪಡಲ್ಪಟ್ಟಿವೆ. ಅತ್ಯಂತ ಲಾಜಿಕಲ್ ಹಾಗೂ ಬೌದ್ಧಿಕವಾದ ಚಿಂತನೆಗಳನ್ನು ಬಯಸುವ ಸಸ್ಪೆನ್ಸ್ ಥ್ರಿಲ್ಲರ್ ಗಳನ್ನು ನಾವು ಮೆಚ್ಚುತ್ತಿದ್ದೇವೆ ಎಂದರೆ ಅದಕ್ಕೆ ಬದಲಾಗಿರುವ ನಮ್ಮ ಮನಸ್ಥಿತಿಯೇ ಕಾರಣ.
ಭಾರತೀಯ ಚಿತ್ರರಂಗಗಳೆಲ್ಲದರ ನಡುವೆ ನನಗೆ ವಿಶೇಷ ಅಥವಾ ಔಟ್ ಸ್ಟ್ಯಾಂಡಿಂಗ್ ಅನ್ನಿಸುವವು ಎಂದರೆ ಮಲ್ಯಾಳಂ ಚಿತ್ರಗಳು. ನೋಡಲು ಶುರುಮಾಡಿದರೆ ಯಾರನ್ನಾದರೂ ಸೆಳೆದುಬಿಡಬಹುದಾದ ನೇಟಿವೀಟಿ ಅವುಗಳಲ್ಲಿರುತ್ತದೆ. ಬೇರೆಲ್ಲಾ ಭಾಷೆಯವರು ಹಾಲಿವುಡ್ಡಿಗೆ ಪೈಪೋಟಿ ಕೊಡಲು ಹೊರಟಿರುವಾಗ ಶುದ್ಧ ನೇಟಿವ್ ಮನೋರಂಜನೆ ಕೊಡುವ ಮಲ್ಯಾಳಂ ಚಿತ್ರಗಳು ಬಹಳ ಪ್ರಾಮಾಣಿಕವಾಗಿ ತೋರುತ್ತವೆ. ಹಾಗಾಗಿ ಮಲ್ಯಾಳಂನಲ್ಲಿ ಬೇರೆ ಭಾಷೆಯಿಂದ ರಿಮೇಕ್ ಆದವುಗಳು ದುರ್ಲಭ.
ಸೀನಿಮಾ ಒಂದು ಎಷ್ಟು ಇಫೆಕ್ಟಿವ್ ಆಗಿರಬಹುದು ಎನ್ನುವುದಕ್ಕೆ ನಾನು ಸದ್ಯ ನೋಡಿದ 'ಕಪ್ಪೆಲ' ಒಂದು ಅದ್ಭುತ ಉದಾಹರಣೆ. ನಾಯಕಿ ಜೆಸ್ಸಿ (ಅನ್ನಾ) ಗೆ ಫೋನಿನ ಮೂಲಕ ವಿಷ್ಣು (ರೋಷನ್ ಮ್ಯಾಥ್ಯೂ) ವಿನ ಪರಿಚಯ ಆಗುತ್ತದೆ. ಪರಿಚಯದಿಂದ ಅದು ಪ್ರೇಮಕ್ಕೆ ತಿರುಗುತ್ತದೆ. ಜೆಸ್ಸಿಯ ತಂದೆ ಕಟ್ಟಾ ಸಂಪ್ರದಾಯಸ್ಥ. ಬೇರೆ ಧರ್ಮದ ಹುಡುಗನನ್ನು ಮಗಳು ಮದುವೆ ಆಗುವುದನ್ನು ಸುತಾರಾಂ ಒಪ್ಪಲಾರ. ಅದೇ ಊರಿನ ಬಟ್ಟೆ ಅಂಗಡಿಯೊಂದರ ಮಾಲಿಕ ಬೆನ್ನಿ (ಸುಧಿ) ಅವನಿಗೆ ಜೆಸ್ಸಿಯನ್ನು ಕಂಡರೆ ಪ್ರೇಮ. ಜೆಸ್ಸಿಯ ತಂದೆಗೂ ಈ ಸಂಬಂಧ ಒಪ್ಪಿಗೆ. ಹಾಗಾಗಿ ಅವನು ಬೆನ್ನಿಯ ಬಳಿ ಮನೆಗೆ ಹೆಣ್ಣು ನೋಡಲು ಬರುವಂತೆ ಹೇಳುತ್ತಾನೆ. ಅಷ್ಟೊತ್ತಿಗಾಗಲೇ ಜೆಸ್ಸಿ ವಿಷ್ಣುವನ್ನು ಫೋನಿನಲ್ಲೇ ಪ್ರೀತಿಸಿಯಾಗಿದೆ. ಇದನ್ನು ಹೇಮಲಾರದ ಜೆಸ್ಸಿ ಸಂಕಟಪಡುತ್ತಾಳೆ. ಆ ಕ್ಷಣಕ್ಕೆ ನೋಡುತ್ತಿರುವ ಪ್ರೇಕ್ಷಕನೂ ಅದೇ ಸಂಕಟ ಅನುಭವಿಸುತ್ತಾನೆ! ಆದರೆ ಬೆನ್ನಿಯ ಅಮ್ಮ ಸೊಕ್ಕಿನ ಹೆಂಗಸು. ಅವಳು ಈ ಸಂಬಂಧವನ್ನು ನಿರಾಕರಿಸಿದಾಗ ಜೆಸ್ಸಿಗೆ ಎಷ್ಟು ಆನಂದವಾಯಿತೋ ನೋಡುವವರಿಗೂ ಅಷ್ಟೇ ಆನಂದ.
ಈ ಮಧ್ಯೆ ಬೆನ್ನಿ ತಾಯಿಯನ್ನು ವಿರೋಧಿಸಿ ಜೆಸ್ಸಿಯನ್ನು ಮದುವೆಯಾಗಲು ನಿರ್ಧಾರ ಮಾಡುತ್ತಾನೆ. ಆಗ ಮತ್ತೆ ಜೆಸ್ಸಿಯೊಂದಿಗೆ ಪ್ರೇಕ್ಷಕರು ಸಂಕಟಕ್ಕೆ ಸಿಕ್ಕುತ್ತಾರೆ. ಜೆಸ್ಸೀ ಮತ್ತು ವಿಷ್ಣುವಿನ ಪ್ರೇಮಕ್ಕೆ ಅಡ್ಡಗಾಲುಹಾಕಿದ ಬೆನ್ನಿಯಮೇಲೆ ಕೋಪಗೊಳ್ಳುತ್ತಾರೆ.
ಸೆಕೆಂಡ್ ಹಾಫಿನಲ್ಲಿ ಜೆಸ್ಸಿ ವಿಷ್ಣುವನ್ನು ನೋಡಲು ಬೇರೆ ಊರಿನ ಬಸ್ಟ್ಯಾಂಡೊಂದಕ್ಕೆ ಹೋಗುತ್ತಾಳೆ. ಅಲ್ಲಿಗೆ ಬರುವ ವಿಷ್ಣುವಿನ ಮೊಬೈಲು ಕಳೆದು ಹೋಗಿ ರೋಯ್ ( ಶ್ರೀನಾಥ್ ಭಸಿ) ಗೆ ಸಿಗುತ್ತದೆ. ರೋಯ್ ಒಬ್ಬ ಕಳ್ಳನಂತೆ ಕಾಣುತ್ತಾನೆ. ಹೇಗಾದರೂ ಆ ಮೊಬೈಲು ವಿಷ್ಣುವಿಗೆ ಸಿಗಲಪ್ಪ ಅನಿಸುತ್ತದೆ.
ಅಂತೂ ವಿಷ್ಣುವಿಗೆ ಮೊಬೈಲು ಸಿಕ್ಕಿ ಅವರಿಬ್ಬರು ಒಂದಾದಾಗ ನಮಗೂ ನಿರಾಳ. ಆದರೆ ರೋಯ್ ಅವರನ್ನು ಯಾಕೋ ಹಿಂಬಾಲಿಸತೊಡಿದಾಗ ಅವನೊಬ್ಬ ದುಷ್ಟ ಎಂದು ನಮ್ಮ ಮನಸಿನಲ್ಲಿ ಸ್ಪಷ್ಟವಾಗುತ್ತದೆ. ಹೀಗೆ ಮುಂದೆ ರೋಯ್ ಹಾಗೂ ವಿಷ್ಣುವಿನ ಮಧ್ಯೆ ಸಣ್ಣ ಹೊಡೆದಾಟವಾಗಿ ಜೆಸ್ಸಿಯ ಬಟ್ಟೆಯೂ ಕೊಳೆಯಾಗುತ್ತದೆ.
ನಂತರ ವಿಷ್ಣು ಹಾಗೂ ಜೆಸ್ಸಿ ಪರಿಚಯದ ಲಾಡ್ಜೊಂದಕ್ಕೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ವಿಶ್ರಮಿಸುತ್ತಿರುತ್ತಾರೆ. ಇತ್ತ ರೋಯ್ ವಿಷ್ಣುವಿಗೆ ಹೊಡೆಯಲೆಂದು ತನ್ನ ಸ್ನೇಹಿತನೊಬ್ಬನನ್ನು ಕರೆದುಕೊಂಡು ಬರುತ್ತಾನೆ.
ಆಗ ಕತೆಯಲ್ಲಿ ತಿರುವು, ನಿಜವಾಗಿ ವಿಷ್ಣು ಒಬ್ಬ ದುಷ್ಟನಾಗಿದ್ದ. ಅವನು ಜೆಸ್ಸಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ಪ್ರೇಕ್ಷಕನಿಗೆ ಕೇವಲ ವಿಷ್ಣುವಿನ ಬಗ್ಗೆ ಮಾತ್ರವಲ್ಲ ರೋಯ್, ಬೆನ್ನಿ , ಜೆಸ್ಸಿಯ ತಂದೆ ಎಲ್ಲರ ಬಗೆಗಿನ ಅಭಿಪ್ರಾಯವೂ ಒಂದೇ ಸಲ ಬದಲಾಗುತ್ತದೆ. ಜೆಸ್ಸಿಯನ್ನು ಆ ಹೊತ್ತಿನ ತನಕ ಮೆಚ್ಚುತ್ತಿದ್ದ ನಾವು ಅಲ್ಲಿಂದ ಕರುಣೆಯಲ್ಲಿ ನೋಡಲು ಶುರುಮೋಡುತ್ತೇವೆ. ಆ ಕ್ಷಣದ ವರೆಗೆ ದುಷ್ಟನಾಗಿದ್ದ ರೋಯ್ ಅಲ್ಲಿಂದ ನಾಯಕನಾಗುತ್ತಾನೆ. ಕಡೆಗೂ ಅವನು ಬಂದು ಜೆಸ್ಸಿಯನ್ನು ಕಾಪಾಡುತ್ತಾನೆ. ವಿಷ್ಣುವನ್ನು ಪೋಲಿಸರು ಬಂಧಿಸುತ್ತಾರೆ.
ಜೆಸ್ಸಿ ತನ್ನ ಹಳ್ಳಿಗೆ ಮರಳುತ್ತಾಳೆ. ಬೆನ್ನಿಯನ್ನು ಅವಳೂ ಇಷ್ಟಪಡಲು ಪ್ರಾರಂಭಿಸುತ್ತಾಳೆ. ಒಂದು ಹಂತದಲ್ಲಿ ದುಷ್ಟನಾಗಿ ಕಂಡಿದ್ದ ಬೆನ್ನಿ ಈಗ ಇನ್ನೋಸೆಂಟ್ ನಾಯಕ!
ಈ ಯಾವ ದೃಶ್ಯದಲ್ಲಿಯೂ ಯಾವುದೇ ಧ್ವನಿ ಹಿನ್ನಲೆಯಲ್ಲಿ ಏನನ್ನೂ ಹೇಳುವುದಿಲ್ಲ ಆದರೆ ದೃಶ್ಯಗಳೇ ನಮ್ಮ ಭಾವನೆಯ ಬದಲಾವಣೆಗೆ ಕಾರಣವಾಗುತ್ತವೆ. ನಮ್ಮಮುಂದೇ ಜೆಸ್ಸಿ ಶೊಷಣೆಗೆ ಒಳಗಾಗುತ್ತಿದ್ದರೂ ನಾವು ಅಸಹಾಯಕರಾದೆವಲ್ಲಾ ಎನ್ನುವ ಭಾವನೆ ಕಾಡುತ್ತದೆ.
ಸಿನಿಮಾವೊಂದು ಇಷ್ಟು ಇಫೆಕ್ಟಿವ್ ಆಗಬಲ್ಲದು. ಕಪ್ಪೆಲ ಒಂದು ಉದಾಹರಣೆ ಅಷ್ಟೆ ನೇರವಾಗಿ ಮನಸ್ಸಿಗೆ ತಾಗುವ ಎಷ್ಟೋ ಮಲ್ಯಾಳಂ ಚಿತ್ರಗಳಿವೆ ಜಲ್ಲಿಕಟ್ಟು, ಕುಂಬಲಂಗೀ ನೈಟ್ಸ್, ಈ.ಮಾ.ಯು. , ವೈರಸ್ ನಂತವು ಕೆಲವು ಉದಾಹರಣೆಗಳು.
ನಮ್ಮನ್ನೂ ಕತೆಯ ಭಾಗವಾಗಿಸಬಲ್ಲ ಮಲ್ಯಾಳಂ ಚಿತ್ರಗಳು ಭಾರತದ ಔಟ್ ಸ್ಟ್ಯಾಂಡಿಂಗ್ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತವೆ ಎನ್ನುವುದು ನನ್ನ ಪಾಲಿಗಂತೂ ಸುಳ್ಳಲ್ಲ.